ಸಂದರ್ಶನ: ಶಶಿಕರ ಪಾತೂರು

ನಿನ್ನಾ ಪೂಜೆಗೆ ಬಂದೆ ಮಹದೇಶ್ವರ.. ಎಂಬ ಟ್ರೆಂಡಿಂಗ್ ಗೀತೆ ಅಂದು ರಘು ದೀಕ್ಷಿತ್ ಎಂಬ ಪ್ರಚಂಡ ಪ್ರತಿಭೆಯನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಿತ್ತು. ಆ ಹಾಡು ಸೈಕೋ ಎಂಬ ಚಿತ್ರದ್ದಾಗಿತ್ತು. ಚಿತ್ರದ ಎಲ್ಲ ಹಾಡುಗಳೂ ಅಂದಿಗೆ ಸುಪರ್ ಹಿಟ್ ಆಗಿದ್ದವು. ಅದೇ ಚಿತ್ರದಿಂದ ನಾಯಕಿಯಾಗಿ ಪರಿಚಯವಾದ ಮಲೆನಾಡ ಪ್ರತಿಭೆ ಅನಿತಾಭಟ್. ಅನಿತಾ ಭಟ್ ಸೈಕೋ ಚಿತ್ರದ ನಂತರ ಹಲವಾರು ಚಿತ್ರಗಳಲ್ಲಿ ಬೋಲ್ಡ್ ಪಾತ್ರಗಳ ಮೂಲಕ ಗಮನಸೆಳೆದವರು. ಟಗರು ಚಿತ್ರದ ಅವರ ಪಾತ್ರವನ್ನು ಚಿತ್ರಪ್ರೇಮಿಗಳು ಮರೆಯಲು ಸಾಧ್ಯವಿಲ್ಲ. ಸುಮಾರು ಒಂದೂವರೆ ದಶಕದ ಸಿನಿಮಾಯಾನದಲ್ಲಿ ದ್ವಂದ್ವ, ಕಲಿವೀರ, ರೆಡ್ ಮಿರ್ಚಿ, ಹೊಸ ಕ್ಲೈಮ್ಯಾಕ್ಸ್, ಡೇಸ್ ಆಫ್ ಬೋರಾಪುರ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಅನಿತಾ ಭಟ್ ಪ್ರವಾಸಪ್ರಿಯೆಯೂ ಹೌದು.

ನಿಮ್ಮ ಮೊದಮೊದಲ ಪ್ರವಾಸದ ಅನುಭವ ಹೇಗಿತ್ತು?

ಬಾಲ್ಯದಲ್ಲೇ ಅಪ್ಪ ಅಮ್ಮ ಸಾಕಷ್ಟು ಬಾರಿ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅವೆಲ್ಲ ಸ್ಥಳೀಯ ಪ್ರವಾಸವೇ ಆಗಿರುತ್ತಿತ್ತು. ಕುಂದಾಪುರದ ಬೈಂದೂರು, ಅಲ್ಲಿನ ಬೀಚ್, ಇಡಗುಂಜಿ ದೇವಸ್ಥಾನ ಮೊದಲಾದ ಕಡೆ ಪ್ರತಿ ವರ್ಷ ಹೋಗುತ್ತಿದ್ದೆವು. ಹೀಗಾಗಿಯೇ ಇರಬಹುದು ನನಗೂ ಪ್ರವಾಸದಲ್ಲಿ ಆಸಕ್ತಿ ಬೆಳೆಯಿತು.

Anita bhat kundapura

ನೀವಾಗಿ ಪ್ರವಾಸ ಹೋಗಲು ಶುರು ಮಾಡಿದ್ದು ಯಾವಾಗ?

ನನಗೆ ಮೊದಲಿಂದಲೂ ತಿರುಗಾಟ ಅಂದರೆ ಇಷ್ಟ. ಅದರಲ್ಲೂ ಸೋಲೋ ಟ್ರಿಪ್‌ಗೆ ಹೋಗ್ತಾ ಇರುತ್ತೇನೆ. ಮೊದಲ ಸೋಲೋ ಟ್ರಿಪ್‌ ಮಲೇಷ್ಯಾಗೆ ಹೋಗಿದ್ದೆ. ಕೆಲಸಕ್ಕೆ ಎಂದು ಹೋಗಿದ್ದೆ. ಜಾಹೀರಾತು ಚಿತ್ರೀಕರಣ ಇತ್ತು. ಹೋದವಳು ಅಲ್ಲೇ 3 ದಿನ ಇದ್ದೆ. ಆದರೆ ಅಲ್ಲಿನ ಆಹಾರ ನನಗೆ ಹೊಂದಿಕೆಯಾಗಲಿಲ್ಲ. ನಾನು ಕೋಣೆಯಲ್ಲೇ ಹೆಚ್ಚು ಸಮಯ ಕಳೆಯುವಂತಾಗಿತ್ತು. ನಾನು ವಿದೇಶಕ್ಕೆ ಹೋಗಿದ್ದು ಅದೇ ಮೊದಲು. ಆದರೆ ನನಗೆ ಸೋಲೋ ಟ್ರಿಪ್‌ ಮಾಡಲು ಯಾವುದೇ ಭಯ ಇರಲಿಲ್ಲ.

ಆನಂತರದಲ್ಲಿ ಯಾವೆಲ್ಲ ದೇಶಗಳನ್ನು ಸುತ್ತಾಡಿದ್ದೀರಿ?

ಹಾಂಗ್ ಕಾಂಗ್‌ಗೆ ಫ್ರೆಂಡ್ಸ್‌ ಜತೆ ಹತ್ತು ವರ್ಷದ ಹಿಂದೆ ಹೋಗಿದ್ದೆ. ಹಾಂಗ್ ಕಾಂಗ್‌ನಲ್ಲಿ ಬೋಟಲ್ಲಿ ಸುತ್ತಾಡಿದ್ದು, ಶಾಪಿಂಗ್‌ ಮಾಡಿದ್ದು ಎಲ್ಲವೂ ತುಂಬ ಖುಷಿ ನೀಡಿತ್ತು. ಅದೇ ರೀತಿ ಥೈಲ್ಯಾಂಡ್‌ಗೂ ಹೋಗಿದ್ದೆವು. ಬ್ಯಾಂಕಾಂಕ್‌ನಲ್ಲಿ ಪಟ್ಟಾಯಾಗೆ ಹೋಗಿದ್ವಿ. ನಾನು ಮತ್ತು ಮಗಳು ಹೋಗಿದ್ದು.‌ ಅಲ್ಲಿ ತುಂಬಾ ಎಂಜಾಯ್‌ ಮಾಡಿದ್ವಿ. ಶಾಪಿಂಗ್‌ ಮಾಡಬೇಕೆಂದೇ ಹೋಗಿದ್ದಂಥ ಪ್ರವಾಸ ಅದು. ಆದರೆ ಅಂಡರ್‌ ವಾಟರ್ ಅಡ್ವೆಂಚರ್ಸ್‌ ಕೂಡ ಚೆನ್ನಾಗಿಯೇ ಇತ್ತು. ಅಲ್ಲಿನ ದ್ವೀಪಗಳಲ್ಲಿ ಸುತ್ತಾಡಿದ್ದನ್ನು ಮರೆಯಲಾಗದು. ಅಲ್ಲಿ ನೀರು ತುಂಬಾ ಕ್ಲೀನ್‌ ಆಗಿತ್ತು. ಅಲ್ಲಿ ಟ್ರಾನ್ಸ್ ಜೆಂಡರ್‌ಗಳ ಶೋ ನಡೆದಿತ್ತು. ಅದನ್ನು ನೋಡಿ ಎಂಜಾಯ್ ಮಾಡಿಕೊಂಡು ಬಂದಿದ್ದೆವು.

ನೀವು ಕುಟುಂಬ ಸಮೇತ ಎಲ್ಲೆಲ್ಲಿ ಪ್ರವಾಸ ಹೋಗಿದ್ದೀರಿ?

ನಾನು ಅಪ್ಪ ಅಮ್ಮನನ್ನು ಕರೆದುಕೊಂಡು ಮುನ್ನಾರ್‌ಗೆ ಹೋಗಿದ್ದೆ ಒಂದು ಸಲ. ಅಲ್ಲಿ ತುಂಬ ತಿರುಗಾಡಿದ್ದೇವೆ. ಅಲ್ಲಿ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದೆವು. ಸುತ್ತಮುತ್ತಲಿನ ಪರಿಸರವನ್ನು ಬಹಳ ಎಂಜಾಯ್‌ ಮಾಡಿದ್ದೆವು.

Psycho movie heroine Anita Bhat

ಪ್ರವಾಸದ ಸಂದರ್ಭದಲ್ಲಿ ನಡೆದ ಮರೆಯಲಾಗದ ಘಟನೆ ಯಾವುದು?

ಒಮ್ಮೆ ಫ್ರೆಂಡ್ಸ್‌ ಜತೆ ಮಾಲ್ಡೀವ್ಸ್‌ಗೆ ಹೋಗಿದ್ದೆ. ಅಲ್ಲಿ ಮಧ್ಯರಾತ್ರಿ ಹೊತ್ತಲ್ಲಿ ಯಾರೋ ಒಬ್ಬಾತ ನಮ್ಮ ಕೋಣೆಗೆ ಬಂದಿರುವುದು ಗೊತ್ತಾಯಿತು. ನನಗೆ ಎಚ್ಚರ ಆಗಿ ನೋಡಬೇಕಾದರೆ ಆತ ಬರೀ ಒಂದು ಟವಲ್‌ನಲ್ಲಿರುವುದು ಕಂಡಿತು. ಯಾರು ಅಂತ ಕೇಳಿದಾಗ ಅವನು ಸೆಕ್ಯುರಿಟಿ ಸರ್ವಿಸ್‌ ಎಂದಷ್ಟೇ ಹೇಳಿ ಹೊರಗೆ ನಿಂತಿದ್ದಾನೆ. ಆಮೇಲೆ ನಾವು ರೆಸಾರ್ಟ್‌ನವರಿಗೆ ದೂರು ಕೊಟ್ಟೆವು. ಅವರು ಸಿಸಿ ಕ್ಯಾಮೆರಾ ಚೆಕ್ ಮಾಡಿದಾಗ ಆತ ಪಕ್ಕದ ಕೋಣೆಯಿಂದ ಬಂದಿರುವುದು ಅಂತ ಗೊತ್ತಾಯಿತು. ಆಮೇಲೆ ಪೊಲೀಸರು ಬಂದು ಆತನನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದರು.

ನೀವು ಸದಾ ಹೋಗುವ ಪುಣ್ಯ ಕ್ಷೇತ್ರಗಳು ಯಾವುವು?

ಸುಮಾರು ವರ್ಷಗಳ ಹಿಂದೆ ಅಪ್ಪ ಅಮ್ಮ ನಮ್ಮನ್ನು ಸೌತ್‌ ಇಂಡಿಯಾ ಟ್ರಿಪ್‌ಗೆ ಕರೆದುಕೊಂಡು ಹೋಗಿದ್ದರು. ಕರ್ನಾಟಕದಿಂದ ಕನ್ಯಾಕುಮಾರಿಯವರಿಗೆ ಸಾಕಷ್ಟು ದೇವಸ್ಥಾನಗಳನ್ನು ಸಂದರ್ಶಿಸಿದ್ದೇವೆ. ತಿರುಪತಿಗೆ ಈಗಲೂ ಹೋಗುತ್ತಿರುತ್ತೇನೆ. ಮುಖ್ಯವಾಗಿ ದಕ್ಷಿಣ ಕನ್ನಡದ ಎಲ್ಲ ದೇವಸ್ಥಾನಗಳು ನನಗೆ ತುಂಬಾ ಇಷ್ಟ. ಉಡುಪಿ ಶ್ರೀಕೃಷ್ಣ ಮಠಕ್ಕೆ ಪ್ರತಿವರ್ಷ ಹೋಗುತ್ತೇನೆ.

ನೀವು ಸಾಗರದವರು. ಜೋಗದ ಬಗ್ಗೆ ಹೇಳಿಲ್ಲ ಅಂದರೆ ಹೇಗೆ?

ಜೋಗವನ್ನು ಬಾಲ್ಯದಿಂದ ಇದುವರೆಗೆ ಎಷ್ಟು ಸಲ ನೋಡಿದ್ದೇನೋ ಲೆಕ್ಕ ಇಲ್ಲ. ಹೀಗಾಗಿ ಅದು ವರ್ಣನೆಗೆ ಸಿಗದಷ್ಟು ಸಾಮಾನ್ಯವಾಗಿ ಹೋಗಿದೆ. ಶಿರಸಿಯಲ್ಲಿ ನಮ್ಮ ತಂದೆ ಸರ್ಕಾರಿ ಕೆಲಸದಲ್ಲಿ ಇದ್ದುದ್ದರಿಂದ ತುಂಬಾ ಊರು ಸುತ್ತಿದ್ದೇವೆ. ಯಲ್ಲಾಪುರದಲ್ಲಿ, ಶಿರಸಿಯಲ್ಲಿ ಓದಿದ್ದೀನಿ. ಕುಮಟಾ ಬೀಚ್‌ ನನಗೆ ತುಂಬಾ ಇಷ್ಟ. ಅಲ್ಲಿ ಸಂಬಂಧಿಕರ ಮನೆ ಇದೆ. ಈಗ ಸದ್ಯಕ್ಕೆ ಗೋಕರ್ಣ ನನ್ನ ಫೇವರೇಟ್‌ ಜಾಗ. ಈಗ ಅಲ್ಲಿಗೆ ವರ್ಷಕ್ಕೆ ಒಂದು ನಾಲ್ಕು ಬಾರಿಯಾದರೂ ಹೋಗ್ತೀನಿ.

ಪ್ರವಾಸ ಹೋಗುವವರಿಗೆ ನೀವು ನೀಡುವ ಸಲಹೆಗಳೇನು?

ಖಂಡಿತವಾಗಿ ಮಜಾ ಮಾಡಿ. ಆದರೆ ಸೇಫ್ಟಿ ಕೂಡ ಅಷ್ಟೇ ಮುಖ್ಯ. ಅದರಲ್ಲೂ ಇಂಟರ್‌ನ್ಯಾಷನಲ್‌ ಟ್ರಿಪ್‌ ವೇಳೆ ರಾತ್ರಿ ಹೊತ್ತು ಒಬ್ಬೊಬ್ಬರೇ ಓಡಾಡುವುದನ್ನು ಅವಾಯ್ಡ್ ಮಾಡಬೇಕು. ಪ್ರವಾಸ ಹೋದಲ್ಲಿ ಇರುವಷ್ಟು ಕಾಲ ಅಲ್ಲೇ ಒಂದು ನಿಗದಿತ ಕಾರು ಬಾಡಿಗೆಗೆ ತೆಗೆದುಕೊಳ್ಳುವುದು ಉತ್ತಮ. ಅದೇ ರೀತಿ ಆಹಾರದ ಬಗ್ಗೆಯೂ ತುಂಬ ಕಾಳಜಿ ಮುಖ್ಯ. ನಾನಂತೂ ಈಗ ಮಿನರಲ್‌ ವಾಟರ್‌ ಮಾತ್ರ ಕುಡಿಯುತ್ತಿರುತ್ತೇನೆ.

Egypt tourism (1)

ದೇಶ ಸುತ್ತುವಾಗ ಎದುರಾದ ತಮಾಷೆಯ ಪ್ರಸಂಗ ಏನಾದರೂ?

ಒಮ್ಮೆ ಈಜಿಪ್ಟ್‌ಗೆ 11 ದಿನಗಳ ಪ್ರವಾಸ ಹೋಗಿದ್ದೆ. ಯೋಗ ಪ್ರಾಕ್ಟಿಸ್‌ ಮಾಡುವವರೆಲ್ಲ ಸೇರಿ ಫುಲ್‌ ಈಜಿಪ್ಟ್‌ ಸುತ್ತಾಡಿದ ಸಂದರ್ಭ ಅದು. ಪಿರಮಿಡ್‌, ಮಮ್ಮೀಸ್‌ ಎಲ್ಲ ನೋಡುತ್ತಿದ್ದರೆ ಅಲ್ಲಿರುವವರೆಲ್ಲ ನನ್ನನ್ನು ಅರೇಬಿಕ್‌ ಹುಡುಗಿ ಎಂದೇ ಅಂದುಕೊಂಡಿದ್ದರು. ಒಬ್ಬ ಗೈಡ್ ಅಂತೂ ತನ್ನನ್ನು ಮದುವೆಯಾಗುವಂತೆ ದುಂಬಾಲು ಬಿದ್ದಿದ್ದ. "ನನ್ನಲ್ಲಿ ನೂರು ಒಂಟೆ ಇದೆ ನನ್ನನ್ನು ಮದುವೆ ಮಾಡ್ಕೋ" ಅಂತ ಹೆಮ್ಮೆಯಿಂದ ಹೇಳ್ಕೊಳ್ತಿದ್ದ! ನನಗೆ ಅದೆಲ್ಲ ತಮಾಷೆಯಾಗಿ ಅನಿಸಿತ್ತು.

ಇನ್ನು ಮುಂದೆ ಎಲ್ಲಿಗೆಲ್ಲ ಪ್ರವಾಸ ಹೋಗುವ ಯೋಜನೆಗಳಿವೆ?

ಸಾಧ್ಯವಾದರೆ ಈ ಬಾರಿ ವಿಯೆಟ್ನಾಂಗೆ ಹೋಗೋಣ ಅಂದ್ಕೊಂಡಿದ್ದೀನಿ. ಹೋದರೆ ಅಲ್ಲೇ 15 ದಿವಸ ಸುತ್ತಾಡಬೇಕು. ಸೈಕಲ್‌ ತಗೊಂಡು ಓಡಾಡಬಹುದು. ಅದಕ್ಕಾಗಿ ಮರೆತು ಹೋದ ಸೈಕಲ್ ರೈಡ್ ಮತ್ತೆ ಅಭ್ಯಾಸ ಮಾಡಬೇಕಿದೆ.