ಚಿರು ಕುಟುಂಬದವರೆಲ್ಲ ಇರುವುದು ತುಮಕೂರಿನ ಜಕ್ಕೇನಹಳ್ಳಿಯಲ್ಲಿ. ಅಲ್ಲಿ ಅವರ ಮನೆಯವರು ಕಟ್ಟಿಸಿದ ದೇವಸ್ಥಾನವಿದೆ. ವರ್ಷದ ಜಾತ್ರೆ, ಹಬ್ಬಗಳ ವೇಳೆ ಅಲ್ಲಿಗೆ ಎಲ್ಲರೂ ಹೋಗುತ್ತೇವೆ. ಅಲ್ಲಿನವರ ಮುಗ್ಧ ಪ್ರೀತಿ, ಸಂಬಂಧಗಳಿಗೆ ಅವರು ಕೊಡುವ ಬೆಲೆ, ಪ್ರೀತಿಯಿಂದ ಉಣಬಡಿಸುವ ಅಡುಗೆ ಎಲ್ಲವೂ ಆಪ್ತವಾಗುತ್ತದೆ. ನಮ್ಮಂತೆ ನಗರ ಜೀವನವನ್ನೇ ಕಂಡವರಿಗೆ ಹಳ್ಳಿ ಜೀವನವನ್ನು ಕಾಣುವುದೇ ಖುಷಿ ಎನ್ನುತ್ತಾರೆ ನಟಿ ಮೇಘನಾ ರಾಜ್.‌ ಪ್ರವಾಸವೆಂದರೆ ಒಂದು ಹೆಜ್ಜೆ ಮುಂದಿರುವ ಮೇಘನಾ ತಮ್ಮ ಪ್ರವಾಸಿ ಬದುಕಿನ ಬಗ್ಗೆ ನಮ್ಮೊಂದಿಗೆ ಮಾತಿಗಿಳಿದಿದ್ದು ಹೀಗೆ.

ಮದ್ರಾಸ್‌ ಎಂಬ ಮಾಯಾ ನಗರಿ

ಟ್ರಾವೆಲ್‌ ಎಂದರೆ ನನ್ನ ಬಾಲ್ಯವೇ ನೆನಪಾಗುತ್ತದೆ. ಬೇಸಿಗೆ ರಜೆ ಅಥವಾ ದಸರಾ ರಜೆಯಲ್ಲಿ ಅಪ್ಪ ಅಮ್ಮ ಹೆಚ್ಚಾಗಿ ಮೈಸೂರು, ಮದ್ರಾಸ್‌ ಗೆ ರೈಲಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು..ಹಳ್ಳಿಗಳ ನಡುವೆ ಗದ್ದೆಗಳನ್ನು ನೋಡುತ್ತಾ ಹೋಗುವ ಆ ದಿನಗಳು, ರೈಲಿನ ಊಟ ಇವೆಲ್ಲವೂ ನನಗೆ ಸವಿಸವಿ ನೆನಪುಗಳು.

ರೀಸನ್‌ ಟು ರಿಜನೆರೇಟ್‌, ರಿಫ್ರೆಶ್‌..

ಜ್ಞಾನವನ್ನು ಪಡೆದುಕೊಳ್ಳೋದಕ್ಕಾಗಿ ಪ್ರಯಾಣ, ಪ್ರವಾಸ ಅತೀ ಅಗತ್ಯ. ಇಟ್‌ ಗೀವ್ಸ್‌ ಮಿ ಎ ರೀಸನ್‌ ಟು ರಿಜನೆರೇಟ್‌, ರಿಫ್ರೆಶ್‌. ಜೀವನವನ್ನೂ ನೋಡುತ್ತಾ ಬಂದಾಗ ಟ್ರಾವೆಲ್‌ ನನಗೆ ಬಹಳ ಮುಖ್ಯವಾಗುತ್ತದೆ. ಕೆಲಸದ ನಿಮಿತ್ತ ಬೇಡವೆಂದರೂ ಪ್ರಯಾಣ ಮಾಡಲೇಬೇಕು. ಟ್ರಾವೆಲ್‌ ಹ್ಯಾಬಿಟ್‌ ಅಳವಡಿಸಿಕೊಳ್ಳುವುದರಿಂದ ಅಂತರಂಗದಿಂದಲೇ ನಾವು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.

Untitled design (56)

ಕಂಪರ್ಟ್‌-ಸೇಫ್ಟೀ ನೆಟ್‌ನಿಂದ ಹೊರ ಬನ್ನಿ

ಬೆಂಗಳೂರಿನಲ್ಲೇ ವಾಸವಿರುವುದರಿಂದ ಸುತ್ತಮುತ್ತಲೂ ಎಲ್ಲರೂ ಗೊತ್ತಿರುವವರಿರುತ್ತಾರೆ. ಸುರಕ್ಷತೆಯೂ ಇದ್ದೇ ಇರುತ್ತದೆ. ಆದರೆ ಅದನ್ನು ಹೊರತುಪಡಿಸಿ, ಒಬ್ಬಂಟಿಯಾಗಿ ಹೊರ ದೇಶವನ್ನು ಸುತ್ತಾಡಲು ಹೋದಾಗ ಪರಿಚಯದವರು ಯಾರೂ ಇರುವುದಿಲ್ಲ. ನಮ್ಮನ್ನು ನಾವೇ ಕಾಪಾಡಿಕೊಳ್ಳುವುದು ಅಗತ್ಯ. ಕಂಪರ್ಟ್‌-ಸೇಫ್ಟೀ ನೆಟ್‌ ನಿಂದ ಹೊರ ಬಂದು ಹೇಗೆ ಸರ್ವೈವ್‌ ಆಗುತ್ತೇವೆ ಎನ್ನುವುದು ಮುಖ್ಯ. ಅಪಾಯಗಳಿಗೆ ಸವಾಲೊಡ್ಡಿ ನಿಲ್ಲುವ ಧೈರ್ಯ ಬರುವುದು ಟ್ರಾವೆಲ್‌ ಮಾಡುವಾಗ ಮಾತ್ರ.

ಚಿರು ಜತೆ ಮೊದಲ ಯುರೋಪ್‌ ಪ್ರವಾಸ‌

ಮದುವೆಯಾದ ಮೇಲೆ ಚಿರು ಜತೆ ಯುರೋಪ್‌ ಪ್ರವಾಸ ಹೋಗಿದ್ದೆ. ಅಲ್ಲಿ ನಾಲ್ಕು ಜಾಗಗಳಿಗೆ ಭೇಟಿ ನೀಡಿದ್ದೆವು. ನಿರೀಕ್ಷೆ ಮಾಡದೆಯೇ ತುಂಬಾ ಎಂಜಾಯ್‌ ಮಾಡಿದ ಜಾಗವೆಂದರೆ ವೆನಿಸ್.‌ ಅದು ರೊಮ್ಯಾಂಟಿಕ್‌ ಪ್ಲೇಸ್.‌ ಸಾಮಾನ್ಯ ಜಾಗದ ಹಾಗಲ್ಲ. ಅಲ್ಲಿ ಎಲ್ಲೇ ಹೋಗಬೇಕಿದ್ದರೂ ಪ್ರಯಾಣಕ್ಕೆ ಬೋಟ್‌ಗಳನ್ನೇ ಅವಲಂಬಿಸಬೇಕು. ಇಲ್ಲವಾದರೆ ಕಾಲ್ನಡಿಗೆಯ ಮೂಲಕ ಹೋಗಬೇಕು. ಆ ದಿನಗಳು ನಮ್ಮಿಬ್ಬರನ್ನೂ ಇನ್ನಷ್ಟು ಹತ್ತಿರವಾಗಿಸಿತ್ತು, ಒಬ್ಬರನ್ನೊಬ್ಬರು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿತ್ತು.

ಮಕ್ಕಳ ಜತೆ ಟ್ರಾವೆಲ್‌ ಲೈಟ್‌ ಅಲ್ಲ ವೈಟ್..

ಮಕ್ಕಳ ಜತೆ ಟ್ರಾವೆಲ್‌ ಮಾಡುವಾಗ ಮಾನಸಿಕವಾಗಿ ನಾವೇ ಸಿದ್ಧರಾಗಬೇಕು. ಟ್ರಾವೆಲ್‌ ಲೈಟ್‌ ಎಂಬ ಮಾತು ಮಕ್ಕಳ ಜತೆ ಹೋಗುವಾಗ ಅಪ್ಲೈ ಆಗುವುದಿಲ್ಲ. ಯಾಕೆಂದರೆ ಟ್ರಾವೆಲ್‌ ವೇಳೆ ಅವರ ನೆಚ್ಚಿನ ಆಟಿಕೆ, ಬಟ್ಟೆಗಳನ್ನು ಮರೆತರೆ ನೆಮ್ಮದಿಯ ಪ್ರವಾಸ ನಮ್ಮದಾಗಲು ಸಾಧ್ಯವೇ ಇಲ್ಲ. ನನಗೆ ಅನೇಕ ಬಾರಿ ಅದರ ಅನುಭವವಾಗಿದೆ. ಊಟ ಮರೆತರೂ, ಅವನ ಬ್ಲೂ ಬೆಡ್‌ ಶೀಟ್‌ ಜತೆಗಿರದೆ ಪ್ರಯಾಣ ಅಸಾಧ್ಯ. ಬೈ ರೋಡ್‌ ಹೋಗುವಾಗ ಒಂದು ಗಾಡಿ ತುಂಬೆಲ್ಲ ಬರೀ ಅವನ ಆಟಿಕೆಗಳು, ರಾಕರ್‌ ಇಂಥವೇ ತುಂಬುತ್ತಿತ್ತು..ಮಕ್ಕಳು ದೊಡ್ಡವರಾಗುತ್ತಲೇ ಎಲ್ಲದಕ್ಕೂ ಹೊಂದಿಕೊಳ್ಳುತ್ತಾರೆ, ಕಂಫರ್ಟ್‌ ನಿಂದ ಹೊರಬರುತ್ತಾರೆ.

ಚಿರು ಪರಿಚಯಿಸಿದ ಇಟಾಲಿಯನ್‌ ರೆಸ್ಟೋರೆಂಟ್‌

ಬೆಂಗಳೂರಿನಲ್ಲಿ ಫುಡ್‌ ಅಂದರೆ ನಮಗೊಂದು ಅಡ್ಡ ಇದೆ. ಜಯನಗರದ ಟಾಸ್ಕೆನೋ ಎನ್ನುವ ಇಟಾಲಿಯನ್‌ ರೆಸ್ಟೋರೆಂಟ್‌. ಅದನ್ನು ಪರಿಚಯಿಸಿದವರು ಚಿರು. ಅವರ ಜತೆ ಅದೆಷ್ಟು ಬಾರಿ ಅಲ್ಲಿಗೆ ಹೋಗಿದ್ದೇನೆಂಬುದೇ ಗೊತ್ತಿಲ್ಲ. ಈಗ ಫ್ರೆಂಡ್ಸ್‌ ಜತೆ ಹೋಗುತ್ತಿರುತ್ತೇನೆ. ಅಲ್ಲಿನ ಶುಚಿ- ರುಚಿಯಾದ ಆಹಾರಕ್ಕೆ ಮನಸೋಲದೇ ಇರುವುದಕ್ಕಾಗದು.

ಐ ಲವ್‌ ಗೋವಾ..

ಗೋವಾದ ಜತೆಗೆ ನನಗೆ ನೇರ ಸಂಬಂಧವಿದೆ, ಲೆಕ್ಕವಿಲ್ಲದಷ್ಟು ನೆನಪುಗಳಿವೆ. ಅನೌಪಚಾರಿವಾಗಿ ಚಿರು ನನಗೆ ಅದಕ್ಕೂ ಮೊದಲೇ ಪ್ರಪೋಸ್‌ ಮಾಡಿದ್ದರೂ, ಅಫೀಶಿಯಲ್‌ ಆಗಿ ಗೋವಾದಲ್ಲಿ ನಡೆದ ʻಆಟಗಾರʼ ಚಿತ್ರದ ಚಿತ್ರೀಕರಣದ ವೇಳೆ ಪ್ರಪೋಸ್‌ ಮಾಡಿದ್ದರು. ಆ ದಿನ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಉಳಿದುಕೊಂಡಿದೆ. ಇನ್ನು ಮನಸ್ಸಿಗೆ ವಿಶ್ರಾಂತಿ ಬೇಕೆಂದಾಗ, ಸೆಲೆಬ್ರೇಷನ್‌ ಮೂಡ್‌ ಅಂದಾಗೆಲ್ಲ ನನಗೆ ಗೋವಾ ನೆನಪಾಗಿಬಿಡುತ್ತದೆ.

ಮೈಸೂರಿಗೆ ಹೋದರೆ ಝೂ ನೋಡದೇ ಬರೋದು ಹೇಗೆ?

ನಮ್ಮ ಮನೆಯಲ್ಲಿ ಎಲ್ಲರೂ ಪ್ರಾಣಿ ಪ್ರಿಯರು.ರಾಯನ್‌ ಗಂತೂ ಆನೆ ಎಂದರೆ ಬಹಳ ಇಷ್ಟ. ಅದಕ್ಕಾಗಿಯೇ ಮೈಸೂರಿಗೆ ಹೋದಾಗಲೆಲ್ಲ ಮೃಗಾಲಯಕ್ಕೆ ಕರೆದುಕೊಂಡು ಹೋಗುತ್ತಿರುತ್ತೇನೆ. ಹೆಚ್ಚಿನ ಜನರಿದ್ದರೆ ಅವನು ಪ್ರಾಣಿಗಳ ಜತೆ ಎಂಜಾಯ್‌ ಮಾಡುವುದು ಕಷ್ಟವೆಂದು ಸ್ಪೆಷಲ್‌ ಪರ್ಮಿಷನ್‌ ಪಡೆದುಕೊಂಡು ಇತ್ತೀಚೆಗಷ್ಟೇ ಮೃಗಾಲಯಕ್ಕೆ ಹೋಗಿದ್ದೆವು..ಈ ಬಾರಿ ಹೋದಾಗ ಅಚಾನಕ್‌ ಆಗಿ ಮೃಗಾಲಯದಲ್ಲಿ ಮೈಸೂರು ಮಹಾರಾಣಿಯವರನ್ನು ಭೇಟಿಯಾದೆವು. ಅದು ತುಂಬಾ ಖುಷಿಯಾಗಿತ್ತು.

Untitled design (54)

ಸ್ಟೇಕೇಷನ್‌ ಬರ್ತ್‌ ಡೇ

ಬರ್ತ್‌ ಡೇ ಬಂತೆಂದರೆ ಹೆಚ್ಚಾಗಿ ಕುಟುಂಬ ಹಾಗೂ ಸ್ನೇಹಿತರ ಬಳಗದ ಜತೆ ಸೇರುತ್ತೇನೆ. ಬೆಂಗಳೂರು ಬಿಟ್ಟು ಬೇರೆ ಕಡೆ ಬರ್ತ್‌ ಡೇ ಆಚರಿಸಿಕೊಳ್ಳುವುದು ಇಷ್ಟ. ಪಾರ್ಟ್‌, ಪಬ್‌ ಅವೆಲ್ಲವೂ ಸಾಕೆನಿಸಿದೆ. ನಮ್ಮವರ ಜತೆ ಎಲ್ಲಾದರು ಹೋಗಿ ಒಂದಷ್ಟು ಕಾಲ ಕಳೆಯಬೇಕೆನಿಸುತ್ತದೆ. ಸ್ಟೇಕೇಷನ್‌ ಮಾಡಿ ಬರ್ತ್‌ ಡೇ ಆಚರಿಸುವುದೆಂದರೆ ನನಗಿಷ್ಟ. ರಾಯನ್‌, ಅಪ್ಪ-ಅಮ್ಮ, ಫ್ರೆಂಡ್‌ ಜತೆಗಿದ್ದರೆ ಅದುವೇ ಸ್ವರ್ಗ.

ಅಪ್ಪ ಅಮ್ಮನ ಜತೆ ಸಿಂಗಾಪುರ ಟ್ರಿಪ್‌

ನನ್ನ ಮದುವೆಗೆ ಆಗಿನ್ನೂ ಕೆಲವೇ ದಿನಗಳು ಉಳಿದುಕೊಂಡಿತ್ತು. ಅಪ್ಪ ಅಮ್ಮನಿಗೆ ಆಗ ಸಿಂಗಾಪುರಕ್ಕೆ ಟ್ರಿಪ್‌ ಪ್ಲ್ಯಾನ್‌ ಮಾಡಿಕೊಂಡಿದ್ದರು. ಮದುವೆಯಾಗಿ ಬೇರೆ ಮನೆ ಸೇರಿಕೊಂಡಮೇಲೆ ಹೀಗೆ ಕಾಲ ಕಳೆಯುವುದು ಕಷ್ಟವಾದರೆ ಎಂಬ ಯೋಚನೆಯಲ್ಲಿ ಬಾಲ್ಯ ನೆನಪುಗಳನ್ನು ಮತ್ತೆ ಮೆಲುಕು ಹಾಕಿಸುವಂಥ ಪ್ರಯಾಣವಾಗಿತ್ತು ಅದು. ಮತ್ತೆ ಅವರ ಮಡಿಲಲ್ಲಿ ಮಗುವಾಗಿಬಿಟ್ಟಿದ್ದೆ.

ಪಾರಂಪರಿಕ ತಾಣಗಳಲ್ಲಿ ಶುಚಿತ್ವ ಅಗತ್ಯ

ಕರ್ನಾಟಕದ ಪ್ರವಾಸೋದ್ಯಮ, ಆತಿಥ್ಯ ಕ್ಷೇತ್ರದ ಬಗೆಗೆ ನನಗೆ ಖುಷಿಯಿದೆ, ಹೆಮ್ಮೆಯಿದೆ. ಆಹಾರದ ವಿಚಾರದಲ್ಲಿ ನಮ್ಮ ರಾಜ್ಯದಲ್ಲಿ ಸಿಗುವ ಆಯ್ಕೆಗಳು ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಆದರೆ ನಮ್ಮಲ್ಲಿರುವ ಪಾರಂಪರಿಕ ತಾಣಗಳಲ್ಲಿನ ಶುಚಿತ್ವದ ಬಗ್ಗೆ ನನ್ನ ತಕರಾರಿದೆ. ಯಾಕೆಂದರೆ ಕರ್ನಾಟಕದ ಪಾರಂಪರಿಕ ತಾಣಗಳಿಗೆ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಅಲ್ಲಿನ ಶುಚಿತ್ವದ ಬಗ್ಗೆ ಪ್ರವಾಸಿಗರಾಗಲೀ, ಪ್ರವಾಸೋದ್ಯಮ ಇಲಾಖೆಯಾಗಲೀ ಹೆಚ್ಚಿನ ಗಮನ ಹರಿಸುತ್ತಿಲ್ಲ ಎಂಬುದು ನನ್ನ ಅನಿಸಿಕೆ. ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಸ್ವಲ್ಪ ಗಮನಹರಿಸಿ ಶಿಸ್ತಿನ ಕ್ರಮ, ನೀತಿಗಳನ್ನು ಜಾರಿಗೊಳಿಸಿದರೆ, ಪ್ರವಾಸಿಗರಿಗೆ ಇನ್ನಷ್ಟು ಹತ್ತಿರವಾಗಲು ಸಾಧ್ಯ.