ಅಂದು ಸೀರಿಯಲ್ ಪ್ರವಾಸ..ಇಂದು ಸೀರಿಯಸ್ ಪ್ರವಾಸ – ವೈಷ್ಣವಿ ಗೌಡ
ಪ್ರವಾಸಿ ಜೀವನವನ್ನು ತಿಳಿಯುವ ಮುನ್ನ ಪ್ರಯಾಣಕ್ಕೆ ಬ್ಯಾಗ್ ಪ್ಯಾಕ್ ಮಾಡುವ ಕಲೆ ನನಗೆ ಗೊತ್ತಿರಲೇ ಇಲ್ಲ. ಪ್ರವಾಸಕ್ಕೆಂದೇ ಶಾಪಿಂಗ್ ಮಾಡಿಕೊಂಡು ಬೇಕು-ಬೇಡವೆನ್ನುವ ಎಲ್ಲ ವಸ್ತುಗಳ ಜತೆ ಪ್ರಯಾಣಿಸುತ್ತಿದ್ದೆ. ಆದರೆ ಈಗ ನನ್ನ ಟ್ರಾವೆಲ್ ಬ್ಯಾಗ್ ಲೈಟ್ ಆಗಿರುತ್ತದೆ. ಅನಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿಕೊಳ್ಳುವುದಿಲ್ಲ. ನಾವು ಹೋಗುವ ಪರಿಸರದಲ್ಲೂ ಶಾಪಿಂಗ್ ಸೌಲಭ್ಯವಿರುವುದರಿಂದ ಅಗತ್ಯಬಂದರೆ ಅಲ್ಲೇ ಶಾಪಿಂಗ್ ಮಾಡಿಕೊಳ್ಳುತ್ತೇನೆ.
ಕನ್ನಡ ಕಿರುತೆರೆ ಲೋಕದಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿಯಾಗಿ, ಸೀತಾರಾಮದಲ್ಲಿ ಸೀತಮ್ಮಳಾಗಿ ಕನ್ನಡಿಗರ ಮನಗೆದ್ದ ಗುಳಿಕೆನ್ನೆ ಬೆಡಗಿ ವೈಷ್ಣವಿ ಗೌಡ, ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿಯೂ ಸುದ್ದಿಯಲ್ಲಿದ್ದವರು. ವರ್ಷದ ಹಿಂದಷ್ಟೇ ಸಪ್ತಪದಿ ತುಳಿದಿರುವ ಇವರು ಈಗಂತೂ ಪ್ರವಾಸವನ್ನೇ ಜೀವನವನ್ನಾಗಿಸಿಕೊಂಡವರು. ಅವರ ಪ್ರವಾಸಿ ಜೀವನದ ಪರಿಚಯ ಈ ವಾರದ ಪ್ರವಾಸಿ ಪ್ರಪಂಚದಲ್ಲಿ.
ಸ್ವಾಮಿ ಕಾರ್ಯದ ಜತೆಗೆ ಸ್ವಕಾರ್ಯ..
ಮದುವೆಗೂ ಮೊದಲು ಧಾರಾವಾಹಿ, ಸಿನಿಮಾಗಳಲ್ಲೇ ಬ್ಯುಸಿಯಾಗಿದ್ದರಿಂದ ನನಗಾಗಿ ಹೆಚ್ಚಿಗೆ ಸಮಯ ಕೊಡುವುದಕ್ಕಾಗಿರಲಿಲ್ಲ. ಕೆಲಸದ ನಡುವೆ ಪ್ರವಾಸ ಕಷ್ಟವಾಗಿತ್ತು. ಕೆಲಸಕ್ಕಾಗಿ ಪ್ರವಾಸ ಎಂಬಂತಾಗಿತ್ತು. ಆದರೆ ಮದುವೆಯಾದ ನಂತರ ಎಲ್ಲವೂ ಬದಲಾಗಿದೆ. ಪತಿ ಅನುಕೂಲ್ ಮಿಶ್ರಾ, ಉತ್ತರ ಪ್ರದೇಶ ಮೂಲದ ಆರ್ಮಿ ಆಫೀಸರ್ ಆಗಿರುವುದರಿಂದ ಬೇರೆ ಬೇರೆ ಜಾಗಗಳಿಗೆ ಅವರು ಸುತ್ತಾಡುತ್ತಲೇ ಇರಬೇಕಾಗುತ್ತದೆ. ಅವರ ಜತೆಗೆ ನಾನೂ ಹೋಗುತ್ತೇನೆ. ಹೋಗುವ ಮುನ್ನ ಅಲ್ಲಿ ಸಮೀಪದ ಪ್ರವಾಸಿ ತಾಣಗಳ ಬಗ್ಗೆ ತಿಳಿದುಕೊಂಡು ಅದಕ್ಕೆ ತಕ್ಕಂತೆ ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುತ್ತೇನೆ.
ಇದನ್ನೂ ಓದಿ: ಹೈಡ್ರೋಫೋಬಿಯಾ ಇಂದಿಗೂ ಕಾಡುತ್ತಿದೆ – ಐಶ್ವರ್ಯಾ ಸಿಂಧೋಗಿ
ಟ್ರಾವೆಲ್ ಬ್ಯಾಗ್ ಲೈಟ್ ಆಗಿರಲಿ
ಪ್ರವಾಸಿ ಜೀವನವನ್ನು ತಿಳಿಯುವ ಮುನ್ನ ಪ್ರಯಾಣಕ್ಕೆ ಬ್ಯಾಗ್ ಪ್ಯಾಕ್ ಮಾಡುವ ಕಲೆ ನನಗೆ ಗೊತ್ತಿರಲೇ ಇಲ್ಲ. ಪ್ರವಾಸಕ್ಕೆಂದೇ ಶಾಪಿಂಗ್ ಮಾಡಿಕೊಂಡು ಬೇಕು-ಬೇಡವೆನ್ನುವ ಎಲ್ಲ ವಸ್ತುಗಳ ಜತೆ ಪ್ರಯಾಣಿಸುತ್ತಿದ್ದೆ. ಆದರೆ ಈಗ ನನ್ನ ಟ್ರಾವೆಲ್ ಬ್ಯಾಗ್ ಲೈಟ್ ಆಗಿರುತ್ತದೆ. ಅನಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿಕೊಳ್ಳುವುದಿಲ್ಲ. ನಾವು ಹೋಗುವ ಪರಿಸರದಲ್ಲೂ ಶಾಪಿಂಗ್ ಸೌಲಭ್ಯವಿರುವುದರಿಂದ ಅಗತ್ಯಬಂದರೆ ಅಲ್ಲೇ ಶಾಪಿಂಗ್ ಮಾಡಿಕೊಳ್ಳುತ್ತೇನೆ.

ಋಷಿಕೇಷದಲ್ಲಿ ಬಂಜೀ ಜಂಪ್
ಮದ್ವೆಯಾಗಿ ವರ್ಷ ತುಂಬುತ್ತಾ ಬಂತು. ಪತಿಯ ಜತೆಗೆ ಅದಾಗಲೇ ಚತ್ತೀಸ್‌ಗಢ, ಋಷಿಕೇಶ್, ಮನಾಲಿ, ಶಿಮ್ಲಾ, ದೆಹಲಿ, ಪಾಂಡಿಚೇರಿ, ಗೋವಾ ಹೀಗೆ ಸಾಕಷ್ಟು ಕಡೆಗೆ ಹೋಗಿದ್ದೇನೆ. ಆದರೆ ಎಲ್ಲಿಯೂ ಅಡ್ವೆಂಚರ್ ಮಾಡುವ ಸಾಹಸಕ್ಕೆ ಹೋಗಿರಲಿಲ್ಲ. ಮೊದಲ ಬಾರಿಗೆ ಋಷಿಕೇಷದಲ್ಲಿ ಬಂಜೀ ಜಂಪ್ ಮಾಡಿದ್ದೆ. ನನಗೆ ಬಾಲ್ಯದಿಂದಲೂ ಹೈಟ್ ಫೋಬಿಯಾ ಇದೆ. ಎತ್ತರದ ಪರಿಸರದಲ್ಲಿ ನಿಂತು ಕೆಳಕ್ಕೆ ನೋಡುವುದೆಂದರೆ ಭಯಪಡುವ ನನ್ನನ್ನು ಒಪ್ಪಿಸಿ, ಜತೆಗೆ ಇದ್ದು ಬಂಜೀ ಜಂಪ್ ಮಾಡಿದ್ದರು. ಇದು ಜೀವನದ ಮರೆಯಲಾಗದ ಕ್ಷಣ.
ಫೊಟೋಗಾಗಿಯೇ ಪ್ರವಾಸವಲ್ಲ
ಪ್ರವಾಸ ಮಾಡಿದ ನೆನಪುಗಳನ್ನು ಜೀವಂತವಾಗಿಸಲು ಫೊಟೋಗ್ರಫಿ ಬೇಕು ಎಂಬುದು ನಿಜ. ಆದರೆ ಪ್ರವಾಸ ಪೂರ್ತಿ ಫೊಟೋಗ್ರಫಿಯೇ ಆಗಿಬಿಡಬಾರದು. ನಾವು ಭೇಟಿ ನೀಡಿದ ಪರಿಸರವನ್ನು ಅಲ್ಲೇ ಇದ್ದು ಅನುಭವಿಸಬೇಕು, ಸ್ಥಳವನ್ನು ತಿಳಿಯಬೇಕು, ಪ್ರತಿ ಕ್ಷಣವನ್ನೂ ಖುಷಿಯಿಂದ ಕಳೆಯಬೇಕು. ಇದರ ನಡುವೆ ಫೊಟೋಗಳನ್ನು ತೆಗೆಯಬಾರದೆಂದಲ್ಲ. ಆದರೆ ಎಲ್ಲದಕ್ಕೂ ನಮಗೆ ನಾವೇ ಕಡಿವಾಣಗಳನ್ನು ಹಾಕಿಕೊಳ್ಳುವುದು ಒಳ್ಳೆಯದು.
ಕಾಶಿಯೆಂಬ ಅದ್ಭುತ
ಇತ್ತೀಚೆಗಷ್ಟೇ ಕುಟುಂಬದ ಜತೆಗೆ ಕಾಶಿಗೆ ಹೋಗಿದ್ದೆ. ಕುಟುಂಬದಲ್ಲಿ ಹಿರಿಯರೊಬ್ಬರನ್ನು ಕಳೆದುಕೊಂಡಿದ್ದರಿಂದ ಕಾರ್ಯ ಮಾಡುವುದಕ್ಕಾಗಿ ಅಲ್ಲಿ ಹೋಗಿರುವುದಾದರೂ, ಆ ವೇಳೆ ಅಲ್ಲಿನ ದೇವಾಲಯಗಳಿಗೂ ಹೋಗಿ ಬಂದೆವು. ಜೀವನ ಮತ್ತು ಮರಣ ಎರಡನ್ನೂ ಏಕಕಾಲದಲ್ಲಿ ನೋಡಲು ಸಿಗುವ ಜಾಗವೇ ಕಾಶಿ.

ಕುಂಭ ಮೇಳದಲ್ಲಿ ಸೀತಾರಾಮ ತಂಡ
ಸೀತಾರಾಮ ಧಾರಾವಾಹಿಯ ಚಿತ್ರೀಕರಣಕ್ಕಾಗಿ ಆಯ್ದ ಸುಮಾರು 10 ಮಂದಿಯ ತಂಡದ ಜತೆಗೆ ಕುಂಭ ಮೇಳಕ್ಕೆ ಹೋಗಿದ್ದೆ. ಕೋಟಿಗಟ್ಟಲೆ ಜನರ ನಡುವೆ ಚಿತ್ರೀಕರಣ ಮಾಡುವುದು ಸಾಹಸವೇ ಆಗಿತ್ತು. ಸುಡು ಬಿಸಿಲಿನಲ್ಲಿ ಸರಿಯಾದ ಸೆಟ್‌ಗಳು ಇಲ್ಲದೆಯೇ, ಕೂರಲೂ ಜಾಗವಿಲ್ಲದೆ, ಸಾಮಾನ್ಯವಾದ ಡಿಎಸ್‌ಎಲ್ ಆರ್ ಕ್ಯಾಮೆರಾಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡಿದ್ದೆವು.ಆದರೂ ಅದೊಂದು ವಿಶೇಷ ಅನುಭವವನ್ನೇ ಕಟ್ಟಿಕೊಟ್ಟಿದೆ.
ಮರಳಿನ ಜತೆ ಮರಳುವೆ
ಪ್ರವಾಸ ಮುಗಿಸಿ ಬರುವಾಗ ಅಲ್ಲಿನ ನೆನಪುಗಳ ಜತೆಗೆ ಫ್ರಿಡ್ಜ್ ಮ್ಯಾಗ್ನೆಟ್ ತರುವುದು ರೂಢಿಯಾಗಿಬಿಟ್ಟಿದೆ. ಈ ಆಸಕ್ತಿ ನನ್ನಲ್ಲಿ ಬೆಳೆಸಿದವರು ನನ್ನ ಪತಿ. ಇದರ ಜತೆಗೆ ದೇಶ ವಿದೇಶಗಳ ಸಮುದ್ರ ತೀರಗಳಿಗೆ ಹೋದಾಗೆಲ್ಲ ಅಲ್ಲಿನ ಒಂದು ಹಿಡಿ ಮರಳನ್ನು ಸಂಗ್ರಹಿಸಿ ಮನೆಗೆ ತರುತ್ತೇನೆ. ಮನೆಯ ಅಲಂಕಾರಿಕ ಗಾಜಿನ ಹೂದಾನಿಗಳಲ್ಲಿ ಅವುಗಳನ್ನಿರಿಸುವುದೆಂದರೆ ನನಗೆ ಏನೋ ಸಂಭ್ರಮ.
ಮುಂದಿನ ನಿಲ್ದಾಣ ಮಸಾಯಿ ಮಾರಾ
ಈಗ ಪ್ರವಾಸವೇ ಜೀವನವಾಗಿರುವುದರಿಂದ ಬಕೆಟ್ ಲಿಸ್ಟ್ ನಲ್ಲಿರುವ ಪ್ರವಾಸಿ ತಾಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಮುಂದಿನ ದಿನಗಳಲ್ಲಿ ಕೀನ್ಯಾ, ಮಸಾಯಿ ಮಾರಾ ಹೋಗುವಾಸೆಯಿದೆ. ಸಿಂಹಗಳ ಜತೆ ಸಮೀಪದಿಂದ ಒಡನಾಡಲು, ಜಿರಾಫೆಗಳಿಗೆ ಆಹಾರವನ್ನುಣಿಸುವುದಕ್ಕೂ ಅಲ್ಲಿ ಅವಕಾಶವಿದೆ. ಅಲ್ಲಿ ಸಪಾರಿಗೂ ಹೋಗಬೇಕು. ಪ್ರಾಣಿಗಳ ದಿನಚರಿಯನ್ನು ಹತ್ತಿರದಿಂದ ನೋಡುವಾಸೆಯಿದೆ.

ನಿರೀಕ್ಷೆಗಳಿಲ್ಲದ ಪ್ರವಾಸ
ಪ್ರವಾಸವೆಂದರೆ ಬರಿಯ ವಿದೇಶಕ್ಕೆ ಹೋಗುವುದಷ್ಟೇ ಅಂದುಕೊಳ್ಳುವುದಕ್ಕಿಂತ ಸಣ್ಣ ಪುಟ್ಟ ಪ್ರವಾಸಗಳಿಗೂ ಹೋಗುತ್ತಲೇ ಇದ್ದರೆ ಒತ್ತಡದ ಜೀವನದಿಂದ ಹೊರಬರಲು ಪ್ರವಾಸವೇ ಮದ್ದಿನಂತೆ ಕಾರ್ಯನಿರ್ವಹಿಸುತ್ತದೆ. ಹೊಸ ಜಾಗಗಳಿಗೆ ಹೋಗಿ, ಹೊಸ ಜನರನ್ನು ಭೇಟಿ ನೀಡುವುದರಿಂದ ಜೀವನಾನುಭವೂ ಹೆಚ್ಚುತ್ತದೆ. ಆದರೆ ನೆನಪಿನಲ್ಲಿಡಬೇಕಾದರೆ ವಿಚಾರವೆಂದರೆ ಯಾವುದೇ ನಿರೀಕ್ಷೆಗಳೊಂದಿಗೆ ಪ್ರವಾಸಕ್ಕೆ ಹೋಗಬಾರದು. ಪ್ರತಿ ಬಾರಿ ಸಿಹಿಯ ಅನುಭವಗಳೇ ಆಗುತ್ತವೆಯೆಂದಲ್ಲ, ಕಹಿ ಅನುಭವಗಳನ್ನೂ ಒಪ್ಪುವ ಮುಕ್ತ ಮನಸಿರಬೇಕು.
ಟ್ರಾವೆಲ್ ರೀಲ್ಸ್ ನನಗಿಷ್ಟ
ಪ್ರಯಾಣ ಅಥವಾ ಪ್ರವಾಸದ ವೇಳೆ ರಿಲ್ಸ್ ಮಾಡುತ್ತಿರುತ್ತೇನೆ. ಅದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಎಂಬ ಕಾರಣಕ್ಕಷ್ಟೇ ಅಲ್ಲ, ಪ್ರವಾಸ ನೆನಪುಗಳನ್ನು ಇನ್ನಷ್ಟು ಗಟ್ಟಿಗೊಳಿಸುವುದಕ್ಕಾಗಿಯೂ ಹೌದು. ರೀಲ್ಸ್ ಶೂಟ್ ಮಾಡುವ ಹಿಂದಿರುವ ವ್ಯಕ್ತಿ ನನ್ನ ಪತಿ. ಇತ್ತೀಚೆಗೆ ಅವರೂ ನನ್ನ ಜತೆಗೆ ಟ್ರೆಂಡಿಂಗ್ ಆಡುಗಳಿಗೆ ಹೆಜ್ಜೆ ಹಾಕುತ್ತಾರೆ.