ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಹಂಪಿಗೆ ಪ್ರವಾಸ ಬರುವ ವಿದೇಶಿಗರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಪ್ರವಾಸೋದ್ಯಮ ಇಲಾಖೆ ಈ ಭಾರಿ ಕುಸಿತಕ್ಕೆ ಹಲವು ಕಾರಣಗಳನ್ನು ನೀಡಿದೆ. ಅಲ್ಲದೆ, ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಕುರಿತು ಸ್ಪಷ್ಟನೆ ನೀಡಿದೆ.

ಹಂಪಿಯಲ್ಲಿ ಕಳೆದ ವರ್ಷ ಅಕ್ಟೋಬರ್‌ ವೇಳೆಗೆ 20,000ಕ್ಕಿಂತ ಹೆಚ್ಚಾಗಿದ್ದ ವಿದೇಶಿ ಪ್ರವಾಸಿಗರ ಸಂಖ್ಯೆ, ಅ. 2025ರವರೆಗೆ ಕೇವಲ 3,818ಕ್ಕೆ ಇಳಿದಿದೆ. ಇದಕ್ಕೆ ಮಾರ್ಚ್ 2025ರಲ್ಲಿ ಅಲ್ಲಿ ವಿದೇಶಿ ಪ್ರಜೆಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಕೊಲೆಯೇ ಪ್ರಮುಖ ಕಾರಣ ಅಂದಾಜಿಸಲಾಗಿದೆ.

ಮೈಸೂರು, ಉಡುಪಿ ಮತ್ತು ಚಾಮರಾಜನಗರದಲ್ಲೂ ವಿದೇಶಿ ಪ್ರವಾಸಿಗರ ಸಂಖ್ಯೆ ಕುಸಿದಿದೆ. ಈ ವರ್ಷ ಮೈಸೂರಿಗೆ 77,242 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದು, ಇದೇ ಸಂಖ್ಯೆ 2024ರಲ್ಲಿ ಸುಮಾರು 1.4 ಲಕ್ಷ ಮತ್ತು 2023ರಲ್ಲಿ 2.2 ಲಕ್ಷವಾಗಿತ್ತು. ಉಡುಪಿಗೂ 22,972 ವಿದೇಶಿ ಪ್ರವಾಸಿಗರು ಮಾತ್ರ ಭೇಟಿ ನೀಡಿದ್ದಾರೆ. 2024ರಲ್ಲಿ ಈ ಸಂಖ್ಯೆ 89,849 ಮತ್ತು 2023ರಲ್ಲಿ 44,760 ಆಗಿತ್ತು. ಮುಂಬರುವ ಡಿಸೆಂಬರ್ ರಜಾ ಕಾಲದವರೆಗೂ, ಇದರಲ್ಲಿ ಯಾವುದೇ ಚೇತರಿಕೆ ಕಾಣುವ ಸೂಚನೆಗಳಿಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.

ಕೋವಿಡ್‌-19 ನಂತರದ ದಿನಗಳಿಂದ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ನಿಧಾನವಾಗಿ ಏರುಗತಿ ಕಾಣುತ್ತಿದೆ. ರಾಜ್ಯಾದ್ಯಂತ ಒಟ್ಟು ಮೂರು ಲಕ್ಷ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆದರೂ, ಹಲವು ಪ್ರದೇಶಗಳಲ್ಲಿ ಪ್ರವಾಸಿಗರ ಸಂಖ್ಯೆ ಇನ್ನೂ ಕಡಿಮೆಯೇ ಇದೆ. ಪ್ರವಾಸಿ ತಾಣಗಳಲ್ಲಿ ನಡೆದ ಹಲವು ಅಹಿತಕರ ಘಟನೆಗಳೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಇಲಾಖೆ ಸ್ಪಷ್ಟನೆ ನೀಡಿದೆ. ಇದನ್ನು ಸುಧಾರಿಸಲು ರಾಷ್ಟ್ರವ್ಯಾಪಿ ಸುರಕ್ಷತೆಯನ್ನು ಬಲಪಡಿಸಲಾಗುವುದು. ಇದರ ಭಾಗವಾಗಿ ಅಪರಾಧಗಳು ಮಾತ್ರವಲ್ಲದೆ ಸ್ಥಳೀಯರು ವಿದೇಶಿಯರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದನ್ನೂ ಗಮನದಲ್ಲಿರಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕೆಸಿಸಿಡಿ ಉದ್ಘಾಟನೆ

ಪ್ರವಾಸೋದ್ಯಮ ಇಲಾಖೆಯ ರಾಜತಾಂತ್ರಿಕ ಕಾರ್ಯಗಳಿಗಾಗಿ ಕೆಸಿಸಿಡಿಯನ್ನು ಪ್ರಾರಂಭಿಸಿದೆ. ಈ ಮೂಲಕ ಪ್ರಚಾರಕ್ಕೆ ಪ್ರವಾಸೋದ್ಯಮ ಪ್ರದರ್ಶನ ಮತ್ತು ಅಂತಾರಾಷ್ಟ್ರೀಯ ಸಮಾವೇಶಗಳನ್ನು ಮಾತ್ರ ಅವಲಂಬಿಸಿದ್ದ ಇಲಾಖೆ, ಸಾಂಸ್ಕೃತಿಕ ಪಾಲುದಾರಿಕೆ, ವ್ಯಾಪಾರ ಸೌಲಭ್ಯದ ಜತೆಗೆ ರಾಜತಾಂತ್ರಿಕ ಕಾರ್ಯಗಳ ಸಹಯೋಗಕ್ಕಾಗಿ ವೇದಿಕೆ ಕಲ್ಪಿಸಿಕೊಂಡಿದೆ.

ಇದೇ ವೇಳೆ ʻ2029ರ ವೇಳೆಗೆ ದೇಶದಲ್ಲಿ ಅಂತಾರಾಷ್ಟ್ರೀಯ ಪ್ರವಾಸಿಗರ ಭೇಟಿಗೆ 5ನೆಯ ಅತಿದೊಡ್ಡ ಪ್ರವಾಸಿ ರಾಜ್ಯವಾಗಿ ಕರ್ನಾಟಕವನ್ನು ರೂಪಿಸಲು ನಾವು ಬದ್ದರಾಗಿದ್ದೇವೆʼ ಎಂದು ಪ್ರವಾಸೋದ್ಯಮ ಸಚಿವ ಹೆಚ್‌.ಕೆ. ಪಾಟೀಲ್‌ ಹೇಳಿದರು.