ಥೈಲ್ಯಾಂಡ್‌, ಭಾರತದ ಆಗ್ನೇಯದಲ್ಲಿ ಪಡ್ಡೆ ಹುಡುಗರ ಗುಂಗಿನಲ್ಲಿ ನೆಲೆಸಿರುವ ವಿಶ್ವದ ಸುಂದರ ದೇಶಗಳಲ್ಲಿ ಒಂದು. ಯುವ ಸಮೂಹ, ನೀರಿನಲ್ಲಿ ಸಾಹಸ ಕ್ರೀಡೆ ಪ್ರಿಯರು, ಕಡಲ ತಡಿಯ ಮೇಲೆ ದಿನಗಟ್ಟಲೆ ಉಳಿಯಲು ಬಯಸುವವರು ಒಮ್ಮೆಯಾದರೂ ಈ ದೇಶದ ಪ್ರವಾಸವನ್ನು ಇಚ್ಛಿಸುತ್ತಾರೆ. ಜನರು ಮಲಗದ ರಾತ್ರಿಗಳನ್ನೇ ಕಾಣುವ ಬ್ಯಾಂಕಾಕ್‌ ಈ ದೇಶದ ರಾಜಧಾನಿ. ಹೇಳಿ ಮುಗಿಯದಷ್ಟು ಮನರಂಜನೆಯ ಮಹಾಪೂರಗಳನ್ನು ಹೊಂದಿರುವ ಈ ಅದ್ಭುತ ನಗರ ನದಿಗಳ ಮೇಲಿನ ದೇವಾಲಯಗಳು, ಮಾರುಕಟ್ಟೆಗಳು, ಜನಭರಿತ ರಸ್ತೆಗಳು ರಾತ್ರಿಯಿಡೀ ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಇಲ್ಲಿನ ಮತ್ತಷ್ಟು ವಿಶಿಷ್ಟ ವಿಷಯಗಳ ಮಾಹಿತಿ ಇಲ್ಲಿದೆ.

ನೀರ ಮೇಲೆ ಅಲೆಯುವ ನಗರ

ಥೈಲ್ಯಾಂಡ್‌ ದೇಶದ ರಾಜಧಾನಿಯಾದರೂ ಈ ಬ್ಯಾಂಕಾಕ್‌ ನೀರಿನ ಮೇಲಿ ತೇಲುವ ನಗರವಾಗಿತ್ತು, ರಸ್ತೆ ಸಂಪರ್ಕವೇ ಇರಲಿಲ್ಲ. ಕಾಲುವೆಗಳ ನಗರವಾಗಿತ್ತು. ಕಾರಣವೆಂದರೆ ಈ ನಗರದ ತುಂಬಾ ಕ್ಲಾಂಗ್ಸ್ ಎಂಬ ಕಾಲುವೆಗಳ ಜಾಲವೇ ಕೂಡಿತ್ತು. ಜಲಮಾರ್ಗವೇ ಸಾರಿಗೆ ಮಾರ್ಗವಾಗಿದ್ದರಿಂದ, ಆಗ ಮಾರುಕಟ್ಟೆಗಳು ನೀರಿನ ಮೇಲೆ ತೇಲುವ ಮತ್ತು ಸಾಗುತ್ತಲೇ ಜನರನ್ನು ತಲುಪುವ ದೋಣೆಗಳೇ ಆಗಿದ್ದವು. ಕಾಲಾನಂತರ ಅನೇಕ ಕಾಲುವೆಗಳನ್ನು ರೂಪಿಸಿ ಹಲವು ರಸ್ತೆಗಳನ್ನೂ ನಿರ್ಮಿಸಲಾಯಿತು.

ಬ್ಯಾಂಕಾಕ್‌ಗೆ ಬ್ಯಾಗ್‌ಪ್ಯಾಕ್‌

thai temple

ʻಬ್ಯಾಂಕಾಕ್ʼಎಂದಾಗ ಮಸಾಜ್‌, ನದಿತೀರ, ಕಡಲ ಕಿನಾರೆ, ಕಣ್ತಣಿಸುವ ಕನ್ಯೆಯರು ನೆನಪಿಗೆ ಬರುವುದು ಸಹಜ. ಆದರೆ, ಬ್ಯಾಂಕಾಕ್‌ ಎಂದರೆ ಇವುಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದು ಪವಿತ್ರ ಶಕ್ತಿಗಳಿಂದ ರಕ್ಷಿಸಲ್ಪಟ್ಟ ದೈವಿಕ ಪಟ್ಟಣ ಎಂದು ಥಾಯ್‌ ಗ್ರಂಥಗಳಲ್ಲಿ ಉಲ್ಲೇಖಗಳಿವೆ. ಹೆಚ್ಚಿನ ಸ್ಥಳೀಯರು ಇದನ್ನು ಕ್ರುಂಗ್ ಥೆಪ್ ಎಂದೂ ಕರೆಯುತ್ತಾರೆ. ಇಲ್ಲಿ ಹಲವು ದೇವಾಲಯಗಳೂ ಇದ್ದು, ಜನರು ದೈವಿಕ ಶಕ್ತಿಗಳನ್ನು ನಂಬುತ್ತಾರೆ. ಇಲ್ಲಿನ ದೇವಸ್ಥಾನಗಳು ಸನ್ಯಾಸಿಗಳು ವಾಸಿಸುವ, ಅಧ್ಯಯನ ಮಾಡುವ, ಯೋಗ-ಧ್ಯಾನಗಳನ್ನು ಮಾಡುವ ಸ್ಥಳಗಳಾಗಿ ಕಾರ್ಯನಿರ್ವಹಿಸುತ್ತವೆ.

ಮುಳುಗುತ್ತಿದೆ ಬ್ಯಾಂಕಾಕ್‌

ಬ್ಯಾಂಕಾಕ್ ನಗರ ಪ್ರತೀ ವರ್ಷವೂ ಕೆಲವು ಸೆಂಮೀ. ಸಮುದ್ರದ ಆಳಕ್ಕೆ ಇಳಿಯುತ್ತಿದೆ. ಹೌದು, ಹಲವು ವರದಿಗಳೂ ಇದಕ್ಕೆ ಪುಷ್ಟಿ ನೀಡಿದ್ದು, ಕಾರಣಗಳನ್ನೂ ತಿಳಿಸಿವೆ. ಇವುಗಳ ಪ್ರಕಾರ ಥೈಲ್ಯಾಂಡ್‌ನ ಈ ನಗರವನ್ನು ಮೃದುವಾದ ಜೇಡಿಮಣ್ಣಿನಿಂದ ನಿರ್ಮಿಸಲಾಗಿದೆ. ಸಮುದ್ರ ಮಟ್ಟಗಳೂ ಆಗಾಗ ಏರಿಳಿತಗೊಳ್ಳುವುದರಿಂದ ಈ ಅಪಾಯ ಉಂಟಾಗುತ್ತಿದೆ ಎನ್ನಲಾಗಿದೆ. ಇದೇ ಸಮಸ್ಯೆಯನ್ನು ಬಗೆಹರಿಸಲು ಥೈಲ್ಯಾಂಡ್ ಈಗಾಗಲೆ ಪ್ರವಾಹವನ್ನು ಎದುರಿಸಲು ಹಲವು ತಡೆಗೋಡೆಗಳು, ಒಳಚರಂಡಿ, ಸುರಂಗಗಳು ಮತ್ತು ನೀರು ನಿರ್ವಹಣಾ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಇನ್ನೂ ನಡಿಗೆ ಮಾರ್ಗಗಳನ್ನು ಎತ್ತರಿಸಲೂ ಯೋಜನೆಗಳನ್ನು ರೂಪಿಸಿದೆ.

ವಿಶ್ವ ಪ್ರಸಿದ್ಧ ಆಹಾರಕ್ಕೆ ಥೈಲ್ಯಾಂಡ್‌ ಪ್ರಸಿದ್ಧ

thai food

ಬ್ಯಾಂಕಾಕ್‌ನ ಆಹಾರಗಳು ವಿಶ್ವ ಪ್ರಸಿದ್ಧಿ ಪಡೆದಿವೆ. ಕಡಿಮೆ ಬೆಲೆ ಹೆಚ್ಚು ರುಚಿ ನೀಡುವ ಆಹಾರಗಳಾಗಿರುವುದರಿಂದ ಜನರ ಮೆಚ್ಚುಗೆಯನ್ನೂ ಪಡೆದಿವೆ. ಅತ್ತಕಡೆ ನೀವು ಹೋದಾಗ ಮೈಕೆಲಿನ್ ಮನ್ನಣೆ ಪಡೆದ ಆಹಾರ ಮಳಿಗೆಗಳಲ್ಲಿ ತಿನ್ನದೇ ಬರಬೇಡಿ. ಇವು ಪಾರಂಪರಿಕ ಮತ್ತು ತಲೆಮಾರುಗಳಿಂದ ಆಹಾರ ತಯಾರಿಕೆಯನ್ನು ಮಾಡಿಕೊಂಡು ಬಂದಿರುವ ಮಳಿಗೆಗಳು.