ಪ್ರಪಂಚದಾದ್ಯಂತದ ಕೆಲವು ದೇಶಗಳಿಗೆ ಭೇಟಿ ಕೊಡುವಾಗ ಈ 7 ವಸ್ತುಗಳನ್ನು ಕೊಂಡೊಯ್ಯಲೇಬೇಡಿ..
ಪ್ರತಿ ವರ್ಷ ಲಕ್ಷಾಂತರ ಜನರು ಮಾಲ್ಡೀವ್ಸ್ ಪ್ರವಾಸವನ್ನು ಕೈಗೊಳ್ಳುತ್ತಾರೆ. ಪ್ರವಾಸವನ್ನು ಸಂಭ್ರಮಿಸುವ ಭರಾಟೆಯಲ್ಲಿ ಲಗ್ಗೇಜ್ನಲ್ಲಿ ಮದ್ಯವನ್ನು ಇಟ್ಟುಕೊಂಡಿದ್ದರೆ ಪೊಲೀಸರ ಅತಿಥಿಗಳಾಗುವಿರಿ ಹುಷಾರ್! ಯಾಕೆಂದರೆ ಮಾಲ್ಡೀವ್ಸ್ ಹೈಕಮಿಷನ್ ಮದ್ಯದೊಂದಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ.
ಪ್ರಪಂಚದ ಎಲ್ಲ ದೇಶಗಳನ್ನು ಸುತ್ತಾಡಿಬರಲು ಸಾಧ್ಯವಿಲ್ಲದಿದ್ದರೂ ಆಯ್ದ ಕೆಲವು ದೇಶಗಳಿಗಾದರೂ ಭೇಟಿ ಕೊಡಬೇಕು. ಅಲ್ಲಿನ ಪ್ರವಾಸಿ ತಾಣಗಳು, ಆಹಾರ ಪದ್ಧತಿ, ಹೀಗೆ ಎಲ್ಲವನ್ನೂ ಅನುಭವಿಸಬೇಕೆಂಬುದು ಅನೇಕ ಪ್ರವಾಸಿಗರ ಮನದಾಸೆಯಾಗಿರುತ್ತದೆ. ಇದಕ್ಕಾಗಿ ಆಯ್ದ ಪ್ರವಾಸಿ ತಾಣಕ್ಕೆ ತೆರಳುವ ಮುನ್ನವೇ ಅಲ್ಲಿಗೆ ಒಪ್ಪುವಂತಹ ಉಡುಗೆಗಳನ್ನು ಶಾಪಿಂಗ್ ಮಾಡಿಕೊಂಡು, ಅಗತ್ಯ ಹಾಗೂ ಅನಗತ್ಯ ವಸ್ತುಗಳನ್ನು ಕೊಂಡುಕೊಂಡು, ಬೇಕು ಬೇಡದವುಗಳೆಲ್ಲವನ್ನೂ ಒಟ್ಟುಗೂಡಿಸಿ ಸೂಟ್ಕೇಸ್ನಲ್ಲಿ ತುಂಬಿಸಿಬಿಟ್ಟಿರುತ್ತೀರಿ. ಆದರೆ ಪ್ರವಾಸಕ್ಕೆ ತೆರಳುವ ಮುನ್ನ ನಮಗೆ ಅಗತ್ಯವಿರುವ ವಸ್ತುಗಳು ಯಾವುವು, ಏನು ಪ್ಯಾಕ್ ಮಾಡುತ್ತೀರಿ ಎಂಬುದರ ಕುರಿತು ಯೋಚಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಯಾಕೆಂದರೆ ನೀವು ಜಗತ್ತಿನಲ್ಲಿ ಯಾವ ದೇಶಕ್ಕೆ ಹೋಗುತ್ತಿದ್ದೀರಿ ಎಂಬುದರ ಆಧಾರದ ಮೇಲೆ ನಿಮ್ಮ ಸೂಟ್ ಕೇಸ್ ಸಿದ್ಧವಾಗಬೇಕಿದೆ.
ದೇಶದಿಂದ ದೇಶಕ್ಕೆ ನಿಯಮಗಳು ಬದಲಾಗುತ್ತಿರುವುದರಿಂದ ನಿಷೇಧಿತ ವಸ್ತುಗಳನ್ನು ಸಾಗಿಸಿದಲ್ಲಿ ನಿಮ್ಮ ಪ್ರಯಾಣ ವಿಳಂಬ, ದಂಡ ಅಥವಾ ಕಾನೂನು ಕ್ರಮ ಜರುಗಿಸಬಹುದು ಇಂತಹ ಅನೇಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಅನೇಕ ದೇಶಗಳು ತಮ್ಮ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಲು ಅಥವಾ ಭದ್ರತೆಯ ಕಾರಣದಿಂದ ಕೆಲವು ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುತ್ತವೆ. ಯಾವ ದೇಶಕ್ಕೆ ತೆರಳುವಾಗ ಯಾವೆಲ್ಲಾ ವಸ್ತುಗಳನ್ನು ನಿಮ್ಮ ಲಗೇಜ್ ನಿಂದ ತೆಗೆದುಹಾಕಬೇಕು ಎಂಬ ಮಾಹಿತಿ ಇಲ್ಲಿದೆ.
ಪ್ರಪಂಚದಾದ್ಯಂತದ ಕೆಲವು ದೇಶಗಳಿಗೆ ನೀವು ತೆಗೆದುಕೊಂಡು ಹೋಗಲಾಗದ 7 ವಸ್ತುಗಳು:
ಮದ್ಯ:
ನೀವು ಮಾಲ್ಡೀವ್ಸ್ ಪ್ರವಾಸವನ್ನು ಕೈಗೊಳ್ಳುವವರಿದ್ದರೆ ತಪ್ಪಿಯೂ ಮದ್ಯವನ್ನು ನಿಮ್ಮ ಲಗೇಜ್ನಲ್ಲಿ ಇಟ್ಟುಕೊಳ್ಳಬೇಡಿ. ಮಾಲ್ಡೀವ್ಸ್ ಹೈಕಮಿಷನ್ ಮದ್ಯದೊಂದಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ. ಅಲ್ಲಿನ ಹೆಚ್ಚಿನ ರೆಸಾರ್ಟ್ಗಳಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರಿಗೆ ಮದ್ಯ ಲಭ್ಯವಿದ್ದರೂ, ಸ್ಥಳೀಯ ದ್ವೀಪಗಳಲ್ಲಿ ಇದನ್ನು ಅನುಮತಿಸಲಾಗುವುದಿಲ್ಲ. ಮದ್ಯ ಮಾತ್ರವಲ್ಲದೆ ಬಂದೂಕುಗಳು, ಪೂಜಾ ವಿಗ್ರಹಗಳು ಮತ್ತು ಹಂದಿಮಾಂಸ ಉತ್ಪನ್ನಗಳು ಸಹ ನಿಷೇಧಿಸಲ್ಪಟ್ಟಿವೆ.

ಇ-ಸಿಗರೇಟ್ಗಳು:
ನೀವು ಥೈಲ್ಯಾಂಡ್ ಪ್ರವಾಸದ ಬಗ್ಗೆ ಯೋಜಿಸುತ್ತಿದ್ದರೆ, ಇ-ಸಿಗರೇಟ್ಗಳು ಮತ್ತು ರೀಫಿಲ್ ದ್ರವಗಳಂತಹ ವಸ್ತುಗಳನ್ನು ಕೊಂಡೊಯ್ಯಬೇಡಿ. ಆರೋಗ್ಯದ ದೃಷ್ಟಿಯಿಂದ ಸರ್ಕಾರವು 2014 ರಲ್ಲಿ ಇವುಗಳನ್ನು ನಿಷೇಧಿಸಿರುವುದಾಗಿ ಥಾಯ್ ರಾಯಭಾರ ಕಚೇರಿಯ ವೆಬ್ಸೈಟ್ ವಿವರಿಸಿದೆ. ಯಾರಾದರೂ ಈ ಕಾನೂನನ್ನು ಉಲ್ಲಂಘಿಸುವುದು ಕಂಡುಬಂದರೆ ದಂಡ ಅಥವಾ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುವುದಾಗಿ ಇಲ್ಲಿನ ಸರ್ಕಾರ ತಿಳಿಸಿದೆ.
ಡ್ರೋನ್ಗಳು:
ಉತ್ತರ ಆಫ್ರಿಕಾದ ಮೊರಾಕೊ ದೇಶಕ್ಕೆ ಭೇಟಿ ನೀಡಬೇಕೆಮದುಕೊಂಡಿದ್ದೀರಾ? ಹಾಗಾದರೆ ಡ್ರೋನ್ ಜೊತೆಗೆ ಇರಿಸಿಕೊಳ್ಳುವ ಆಸೆಯನ್ನು ಮರೆತುಬಿಡಿ. ಭದ್ರತೆ ಮತ್ತು ಗೌಪ್ಯತೆಯ ಕಾರಣದಿಂದ 2015 ರಲ್ಲಿ ಇಲ್ಲಿನ ಸರ್ಕಾರ ಡ್ರೋನನ್ನು ನಿಷೇಧಿಸಿದೆ. ಅಷ್ಟಾಗಿಯೂ ಪ್ರವಾಸದ ನಡುವೆ ಡ್ರೋನ್ ತೆಗೆದುಕೊಂಡು ಹೋದರೆ, ಅದನ್ನು ವಶಪಡಿಸಿಕೊಂಡು, ದಂಡ ಹಾಗುವ ಸಾಧ್ಯತೆಗಳಿವೆ. ವೃತ್ತಿಪರ ಉದ್ದೇಶಗಳಿಗಾಗಿ ನೀವು ಡ್ರೋನ್ ಕೊಂಡೊಯ್ಯುವುದಾದರೆ ಸರ್ಕಾರದಿಂದ ಅನುಮತಿಯನ್ನು ಪಡೆಯಬೇಕು - ಮತ್ತು ಅನುಮತಿಯೊಂದಿಗೆ ಸಹ ಮಿಲಿಟರಿ ವಲಯಗಳು ಮತ್ತು ವಿಮಾನ ನಿಲ್ದಾಣಗಳಂತಹ ಸೂಕ್ಷ್ಮ ಸ್ಥಳಗಳ ಬಳಿ ಅದರ ಬಳಕೆಯನ್ನು ನಿರ್ಬಂಧಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ವಾಕಿ-ಟಾಕಿಗಳು:
ವಾಕಿ-ಟಾಕಿಗಳು ಭಾರತದಲ್ಲಿ ವಾಸ್ತವವಾಗಿ ಕಾನೂನುಬಾಹಿರವಲ್ಲದಿದ್ದರೂ, ಅವು ಕೆಲವು ಕಠಿಣ ನಿರ್ಬಂಧಗಳಿಗೆ ಒಳಪಟ್ಟಿರುತ್ತವೆ. ನೀವು ವಾಕಿ-ಟಾಕಿಗಳನ್ನು ಬಳಸಲು ಬಯಸಿದರೆ, ನಿಮಗೆ ವೈರ್ಲೆಸ್ ಟೆಲಿಗ್ರಾಫಿ ಕಾಯ್ದೆಯಡಿ ಪರವಾನಗಿ ಬೇಕಾಗುತ್ತದೆ. ಅನುಮತಿಯಿಲ್ಲದೆ ದೇಶಕ್ಕೆ ವಾಕಿ-ಟಾಕಿ ತಂದರೆ ದಂಡ ತೆರಬೇಕಾಗುತ್ತದೆ.
ಗಸಗಸೆ ಬೀಜ:
ಸೌದಿ ಅರೇಬಿಯಾಕ್ಕೆ ಹೋಗುತ್ತಿದ್ದೀರಾ? ಬ್ಯಾಗ್ ನಲ್ಲಿ ಗಸಗಸೆ ಬೀಜಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯಾಕೆಂದರೆ ಸೌದಿ ಅರೇಬಿಯಾದಲ್ಲಿ ಸಣ್ಣ ಪ್ರಮಾಣದಲ್ಲಿ ಗಸಗಸೆ ಬೀಜಗಳನ್ನು ಸಹ ಅನುವುಮಾಡುವುದಿಲ್ಲ. ಮಾತ್ರವಲ್ಲದೆ ಗಸಗಸೆ ಬೀಜಗಳನ್ನು ಹೊಂದಿದ್ದರೆ ಭಾರಿ ದಂಡ ತೆರಬೇಕಾಗಬಹುದು. ಇಲ್ಲವೇ ಬಂಧದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಪ್ಲಾಸ್ಟಿಕ್ ಚೀಲಗಳು:
ಪೂರ್ವ ಆಫ್ರಿಕಾದ (Rwanda) ರುವಾಂಡಕ್ಕೆ ಪ್ರವಾಸ ತೆರಳಬೇಕೆಂದುಕೊಂಡರೆ ನಿಮ್ಮ ಲಗೇಜ್ ಪ್ಲಾಸ್ಕಿಕ್ ಚೀಲಗಳಿಂದ ಮುಕ್ತವಾಗಿರಬೇಕು. ದೇಶವು ಮಾಳಿನ್ಯ ಮುಕ್ತವಾಗಿರಬೇಕೆಂಬ ಉದ್ದೇಶದೊಂದಿಗೆ ಇಲ್ಲಿನ ಸರ್ಕಾರ 2008 ರಿಂದ ಪ್ಲಾಸ್ಟಿಕ್ ನಿಷೇಧಗೊಳಿಸಿದೆ. ಬಟ್ಟೆ ಅಥವಾ ಇನ್ಯಾವುದೇ ಮರುಬಳಕೆ ಮಾಡಬಹುದಾದ ಚೀಲಗಳನ್ನು ಇಲ್ಲಿಗೆ ಬರುವ ಪ್ರವಾಸಿಗರು ಬಳಕೆ ಮಾಡಬಹುದು.
ಒಟ್ಟಿನಲ್ಲಿ ದೇಶದಿಂದ ದೇಶಕ್ಕೆ ನಿಯಮಗಳು ಬದಲಾಗುತ್ತಿರುವುದರಿಂದ ನೀವು ತೆರಳುವ ಪ್ರದೇಶಗಳ ನಿಯಮಗಳನ್ನು ತಿಳಿದುಕೊಳ್ಳುವುದರಿಂದ ನಿಮ್ಮ ಪ್ರಯಾಣ ಸುಖಕರವಾಗಿರಲಿದೆ.