ಭಾರತದಲ್ಲಿ ಯೂನಿವರ್ಸಲ್ ಸ್ಟುಡಿಯೋನ ಥೀಮ್ ಪಾರ್ಕ್!
ಭಾರ್ತಿ ರಿಯಲ್ ಎಸ್ಟೇಟ್ 3 ಲಕ್ಷ ಚದರ ಅಡಿ ಸ್ಥಳವನ್ನು ಯುನಿವರ್ಸಲ್ ಸ್ಟುಡಿಯೋಸ್‌ಗೆ ಬಾಡಿಗೆಗೆ ನೀಡಲು ಯೋಜನೆ ಹೊಂದಿದೆ ಎಂದು ವರದಿ ತಿಳಿಸಿದೆ.
ಸುನೀಲ್ ಮಿತ್ತಲ್ (Sunil Mittal) ನೇತೃತ್ವದ ಭಾರ್ತಿ ಎಂಟರ್‌ಪ್ರೈಸಸ್‌ನ (Bharti Enterprises) ಅಂಗ ಸಂಸ್ಥೆ ಭಾರ್ತಿ ರಿಯಲ್ ಎಸ್ಟೇಟ್ (Bharti Real Estate), ವಿಶ್ವದ ಅತಿದೊಡ್ಡ ಥೀಮ್ ಪಾರ್ಕ್ (Theme Park) ಆಪರೇಟರ್‌ಗಳ ಪೈಕಿ ಒಬ್ಬರಾದ ಯುನಿವರ್ಸಲ್ ಸ್ಟುಡಿಯೋಸ್ (Universal Studios) ಜೊತೆ ಮಾತುಕತೆ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.
ಈ ಥೀಮ್ ಪಾರ್ಕ್ ಅನ್ನು ದೆಹಲಿ ವಿಮಾನ ನಿಲ್ದಾಣದ ಸಮೀಪ ನಿರ್ಮಿಸಲಾಗುತ್ತಿರುವ 3 ಮಿಲಿಯನ್ ಚದರ ಅಡಿ ವ್ಯಾಪ್ತಿಯ ಮಾಲ್‌ನಲ್ಲಿ ಸ್ಥಾಪಿಸುವ ಯೋಜನೆಯಿದೆ. ಇದು ದೇಶದ ಅತಿದೊಡ್ಡ ಮಾಲ್ ಆಗಬಹುದು ಎಂಬ ನಿರೀಕ್ಷೆಯಿದೆ. ಭಾರ್ತಿ ರಿಯಲ್ ಎಸ್ಟೇಟ್ ಈ ಮಾಲ್‌ನ 3 ಲಕ್ಷ ಚದರ ಅಡಿ ಸ್ಥಳವನ್ನು ಯುನಿವರ್ಸಲ್ ಸ್ಟುಡಿಯೋಸ್‌ಗೆ ಬಾಡಿಗೆಗೆ ನೀಡಲು ಯೋಜನೆ ಹೊಂದಿದೆ ಎಂದು ವರದಿ ತಿಳಿಸಿದೆ.
"ನಾವು ಒಟ್ಟು ಲೀಸಿಗೆ ಇರುವ ಪ್ರದೇಶದ ಶೇ.10 ರಷ್ಟನ್ನು ಜಾಗತಿಕ ಮನರಂಜನಾ ಪಾರ್ಕ್‌ಗಾಗಿ ಮೀಸಲಿಟ್ಟಿದ್ದೇವೆ," ಎಂದು ಭಾರ್ತಿ ರಿಯಲ್ ಎಸ್ಟೇಟ್‌ನ ಸಿಇಒ ಎಸ್.ಕೆ. ಸಯಾಲ್ ಹೇಳಿದ್ದಾರೆ. ಈ ಪ್ರಾಜೆಕ್ಟ್ 2027ರ ಮಧ್ಯಭಾಗದಲ್ಲಿ ಪೂರ್ಣಗೊಳ್ಳಲಿದೆ ಎಂಬ ನಿರೀಕ್ಷೆಯಿದೆ.
ಭಾರ್ತಿ ರಿಯಲ್ ಎಸ್ಟೇಟ್ ನಡೆಸುತ್ತಿರುವ ದೆಹಲಿ ಏರೋಸಿಟಿಯ ಈ ಭವ್ಯ ಯೋಜನೆ, ಒಟ್ಟು 17 ಮಿಲಿಯನ್ ಚದರ ಅಡಿ ಜಾಗದಲ್ಲಿ ಕಟ್ಟುತ್ತಿದ್ದು, ಮುಂದಿನ ವರ್ಷಗಳಲ್ಲಿ ಪ್ರಮುಖ ಉದ್ಯಮಿಕ-ವಾಣಿಜ್ಯ ಕೇಂದ್ರವನ್ನಾಗಿ ಪರಿವರ್ತನೆಯಾಗಲಿರುವ ಲಕ್ಷಣಗಳು ಕಂಡು ಬರುತ್ತಿವೆ.
2024ರ ನವೆಂಬರ್‌ನಲ್ಲಿ, ದೆಹಲಿ ಸರಕಾರವು ಏರೋಸಿಟಿಯಲ್ಲಿನ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಿಗೆ 24/7 ಕಾರ್ಯಾಚರಣೆಗೆ ಅನುಮತಿ ನೀಡಿತ್ತು. "ದೆಹಲಿ ಒಂದು ಪ್ರಮುಖ ಪ್ರವಾಸೋದ್ಯಮ ತಾಣವಾಗಿರುವುದರಿಂದ, ಈ ತೀರ್ಮಾನದಿಂದ ಪರವಾನಗಿ ಶುಲ್ಕಗಳ ಮೂಲಕ ಸರಕಾರದ ಆದಾಯ ಹೆಚ್ಚಳವಾಗಲಿದೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೆ ಸ್ಪಂದಿಸಿದ Liv Bar ಸ್ಥಾಪಕ ಉಮಂಗ್ ತೇವಾರಿ, "ಇದು ರಾತ್ರಿ ತಡವಾದ ಪ್ರಯಾಣಿಕರು ಮತ್ತು ತಡರಾತ್ರಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಇದು ಆದಾಯವನ್ನೇ ಹೆಚ್ಚಿಸುವುದಲ್ಲದೆ, ಭಾರತದ ನೈಟ್‌ಲೈಫ್ ಮಾನದಂಡವನ್ನೂ ಉತ್ತೇಜಿಸುತ್ತದೆ," ಎಂದರು.