ಮಳೆಗಾಲದಲ್ಲಿ ಜಲಪಾತಗಳು ಮೈದುಂಬಿ ಹರಿಯುತ್ತವೆ. ಅವುಗಳ ಶೃತಿಬದ್ಧ ನಾದ ಮನಸೆಳೆಯುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಹಸಿರ ಸಿರಿಯ ವಾತಾವರಣ ಸೃಷ್ಟಿಯಾಗುತ್ತದೆ. ಈ ಸಮಯದಲ್ಲಿ ಕರ್ನಾಟಕದ ಅಷ್ಟೂ ಜಲಪಾತಗಳು ಆಕರ್ಷಣೀಯವಾಗಿ ಕಾಣುತ್ತವೆ. ಹಾಲ್ನೊರೆಯಂತೆ ಧುಮಿಕ್ಕಿ ಪ್ರವಾಸಿಗರನ್ನು ಕುಣಿಸುತ್ತದೆ. ಬಹುತೇಕರಿಗೆ ತಿಳಿದಿರುವಂತೆ ರಾಜ್ಯದಲ್ಲಿ ಅತ್ಯಾಕರ್ಷಕ ತಾಣಗಳಿವೆ. ಆ ಪಟ್ಟಿಗೆ ಉತ್ತರಕನ್ನಡ(Uttar Kannada) ಜಿಲ್ಲೆಯ ಅಂಕೋಲಾ(Ankola) ತಾಲ್ಲೂಕು ವಾಸರ ಕುದ್ರಿಗೆ(Kudri) ಸಮೀಪದ ‘ಹೊಸದೇವತಾ ಫಾಲ್ಸ್’(Hosadevatha Falls) ಕೂಡ ಸೇರುತ್ತದೆ.

Hosadevatha

ಜಲಪಾತಗಳ ಜಿಲ್ಲೆ ಎಂಬುದು ಉತ್ತರ ಕನ್ನಡಕ್ಕೆ ಇರುವ ಅನ್ವರ್ಥ ನಾಮ. ಇಲ್ಲಿನ ಕೆಲವೇ ಜಲಪಾತಗಳು ರಣ ಬೇಸಿಗೆ ಪ್ರಾರಂಭವಾಗುವವರೆಗೂ ಹರಿದರೆ, ಮಳೆಗಾಲದಲ್ಲಂತೂ ಲೆಕ್ಕವಿಲ್ಲದಷ್ಟು ಜಲಪಾತಗಳು ಸೃಷ್ಟಿಗೊಳ್ಳುತ್ತವೆ. ಹೀಗೆ ಸೃಷ್ಟಿಯಾದ ಜಲಪಾತಗಳಿಗೆ ಹೆಚ್ಚೆಂದರೆ ನಾಲ್ಕೈದು ತಿಂಗಳು ಆಯುಷ್ಯ ಮಾತ್ರ. ಆದರೆ ಆ ಜಲಪಾತಗಳು ಅಸಂಖ್ಯಾತ ಪ್ರವಾಸಿಗರನ್ನು ಸೆಳೆಯುತ್ತವೆ. ಅಂಕೋಲಾ ತಾಲ್ಲೂಕಿನ ವಾಸರ ಕುದ್ರಿಗೆ ಎಂಬ ಹಳ್ಳಿಯ ಹತ್ತಿರದಲ್ಲೇ ಇರುವ ಮೇಲಿನಗುಳಿ ಹಳ್ಳ ಬಂಡೆಕಲ್ಲುಗಳಿಂದ ಧುಮ್ಮಿಕ್ಕುತ್ತ ಸೃಷ್ಟಿಯಾದ ಜಲಪಾತಕ್ಕೆ ಸ್ಥಳೀಯರು ‘ಹೊಸದೇವತಾ ಫಾಲ್ಸ್ಎಂದು ನಾಮಕರಣ ಮಾಡಿಕೊಂಡಿದ್ದಾರೆ. ಹೊರ ಜಗತ್ತಿಗೆ ಅಷ್ಟೇನೂ ಪರಿಚಯವಿಲ್ಲದ ಈ ಜಲಪಾತ ಇತ್ತೀಚೆಗಷ್ಟೇ ಹೆಚ್ಚು ಪ್ರಸಿದ್ಧತೆಯನ್ನು ಪಡೆದಿದೆ.

Falls

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ಅಂಕೋಲಾ ತಾಲ್ಲೂಕಿನ ಕೋಡ್ಸಣಿ ಬಳಿ ಒಳ ರಸ್ತೆಯಲ್ಲಿ ಸುಮಾರು 3.5 ಕಿ.ಮೀ ದೂರ ಪ್ರಯಾಣ ಮಾಡಿ, ಅಲ್ಲಿಂದ 1 ಕಿ.ಮೀ ಕಚ್ಚಾ ರಸ್ತೆಯಲ್ಲಿ ಸಾಗಿದರೆ ಹೊಸದೇವತಾ ಫಾಲ್ಸ್ ಕಾಣಸಿಗುತ್ತದೆ. ಜಲಪಾತಕ್ಕೆ ಅತಿ ಸಮೀಪದವರೆಗೂ ಭಾರಿ ವಾಹನಗಳ ಹೊರತಾಗಿ ಉಳಿದ ವಾಹನ ಸಾಗಲು ಮುಕ್ತ ಅವಕಾಶವಿದೆ. ಪ್ರಶಾಂತವಾಗಿ ಹರಿಯುವ ಮೇಲಿನಗುಳಿ ಹಳ್ಳವು ಬಂಡೆಕಲ್ಲುಗಳ ಮೇಲಿಂದ ಮೂರ್ನಾಲ್ಕು ಹಂತಗಳಲ್ಲಿ ಧುಮ್ಮಿಕ್ಕುವುದನ್ನು ನೋಡಲು ವಿಸ್ಮಯ ಎನಿಸುತ್ತದೆ. ಹೆಚ್ಚು ಆಳವಿಲ್ಲದ ಕಾರಣ ಜಲಪಾತದ ಬುಡದವರೆಗೂ ಪ್ರವಾಸಿಗರು ಸಾಗಬಹುದು. ಆದರೆ ಬಂಡೆಕಲ್ಲುಗಳು ಜಾರುವ ಅಪಾಯ ಇರುವ ಕಾರಣ ಜಲಪಾತಗಳ ಸಮೀಪಕ್ಕೆ ಸಾಗಲು ಸ್ಥಳೀಯರು ಹೆದರುತ್ತಾರೆ.

ಇನ್ನು ಜಲಪಾತ ಧುಮ್ಮಿಕ್ಕುವ ಸ್ಥಳದಲ್ಲಿ ಪುರಾಣ ಪ್ರಸಿದ್ಧ ಹೊಸದೇವತೆ ದೇವಸ್ಥಾನವಿದೆ. ದೇವಾಲಯದ ಹಿಂಭಾಗದಲ್ಲಿಯೇ ಜಲಪಾತವಿರುವ ಕಾರಣಕ್ಕೆ ಇದಕ್ಕೆ ಹೊಸದೇವತಾ ಫಾಲ್ಸ್ ಎಂದು ಕರೆಯಲಾಗುತ್ತದೆ. ಪ್ರವಾಸಿ ತಾಣವಾಗಿದ್ದರೂ ಧಾರ್ಮಿಕ ಕ್ಷೇತ್ರವಾಗಿಯೂ ಭಕ್ತರ ನಂಬಿಕೆಯನ್ನು ಉಳಿಸಿಕೊಂಡಿದೆ.