ಪ್ರವಾಸಿಗರು ಕರ್ನಾಟಕದ ಕೆಲವು ವಿಶೇಷ ತಾಣಗಳಿಗೆ ಆಗಿಂದಾಗ್ಗೆ ಭೇಟಿ ನೀಡುತ್ತಾರೆ. ಆ ತಾಣಗಳೆಡೆ ಆಕರ್ಷಿತರಾಗುತ್ತಾರೆ. ಅದರಲ್ಲೂ ದಕ್ಷಿಣ ಭಾರತದ ಪ್ರವಾಸದಲ್ಲಿ ಜನರು ಹೆಚ್ಚಾಗಿ ಕರ್ನಾಟಕ ರಾಜ್ಯದ ಗಿರಿಧಾಮಗಳು, ಕಡಲತೀರಗಳು, ಭವ್ಯವಾದ ದೇವಾಲಯ, ಅಭಯಾರಣ್ಯಗಳು ಸೇರಿದಂತೆ ಅನೇಕ ಐತಿಹಾಸಿಕ ಸ್ಥಳಗಳಿಗೆ ಹೋಗುತ್ತಾರೆ. ಒಂದೊಂದು ಸ್ಥಳಗಳು ಅದರದ್ದೇ ಆದ ಮಹತ್ವದಿಂದಾಗಿ ಪ್ರವಾಸಿಗರನ್ನು ಸೆಳೆಯುತ್ತದೆ. ಹಾಗಾದರೆ ಕರ್ನಾಟಕದಲ್ಲಿ ಜನರು ಹೆಚ್ಚಾಗಿ ಭೇಟಿ ನೀಡುವ 5 ತಾಣಗಳು ಯಾವುವು ಎಂಬುದನ್ನು ತಿಳಿಯೋಣ.

ಬೆಂಗಳೂರು

ಬೆಂಗಳೂರನ್ನು ಮಹಾನಗರ ಎಂದು ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವ ಸಿಲಿಕಾನ್‌ ಸಿಟಿ ಬೆಂಗಳೂರಿಗೆ ದೇಶ-ವಿದೇಶದಿಂದಲೂ ಪ್ರವಾಸಿಗರು ಬರುತ್ತಾರೆ. ಉದ್ಯಾನನಗರಿ ಅಥವಾ ಪಬ್‌ ಸಿಟಿ ಎಂದೂ ಕರೆಯಲ್ಪಡುವ ಬೆಂಗಳೂರು ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ. ಕಿಕ್ಕಿರಿದ ಜನಸಂಖ್ಯೆಯ ನಡುವೆಯೂ ಬೆಂಗಳೂರು ಪ್ರತಿಯೊಬ್ಬರನ್ನು ಆಕರ್ಷಿಸುತ್ತದೆ. ಬೆಂಗಳೂರಿನ ಸುತ್ತಲೂ ಹಚ್ಚ ಹಸುರಿನ ಪ್ರದೇಶಗಳು, ಜಲಪಾತಗಳು, ವನ್ಯಜೀವಿ ಅಭಯಾರಣ್ಯಗಳು ಉದ್ಯಾನಳಿವೆ. ಪಾರಂಪರಿಕ ಕಟ್ಟಡ, ಮ್ಯೂಸಿಯಂಗಳು ಕೂಡ ಬೆಂಗಳೂರಿನಲ್ಲಿದೆ.

Bangalore


ಕೂರ್ಗ್

ಭಾರತದ ಸ್ಕಾಟ್‌ಲ್ಯಾಂಡ್‌ ಎಂದೇ ಕರೆಯಲಾಗುವ ಕೂರ್ಗ್‌, ಕರ್ನಾಟಕದ ಪ್ರಸಿದ್ಧ ಗಿರಿಧಾಮವಾಗಿದೆ. ಇದು ಕಾಫಿ ತೋಟ, ಬೆಟ್ಟಗಳು ಮತ್ತು ತೊರೆಗಳ ರಮಣೀಯ ಸೌಂದರ್ಯದಿಂದ ಹೆಸರುವಾಸಿಯಾಗಿದೆ. ಕೂರ್ಗ್ ತನ್ನದೇ ಆದ ಶ್ರೀಮಂತ ಇತಿಹಾಸದೊಂದಿಗೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆಗಷ್ಟೇ ಮದುವೆಯಾದ ನವ ದಂಪತಿಗಳು ಮಧುಚಂದ್ರಕ್ಕೆ ಕೂರ್ಗ್‌ನಂತಹ ರೋಮ್ಯಾಂಟಿಕ್‌ ತಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

Coorg


ಚಿಕ್ಕಮಗಳೂರು

ಕರ್ನಾಟಕದ ಮತ್ತೊಂದು ಅದ್ಭುತವಾದ ತಾಣವೆಂದರೆ ಅದು ಚಿಕ್ಕಮಗಳೂರು. ಚಿಕ್ಕಮಗಳೂರನ್ನು ಕಾಫಿನಾಡು ಎಂದು ಕರೆಯಲಾಗುತ್ತದೆ. ಈ ತಾಣವು ಸದಾ ಬ್ಯುಸಿಯಾಗಿರುತ್ತದೆ. ವಾರವಿಡೀ ಪ್ರವಾಸ ಕೈಗೊಳ್ಳುವಷ್ಟು ಪ್ರೇಕ್ಷಣೀಯ ಸ್ಥಳಗಳು ಚಿಕ್ಕಮಗಳೂರಿನಲ್ಲಿದೆ. ಪ್ರವಾಸ ಹೋಗುವವರು ಚಿಕ್ಕಮಗಳೂರನ್ನು ಆದ್ಯತೆಯ ಪ್ರವಾಸಿ ತಾಣವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಮುಳ್ಳಯ್ಯನಗಿರಿ, ಪುರಾತನ ದೇವಾಲಯಗಳು, ಜಲಪಾತ ಮತ್ತು ಇನ್ನಿತರ ಸ್ಥಳಗಳಿವೆ. ಚಾರಣಿಗರಿಗಂತೂ ಚಿಕ್ಕಮಗಳೂರು ಅತ್ಯಂತ ಇಷ್ಟದ ತಾಣ.

Chikkamagaluru


ದಾಂಡೇಲಿ

ದಾಂಡೇಲಿ ರಾಜ್ಯವಷ್ಟೇ ಅಲ್ಲ ಹೊರ ರಾಜ್ಯದ ಪ್ರವಾಸಿಗರನ್ನೂ ತನ್ನತ್ತ ಸೆಳೆಯುತ್ತದೆ. ಸಾವಿರಾರು ಪ್ರವಾಸಿಗರು ವರ್ಷದ ಅಷ್ಟು ದಿನವೂ ದಾಂಡೇಲಿಗೆ ಭೇಟಿ ಕೊಡುತ್ತಾರೆ. ಮಾನ್ಸೂನ್‌ ಸಮಯದಲ್ಲಂತೂ ದಾಂಡೇಲಿ ಪ್ರವಾಸಿಗರಿಂದ ತುಂಬಿ ಹೋಗಿರುತ್ತದೆ. ದಾಂಡೇಲಿ ಅಡ್ವೆಂಚರ್‌ ಪ್ರವಾಸ ಇಷ್ಟಪಡುವವರಿಗೆ, ಪ್ರಶಾಂತವಾದ ವಾತಾವರಣ ಬಯಸುವವರಿಗೆ ಹೇಳಿ ಮಾಡಿಸಿದಂತಿದೆ. ಪಶ್ಚಿಮ ಘಟ್ಟಗಳ ಕಲ್ಲಿನ ಜಾಡುಗಳಲ್ಲಿ ನೆಲೆಗೊಂಡಿರುವ ದಾಂಡೇಲಿಯು ಕರ್ನಾಟಕದ ಒಂದು ಭವ್ಯವಾದ ನಗರವಾಗಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ ಸುಮಾರು 1551 ಅಡಿ ಎತ್ತರದಲ್ಲಿದೆ. ದಾಂಡೇಲಿಯ ಹಾದಿಗಳು ರೋಚಕತೆಯಿಂದ ಕೂಡಿದೆ. ಹಚ್ಚ ಹಸುರಿನ ವಾತಾವರಣ ಮೈಮನ ಸೆಳೆಯುತ್ತದೆ. ಉಲವಿ ದೇವಸ್ಥಾನ, ಕಾವ್ಲಾದ ಪುರಾತನ ಗುಹೆಗಳು ಮತ್ತು ಇನ್ನೂ ಹೆಚ್ಚಿನ ಸ್ಥಳಗಳು ಇಲ್ಲಿವೆ.

Daandeli


ಸಕಲೇಶಪುರ

ಸಣ್ಣ ಗಿರಿಧಾಮಗಳಿರುವ ಸಕಲೇಶಪುರವು ಅತ್ಯಂತ ಸುಂದರವಾದ ಸ್ಥಳವಾಗಿದೆ. ಕಾಫಿ, ಚಹಾ ಮತ್ತು ಮಸಾಲೆ ಪದಾರ್ಥಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಹಚ್ಚ ಹಸುರಿನ ತೋಟಗಳಿಂದ ಸುತ್ತುವರೆದಿರುವ ಸಕಲೇಶಪುರದಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳಿವೆ. ಕಾಫಿ ಮತ್ತು ಟೀ ಎಸ್ಟೇಟ್‌ಗಳು, ಮುದರಾಬಾದ್‌ ಕೋಟೆ, ಜಲಪಾತಗಳು. ಸಕಲೇಶ್ವರ ದೇವಸ್ಥಾನ ಸೇರಿದಂತೆ ಇನ್ನು ಹತ್ತು ಹಲವು ಪ್ರವಾಸಿ ವೀಕ್ಷಣೆಯ ತಾಣಗಳು ಇಲ್ಲಿವೆ.

sakaleshapura

ಮತ್ತೆಲ್ಲಿಗೆ ಪ್ರವಾಸಿಗರು ಹೆಚ್ಚಿಗೆ ಹೋಗುತ್ತಾರೆ?

ಪ್ರವಾಸಿಗರು ಭೇಟಿ ನೀಡುವ ಕರ್ನಾಟಕದ ಮೋಸ್ಟ್‌ ಪ್ಯಾಪುಲರ್‌ ಜಾಗಗಳ ಕುರಿತು ಮಾಹಿತಿ ನೀಡಲಾಗಿದೆ. ಆ ಜಾಗಗಳನ್ನು ಹೊರತುಪಡಿಸಿ ಪ್ರವಾಸಿಗರು ಅತಿಹೆಚ್ಚು ಭೇಟಿ ನೀಡುವ ಜಾಗಗಳೆಂದರೆ;

ಹಂಪಿ
ಮೈಸೂರು
ಗೋಕರ್ಣ
ಉಡುಪಿ
ಶಿವಮೊಗ್ಗ