ಮಕ್ಕಳನ್ನು ಕೆಲಕಾಲ ಎಂಗೇಜ್‌ ಆಗಿರಿಸಲು, ಖುಷಿಯಿಂದ ಕಾಲ ಕಳೆಯುವಂತೆ ಮಾಡಲು ಬೆಂಗಳೂರಿನ ಆಸುಪಾಸಿನಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಆದರೂ ನಿಸರ್ಗದ ಜೊತೆ ಮಕ್ಕಳನ್ನು ಬೆರೆಯಲು ಬಿಡುವ ಅನುಭವವೇ ಬೇರೆ. ಪ್ರಾಣಿ, ಪಕ್ಷಿಗಳನ್ನು ಹತ್ತಿರದಿಂದ ವೀಕ್ಷಿಸುವುದು, ಮುದ್ದಾಡುವ ಅವಕಾಶಗಳನ್ನು ಮಕ್ಕಳು ಹೆಚ್ಚಿಗೆ ಆನಂದಿಸುತ್ತಾರೆ. ಸಿಲಿಕಾನ್‌ ಸಿಟಿಯ ಮಕ್ಕಳಿಗೆ ಅಂತಹ ವಿಶೇಷ ಅನುಭವವನ್ನು ನೀಡುವ ಸಲುವಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪರಿಸರದಲ್ಲಿರುವ ಪೆಟ್‌ ಫಾರ್ಮ್‌ ಗಳ ಮಾಹಿತಿ ನಿಮಗಾಗಿ.

ಪಿಕೆಟ್ ಫೆನ್ಸ್ ಫಾರ್ಮ್

ನಗರದ ಗದ್ದಲದಿಂದ ದೂರದಲ್ಲಿ ನಂದಿ ಬೆಟ್ಟದ ಸಮೀಪದಲ್ಲಿರುವ ಪಿಕೆಟ್ ಫೆನ್ಸ್ ಫಾರ್ಮ್ ಮಕ್ಕಳ ನೆಚ್ಚಿನ ತಾಣ. ಮಕ್ಕಳು ಮಾತ್ರವಲ್ಲದೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಪ್ರಕೃತಿಯ ಸೊಬಗನ್ನು ಕಣ್ತುಂಬಲು ಇದು ಉತ್ತಮ ಆಯ್ಕೆ. ಇಲ್ಲಿ ಕುರಿ, ಮೇಕೆ, ಬಾತುಕೋಳಿ, ಕುದುರೆ, ಮೊಲ ಇಗುವಾನಾಗಳು ಮತ್ತು ಮುಳ್ಳುಹಂದಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಪ್ರಾಣಿ ಪಕ್ಷಿಗಳ ಆಹಾರ ಆರೈಕೆಯ ಬಗ್ಗೆ ಮಕ್ಕಳಿಗೆ ಮಾಹಿತಿ ಲಭ್ಯವಾಗುತ್ತದೆ.

ಪ್ರವೇಶ ಶುಲ್ಕ: ಪ್ರತಿ ವ್ಯಕ್ತಿಗೆ 400/-

ಸಮಯ: ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ

ವಾರದ ರಜೆ: ಸೋಮವಾರ

ಪಿಕೆಟ್ ಫೆನ್ಸ್ ಫಾರ್ಮ್

ಪ್ರಾಣಿ – ದಿ ಪೆಟ್‌ ಸ್ಯಾಂಚುರಿ

ಸುಮಾರು 700 ರಕ್ಷಿಸಲ್ಪಟ್ಟ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಪ್ರಾಣಿ-ದಿ ಪೆಟ್‌ ಸ್ಯಾಂಚುರಿ ಹೊಂದಿದೆ. ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳು, ಸಸ್ತನಿಗಳು ಮತ್ತು ಉಭಯಚರಗಳನ್ನು ಇಲ್ಲಿ ಕಾಣಬಹುದು. ಆದರೆ ಇಲ್ಲಿಗೆ ಭೇಟಿ ನೀಡುವುದಾದರೆ ಮುಂಗಡವಾಗಿ ವೆಬ್‌ ಸೈಟ್‌ ಮೂಲಕ ಬುಕ್ಕಿಂಗ್‌ ಮಾಡಿಕೊಳ್ಳಬೇಕಿದ್ದು, ಸುಮಾರು ಒಂದೂವರೆ ಗಂಟೆಗಳ ಕಾಲ ಶೈಕ್ಷಣಿಕ ಪ್ರವಾಸವನ್ನೂ ಒದಗಿಸುತ್ತದೆ. ಮೃಗಾಲಯಗಳಿಗಿಂತ ಭಿನ್ನವಾಗಿ, ಪಕ್ಷಿ ಪ್ರಾಣಿಗಳನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಸ್ಪರ್ಶಿಸಿ ವಿಶೇಷ ಅನುಭವವನ್ನೂ ಇಲ್ಲಿ ಪಡೆಯಬಹುದು.

ಪ್ರವೇಶ ಶುಲ್ಕ: ಪ್ರತಿ ವ್ಯಕ್ತಿಗೆ ರೂ.400/- (3 ವರ್ಷ ಮತ್ತು ಮೇಲ್ಪಟ್ಟವರಿಗೆ ಶುಲ್ಕ ವಿಧಿಸಲಾಗುತ್ತದೆ)

ಸಮಯ: ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ (ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ)

ಪ್ರಾಣಿ – ದಿ ಪೆಟ್‌ ಸ್ಯಾಂಚುರಿ

ಬರ್ಡ್ಸ್ ಆಫ್ ಪ್ಯಾರಡೈಸ್ ಫೌಂಡೇಶನ್ (NGO)

ಬರ್ಡ್ಸ್ ಆಫ್ ಪ್ಯಾರಡೈಸ್ ಫೌಂಡೇಶನ್ ಸುಮಾರು 60 ಜಾತಿಗಳ 600 ಕ್ಕೂ ಹೆಚ್ಚು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ. ಇದು ರಕ್ಷಿಸಲ್ಪಟ್ಟ, ಕೈಬಿಡಲ್ಪಟ್ಟ ಮತ್ತು ದಾನ ಮಾಡಿದ ಅನೇಕ ಸಾಕುಪ್ರಾಣಿಗಳಿಗೆ ಆಶ್ರಯ ನೀಡುತ್ತಿದೆ. ಇಲ್ಲಿಗೆ ಭೇಟಿ ನೀಡುವ ಮುನ್ನ ಪ್ರಿ ಬುಕ್ಕಿಂಗ್‌ ಮಾಡಿಕೊಳ್ಳಲು ಮರೆಯಬೇಡಿ. ಇಲ್ಲಿ ಪ್ರಾಣಿ ವೀಕ್ಷಣೆಯ ಜೊತೆ ಜೊತೆಗೆ ವಸತಿ ವ್ಯವಸ್ಥೆಯೂ ಇದ್ದು, ಕುದುರೆ ಸವಾರಿ, ಮೀನುಗಾರಿಗೆ, ಜಿಪ್ ಲೈನಿಂಗ್ ಮತ್ತು ಸ್ಕೈ ಸೈಕ್ಲಿಂಗ್ ನಂತಹ ಅನೇಕ ಚಟುವಟಿಕೆಗಳು ಇಲ್ಲಿದ್ದು ಹೆಚ್ಚುವರಿ ವೆಚ್ಚವನ್ನು ಭರಿಸಿಕೊಂಡು ಇದರ ಸದುಪಯೋಗ ಮಾಡಿಕೊಳ್ಳಬಹುದು.

ಪ್ರವೇಶ ಶುಲ್ಕ: ವಾರದ ದಿನಗಳಲ್ಲಿ ತಲಾ 200 ರೂ. ಮತ್ತು ವಾರಾಂತ್ಯಗಳು ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ತಲಾ 250 ರೂ. (3 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಶುಲ್ಕ ವಿಧಿಸಲಾಗುತ್ತದೆ)

ವಾರದ ರಜೆ: ಮಂಗಳವಾರ

ಸಮಯ: ಬೆಳಿಗ್ಗೆ 10:30 - ಸಂಜೆ 4 ಗಂಟೆ

ಬರ್ಡ್ಸ್ ಆಫ್ ಪ್ಯಾರಡೈಸ್ ಫೌಂಡೇಶನ್ (NGO)

ಜೀವಾ ಪಾರ್ಕ್

ನೀವು ಪ್ರಕೃತಿ, ಕೃಷಿ ಮತ್ತು ಪ್ರಾಣಿಗಳೊಂದಿಗೆ ಬೆರೆಯಲು ಬಯಸಿದರೆ, ಜೀವಾ ಪಾರ್ಕ್ ಸೂಕ್ತ ಸ್ಥಳವಾಗಿದೆ. ಇಲ್ಲಿ, ನೀವು 60 ಜಾತಿಗಳ 500 ಪಕ್ಷಿಗಳು ಮತ್ತು ಪ್ರಾಣಿಗಳಿದ್ದು, ಇವುಗಳೊಂದಿಗೆ ಮುಕ್ತವಾಗಿ ಬೆರೆಯಬಹುದು. ಈ ಪ್ರಾಣಿ ಉದ್ಯಾನವನದಲ್ಲಿ 90 ನಿಮಿಷಗಳ ಕಾಲ ನೀವು ಸಮಯ ಕಳೆಯಬಹುದಾಗಿದ್ದು,

ಜೀವಾ ಪಾರ್ಕ್ ಶಾಲಾ ಮಕ್ಕಳಿಗಾಗಿಯೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಅಲ್ಲಿ ವಿದ್ಯಾರ್ಥಿಗಳು ಪ್ರಾಣಿಗಳಿಗೆ ಹತ್ತಿರವಾಗಬಹುದು, ಅವುಗಳ ಬಗ್ಗೆ ಕಲಿಯಬಹುದು ಮತ್ತು ಅವುಗಳನ್ನು ಸಾಕುವ ಅವಕಾಶವನ್ನು ಪಡೆಯಬಹುದು.

ಪ್ರವೇಶ ಶುಲ್ಕ: ರೂ.250 (ವಯಸ್ಕರಿಗೆ ಪ್ರತಿ ವ್ಯಕ್ತಿಗೆ)

ರೂ. 200 (2 ರಿಂದ 10 ವರ್ಷ ವಯಸ್ಸಿನ ಪ್ರತಿ ಮಗುವಿಗೆ ಶುಲ್ಕ ವಿಧಿಸಲಾಗುತ್ತದೆ)

ಸಮಯ: ಬೆಳಿಗ್ಗೆ 8:30 - ಸಂಜೆ 5:30 (ಎಲ್ಲಾ ದಿನಗಳಲ್ಲಿ ತೆರೆದಿರುತ್ತದೆ)

ಜೀವಾ ಪಾರ್ಕ್

ಎಂಚಾಂಟಿಂಗ್‌ ಎಕ್ರೇಸ್‌

ಪ್ರಕೃತಿ ಮತ್ತು ಪ್ರಾಣಿಗಳನ್ನು ಪ್ರೀತಿಸುವ ಮಂದಿಗೆ ಎಂಚಾಂಟಿಂಗ್‌ ಎಕ್ರೇಸ್‌

ಬಲು ಉತ್ತಮ ಆಯ್ಕೆ. ಈ ಫಾರ್ಮ್ ವಿವಿಧ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ. ಅವುಗಳ ಜೊತೆ ನೀವು ಸಂವಹನ ನಡೆಸಬಹುದು. ಕುದುರೆ ಸವಾರಿ, ಕುಂಬಾರಿಕೆ, ಚಿತ್ರಕಲೆ, ವಾಲ್‌ ಕ್ಲೈಂಬಿಂಗ್‌, ಜಿಪ್ ಲೈನಿಂಗ್, ಸ್ವಿಮ್ಮಿಂಗ್‌ ಇತ್ಯಾದಿ ಚಟುವಟಿಕೆಗಳನ್ನು ಇಲ್ಲಿ ಆನಂದಿಸಬಹುದು. ಕುಟುಂಬದ ಜೊತೆ ಬಂದರೆ ಇಲ್ಲಿ ಐಷಾರಾಮಿ ಕ್ಯಾಬಿನ್‌ಗಳಲ್ಲಿ ರಾತ್ರಿಯ ವಾಸ್ತವ್ಯಕ್ಕೂ ಅವಕಾಶವಿದೆ.

ಸಮಯ: ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 3:30 ರವರೆಗೆ

ಎಂಚಾಂಟಿಂಗ್‌ ಎಕ್ರೇಸ್‌

ಬಿಗ್ ಬಾರ್ನ್ ನೇಚರ್ ಕ್ಯಾಂಪ್

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಳಿ ಇರುವ ಸಾವಯವ ಪ್ರಮಾಣೀಕೃತ ಫಾರ್ಮ್ ಬಿಗ್ ಬ್ಯಾನ್ ನೇಚರ್ ಕ್ಯಾಂಪ್. ಮಕ್ಕಳ ವಿಹಾರಕ್ಕೆ ಇದು ಸೂಕ್ತವಾಗಿದ್ದು, ಪ್ರಕೃತಿಯೊಂದಿಗೆ ಬೆರೆಯಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ನಾಯಿ, ಹಸು, ಕೋಳಿ, ಬಾತುಕೋಳಿ ಮತ್ತು ಕುರಿಗಳೊಂದಿಗೆ ಕಾಲ ಕಳೆಯಬಹುದು. ಈ ಫಾರ್ಮ್ನಲ್ಲಿ 80 ಜಾತಿಯ ಪಕ್ಷಿಗಳು, 150 ಜಾತಿಯ ಚಿಟ್ಟೆಗಳು ಮತ್ತು 200 ಜಾತಿಯ ಮರಗಳಿವೆ. ಇದು ನಿಮ್ಮ ಕುಟುಂಬದೊಂದಿಗೆ ಪಿಕ್ನಿಕ್‌ ಕೈಗೊಳ್ಳಲು ಸೂಕ್ತ ಸ್ಥಳವಾಗಿದೆ. ರಾತ್ರಿಯ ವಾಸ್ತವ್ಯಕ್ಕೂ ಇಲ್ಲಿ ಅವಕಾಶವಿದ್ದು, ಮಕ್ಕಳನ್ನು ಖುಷಿ ಪಡಿಸಲು ಅನೇಕ ಚಟುವಟಿಕೆಗಳು ಮಾತ್ರವಲ್ಲದೆ ನಿಮ್ಮ ಮಕ್ಕಳಿಗಾಗಿ ಹುಟ್ಟುಹಬ್ಬದ ಪಾರ್ಟಿಗಳನ್ನು ಸಹ ಆಯೋಜಿಸಬಹುದು.

ಫಾರ್ಮ್ ಪ್ರವಾಸ ಬೆಲೆ: ಪ್ರತಿ ವ್ಯಕ್ತಿಗೆ ರೂ.600/- (2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ)

2 - 10 ವಯಸ್ಸಿನವರಿಗೆ: ಶನಿವಾರದಂದು ಪ್ರತಿ ವ್ಯಕ್ತಿಗೆ ರೂ.900/- ರಿಂದ.

10 ರಿಂದ 18 ವರ್ಷದೊಳಗಿನವರಿಗೆ: ಶನಿವಾರದಂದು ಪ್ರತಿ ವ್ಯಕ್ತಿಗೆ 1000 ರೂ.ಗಳಿಂದ.

ರಾತ್ರಿ ವಾಸ್ತವ್ಯ: ಪ್ರತಿ ವ್ಯಕ್ತಿಗೆ 2350 ರೂ.ಗಳಿಂದ.

ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 3:30 ರವರೆಗೆ.