ಬಿಹಾರ ಪ್ರವಾಸೋದ್ಯಮ ನೀತಿ ಅಡಿಯಲ್ಲಿ ರಾಜ್ಯ ಸರಕಾರವು 30% ವರೆಗೆ ಆರ್ಥಿಕ ಸಹಾಯ ನೀಡುತ್ತಿದ್ದು, ಉದ್ಯಮಿಗಳು ಇದನ್ನು ಬಳಸಿಕೊಳ್ಳಬೇಕು. ಇದರ ಬಳಕೆಯೊಂದಿಗೆ ಸುಸಜ್ಜಿತ ಹೊಟೇಲ್‌ಗಳು, ಫ್ಯಾಂಟಸಿ ಪಾರ್ಕ್‌ಗಳು ಮತ್ತಿತರ ಸ್ಟಾರ್‌ ರೇಟೆಡ್‌ ಸೌಲಭ್ಯಗಳನ್ನು ರೂಪಿಸುವಂತೆ ಬಿಹಾರ ಪ್ರವಾಸೋದ್ಯಮ ಕಾರ್ಯದರ್ಶಿ ನೀಲೇಶ್ ರಾಮಚಂದ್ರ ದೇವೋರ್ ಹೂಡಿಕೆದಾರರಲ್ಲಿ ಮನವಿಮಾಡಿದ್ದಾರೆ.

ಬಿಹಾರ ಪ್ರವಾಸೋದ್ಯಮ ನೀತಿ ಅಡಿಯಲ್ಲಿ ಆರ್ಥಿಕ ಸಹಾಯ ಪಡೆಯುತ್ತಿರುವ 21 ಉದ್ಯಮಿಗಳ ಜತೆಗೆ ವರ್ಚುವಲ್‌ ಸಭೆ ನಡೆಸಿದ್ದು, ಸಭೆಯಲ್ಲಿ ಮಾತನಾಡಿದ ರಾಜ್ಯ ಪ್ರವಾಸೋದ್ಯಮ ಕಾರ್ಯದರ್ಶಿ ನೀಲೇಶ್ ರಾಮಚಂದ್ರ ದೇವೋರ್ ಮೊದಲ ಹಂತದ ಆರ್ಥಿಕ ಸಹಾಯ ಪಡೆದ ಉದ್ಯಮಿಗಳು ಎರಡನೆಯ ಹಂತದ ಆರ್ಥಿಕ ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಸೂಚಿಸಿದರು. ಈ ವೇಳೆ ಲೋನ್‌ ನೀಡುವಲ್ಲಿ ಬ್ಯಾಂಕುಗಳಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದರೆ ಇಲಾಖೆಗೆ ಮಾಹಿತಿ ನೀಡಿ, ಬ್ಯಾಂಕ್‌ಗಳೊಂದಿಗೆ ಇಲಾಖೆ ನೇರವಾಗಿ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಬೇಕಾಗಿ ತಿಳಿಸಿದರು. ಒಟ್ಟಾರೆ ಬಿಹಾರಕ್ಕೆ ಬರುವ ಪ್ರವಾಸಿಗರಿಗೆ ಯಾವ ಸಮಸ್ಯೆಗಳೂ ಎದುರಾಗಬಾರದು. ಪ್ರತಿ ಜಿಲ್ಲೆಗಳಲ್ಲೂ ಪ್ರವಾಸಿಗರಿಗೆ ಅನುಕೂಲಕರ ವಾತಾವರಣ ನಿರ್ಮಿಸಿ, ಆತಿಥ್ಯ ಉತ್ತಮವಾಗಿದ್ದರೆ ನಿಮ್ಮ ಉದ್ಯಮವೂ ಬೆಳೆಯುತ್ತದೆ, ರಾಜ್ಯ ಪ್ರವಾಸೋದ್ಯಮ ಆಕರ್ಷಣೆಯನ್ನೂ ಪಡೆಯುತ್ತದೆ ಎಂದು ಅವರು ಹೇಳಿದರು.

ಸಭೆಯ ನಂತರ X ಖಾತೆಯಲ್ಲಿ ಪಶ್ಚಿಮ ಚಂಪಾರಣ್‌ನಲ್ಲಿ ಯುವ ಪ್ರವಾಸೋದ್ಯಮಿ ನಿರ್ಮಿಸಿದ್ದ ಹೊಟೇಲ್‌ ವಿಡಿಯೋವನ್ನು ಹಂಚಿಕೊಂಡಿದ್ದು, ಅರಮನೆಯಂತ ವಾಸ್ತುಶಿಲ್ಪದ ಹೊಟೇಲ್‌ ಇದಾಗಿದ್ದು, ಉತ್ಸಾಹಿ ಯುವ ಉದ್ಯಮಿ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.