ಲೋಕವನುಳಿಸಲು ವಿಷವನು ಕುಡಿದ ಶಿವ!
ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಎರಡು ಪ್ರವೇಶ ದ್ವಾರಗಳನ್ನು ಹೊಂದಿದೆ. ದೇವಾಲಯದ ಗೋಡೆಗಳು ಸಮುದ್ರ ಮಂಥನದ ಸಂಪೂರ್ಣ ಕಥೆಯನ್ನು ತಿಳಿಸುತ್ತವೆ. ಪ್ರವೇಶ ದ್ವಾರದ ಮೇಲೆ ದೇವತೆಗಳು ಮತ್ತು ಅಸುರರ ಶಿಲ್ಪಗಳ ಮೂಲಕ ಚಿತ್ರಿಸಲಾದ ಸಮುದ್ರ ಮಂಥನದ ದೃಶ್ಯಗಳನ್ನು ನೋಡಬಹುದು. ಒಳಗಿನ ಗರ್ಭಗುಡಿಯು ಅಷ್ಟೇ ಸುಂದರವಾಗಿದೆ.ಪ್ರವೇಶ ದ್ವಾರದ ಬಳಿ ಪಾರ್ವತಿಯ ವಿಗ್ರಹವನ್ನು ನೋಡಬಹುದು.
- ವಿಜಯಕುಮಾರ್ ಕಟ್ಟೆ
ಉತ್ತರಾಖಂಡದ ನೀಲಕಂಠ ಮಹಾದೇವ ದೇವಾಲಯವು ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ಬೆಟ್ಟದ ಮೇಲೆ ಸುಂದರವಾದ ಸ್ಥಳದಲ್ಲಿ ಋಷಿಕೇಶದಿಂದ 32 ಕಿಮೀ ದೂರದಲ್ಲಿರುವ ಒಂದು ಪವಿತ್ರ ಮತ್ತು ಪ್ರಸಿದ್ಧ ದೇವಾಲಯವಾಗಿದೆ. ಸ್ವರ್ಗಾಶ್ರಮದ ಮೇಲೆ ನರ ನಾರಾಯಣ ಪರ್ವತ ಶ್ರೇಣಿಯ ಪಕ್ಕದಲ್ಲಿದೆ. ಸುತ್ತಲೂ ಎಲ್ಲಿ ನೋಡಿದರೂ ಹಸಿರು. ಅದ್ಭುತ ಪ್ರಕೃತಿಯ ಸೊಬಗು. ನವೆಂಬರ್ ತಿಂಗಳಿನ ಚುಮು ಚುಮು ಚಳಿಯ ಮಧ್ಯೆ ಬೆಟ್ಟವನ್ನೇರುವಾಗ ಮೈತಾಕುವ ಎಳೆ ಬಿಸಿಲು. ಆಹಾ.. ಆ ಕ್ಷಣದ ಸಂತೋಷವನ್ನು ಪದಗಳಲ್ಲಿ ಹಿಡಿದಿಡುವುದು ದುರ್ಲಭವೇ ಸರಿ. ಈ ಶಿವನ ನಿವಾಸವು 1330 ಮೀಟರ್ ಎತ್ತರದಲ್ಲಿ ಬ್ರಹ್ಮ ಕೂಟ, ಮಣಿಕೂಟ ಮತ್ತು ವಿಷ್ಣು ಕೂಟ ಕಣಿವೆಗಳ ನಡುವೆ ಇದೆ. ದಟ್ಟವಾದ ಕಾಡುಗಳು ದೇವಾಲಯವನ್ನು ಸುತ್ತುವರೆದಿವೆ. ಸುಂದರ ಪ್ರಕೃತಿಯ ಸೌಂದರ್ಯ, ಬಾ.. ಸದಾ ಸ್ವಾಗತ ನಿನಗೆ.. ಎಂದು ಬರಮಾಡಿಕೊಳ್ಳುತ್ತದೆ.
ನೀಲಕಂಠನ ತಾಣ
ಈ ಪ್ರಾಚೀನ ದೇವಾಲಯವು ಕೇವಲ ಧಾರ್ಮಿಕ ತಾಣವಲ್ಲ. ಪುರಾಣ, ಪ್ರಕೃತಿ, ಆಧ್ಯಾತ್ಮಿಕತೆ ಮತ್ತು ಭಕ್ತಿಯ ಸಂಕೇತದ ಸ್ಥಳವಾಗಿದೆ. ಶ್ರುತಿ-ಸ್ಮೃತಿ ಪುರಾಣದ ಪ್ರಕಾರ, ಇದು ದೇವತೆಗಳು ಮತ್ತು ಅಸುರರು ಅಮೃತವನ್ನು ಪಡೆಯಲು ಸಮುದ್ರ ಮಂಥನ ಮಾಡಿದಾಗ ಸಮುದ್ರದಿಂದ ಹುಟ್ಟಿದ ವಿಷವನ್ನು ಶಿವನು ಸೇವಿಸಿದ ಪವಿತ್ರ ಸ್ಥಳವಾಗಿದೆ . ನೀಲ ಅಂದರೆ ನೀಲಿ ಮತ್ತು ಕಂಠ ಅಂದರೆ ಗಂಟಲು ಎಂಬ ಪದಗಳಿಂದ ಬಂದಿದೆ . ವಿಷವು ಎಲ್ಲೆಡೆ ಹರಡುವುದನ್ನು ತಡೆಯಲು, ಶಿವನು ಅದನ್ನು ತನ್ನ ಗಂಟಲಿನಲ್ಲಿ ಹಿಡಿದು ನೀಲಿ ಬಣ್ಣಕ್ಕೆ ತಿರುಗಿದನು. ಅವನ ಕರುಣೆ ಮತ್ತು ಅಪಾರ ತ್ಯಾಗದ ಈ ಕ್ರಿಯೆಯು ಅವನಿಗೆ ನೀಲಕಂಠ ಎಂಬ ಹೆಸರನ್ನು ತಂದುಕೊಟ್ಟಿತು.

ಋಷಿಕೇಶದತ್ತ ಪಯಣ
ಈ ದೇವಾಲಯದ ಬಗ್ಗೆ ಏನು ತಿಳಿಯದ ನಮಗೆ ಪ್ರಯಾಣವು ಒಂದು ಸಾಹಸಮಯ ಅನುಭವವನ್ನು ನೀಡಿತು. ಭಾಗವತ ಸಪ್ತಾಹದ ಪ್ರಯುಕ್ತ ಋಷಿಕೇಶಕ್ಕೆ ಹೊರಟ ನಾವು ಡೆಹ್ರಾಡೂನ್‌ಗೆ ವಿಮಾನದಲ್ಲಿ ಹೋಗಿ ಸೇರಿದೆವು. ಅಲ್ಲಿಂದ 20 ಕಿಮೀ.ದೂರವಿರುವ ಋಷಿಕೇಶಕ್ಕೆ ಟ್ಯಾಕ್ಸಿ ಮೂಲಕ ಆಶ್ರಮದಲ್ಲಿ ಬುಕ್ ಮಾಡಿದ್ದ ರೂಮ್‌ಗೆ ಹೋಗಿ ವಿಶ್ರಾಂತಿ ಪಡೆದೆವು. ಮರುದಿನ ಗಂಗಾ ಸ್ನಾನ ಮುಗಿಸಿ ನಂತರ ನೀಲಕಂಠ ದೇವಸ್ಥಾನಕ್ಕೆ ಹೊರಟೆವು. ನಾವು ಇಳಿದುಕೊಂಡಿದ್ದ ವಾನಪ್ರಸ್ಥಾಶ್ರಮದಿಂದ ನೇರವಾದ ವಾಹನ ಇರಲಿಲ್ಲ. ಅಲ್ಲಿಂದ ನಡೆದು ಸುಮಾರು ಅರ್ಧ ಕಿಮೀ. ನಡೆದುಕೊಂಡು ಸೀತಾ ಝೂಲಾ ಸೇತುವೆ ದಾಟಿ ಬಂದರೆ ಅಲ್ಲಿ ಶೇರ್ಡ್ ಜೀಪ್‌ಗಳು ಸುಲಭವಾಗಿ ಲಭ್ಯವಿರುತ್ತವೆ. 10 ಪ್ರಯಾಣಿಕರು ಆಗುವವರೆಗೂ ಅವನು ಮುಂದೆ ಹೋಗುವುದಿಲ್ಲ. ನಮ್ಮ ಅದೃಷ್ಟಕ್ಕೆ ಆಗಲೇ ಅದರಲ್ಲಿ 9 ಜನ ಕುಳಿತ್ತಿದ್ದರು. ನಾವು ಹತ್ತಿದ ಕೂಡಲೇ ವಾಹನ ಹೊರಟಿತು. ದಾರಿಯಲ್ಲಿ ಹೋಗುತ್ತಾ ಜೀಪ್‌ನಲ್ಲೇ ಕುಳಿತು ಅನೇಕ ಸಾಹಸ ಚಟುವಟಿಕೆಗಳನ್ನೂ ನೋಡಬಹುದು. ಬಂಗೀ ಜಂಪಿಂಗ್, ನದಿ ರಾಫ್ಟಿಂಗ್, ರಾಕ್ ಕ್ಲೈಂಬಿಂಗ್ ಮತ್ತು ರಾಪೆಲ್ಲಿಂಗ್ ಈ ಎಲ್ಲ ರೋಮಾಂಚಕ ದೃಶ್ಯವನ್ನು ಆನಂದಿಸಬಹುದು. ಇದು ಪರ್ವತಗಳ ಮೂಲಕ ಸುಂದರವಾದ ಡ್ರೈವ್ ಅನ್ನು ನೀಡುತ್ತದೆ. ರಸ್ತೆಯು ಸುಂದರವಾದ ಭೂದೃಶ್ಯಗಳ ಮೂಲಕ ಸುತ್ತುತ್ತದೆ, ಗಂಗಾ ನದಿಯು ಪಕ್ಕದಲ್ಲಿ ಹರಿಯುತ್ತದೆ, ದಾರಿಯುದ್ದಕ್ಕೂ ಅದ್ಭುತ ಪ್ರಕೃತಿ ಸೌಂದರ್ಯ ಪ್ರಯಾಣ ಪ್ರಶಾಂತವಾಗಿರುತ್ತದೆ. ಪ್ರಕೃತಿ ಪ್ರಿಯರಿಗೆ ಆನಂದದಾಯಕವಾಗಿದೆ. ಇಡೀ ಈ ಪ್ರಯಾಣ ತಿರುವುಗಳಿರುವ ರಸ್ತೆ. ಕೆಲವರಿಗೆ ಇದು ಆಗುವುದಿಲ್ಲ. ಅಲ್ಲಿದ್ದ ಒಬ್ಬ ಹಿರಿಯರಿಗೆ ವಾಂತಿ ಆಗಿ ಸ್ವಲ್ಪ ಹೊತ್ತು ಅಲ್ಲೇ ಸುಧಾರಿಸಿಕೊಂಡರು. ನಂತರ ಪ್ರಯಾಣ ಮುಂದುವರಿಸಿದೆವು.
ಸುಮಾರು ಒಂದೂವರೆ ಗಂಟೆ ಪ್ರಯಾಣದ ನಂತರ ಪಾರ್ಕಿಂಗ್ ಸ್ಥಳ ಬಂತು. ಅಲ್ಲಿಂದ ಮುಂದೆ ವಾಹನಗಳನ್ನು ಬಿಡುವುದಿಲ್ಲ. ವಾಹನದಿಂದ ಇಳಿದು ಸುಮಾರು 3 ಕಿಮೀ. ದೇವಾಲಯಕ್ಕೆ ಕಾಲ್ನಡಿಗೆಯ ಪ್ರಯಾಣವು ರೋಮಾಂಚನವಾಗಿದ್ದು ಸುತ್ತ ಮುತ್ತ ಹಿಮಾಲಯದ ದಟ್ಟ ಕಾಡುಗಳು ಮತ್ತು ಪವಿತ್ರ ಗಂಗಾ ನದಿಯ ಉಸಿರುಕಟ್ಟುವ ನೋಟಗಳನ್ನು ನೀಡುತ್ತದೆ. ಬೆಟ್ಟದ ದಾರಿ ಸಾಗುತ್ತಿದ್ದಂತೆ ತಣ್ಣನೆಯ ಗಾಳಿ, ಸ್ವಲ್ಪ ಚಳಿ, ಎಳೆ ಬಿಸಿಲು ಎಲ್ಲವೂ ತುಂಬಾ ಅದ್ಭುತ. ಸ್ವಲ್ಪ ಮಾತ್ರ ಏರಿಳಿತ ಇದ್ದು ಹಚ್ಚ ಹಸಿರಿನ ಮತ್ತು ಅಂಕುಡೊಂಕಾದ ಹಾದಿಗಳಿಂದ ರಸ್ತೆ ಸುಂದರವಾಗಿದೆ. ಸುಮಾರು ಒಂದು ಗಂಟೆ ಕಾಲ ನಡೆದು ಭವ್ಯ ಪರ್ವತಗಳ ನಡುವೆ ಇರುವ ನೀಲಕಂಠ ಮಹಾದೇವ ದೇವಸ್ಥಾನಕ್ಕೆ ಆಗಮಿಸಿದೆವು. ಭಕ್ತರ ಸಂದಣಿ ಜೋರಾಗಿತ್ತು. ಸಾಲಿನಲ್ಲಿ ನಿಂತುಕೊಡೆವು. ದೇವರ ದರ್ಶನ ಪಡೆಯಲು ಮುಕ್ಕಾಲು ಗಂಟೆಯಾಯಿತು.

ಯೂನಿಕ್ ವಾಸ್ತುಶಿಲ್ಪ
ದೇವಾಲಯದ ವಾಸ್ತುಶಿಲ್ಪವು ಸಾಂಪ್ರದಾಯಿಕ ಉತ್ತರ ಭಾರತೀಯ ದೇವಾಲಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಎರಡು ಪ್ರವೇಶ ದ್ವಾರಗಳನ್ನು ಹೊಂದಿದೆ. ದೇವಾಲಯದ ಗೋಡೆಗಳು ಸಮುದ್ರ ಮಂಥನದ ಸಂಪೂರ್ಣ ಕಥೆಯನ್ನು ತಿಳಿಸುತ್ತವೆ. ಪ್ರವೇಶ ದ್ವಾರದ ಮೇಲೆ ದೇವತೆಗಳು ಮತ್ತು ಅಸುರರ ಶಿಲ್ಪಗಳ ಮೂಲಕ ಚಿತ್ರಿಸಲಾದ ಸಮುದ್ರ ಮಂಥನದ ದೃಶ್ಯಗಳನ್ನು ನೋಡಬಹುದು. ಒಳಗಿನ ಗರ್ಭಗುಡಿಯು ಅಷ್ಟೇ ಸುಂದರವಾಗಿದೆ. ಪ್ರವೇಶ ದ್ವಾರದ ಬಳಿ ಪಾರ್ವತಿಯ ವಿಗ್ರಹವನ್ನು ನೋಡಬಹುದು. ಆಕೆಯ ಭವ್ಯತೆಯು ಪ್ರಕಾಶಮಾನವಾದ ಪ್ರಭಾವಲಯದೊಂದಿಗೆ ಸೇರಿ, ಈ ಸ್ಥಳವನ್ನು ದೈವಿಕವಾಗಿಸುತ್ತದೆ. ಶಿವಲಿಂಗದ ರೂಪದಲ್ಲಿ ನೀಲಕಂಠ ಮಹಾದೇವ ದೇವಾಲಯದ ಪ್ರಧಾನ ದೇವರು. ದೇವಾಲಯ ಸಂಕೀರ್ಣವು ನೈಸರ್ಗಿಕ ಬುಗ್ಗೆಯನ್ನು ಹೊಂದಿದ್ದು, ಭಕ್ತರು ಸಾಮಾನ್ಯವಾಗಿ ದಟ್ಟವಾದ ಕಾಡುಗಳಿಂದ ಆವೃತವಾದ ಆವರಣವನ್ನು ಪ್ರವೇಶಿಸುವ ಮೊದಲು ಪವಿತ್ರವಾದ ಈ ಬುಗ್ಗೆಯಲ್ಲಿ ಸ್ನಾನ ಮಾಡುತ್ತಾರೆ .ಗರ್ಭಗುಡಿಯಲ್ಲಿ ಕಪ್ಪು ಕಲ್ಲಿನ ಶಿವನ ವಿಗ್ರಹವಿದೆ. ಇದು ಮೂರುವರೆ ಅಡಿ ಎತ್ತರವಿದೆ. ಲಿಂಗದ ಸುತ್ತಲಿನ ಸ್ಥಳವು ಅಮೃತಶಿಲೆಯಿಂದ ಮಾಡಲ್ಪಟ್ಟಿದೆ. ಗುಮ್ಮಟಾಕಾರದ ಚಾವಣಿಯು ಮೇಲ್ಭಾಗದಲ್ಲಿ ಕಲಶವನ್ನು ಹೊಂದಿದೆ. ಲಿಂಗದ ಎದುರು, ಶಿವನ ದೈವಿಕ ವಾಹನವಾದ ನಂದಿಯನ್ನು ಕಾಣಬಹುದು. ಬೆಳ್ಳಿಯ ಪೆಟ್ಟಿಗೆಯು ಲಿಂಗವನ್ನು ಆವರಿಸಿದೆ. ಭಕ್ತರು ಮೂಲ ರೂಪವನ್ನು ನೋಡಲು ಅದರ ಮೇಲ್ಭಾಗದಲ್ಲಿ ಒಂದು ತೆರೆಯುವಿಕೆ ಇದೆ. ದ್ವಾರಪಾಲಕರನ್ನು ಕಂಬಗಳ ಮೇಲೆ ಕೆತ್ತಲಾಗಿದೆ. ವಿವಿಧ ಹಿಂದೂ ದೇವತೆಗಳು ಮತ್ತು ಪೌರಾಣಿಕ ದೃಶ್ಯಗಳ ಸಂಕೀರ್ಣ ಕೆತ್ತನೆಗಳು ದೇವಾಲಯದ ಹೊರ ಗೋಡೆಗಳನ್ನು ಅಲಂಕರಿಸುತ್ತವೆ.
ಶಿವನ ದರ್ಶನ ಪಡೆದು ಧನ್ಯರಾದೆವು. ಪೂಜಾ ಸಾಮಾಗ್ರಿಗಳನ್ನು ತಂದಿದ್ದೆವು. ನಾವೇ ಲಿಂಗದ ಮೇಲೆ ಅರ್ಪಿಸಿ ತಂದ ನೀರನ್ನು ಲಿಂಗದ ಮೇಲೆ ಅಭಿಷೇಕ ಮಾಡಲು ಅನುಮತಿ ಕೊಟ್ಟರು. ಲಿಂಗರೂಪಿ ಶಿವನನ್ನು ನೋಡಿ ಪುನೀತರಾದೆವು. ಹಾಗೆ ಕಣ್ಣು ಮುಚ್ಚಿ ಸ್ವಲ್ಪ ಹೊತ್ತು ನಿಂತಿರಲು ಮುಂದೆ ಹೋಗಿ ಎಂದು ಎಲ್ಲರನ್ನು ಮುಂದೆ ಕಳುಹಿಸಿದರು. ಇಂಥ ಪವಿತ್ರ ಕ್ಷೇತ್ರದಲ್ಲಿ ಶಿವನ ದರ್ಶನ ಪಡೆದ ಧನ್ಯತೆಯಿಯಿಂದ ಹೊರಗೆ ಬಂದೆವು. ಅಲ್ಲೇ ಸ್ವಲ್ಪ ಹೊತ್ತು ವಿಶ್ರಮಿಸಿ, ಅಲ್ಲೇ ಪಕ್ಕ ಇದ್ದ ಢಾಬಾದಲ್ಲಿ ಒಂದು ಟೀ ಕುಡಿದು ಮತ್ತೆ ಪಾರ್ಕಿಂಗ್ ಕಡೆ ನಡೆದು ಹೊರಟೆವು. ನಂತರ ಜೀಪ್ ಹತ್ತಿ ಮತ್ತೆ ಋಷಿಕೇಶದ ಕಡೆಗೆ ಪ್ರಯಾಣ ಬೆಳೆಸಿ ಮತ್ತೊಮ್ಮೆ ಪ್ರಕೃತಿಯ ಸೊಬಗು ನೋಡುತ್ತಾ ಆಶ್ರಮಕ್ಕೆ ಮರಳಿ ಬಂದೆವು.

ನೀಲಕಂಠ ಮಹಾದೇವ ದೇವಾಲಯವು ಕೇವಲ ಧಾರ್ಮಿಕ ಸ್ಥಳಕ್ಕಿಂತ ಹೆಚ್ಚಿನದಾಗಿದೆ; ನಮ್ಮ ಯಾಂತ್ರಿಕ ಜೀವನವನ್ನು ಬಿಟ್ಟು ಮೌನಕ್ಕೆ ಜಾರಿದಂತೆ ಭಾಸವಾಗುತ್ತದೆ. ಇದು ಶಿವಲಿಂಗ, ಪವಿತ್ರ ಬುಗ್ಗೆ ಮತ್ತು ಸುತ್ತಮುತ್ತಲಿನ ಕಾಡುಗಳು ಮತ್ತು ಭೂದೃಶ್ಯಗಳ ನೈಸರ್ಗಿಕ ಸೌಂದರ್ಯ ಆಧ್ಯಾತ್ಮಿಕತೆ, ಪ್ರಕೃತಿ ಮತ್ತು ಸಾಹಸದ ಪ್ರತೀಕದ ಒಂದು ಪ್ರಯಾಣವಾಗಿದೆ. ಆಧ್ಯಾತ್ಮಿಕ ಶಕ್ತಿ, ನೈಸರ್ಗಿಕ ಸೌಂದರ್ಯ ಮತ್ತು ರೋಮಾಂಚಕ ಸಾಹಸಗಳ ಸಂಯೋಜನೆಯು ನೀಲಕಂಠ ಮಹಾದೇವ ದೇವಾಲಯವನ್ನು ಯಾತ್ರಿಕರು ಮತ್ತು ಪ್ರಯಾಣಿಕರು ಇಬ್ಬರೂ ಭೇಟಿ ನೀಡಲೇಬೇಕಾದ ತಾಣವನ್ನಾಗಿ ಮಾಡುತ್ತದೆ. ಪ್ರಕೃತಿಯೊಂದಿಗೆ ನಾವು ಮುಕ್ತವಾಗಿ ಸಂಭಾಷಿಸಬಹುದಾದ ಸ್ಥಳವೇ ಇದು.
ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಶಿವಲಿಂಗ, ಪವಿತ್ರ ಬುಗ್ಗೆ ಮತ್ತು ಸುತ್ತಮುತ್ತಲಿನ ಕಾಡುಗಳು ಮತ್ತು ಭೂದೃಶ್ಯಗಳ ನೈಸರ್ಗಿಕ ಸೌಂದರ್ಯ ಸೇರಿವೆ. ಋಷಿಕೇಶದ ಸಮೀಪದ ಆಕರ್ಷಣೆಗಳನ್ನು ಅನ್ವೇಷಿಸುವುದು: ರಾಮ್ ಜೂಲಾ, ಲಕ್ಷ್ಮಣ್ ಜೂಲಾ ಮತ್ತು ತ್ರಿವೇಣಿ ಘಾಟ್ ಮತ್ತು ನೀಲಕಂಠ ದೇವಾಲಯದಿಂದ ಸುಮಾರು 6 ಕಿಮೀ ದೂರದಲ್ಲಿರುವ ರಮಣೀಯ ನೀರ್ ಗಡ್ ಜಲಪಾತ, ನಂತರ, ಋಷಿಕೇಶದ ಕಡೆಗೆ ಹೋಗಿ, ಬೀಟಲ್ಸ್ ಆಶ್ರಮ ನೋಡಬಹದು.