Tuesday, September 15, 2026
Tuesday, September 15, 2026

ನೆನಪುಗಳನ್ನು ಕಟ್ಟಿಕೊಟ್ಟ ಕನ್ಯಾಕುಮಾರಿ ಪ್ರವಾಸ

ಭಾರತದ ದಕ್ಷಿಣ ತುದಿಯಲ್ಲಿರುವ ತಮಿಳುನಾಡು ರಾಜ್ಯದ ಕರಾವಳಿ ಪ್ರದೇಶವಾದ ಕನ್ಯಾಕುಮಾರಿ ಸೂರ್ಯೋದಯ ಮತ್ತು ಸೂರ್ಯಾಸ್ತ ವೀಕ್ಷಣೆಗೆ ಹೆಸರುವಾಸಿ

  • ಮೇಘಾ ಕಿರಿಮಂಜೇಶ್ವರ

ಭಾರತದ ದಕ್ಷಿಣ ತುದಿಯಲ್ಲಿರುವ ತಮಿಳುನಾಡು ರಾಜ್ಯದ ಕರಾವಳಿ ಪ್ರದೇಶವಾದ ಕನ್ಯಾಕುಮಾರಿ ಸೂರ್ಯೋದಯ ಮತ್ತು ಸೂರ್ಯಾಸ್ತ ವೀಕ್ಷಣೆಗೆ ಹೆಸರುವಾಸಿ. ಸಮುದ್ರದ ಮಧ್ಯಭಾಗದಲ್ಲಿ ಸ್ವಾಮಿ ವಿವೇಕಾನಂದ ರಾಕ್ ಸ್ಮಾರಕ ಹಾಗೂ ತಿರುವಳ್ಳುವರ್ ಪ್ರತಿಮೆಯನ್ನು ವೀಕ್ಷಿಸಲು ದೋಣಿಯ ಮೂಲಕ ತೆರಳಬೇಕು.

ಒಂದಿಷ್ಟು ಪ್ರವಾಸಿ ತಾಣಗಳ ಬಗ್ಗೆ ಪಠ್ಯಪುಸ್ತಕಗಳಲ್ಲಿ ಓದಿದಾಗ ಅಲ್ಲಿಗೊಮ್ಮೆ ಹೋಗಬೇಕು ಎಂದೆನಿಸುತ್ತದೆ. ಹಾಗೆ ಹೋಗಬೇಕು ಅಂದುಕೊಂಡ ಸ್ಥಳಗಳು ಬಹಳಷ್ಟಿದ್ದರೂ ಈ ಬಾರಿ ನಾನು, ಅಣ್ಣ ಹಾಗೂ ಸ್ನೇಹಿತರು ತಮಿಳುನಾಡಿನ ಕನ್ಯಾಕುಮಾರಿ, ಸುಚೀಂದ್ರಂ, ಕೇರಳದ ಅನಂತಪದ್ಮನಾಭ ದೇವಾಲಯ ಹಾಗೂ ಅಲ್ಲಿನ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡಿದೆವು.

ಬೆಂಗಳೂರಿನ ಸ್ವಾಮಿ ವಿವೇಕಾನಂದ ರೈಲ್ವೇ ನಿಲ್ದಾಣದಿಂದ ಸಂಜೆ ಹೊರಟು ಬೆಳಗ್ಗೆ ನಾಗರಕೋಯಿಲ್‌ ನಿಲ್ದಾಣವನ್ನು ತಲುಪಿ ಮುಂಚಿತವಾಗಿಯೇ ವ್ಯವಸ್ಥೆ ಮಾಡಿಕೊಂಡ ವಸತಿಗೃಹದಲ್ಲಿ ತಯಾರಿಯಾಗಿ ಕನ್ಯಾಕುಮಾರಿಯ ವಿವೇಕಾನಂದ ರಾಕ್ ಕಡೆಗೆ ತೆರಳಿದೆವು.

ವಿವೇಕಾನಂದ ರಾಕ್ ಸ್ಮಾರಕ

ಭಾರತದ ದಕ್ಷಿಣ ತುದಿಯಲ್ಲಿರುವ ತಮಿಳುನಾಡು ರಾಜ್ಯದ ಕರಾವಳಿ ಪ್ರದೇಶವಾದ ಕನ್ಯಾಕುಮಾರಿ ಸೂರ್ಯೋದಯ ಮತ್ತು ಸೂರ್ಯಾಸ್ತ ವೀಕ್ಷಣೆಗೆ ಹೆಸರುವಾಸಿ. ಸಮುದ್ರದ ಮಧ್ಯಭಾಗದಲ್ಲಿ ಸ್ವಾಮಿ ವಿವೇಕಾನಂದ ರಾಕ್ ಸ್ಮಾರಕ ಹಾಗೂ ತಿರುವಳ್ಳುವರ್ ಪ್ರತಿಮೆಯನ್ನು ವೀಕ್ಷಿಸಲು ದೋಣಿಯ ಮೂಲಕ ತೆರಳಬೇಕು. ಅಲ್ಲಿಗೆ ಹೋಗಲು ಪ್ರತಿ ವ್ಯಕ್ತಿಯೂ ಟಿಕೆಟ್‌ ಪಡೆಯಬೇಕು. ಸಾಮಾನ್ಯ ಟಿಕೆಟ್‌ಗೆ 100 ರು. ಹಾಗೂ ವಿಶೇಷ ಟಿಕೆಟ್‌ಗೆ 300 ರು. ದರ. ಟಿಕೆಟ್‌ ಪಡೆಯಲು ಆನ್‌ಲೈನ್‌ ಹಾಗೂ ಆಫ್‌ಲೈನ್ ಎರಡೂ ವ್ಯವಸ್ಥೆಗಳಿವೆ.

Untitled design - 2026-09-15T113457.791

ನಾವು ಅಲ್ಲಿಗೆ ಹೋದ ಸಂದರ್ಭದಲ್ಲಿ ನೀರಿನ ಮಟ್ಟವು ಕಡಿಮೆ ಇರುವುದರಿಂದ ದೋಣಿ ಹೋಗವುದು ಕಷ್ಟ ಎಂಬ ಕಾರಣಕ್ಕೆ 11 ಗಂಟೆಗೆ ಶುರುವಾಗಬೇಕಿದ್ದ ದೋಣಿ ಸೇವೆಯು 1 ಗಂಟೆಗೆ ಮುಂದೂಡಲಾಯಿತು. ಹಾಗಾಗಿ ಹತ್ತಿರದಲ್ಲಿರುವ ಶ್ರೀ ಭಗವತಿ ಅಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನವನ್ನು ಪಡೆದು ಅಲ್ಲಿನ ಸುತ್ತಲಿನ ಪರಿಸರವನ್ನು ವೀಕ್ಷಿಸಿದೆವು. ಇದೊಂದು ಹಳೆಯ ಕಾಲದ ಶೈಲಿಯ ದೇವಸ್ಥಾನವಾಗಿದ್ದು, ಆ ಕಾಲದ ಭವ್ಯತೆಯನ್ನು ಕಣ್ಣಮುಂದೆ ತಂದಿಡುತ್ತದೆ. ಅಲ್ಲಿ ಕಾಲ ಕಳೆದಷ್ಟೂ ಇನ್ನೂ ಹೆಚ್ಚು ಹೊತ್ತು ಅಲ್ಲೇ ಇರಬೇಕು ಅನಿಸುತ್ತದೆ. ಇಡೀ ದೇವಸ್ಥಾನದ ವಾತಾವರಣವೇ ಚಕ್ರವ್ಯೂಹದಂತೆ ಭಾಸವಾಗುತ್ತದೆ. ಅಷ್ಟು ವಿಶೇಷವಾದ ವಿನ್ಯಾಸ ಈ ದೇವಾಲಯದ ನಿರ್ಮಾಣ. ತಿರುಗಿ ತಿರುಗಿ ಅದೇ ಜಾಗಕ್ಕೆ ಬರುತ್ತಿದ್ದೇವೇನೋ ಎಂಬ ಅನುಭವ ನೀಡುತ್ತದೆ.

ಇದನ್ನೂಓದಿ:ಹೈಟೆಕ್ ಹಾದಿಯಲ್ಲಿ ಕರ್ನಾಟಕ ಟೂರಿಸಂ

ನಂತರ 1 ಗಂಟೆಗೆ ದೋಣಿ ಸೇವೆ ಪ್ರಾರಂಭವಾಗಿ, ನಾವು ವಿವೇಕಾನಂದ ರಾಕ್ ಮೆಮೋರಿಯಲ್ ಕಡೆಗೆ ಸಾಗಿದೆವು. ದೋಣಿಯಲ್ಲಿ ಸುಮಾರು 150 ರಿಂದ 200 ಜನರು ಹೋಗಲು ಅವಕಾಶವಿದ್ದು, ಪ್ರತಿಯೊಬ್ಬರಿಗೂ ಸುರಕ್ಷಿತ ಜಾಕೆಟ್ ನೀಡಲಾಗುತ್ತದೆ. ಪ್ರವೇಶ ದ್ವಾರದಿಂದ ವಿವೇಕಾನಂದ ರಾಕ್ ಮೆಮೋರಿಯಲ್ ಸ್ಥಳಕ್ಕೆ 5 ರಿಂದ 10 ನಿಮಿಷಗಳ ಪ್ರಯಾಣವಷ್ಟೆ. ಅಲೆಗಳ ಮಧ್ಯೆ ದೋಣಿ ಪ್ರಯಾಣವೇ ಮನಸಿಗೆ ಖುಷಿ ನೀಡುವ ಅನುಭವ.

Untitled design - 2026-09-15T114207.240

ಸ್ವಾಮಿ ವಿವೇಕಾನಂದ ರಾಕ್ ಮೆಮೋರಿಯಲ್ ಒಳಗೆ ಹೋಗಲು ಇನ್ನೊಂದು 30 ರು. ಟಿಕೆಟ್ ಪಡೆಯಬೇಕು. ಅಲ್ಲಿಂದ ಒಳಗೆ ಪ್ರವೇಶಿಸುತ್ತಿದ್ದಂತೆ ರಾಮಕೃಷ್ಣ ಪರಮಹಂಸ, ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ಸ್ಮಾರಕ ಕಾಣಿಸುತ್ತದೆ. ಅಲ್ಲೇ ಪಕ್ಕದಲ್ಲಿ ಧ್ಯಾನ ಕೇಂದ್ರವಿದೆ. ಒಳಗೆ ಪ್ರವೇಶಿಸುತ್ತಿದ್ದಂತೆ ಓಂಕಾರದ ಸ್ವರ ಕೇಳಿಸುತ್ತದೆ. ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತು ಧ್ಯಾನ ಮಾಡಿ ನಂತರ ಹೊರ ತೆರಳಿದೆವು. ಅದರ ಹಿಂದೆಯೇ ಪುಸ್ತಕದ ಅಂಗಡಿಗಳೂ ಇವೆ. ಹಾಗೇ ಮುಂದೆ ನಡೆದರೆ ತಿರುವಳ್ಳುವರ್ ಪ್ರತಿಮೆ ಇದೆ. ಪ್ರತಿಮೆಗೆ ಹೋಗುವ ದಾರಿಯನ್ನು ಸಮುದ್ರದ ಅಲೆಗಳು ಕಾಣಿಸುವ ಹಾಗೆ ಗಾಜಿನಲ್ಲಿ ನಿರ್ಮಿಸಲಾಗಿದೆ. ಅಲ್ಲಿಂದ ಹಾಗೇ ಮುಂದೆ ಸಾಗಿದರೆ 133 ಅಡಿ ಎತ್ತರದ ತಿರುವಳ್ಳುವರ್ ಪ್ರತಿಮೆಯನ್ನು ಕಾಣಬಹುದು. ಈ ಪ್ರತಿಮೆಯನ್ನು ಪ್ರಸಿದ್ಧ ಶಿಲ್ಪಿ ವಿ. ಗಣಪತಿ ಸ್ಥಾಪತಿ ಕೆತ್ತನೆ ಮಾಡಿದ್ದಾರೆ. ಈ ಪ್ರತಿಮೆಯ ಎತ್ತರವು ತಿರುವಳ್ಳುವರ್ ಅವರ ಪ್ರಮುಖ ಕೃತಿಯಾದ ತಿರುಕ್ಕುರಲ್‌ನ 133 ಅಧ್ಯಾಯಗಳನ್ನು ಸೂಚಿಸುತ್ತದೆ.

ಇದನ್ನೂಓದಿ:ಗಲ್ಲು ಗಲ್ಲೆನುತಾ!

ಸಂಜೆ ಕನ್ಯಾಕುಮಾರಿಯ ಸಮುದ್ರದ ಅಲೆಗಳ ಸದ್ದು, ತಂಪಾದ ಗಾಳಿ ಅಲ್ಲಿನ ವಾತಾವರಣವನ್ನು ಸೂರ್ಯಾಸ್ತ ನೋಡುತ್ತಾ ಅನುಭವಿಸಿದೆವು.

ಸುಚೀಂದ್ರ ದೇವಾಲಯ

ಮರುದಿನ ಬೆಳಗ್ಗೆ ಸುಚೀಂದ್ರ ದೇವಾಲಯದ ಕಡೆಗೆ ಹೊರಟೆವು. ಈ ಜಾಗವು ಕನ್ಯಾಕುಮಾರಿಯಿಂದ ಸುಮಾರು 11 ಕಿಮೀ. ಹಾಗೂ ನಾಗರಕೋಯಿಲ್‌ನಿಂದ 7 ಕಿಮೀ. ದೂರದಲ್ಲಿದೆ. ಈ ದೇವಾಲಯವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಿಗೆ ಸಮರ್ಪಿತವಾದ ಪ್ರಾಚೀನ ತನುಮಲಯನ್ ದೇವಾಲಯಕ್ಕೆ ಜಾಗತಿಕವಾಗಿ ಹೆಸರುವಾಸಿಯಾಗಿದೆ. ತ್ರಿಮೂರ್ತಿಗಳು ಮಾತ್ರವಲ್ಲದೆ ಗಣೇಶ, ಸುಬ್ರಹ್ಮಣ್ಯ, ಕಾಲಭೈರವ, ಹನುಮಂತ ಹೀಗೆ ಅನೇಕ ದೇವರುಗಳ ಮೂರ್ತಿಗಳನ್ನು ನಾವು ಕಾಣಬಹುದು. ದೇವಸ್ಥಾನದ ಒಳಗಿನ ಶೈಲಿಯು ಪ್ರವಾಸಿಗರ ಮನ ಸೆಳೆಯುತ್ತದೆ. ಹಾಗೆ ದೇವಸ್ಥಾನದ ಎಡಭಾಗದಲ್ಲಿ ಮಧ್ಯ ಮಂಟಪವಿದ್ದು ಸುತ್ತಲೂ ನೀರಿರುವ ತೀರ್ಥಕೆರೆಯು ಕಾಣಸಿಗುತ್ತದೆ.

Untitled design - 2026-09-15T115043.792

ಅನಂತಪದ್ಮನಾಭ ದೇವಾಲಯ

ಸುಚೀಂದ್ರ ದೇವಾಲಯದಿಂದ ನಂತರ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಕಡೆಗೆ ಹೊರಟೆವು. ಸುಚೀಂದ್ರ ದೇವಸ್ಥಾನದಿಂದ ಅನಂತಪದ್ಮನಾಭ ಸ್ವಾಮಿ ದೇವಾಲಯಕ್ಕೆ ಸುಮಾರು 75 ಕಿಮೀ. (1.30 ಗಂಟೆಯ ಹಾದಿ) ದೂರವಾಗುತ್ತದೆ. ದೇವಸ್ಥಾನದ ಒಳಗೆ ಹೋಗುವ ಭಕ್ತರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಒಳ ಪ್ರವೇಶಿಸಬೇಕು. 108 ಪವಿತ್ರ ದಿವ್ಯದೇಶಂ ದೇವಾಲಯಗಳಲ್ಲಿ ಒಂದಾಗಿರುವ ಈ ದೇವಸ್ಥಾನವು ದ್ರಾವಿಡ-ಕೇರಳ ವಾಸ್ತುಶಿಲ್ಪ, ಏಳು ಹಂತದ ಗೋಪುರ ಮತ್ತು ಅಪಾರ ಭೂಗತ ಸಂಪತ್ತಿಗೆ ಪ್ರಸಿದ್ಧಿಯಾಗಿದೆ. ದೇವಸ್ಥಾನದಲ್ಲಿ ಕಟ್ಟುನಿಟ್ಟಿನ ನಿಯಮಗಳಿದ್ದು, ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಕ್ಯಾಮೆರಾ, ಬ್ಯಾಗ್, ಎಲೆಕ್ಟ್ರಾನಿಕ್ ವಸ್ತುಗಳನ್ನು ಒಳಗೆ ಕೊಂಡೊಯ್ಯುವಂತಿಲ್ಲ. ದೇವಸ್ಥಾನಗಳಲ್ಲಿ ನಾವು ಸರದಿ ಸಾಲಿನಲ್ಲಿ ನಿಂತು ಕಾದು ದರ್ಶನ ಪಡೆಯುವುದು ಸಹಜ. ಆದರೆ ಇಲ್ಲಿ ದರ್ಶನ ಪಡೆಯಲು 1.30- 2.00 ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಲ್ಲಬೇಕು. ವಿಶೇಷ ದರ್ಶನವನ್ನು ಪಡೆಯುವವರು ಅಲ್ಲಿ ನಿಗದಿ ಪಡಿಸಿರುವ ಹಣವನ್ನು ನೀಡಿ ದರ್ಶನ ಪಡೆಯಬಹುದು.

Untitled design - 2026-09-15T113705.777

ನಾವು ದೇವಸ್ಥಾನವನ್ನು ಪ್ರವೇಶಿಸುವ ಹೊತ್ತಿಗಾಗಲೇ ಸರದಿ ಸಾಲು ಇನ್ನೊಂದು ದ್ವಾರದವರೆಗೆ ತಲುಪಿತ್ತು. ಹಾಗೇ ಕಾದು ಮುಂದೆ ಸಾಗಿ ದೇವರ ದರ್ಶನವನ್ನು ಪಡೆದೆವು. ಅನಂತ ಶಯನ ಭಂಗಿಯಲ್ಲಿರುವ ವಿಷ್ಣುವಿನ ದರ್ಶನ ಪಡೆದಾಗ ಸಾಲಿನಲ್ಲಿ ಅಷ್ಟು ಸಮಯ ಕಾದಿರುವುದು ಏನು ಬೇಸರವೆನಿಸಲಿಲ್ಲ. ದರ್ಶನ ಕೇವಲ ಕೆಲವು ಸೆಕೆಂಡುಗಳಾದರೂ ಮನಸಿಗೆ ದೇವರನ್ನು ಕಂಡ ಸಂತಸ. ಹೊರಗೆ ಬರುವಾಗ ಏನೋ ಒಂದು ರೀತಿಯ ನೆಮ್ಮದಿ.

ಆಝಿಮಾಲ ಶಿವ ದೇವಾಲಯ

ಅನಂತಪದ್ಮನಾಭನ ದರ್ಶನ ಪಡೆದು ನಂತರ ಹೊರಟಿದ್ದು ಆಝಿಮಾಲ ಶಿವನ ದೇವಸ್ಥಾನಕ್ಕೆ. ಇಲ್ಲಿ 58 ಅಡಿ ಎತ್ತರದ ಗಂಗಾಧರೇಶ್ವರನ ಮೂರ್ತಿಯಿದೆ. ಅದರ ಸುತ್ತಲೂ ಸಮುದ್ರವಿದ್ದು, ಸುತ್ತಲಿನ ಪರಿಸರವು ನೋಡಲು ಸುಂದರವಾಗಿದೆ. ಒಳಗಡೆ ಪ್ರವೇಶಿಸಲು ವ್ಯಕ್ತಿ ಒಬ್ಬರಿಗೆ 100 ರು ನೀಡಿ ಟಿಕೆಟ್ ಪಡೆಯಬೇಕು. ಗಂಗಾಧರೇಶ್ವರನ ಮೂರ್ತಿಯ ಬಳಿ ಹೋಗುತ್ತಿದ್ದಂತೆ ಸಣ್ಣ ಗುಹೆ ಕಾಣುತ್ತದೆ. ಗುಹೆಯ ಒಳಗೆ ಹೋದಂತೆ ಸಿಮೆಂಟಿನಿಂದ ತಯಾರಿಸಿದ ಶಿವ ಪಾರ್ವತಿಯರ ಹಾಗೂ ಅವರ ಇತಿಹಾಸದ ಒಂದಿಷ್ಟು ಸಂಗತಿಗಳ ಕಲೆಗಳು ಅಲ್ಲಿವೆ. ಶಿವನ ಶಿಲ್ಪವು ಆ ರಾಜ್ಯದ ಅತಿ ಎತ್ತರದ ಶಿಲ್ಪವಾಗಿ ಪ್ರಸಿದ್ಧಿಪಡೆದಿದೆ.

Untitled design - 2026-09-15T114745.479

ನಮ್ಮ ಈ ಎರಡು ದಿನದ ಪ್ರವಾಸದಲ್ಲಿ ಕಳೆದಿರುವ ಕ್ಷಣಗಳು, ಪಯಣ, ಹರಟೆ, ಎಲ್ಲವೂ ನಿಜಕ್ಕೂ ಮರೆಯಲಾಗದಷ್ಟು ನೆನಪುಗಳು ಕಟ್ಟಿಕೊಟ್ಟಿದೆ.

ಮಾಹಿತಿ ಪೆಟ್ಟಿಗೆ:

* ಕನ್ಯಾಕುಮಾರಿ ಸೂರ್ಯೋದಯ ಮತ್ತು ಸೂರ್ಯಾಸ್ತ ವೀಕ್ಷಣೆಗೆ ಹೆಸರುವಾಸಿ.

*ಸಮೀಪದಲ್ಲೇ ವಟ್ಟಕೊಟ್ಟೈ ಎಂಬ ಕೋಟೆಯಿದೆ. ಅಲ್ಲಿಗೂ ಭೇಟಿ ನೀಡಬಹುದು.

*108 ಪವಿತ್ರ ದಿವ್ಯಾದೇಶಂ ದೇವಾಲಯಗಳಲ್ಲಿ ಒಂದಾಗಿರುವ ಅನಂತಪದ್ಮನಾಭ ದೇವಸ್ಥಾನವು ದ್ರಾವಿಡ-ಕೇರಳ ವಾಸ್ತುಶಿಲ್ಪ, ಏಳು ಹಂತದ ಗೋಪುರ ಮತ್ತು ಅಪಾರ ಭೂಗತ ಸಂಪತ್ತಿಗೆ ಪ್ರಸಿದ್ಧಿಯಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ