ಗುಪ್ತಕಾಶಿ ವಿಶ್ವನಾಥ ದೇಗುಲ ಶಿವ ಇಲ್ಲಿ ಅಡಗಿ ಕುಳಿತಿದ್ದ
ದೇವಾಲಯವು ಉತ್ತರ ಭಾರತದ ದೇವಾಲಯ ನಿರ್ಮಾಣ ಕಲೆಯ ಅದ್ಭುತ ಉದಾಹರಣೆಯಾಗಿದೆ. ಗರ್ಭಗುಡಿಯಲ್ಲಿ ವಿರಾಜಮಾನನಾಗಿರುವ ವಿಶ್ವನಾಥ ಶಿವಲಿಂಗದ ದರ್ಶನ ಭಕ್ತರ ಮನಸಿಗೆ ಅಪಾರ ಶಾಂತಿ ನೀಡುತ್ತದೆ
- ವೆಂಕಟೇಶ್ ಮುದಗಲ್
ಹಿಮಾಲಯವು ಭಾರತದ ಕಿರೀಟವಾದರೆ `ಗುಪ್ತಕಾಶಿ ಅದರ ಹೃದಯʼ. ಅಲ್ಲಿ ಕೇಳಿಬರುವುದು ಕೇವಲ ಘಂಟಾನಾದವಲ್ಲ, ಯುಗಯುಗಗಳಿಂದ ಪ್ರತಿಧ್ವನಿಸುತ್ತಿರುವ ಶಿವನ ಕರೆಯೂ ಹೌದು. ಬೆಳಗಿನ ಸೂರ್ಯಕಿರಣಗಳು ಹಿಮಶಿಖರಗಳ ಮೇಲೆ ಬಂಗಾರದ ಹೊಳಪನ್ನು ಚೆಲ್ಲುತ್ತಿದ್ದರೆ, ಮಂದಾಕಿನಿ ನದಿಯ ಕಲಕಲ ನಾದವು ಪ್ರಕೃತಿಯ ಸಂಗೀತವಾಗಿ ಕಿವಿಗಳಿಗೆ ಆನಂದ ನೀಡುತ್ತದೆ. ದೇವದಾರು ಮರಗಳ ಪರಿಮಳ ಗಾಳಿಯಲ್ಲಿ ಬೆರೆತು ಮನಸನ್ನು ಪುಳಕಗೊಳಿಸುತ್ತದೆ. ಅಂಥ ದಿವ್ಯ ವಾತಾವರಣದಲ್ಲಿ ಶತಮಾನಗಳ ಇತಿಹಾಸವನ್ನು ತನ್ನೊಳಗೆ ಹೊತ್ತು ನಿಂತಿರುವ ಪುಣ್ಯಕ್ಷೇತ್ರ ಗುಪ್ತಕಾಶಿ

ನಾನು ಪ್ರವಾಸಪ್ರಿಯ. ಪ್ರತಿ ಪ್ರವಾಸವೂ ನನ್ನಲ್ಲಿ ಹೊಸ ಚೇತನ ಹುಟ್ಟುಹಾಕುತ್ತದೆ. ಸೇವೆಯಿಂದ ನಿವೃತ್ತಿಯಾದ ಮೇಲಂತೂ ಕಾಲಿಗೆ ಗಾಲಿ ಕಟ್ಟಿಕೊಂಡಂತೆ ತಿರುಗಾಡುತ್ತಿರುವೆ. ಹೀಗಾಗಿ ನನ್ನ ಪಾಲಿಗೆ ಪ್ರತಿ ಪ್ರವಾಸವೂ ಸಂತೋಷದ ಅವಧಿಯನ್ನು ವಿಸ್ತರಿಸುವ, ಮನಸಿಗೆ ಶಾಂತಿ ನೀಡುವ, ಬದುಕಿನ ಅರ್ಥವನ್ನು ಮತ್ತಷ್ಟು ಸಮೃದ್ಧಗೊಳಿಸುವ ಪವಿತ್ರ ಆತ್ಮಯಾತ್ರೆ. ಈ ಬಾರಿ ನಾವು ದಂಪತಿ ಕೇದಾರನಾಥ ಮತ್ತು ಬದರಿನಾಥ ಧಾಮಗಳ ಯಾತ್ರೆ ಕೈಗೊಂಡಿದ್ದೆವು. ಕಲಬುರಗಿಯಿಂದ ಕರ್ನಾಟಕ ಎಕ್ಸಪ್ರೆಸ್ ಮೂಲಕ ನವದೆಹಲಿಗೆ ತಲುಪಿ, ಅಲ್ಲಿಂದ ಮಿನಿ ಬಸ್ ಮೂಲಕ ಹರಿದ್ವಾರ ನೋಡಿಕೊಂಡು ಕೇದಾರನಾಥ ಧಾಮದತ್ತ ಹೊರಟೆವು. ನಮ್ಮ ಗೈಡ್ ಗುಂಡಾಚಾರ್ಯ ನರಿಬೋಳ್ ಅವರು ಸೋನ್‌ಪ್ರಯಾಗಕ್ಕೂ 28 ಕಿಮೀ ಮೊದಲೇ ಸಿಗುವ ಇನ್ನೊಂದು ಪುರಾಣ ಮಹತ್ವದ ತಾಣಕ್ಕೆ ಕರೆದೊಯ್ದರು. ಅದು ‘ಗುಪ್ತ ಕಾಶಿ’. ಇಲ್ಲಿಗೆ ಹೋಗಲು, ನಮ್ಮ ವಾಹನಗಳಿಂದ ಇಳಿದು ಮುಖ್ಯ ರಸ್ತೆಯಲ್ಲಿ ಸಿಗುವ ಜೀಪ್‌ಗಳ ಮೂಲಕ ಸಾಗಬೇಕು.
ಇದನ್ನೂಓದಿ:ಇದು ಸೆಲ್ಫ್ ಮಾರ್ಕೆಟಿಂಗ್ ಜಮಾನ
ಗುಪ್ತಕಾಶಿ
ʻಹಿಮಾಲಯವು ಭಾರತದ ಕಿರೀಟವಾದರೆ ಗುಪ್ತಕಾಶಿ ಅದರ ಹೃದಯʼ. ಅಲ್ಲಿ ಕೇಳಿಬರುವುದು ಕೇವಲ ಘಂಟಾನಾದವಲ್ಲ, ಯುಗಯುಗಗಳಿಂದ ಪ್ರತಿಧ್ವನಿಸುತ್ತಿರುವ ಶಿವನ ಕರೆಯೂ ಹೌದು. ಬೆಳಗಿನ ಸೂರ್ಯಕಿರಣಗಳು ಹಿಮಶಿಖರಗಳ ಮೇಲೆ ಬಂಗಾರದ ಹೊಳಪನ್ನು ಚೆಲ್ಲುತ್ತಿದ್ದರೆ, ಮಂದಾಕಿನಿ ನದಿಯ ಕಲಕಲ ನಾದವು ಪ್ರಕೃತಿಯ ಸಂಗೀತವಾಗಿ ಕಿವಿಗಳಿಗೆ ಆನಂದ ನೀಡುತ್ತದೆ. ದೇವದಾರು ಮರಗಳ ಪರಿಮಳ ಗಾಳಿಯಲ್ಲಿ ಬೆರೆತು ಮನಸನ್ನು ಪುಳಕಗೊಳಿಸುತ್ತದೆ. ಅಂಥ ದಿವ್ಯ ವಾತಾವರಣದಲ್ಲಿ ಶತಮಾನಗಳ ಇತಿಹಾಸವನ್ನು ತನ್ನೊಳಗೆ ಹೊತ್ತು ನಿಂತಿರುವ ಪುಣ್ಯಕ್ಷೇತ್ರ ಗುಪ್ತಕಾಶಿಯ ಶ್ರೀ ವಿಶ್ವನಾಥ ದೇವಾಲಯ. ಕೇದಾರನಾಥ ಯಾತ್ರೆಗೆ ಹೊರಡುವ ಲಕ್ಷಾಂತರ ಭಕ್ತರ ಮೊದಲ ಪ್ರಾರ್ಥನೆ ಇಲ್ಲಿಯೇ ಆರಂಭವಾಗುತ್ತದೆ. ಆದ್ದರಿಂದ ಇದನ್ನು ʼಕೇದಾರಯಾತ್ರೆಯ ದ್ವಾರʼ ಎಂದೂ ಕರೆಯುತ್ತಾರೆ.

ಮಹಾಭಾರತದ ನೆನಪು
ಕುರುಕ್ಷೇತ್ರ ಯುದ್ಧದ ನಂತರ ಪಾಂಡವರ ಮನಸು ಪಶ್ಚಾತ್ತಾಪದಿಂದ ಕಂಗಾಲಾಗಿತ್ತು. ಗುರುಗಳು, ಬಂಧುಗಳು ಮತ್ತು ಸ್ವಜನರ ಸಂಹಾರದ ಪಾಪದಿಂದ ವಿಮುಕ್ತಿ ಪಡೆಯಲು ಅವರು ಪರಶಿವನನ್ನು ಅರಸಿ ಬಂದಿದ್ದರು. ಆದರೆ, ಶಿವನು ತಕ್ಷಣ ದರ್ಶನ ನೀಡದೆ ಗುಪ್ತಕಾಶಿಯಲ್ಲಿ ಅಡಗಿಕೊಂಡನು ಎನ್ನಲಾಗಿದೆ. ನಂತರ ಕೇದಾರನಾಥದಲ್ಲಿ ನಂದಿಯ ರೂಪದಲ್ಲಿ ಪ್ರತ್ಯಕ್ಷನಾಗಿ ಪಾಂಡವರಿಗೆ ಅನುಗ್ರಹ ನೀಡಿದನು. ಈ ಕಾರಣದಿಂದಲೇ ಈ ಕ್ಷೇತ್ರಕ್ಕೆ ʼಗುಪ್ತಕಾಶಿʼ ಎಂಬ ಹೆಸರು ಬಂದಿದೆ ಎಂಬುದು ಅಲ್ಲಿನ ನಂಬಿಕೆ.
ಇದನ್ನೂಓದಿ:ಹಾಸನಾಂಬ ದೇಗುಲದಲ್ಲಿ ಕೆಎಸ್‌ಟಿಡಿಸಿ ಅಂಬಾರಿ
ಪ್ರೇಮಕ್ಕೆ ಸಾಕ್ಷಿಯಾದ ಪುಣ್ಯಭೂಮಿ
ಪುರಾಣಗಳ ಪ್ರಕಾರ ಇದೇ ಸ್ಥಳದಲ್ಲಿ ಶಿವನು ಪಾರ್ವತಿಗೆ ವಿವಾಹ ಪ್ರಸ್ತಾಪ ಮಾಡಿದನು. ನಂತರ ಸಮೀಪದ ತ್ರಿಯುಗಿನಾರಾಯಣದಲ್ಲಿ ದೇವತೆಗಳ ಸಮ್ಮುಖದಲ್ಲಿ ಅವರ ವಿವಾಹ ನೆರವೇರಿತು. ಹೀಗಾಗಿ ಗುಪ್ತಕಾಶಿ ಭಕ್ತಿಯ ಜತೆಗೆ ಶಾಶ್ವತ ದಾಂಪತ್ಯದ ಸಂಕೇತವೂ ಆಗಿದೆ. ಪ್ರಾಚೀನ ಕಲ್ಲಿನ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾದ ದೇವಾಲಯವು ಉತ್ತರ ಭಾರತದ ದೇವಾಲಯ ನಿರ್ಮಾಣ ಕಲೆಯ ಅದ್ಭುತ ಉದಾಹರಣೆಯಾಗಿದೆ. ಗರ್ಭಗುಡಿಯಲ್ಲಿ ವಿರಾಜಮಾನನಾಗಿರುವ ವಿಶ್ವನಾಥ ಶಿವಲಿಂಗದ ದರ್ಶನ ಭಕ್ತರ ಮನಸಿಗೆ ಅಪಾರ ಶಾಂತಿ ನೀಡುತ್ತದೆ. ಆವರಣದಲ್ಲಿನ ಅರ್ಧನಾರೀಶ್ವರ ದೇವಾಲಯ ಶಿವ-ಶಕ್ತಿಯ ಸಮತೋಲನದ ಸಂದೇಶ ಸಾರಿದರೆ, ಅಲ್ಲಿಯೇ ಮಣಿಕರ್ಣಿಕಾ ಕುಂಡದಲ್ಲಿ ಗೋಮುಖ ಮತ್ತು ಗಜಮುಖಗಳಿಂದ ಹರಿಯುವ ಜಲಧಾರೆಗಳು ಭಕ್ತರ ಭಾವನೆಗಳನ್ನು ಮತ್ತಷ್ಟು ಪವಿತ್ರಗೊಳಿಸುತ್ತವೆ. ಗುಪ್ತಕಾಶಿಯಲ್ಲಿ ಕೆಲವೇ ಕ್ಷಣ ನಿಂತರೆ ಸಾಕು. ಹಿಮಗಾಳಿಯ ಸ್ಪರ್ಶ, ದೇವಾಲಯದ ಘಂಟಾನಾದ, ವೇದಮಂತ್ರಗಳ ಘೋಷ ಮತ್ತು ಮಂದಾಕಿನಿಯ ಜುಳುಜುಳು ಸಂಗೀತ ನಮ್ಮೊಳಗಿನ ‘ನಕಾರ’ವನ್ನು ಕರಗಿಸುತ್ತವೆ. ಈ ಗುಪ್ತಕಾಶಿಗೆ ಒಮ್ಮೆ ಭೇಟಿ ನೀಡಿ. ಅಲ್ಲಿ ನೀವು ನೋಡುವುದು ಒಂದು ದೇವಾಲಯವಲ್ಲ; ಸಾವಿರಾರು ವರ್ಷಗಳಿಂದ ಜೀವಂತವಾಗಿರುವ ಭಾರತದ ಆಧ್ಯಾತ್ಮಿಕ ಪರಂಪರೆ.

ಮಾಹಿತಿ ಪೆಟ್ಟಿಗೆ:
ದರ್ಶನ ಸಮಯ: ಬೆಳಗ್ಗೆ 6.00-ರಾತ್ರಿ 9.00
ವಿಶೇಷ ಪೂಜೆಗಳಿಗಾಗಿ ದೇವಾಲಯದಲ್ಲಿ ಬುಕ್ಕಿಂಗ್ ವ್ಯವಸ್ಥೆ ಇದೆ.
ಕೇದಾರನಾಥ, ತ್ರಿಯುಗಿನಾರಾಯಣ, ಉಖಿಮಠ, ಕಾಳಿಮಠ, ಗೌರಿಕುಂಡ, ಚೋಪ್ತಾ ಮತ್ತು ತುಂಗನಾಥದಂಥ ಅದ್ಭುತ ಪ್ರವಾಸಿ ತಾಣಗಳು ಹತ್ತಿರದಲ್ಲೇ ಇವೆ
ದಾರಿ ಹೇಗೆ?
ಗುಪ್ತಕಾಶಿ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ಹತ್ತಿರದ ರೈಲು ನಿಲ್ದಾಣ ದೂರದ ಹೃಷಿಕೇಶ. ಹತ್ತಿರದ ವಿಮಾನ ನಿಲ್ದಾಣ ಜಾಲಿ ಗ್ರಾಂಟ್, ಡೆಹ್ರಾಡೂನ್. ಹರಿದ್ವಾರ, ಹೃಷಿಕೇಶ್, ರುದ್ರಪ್ರಯಾಗ.