ಕೇರಳ ಪ್ರವಾಸವೆಂದರೆ ಭಕ್ತಿ ಮತ್ತು ಪ್ರಕೃತಿ ಸೌಂದರ್ಯಗಳ ಸಂಗಮ
ಕೇರಳದ ನಿಜವಾದ ಸೌಂದರ್ಯವನ್ನು ಅರಿಯಲು ಅಲೆಪ್ಪಿಯ ಹೌಸ್‌ಬೋಟ್ ಯಾತ್ರೆ ಮಾಡಲೇಬೇಕು. ನಿಧಾನವಾಗಿ ಸಾಗುವ ಈ ಹೌಸ್‌ಬೋಟ್‌ನಲ್ಲಿ ಕುಳಿತುಕೊಂಡಾಗ ಸಮಯವೂ ನಿಧಾನಗತಿಯಲ್ಲಿ ಜಾರಿದಂತೆ ಅನಿಸುತ್ತದೆ. ಎರಡೂ ಬದಿಗಳಲ್ಲಿ ಸಾಲಾಗಿ ನಿಂತಿರುವ ತೆಂಗಿನ ಮರಗಳು, ನೀರಿನಲ್ಲಿ ಮೂಡುವ ಅವುಗಳ ಪ್ರತಿಬಿಂಬ—ನೋಡುಗರನ್ನು ಕವಿಯಾಗಿಸಬಲ್ಲವು.
- ನಿಕಿತಾ ಪವನ್ ಹುಯಿಲ್ಗೋಳ
ಕೇರಳ—ಹಸಿರಿನ ಹೊದಿಕೆಯ ಪ್ರಕೃತಿ ಮತ್ತು ಶಾಂತಿಯ ಸುಂದರ ಸಂಗಮ. ಕೆಲವೇ ದಿನಗಳ ಕಾಲ ಅತ್ತ ನಾನು ಪ್ರವಾಸ ಮಾಡಿದ್ದರೂ ಈ ನಾಡು ನೀಡಿದ ಅನುಭವಗಳು ಮನಸಿನಲ್ಲಿ ಶಾಶ್ವತವಾಗಿ ಅಚ್ಚೊತ್ತಿವೆ. ಭಕ್ತಿ, ಪ್ರಕೃತಿ ಸೌಂದರ್ಯ ಮೇಳೈಸಿಕೊಂಡಿರುವ ಕೇರಳದಲ್ಲಿ ಅಡ್ಡಾಡಿದ ಸ್ಥಳಗಳ ಸಣ್ಣ ಪರಿಚಯವಿದು.
ಇದನ್ನೂ ಓದಿ: ಗಿರ್‌ನ ಸಿಂಹ ಸಫಾರಿಯಲ್ಲಿ ಗೊರೂರು
ವಡಕ್ಕುನ್ನಾಥನ್ ದೇವಾಲಯ
ನಮ್ಮ ಪ್ರವಾಸದ ಮೊದಲ ಹೆಜ್ಜೆ ಆರಂಭವಾಗಿದ್ದು, ತ್ರಿಶೂರಿನ ಪ್ರಸಿದ್ಧ ವಡಕ್ಕುನ್ನಾಥನ್ ದೇವಾಲಯದಿಂದ. ಅಲ್ಲಿಗೆ ಕಾಲಿಡುತ್ತಿದ್ದಂತೆ ಒಂದು ಅನಿರ್ವಚನೀಯ ಶಾಂತಿ ಮನಸನ್ನು ಆವರಿಸುತ್ತದೆ. ಎತ್ತರದ ಮರಗಳ ನೆರಳಲ್ಲಿ ನೆಲೆಗೊಂಡಿರುವ ಈ ದೇವಾಲಯದ ವಾತಾವರಣವೇ ಧ್ಯಾನಕ್ಕೆ ಯೋಗ್ಯವಾದಂತಿದೆ. ಅಲ್ಲಿನ ಪ್ರತಿಯೊಂದು ಕ್ಷಣವೂ ನಮ್ಮ ಮನಸನ್ನು ನೆಮ್ಮದಿಯತ್ತ ಕರೆದೊಯ್ಯುತ್ತದೆ. ವಡಕ್ಕುನ್ನಾಥನ್ ದೇವಾಲಯದಿಂದ ಹೊರಟು ನಾವು ತಲುಪಿದ್ದು, ಗುರುವಾಯೂರಿನ ಶ್ರೀಕೃಷ್ಣ ದೇವಾಲಯಕ್ಕೆ. ʻಭೂಲೋಕ ವೈಕುಂಠʼವೆಂದು ಕರೆಯಲ್ಪಡುವ ಈ ಕ್ಷೇತ್ರದಲ್ಲಿ ಶ್ರೀ ಕೃಷ್ಣನ ದರ್ಶನ ಪಡೆದ ಕ್ಷಣ ಮನಸಿನ ಭಾರವೆಲ್ಲಾ ಹಗುರಾಗಿಬಿಡುತ್ತದೆ.

ಅಲೆಪ್ಪಿಯ ಹೌಸ್‌ಬೋಟ್ ಯಾತ್ರೆ
ಕೇರಳದ ನಿಜವಾದ ಸೌಂದರ್ಯವನ್ನು ಅರಿಯಲು ಅಲೆಪ್ಪಿಯ ಹೌಸ್‌ಬೋಟ್ ಯಾತ್ರೆ ಮಾಡಲೇಬೇಕು. ನಿಧಾನವಾಗಿ ಸಾಗುವ ಈ ಹೌಸ್‌ಬೋಟ್‌ನಲ್ಲಿ ಕುಳಿತುಕೊಂಡಾಗ ಸಮಯವೂ ನಿಧಾನಗತಿಯಲ್ಲಿ ಜಾರಿದಂತೆ ಅನಿಸುತ್ತದೆ. ಎರಡೂ ಬದಿಗಳಲ್ಲಿ ಸಾಲಾಗಿ ನಿಂತಿರುವ ತೆಂಗಿನ ಮರಗಳು, ನೀರಿನಲ್ಲಿ ಮೂಡುವ ಅವುಗಳ ಪ್ರತಿಬಿಂಬ—ನೋಡುಗರನ್ನು ಕವಿಯಾಗಿಸಬಲ್ಲವು. ಈ ಮಧ್ಯೆ ನಾವು ಸವಿದ ಸ್ಥಳೀಯ ಆಹಾರದ ರುಚಿ ಮತ್ತೊಂದು ವಿಶೇಷವಾಗಿತ್ತು. ತೆಂಗಿನ ಎಣ್ಣೆಯಲ್ಲಿ ತಯಾರಾದ ಊಟ, ಕರಕರೆ ಬಾಳೆ ಚಿಪ್ಸ್, ಸಿಹಿಯಾದ ಹಲ್ವಾ—ಪ್ರತಿ ತುಂಡೂ ಕೇರಳದ ಪಾಕ ಪದ್ದತಿಯನ್ನು ಪರಿಚಯಿಸುತ್ತದೆ.

ಮರಾರಿ ಬೀಚ್
ಮರಾರಿ ಬೀಚ್‌ನಲ್ಲಿ ಜನಸಂದಣಿ ಕಡಿಮೆ. ಹಾಗಾಗಿ ಅಲ್ಲಿನ ಪರಿಸರ ಸ್ವಚ್ಛ ಮತ್ತು ಸುಂದರವಾಗಿದೆ. ಸಮುದ್ರದ ನೀಲರಾಶಿ ಮತ್ತು ಮರಳಿನ ಬಿಳಿ, ವಿಶಾಲತೆ ಮತ್ತು ಶಾಂತಿಯನ್ನು ನಿಮಗಲ್ಲಿ ಭೋಧಿಸುತ್ತವೆ. ಮನಸನ್ನು ಮಂತ್ರಮುಗ್ಧಗೊಳಿಸುತ್ತವೆ. ಇಷ್ಟು ಅಡ್ಡಾಡಿದ ನಮಗೆ ಈ ಯಾತ್ರೆಯ ಸಿಹಿ ಅಂತ್ಯ ನೀಡಿದ್ದು ಅಂಬಲಪುಳ ದೇವಸ್ಥಾನ. ಅಲ್ಲಿ ದೊರೆತ ಸಿಹಿಯಾದ ʻಪಾಲು ಪಾಯಸʼ. ಅದರ ಸುವಾಸನೆ ಮತ್ತು ಸವಿ ನಮ್ಮ ಸಂಪೂರ್ಣ ಪ್ರವಾಸಕ್ಕೆ ಸಿಹಿಯಾದ ಅಂತ್ಯ ನೀಡಿತ್ತು.
ದಾರಿ ಹೇಗೆ?
ಕೊಚ್ಚಿ ಮತ್ತು ಕೋಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ತ್ರಿಶೂರ್‌ಗೆ ಹತ್ತಿರದ ವಿಮಾನ ನಿಲ್ದಾಣಗಳಾಗಿವೆ. ಬೆಂಗಳೂರಿನಿಂದ ತ್ರಿಶೂರ್‌ಗೆ ಖಾಸಗಿ ಬಸ್ ಸಂಚಾರ ವ್ಯವಸ್ಥೆ ಉತ್ತಮವಾಗಿದೆ.