ಗೋವಾ ಎಂಬ ಸಾಂಸ್ಕೃತಿಕ ಸಮ್ಮಿಲನದ ವಿಶಿಷ್ಟ ಅನುಭವ
ಗೋವಾದಲ್ಲಿ ಸುತ್ತಾಡಿದಷ್ಟೂ ಕಾಣುವುದು ಗೋಡಂಬಿ ಅಂಗಡಿಗಳು, ಮದ್ಯದ ಅಂಗಡಿಗಳು, ನೈಟ್ ಕ್ಲಬ್‌ಗಳು ಮಾತ್ರವಲ್ಲ. ಹಳೆ ಕಾಲದ ವಾಸ್ತುಶಿಲ್ಪ ಇರುವ ಅತಿ ಆಕರ್ಷಕ ಎನಿಸುವ ಮನೆಗಳು, ಐತಿಹಾಸಿಕ ಕಟ್ಟಡಗಳು, ವರ್ಣರಂಜಿತ ಗೋಡೆ, ಕಾಂಪೌಂಡ್‌ಗಳು, ಚರ್ಚ್ ಹಾಗೂ ದೇವಸ್ಥಾನಗಳು, ನೈಸರ್ಗಿಕ ವಸ್ತುಗಳಲ್ಲಿ ತಯಾರಿಸಿದ ಹ್ಯಾಟ್, ಪೀಠೋಪಕರಣ, ಆಭರಣಗಳು, ಡ್ರೀಂ ಕ್ಯಾಚರ್, ಮಣಿಸರಗಳು..ಒಟ್ಟಿನಲ್ಲಿ ಎಲ್ಲವೂ ಕಲಾತ್ಮಕವಾದವು. ಅಂದಹಾಗೆ ಈ ಊರು ಬದುಕಿರುವುದೇ ಕಲೆಯಿಂದ.
- ಸಿರಿ ಮೈಸೂರು
ಬೇಕಾದಷ್ಟು ದೇವಸ್ಥಾನಗಳು, ವಿಶಿಷ್ಟ ಸಂಸ್ಕೃತಿಗಳು, ಒಂದೆಡೆ ಪಾಶ್ಚಿಮಾತ್ಯ ದೇಶದ ತದ್ರೂಪದಂತೆ, ಇನ್ನೊಂದೆಡೆ ಸನಾತನ ಭಾರತದ ಭವ್ಯ ಕುರುಹಿನಂತೆ ಕಾಣಿಸುವ ದೃಶ್ಯಗಳು, ಕಣ್ಣಳತೆಗೂ ಮೀರಿ ಕಾಣಿಸುವ ಸಮುದ್ರ, ತೆಂಗಿನಮರಗಳ ಸಾಲು, ಸ್ವರ್ಗವೇ ಧರೆಗಿಳಿಯಿತು ಎನಿಸುವಷ್ಟರಲ್ಲಿ ಬಿಟ್ಟೂಬಿಡದಂತೆ ಕಾಡುವ ಹುಚ್ಚು ಸೆಖೆ, ಆಡಿದಷ್ಟೂ ಮುಗಿಯದ ಕ್ಯಾಸಿನೋಗಳು, ಅದ್ಭುತಕ್ಕೂ ಮೀರಿದ ನೈಟ್ ಲೈಫ್. ಇಷ್ಟೆಲ್ಲಾ ಹೇಳುತ್ತಿದ್ದರೆ ನಿಮಗೆ ಯಾವ ಜಾಗ ನೆನಪಾಗುತ್ತದೆ? ಖಂಡಿತ ಹೌದು. ಇದು ನಮ್ಮದೇ ಗೋವಾ. ಒಂದೆಡೆ ದೇಶದ ಪಾರ್ಟಿ ಕ್ಯಾಪಿಟಲ್ ಆದರೆ ಮತ್ತೊಂದೆಡೆ ಕೊಂಕಣಿ ಸಂಸ್ಕೃತಿಯ ಸ್ವಂತ ಊರು ಹಾಗೂ ಇತಿಹಾಸದ ವಿವಿಧ ಮಜಲುಗಳು, ಮೈಲಿಗಲ್ಲುಗಳ ಕುರುಹನ್ನು ತನ್ನೊಳಗೇ ಹುದುಗಿಸಿಕೊಂಡಿರುವ ಅತ್ಯದ್ಭುತ ಸ್ಥಳ. ನಾನು ಗೋವಾದವಳಲ್ಲ. ಅದರ ಇತಿಹಾಸ ಬಗ್ಗೆ ಅಲ್ಪಸ್ವಲ್ಪ ತಿಳಿದಿದೆ. ಆದ್ದರಿಂದ ಓರ್ವ ಉತ್ಸುಕ ಪ್ರವಾಸಿಯಾಗಿ ಮಾತ್ರ ಗೋವಾ ಬಗ್ಗೆ ಬರೆಯಬಲ್ಲೆ. ಹಲವಾರು ಬಾರಿ ಆ ಜಾಗಕ್ಕೆ ಹೋಗಿರುವ ಕಾರಣ ಅದೇನೋ ಕಳೆದ ಜನ್ಮದಲ್ಲಿ ನನ್ನ ತಾಯ್ನಾಡು ಎನಿಸುವಷ್ಟು ಇಷ್ಟವಾಗಿಬಿಟ್ಟಿದೆ.

ಸಾಮಾನ್ಯವಾಗಿ ಗೋವಾ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಬೀಚ್‌ಗಳು, ಬೀಚ್‌ವೇರ್ ಧರಿಸಿ ಓಡಾಡುವ ಜನರು, ಸೂರ್ಯಾಸ್ತ, ಪಾರ್ಟಿ ಹಾಗೂ ಕ್ಯಾಸಿನೋ. ಇವುಗಳಿಂದಲೇ ಗೋವಾ ಅಷ್ಟೊಂದು ಪ್ರಸಿದ್ಧವಾಗಿದೆ. ನಾನು ಮೊದಲು ವಿಮಾನ ಹತ್ತಿದ್ದೇ ಗೋವಾ ಪ್ರಯಾಣಕ್ಕೆ. ಮೊದಲ ಬಾರಿ ಗೋವಾಗೆ ಹೋದಾಗ 'ಇಷ್ಟು ಒಳ್ಳೆ ಜಾಗದಲ್ಲಿ ಏನು ನೋಡೋದು, ಏನು ಬಿಡೋದು?' ಎನಿಸಿದ್ದಂತೂ ಸುಳ್ಳಲ್ಲ. ಹಾಗೂ ಹೀಗೂ ಮೂರೇ ದಿನಗಳ ಸಮಯದಲ್ಲಿ ಕ್ಯಾಸಿನೋ, ಒಂದಷ್ಟು ರೆಸ್ಟೋರೆಂಟ್‌ಗಳು, ಸಮುದ್ರ, ಮ್ಯೂಸಿಯಂ ಆಫ್ ಗೋವಾ, ಅಗೊಂಡಾ ಫೋರ್ಟ್ ನೋಡಿದ್ದಾಯಿತು. ಸಮುದ್ರ ಎಂದರೆ ಅದ್ಯಾಕೆ ಅಷ್ಟು ಹುಚ್ಚೋ ನನಗಂತೂ ಗೊತ್ತಿಲ್ಲ. ಹ್ಯುಮಿಡಿಟಿಗೆ ಇಡೀ ದೇಹ ಕರಗಿ ನೀರಾದಂತೆ ಅನಿಸುತ್ತಿದ್ದರೂ ಸಮುದ್ರ ಮಾತ್ರ ಸಿಕ್ಕಾಪಟ್ಟೆ ಖುಷಿ ಕೊಡುತ್ತದೆ. ಗೋವಾದಲ್ಲಿ ಸೂರ್ಯಾಸ್ತ ಅದೇಕೋ ಮತ್ತಷ್ಟು ವಿಶೇಷ ಅನಿಸುತ್ತದೆ.
ಈವರೆಗೂ ಸುಮಾರು ಬಾರಿ ಗೋವಾಗೆ ಹೋಗಿ ಬಂದಿದ್ದಾಗಿದೆ. ಇಷ್ಟೂ ಬಾರಿ ನೋಡಿರುವ ಜಾಗಗಳಲ್ಲಿ ನನಗೆ ಬಹಳ ಅಚ್ಚುಮೆಚ್ಚಾದವು (ಸಮುದ್ರ ಹೊರತುಪಡಿಸಿ) ಮ್ಯೂಸಿಯಂಗಳು. ಮ್ಯೂಸಿಯಂ ಆಫ್ ಗೋವಾ, ಹೌಸಸ್ ಆಫ್ ಗೋವಾ ಮ್ಯೂಸಿಯಂ, ಆಲ್ ಅಬೌಟ್ ಆಲ್ಕೋಹಾಲ್ ಮ್ಯೂಸಿಯಂ, ಫೋರ್ಟ್ ಆಗೊಂಡಾ ಜೈಲ್ ಮ್ಯೂಸಿಯಂ, ಆರ್ಕಿಯಾಲಾಜಿಕಲ್ ಮ್ಯೂಸಿಯಂ ಸೇರಿದಂತೆ ಇನ್ನೂ ಹಲವು ವಸ್ತುಸಂಗ್ರಹಾಲಯಗಳು ಗಮನಸೆಳೆದವು. ಬೀಚ್, ಪಾರ್ಟಿ ಎಲ್ಲವನ್ನೂ ಮೀರಿ ಗೋವಾ ಹೇಗೆ ನಡೆದು ಬಂದಿದೆ, ಗೋವಾದಲ್ಲಿ ಇಷ್ಟು ವಿಧಧ ಸಂಸ್ಕೃತಿಗಳು ಇರುವುದಕ್ಕೆ ಕಾರಣವೇನು, ಮೌರ್ಯರು ಹಾಗೂ ಕದಂಬರು ಆಳಿದ ಗೋವಾ ಆನಂತರ ಪೋರ್ಚುಗೀಸರ ತೆಕ್ಕೆಗೆ ಬಂದು ವಸಾಹತುಶಾಹಿ ಆಡಳಿತದಲ್ಲಿದ್ದಾಗ ಏನೆಲ್ಲಾ ನಡೆಯಿತು, ಇಲ್ಲಿನ ವಾಸ್ತುಶಿಲ್ಪ ಹಾಗೂ ಮನೆಗಳ ವಿನ್ಯಾಸದ ಹಿಂದಿನ ಪ್ರೇರಣೆ ಮತ್ತು ನೈಸರ್ಗಿಕ ಕಾರಣಗಳು, ಆಲ್ಕೋಹಾಲ್ ಹಾಗೂ ಗೋಡಂಬಿಯಂಥ ವಸ್ತುಗಳ ಉತ್ಪಾದನೆಯ ಇತಿಹಾಸ, ಇಲ್ಲಿನ ವಿಶಿಷ್ಟ ಆಹಾರ ಪದ್ಧತಿ, ಮಸಾಲೆಗಳು ಮತ್ತು ಇತರ ವಿಷಯಗಳ ಬಗ್ಗೆ ತಿಳಿಯಲು ನೀವು ಈ ಮ್ಯೂಸಿಯಂಗಳಿಗೆ ಭೇಟಿ ಕೊಡಲೇಬೇಕು. ದೇಶದ ಅತ್ಯಂತ ಪುಟ್ಟ ರಾಜ್ಯದ ಹಿಂದೆ ಇಷ್ಟೆಲ್ಲಾ ದೊಡ್ಡ ಕಥೆಗಳಿವೆಯೇ ಎಂದು ನೀವೂ ಆಶ್ವರ್ಯ ಪಡುವುದು ಖಂಡಿತ.

ಉತ್ತರ ಗೋವಾ ಒಂದು ರೀತಿಯಲ್ಲಿ ಜನರನ್ನು ಆಕರ್ಷಿಸಿದರೆ ದಕ್ಷಿಣ ಗೋವಾ ಮತ್ತೊಂದು ರೀತಿ ಜನರನ್ನು ತನ್ನತ್ತ ಸೆಳೆಯುತ್ತದೆ. ಪ್ರಸಿದ್ಧ ಕ್ಯಾಸಿನೋಗಳು, ರೆಸ್ಟೋರೆಂಟ್‌ಗಳು, ರೀಸ್ ಮಾರ್ಗೋಸ್ ಫೋರ್ಟ್, ಚಪೋರಾ ಫೋರ್ಟ್ ಹಾಗೂ ಬೀಚ್ ಶ್ಯಾಕ್‌ಗಳು ಉತ್ತರ ಗೋವಾದಲ್ಲಿ ನೋಡಲು ಸಿಕ್ಕರೆ ದಕ್ಷಿಣ ಗೋವಾದಲ್ಲಿ ನದಿ ಹಾಗೂ ವಾಟರ್ ಗೇಮ್ಸ್, ಜನ ಕಡಿಮೆ ಇರುವ ಬೀಚ್‌ಗಳು, ಎಷ್ಟೋ ದೇವಸ್ಥಾನಗಳು, ದೂದ್‌ಸಾಗರ್ ಜಲಪಾತ, ಬಟರ್‌ಫ್ಲೈ ಬೀಚ್, ಕಾಬೋ ಡೆ ರಾಮಾ..ಹೀಗೆ ಒಂದೊಂದು ಸ್ಥಳಕ್ಕೂ ಹೋಗುತ್ತಿದ್ದರೆ ಗೋವಾ ಎಂಬ ಪ್ಯಾರಡೈಸ್‌ನಲ್ಲಿ ದಿನಗಳು ಉರುಳುವುದೇ ತಿಳಿಯುವುದಿಲ್ಲ. ಜತೆಗೆ ಗೋವಾ ಗೋಡಂಬಿ, ಫೆನ್ನಿ, ಗೋವನ್ ಕರಿ ಸೇರಿದಂತೆ ಇಲ್ಲಿನ ವಿಶೇಷ ಖಾದ್ಯಗಳನ್ನು ಸವಿಯುವುದನ್ನು ಮರೆಯಬಾರದು. ಇಲ್ಲಿನ ರೆಸ್ಟೋರೆಂಟ್‌ಗಳಲ್ಲಿ ಪ್ರಪಂಚದಾದ್ಯಂತದ ಎಲ್ಲ ರೀತಿಯ ಖಾದ್ಯಗಳೂ ಸಿಗುತ್ತವಾದರೂ ಗೋವಾದ ಥಾಲಿ, ಗೋವನ್ ಕರಿ, ವಿಶೇಷ ಸೀ ಫುಡ್, ಭಾಜಿ ಪಾವ್, ವಡಾ ಪಾವ್‌ಗಳನ್ನು ಸವಿಯಲೇ ಬೇಕು.
ಗೋವಾದಲ್ಲಿ ಸುತ್ತಾಡಿದಷ್ಟೂ ಕಾಣುವುದು ಗೋಡಂಬಿ ಅಂಗಡಿಗಳು, ಮದ್ಯದ ಅಂಗಡಿಗಳು, ನೈಟ್ ಕ್ಲಬ್‌ಗಳು ಮಾತ್ರವಲ್ಲ. ಹಳೆ ಕಾಲದ ವಾಸ್ತುಶಿಲ್ಪ ಇರುವ ಅತಿ ಆಕರ್ಷಕ ಎನಿಸುವ ಮನೆಗಳು, ಐತಿಹಾಸಿಕ ಕಟ್ಟಡಗಳು, ವರ್ಣರಂಜಿತ ಗೋಡೆ, ಕಾಂಪೌಂಡ್‌ಗಳು, ಚರ್ಚ್ ಹಾಗೂ ದೇವಸ್ಥಾನಗಳು, ನೈಸರ್ಗಿಕ ವಸ್ತುಗಳಲ್ಲಿ ತಯಾರಿಸಿದ ಹ್ಯಾಟ್, ಪೀಠೋಪಕರಣ, ಆಭರಣಗಳು, ಡ್ರೀಂ ಕ್ಯಾಚರ್, ಮಣಿಸರಗಳು..ಒಟ್ಟಿನಲ್ಲಿ ಎಲ್ಲವೂ ಕಲಾತ್ಮಕವಾದವು. ಅಂದಹಾಗೆ ಈ ಊರು ಬದುಕಿರುವುದೇ ಕಲೆಯಿಂದ. ಇಲ್ಲಿ ಮೂಲ ಸ್ವಾದ ಇರುವುದು ಆಧುನಿಕತೆಯಲ್ಲಲ್ಲ. ಬದಲಿಗೆ ಗೋವಾದ ಜನರ ಹುಡುಕಿದಷ್ಟೂ ಸಿಗುವ ಐತಿಹಾಸಿಕ ಕಥೆಗಳಲ್ಲಿ ಹಾಗೂ ಅದರ ಕುರುಹುಗಳಲ್ಲಿ. ಇಲ್ಲಿನ ಬಹುಮುಖಿ ಸಂಸ್ಕೃತಿ, ಜನರ ವಿಶಾಲ ಮನೋಭಾವ, ಸಂಕುಚಿತತೆ ಇಲ್ಲದೆಯೂ ಭಾರತೀಯ ಸಂಸ್ಕೃತಿಯಲ್ಲಿ ಮಿಳಿತವಾಗಿರುವ ಇವರ ಜೀವನಶೈಲಿಯಲ್ಲಿ.

ಈವರೆಗೂ ಅದೆಷ್ಟೋ ಬಾರಿ ಗೋವಾ ನೋಡಿದ್ದೇನೆ. ಇನ್ನು ಮುಂದೆಯೂ ನೋಡಲಿದ್ದೇನೆ. ಈ ರಾಜ್ಯದ ಹೆಸರು ಕೇಳಿದಾಕ್ಷಣ ನೆನಪಾಗುವುದು ನೋಡಿದಷ್ಟೂ ಮುಗಿಯದ ಅರೇಬಿಯನ್ ಕಡಲಿನ ಅದ್ಭುತ ಚಿತ್ರ, ಸೂರ್ಯಾಸ್ತ, ಕಾಲಿಗೆ ಮುತ್ತಿಡುವ ಅಲೆಗಳು, ವರ್ಣರಂಜಿತ ರಸ್ತೆಗಳು, ಪಾರಂಪರಿಕ ಕಟ್ಟಡಗಳು ಹಾಗೂ ಫೋರ್ಟ್‌ಗಳು, ರಸ್ತೆಬದಿಯಲ್ಲಿ ಬಾಟಲ್‌ಗಳಲ್ಲಿ ಸಿಗುವ ಪೆಟ್ರೋಲ್, ಇಲ್ಲಿ ನಡೆಯುವ ಗೋವಾ ಕಾರ್ನಿವಲ್ ಹಾಗೂ ಸೆರೆಂಡಿಪಿಟಿಯಂಥ ಫೆಸ್ಟಿವಲ್‌ಗಳು, ಮಾಂಡೋವಿ ನದಿ ಹಾಗೂ ರಸ್ತೆಯಲ್ಲಿ ಕಾಣುವ ಕಲಾತ್ಮಕ ಕಲಾಕೃತಿಗಳು. ಒಟ್ಟಾರೆ ಗೋವಾ ಎಂದರೆ ಬಣ್ಣ. ಇಲ್ಲಿ ಕಾಣುವುದೆಲ್ಲಾ ವರ್ಣಮಯ! ವಿವಿಧ ಸಂಸ್ಕೃತಿಗಳು, ಜನಾಂಗಗಳು, ಆಹಾರ ಪದ್ಧತಿಗಳು, ಜೀವನಶೈಲಿಗಳು, ನಂಬಿಕೆಗಳು ಒಂದಾದಂತೆ ಸಾಂಕೇತಿಕವಾಗಿ ಗೋವಾದ ಒಂದೊಂದು ಭಾಗದಲ್ಲೂ ಅದೆಷ್ಟೋ ಬಣ್ಣಗಳು ಒಟ್ಟಿಗೆ ಕಾಣುತ್ತವೆ. ಇಷ್ಟು ಹೇಳುವ ವೇಳೆಗಾಗಲೇ ಮನಸು ʻಮತ್ತೆ ನೀನು ಗೋವಾಗೆ ಹೋಗುವುದೆಂತು?ʼ ಎಂದು ಪ್ರಶ್ನಿಸುತ್ತಿದೆ.