Monday, June 29, 2026
Monday, June 29, 2026

ಸುಡುವ ಬಿಸಿಲಲ್ಲಿ ತಂಪೆರೆವ ದೃಶ್ಯಕಾವ್ಯ : ಗೋಲ್ಕೊಂಡ

ಕುತುಬ್ ಶಾಹಿ ರಾಜವಂಶಜರು ನಿರ್ಮಿಸಿದ ಈ ಪುರಾತನ ಕೋಟೆ ನಾಲ್ಕುನೂರು ಅಡಿ ಎತ್ತರದ ಗ್ರಾನೆಟ್‌ ಗುಡ್ಡದ ಮೇಲೆ ಏಳು ಕಿಮೀ ಸುತ್ತಳತೆಯಲ್ಲಿ ಹರಡಿಕೊಂಡಿದೆ. ಮೂರು ಸುತ್ತಿನ ಈ ಅಭೇಧ್ಯ ಕೋಟೆ ಎಂಟು ದ್ವಾರಗಳನ್ನು, ಎಂಬತ್ತೇಳು ಕೊತ್ತಲಗಳನ್ನು ಒಳಗೊಂಡ ಅದ್ಭುತ ನಿರ್ಮಾಣವಾಗಿದೆ.

  • ಡಾ.ಪ್ರಕಾಶ ಗ.ಖಾಡೆ

ಈ ವರ್ಷದ ಬೇಸಗೆಯ ಬಿಸಿಲು ಎಲ್ಲೂ ಹೊರಗೆ ಕಾಲಿಡದಂತೆ ಮಾಡುತ್ತಿದೆ. ಅದು ನೆತ್ತಿ ಸುಡುವ ಬಿಸಿಲು. ಅಮೆರಿಕ ವೀಸಾ ಸಂಬಂಧ ಸಂದರ್ಶನಕ್ಕಾಗಿ ನಾನು ಹೈದರಾಬಾದ್‌ಗೆ ಹೋಗಿದ್ದೆ. ನನಗೆ ಈ ದಿನ ಸಮಯ ಉಳಿದಿತ್ತು. ಸಮೀಪದಲ್ಲಿ ಇಲ್ಲಿ ನೋಡಿಕೊಂಡು ಬರಲು ಯಾವುದಾದರೂ ಪ್ರವಾಸಿ ಸ್ಥಳವಿರಬಹುದೇ ಎಂದು ಗೂಗಲ್‌ ಚೆಕ್‌ ಮಾಡಿದೆ. ರಾಮೋಜಿರಾವ್‌ ಫಿಲ್ಮ್‌ ಸಿಟಿ, ಚಾರ್ಮಿನಾರ್‌, ಹುಸೇನ್‌ ಸಾಗರ ಸರೋವರ, ಗೋಲ್ಕೊಂಡ ಕೋಟೆ, ನೆಹರು ಮೃಗಾಲಯ, ಬಿರ್ಲಾ ಮಂದಿರ, ಚೌಮಹಲ್ಲಾ ಅರಮನೆ ಹೀಗೆ ಸಾಲು ಸಾಲು ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಿತು.

ಇದನ್ನೂ ಓದಿ: ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರಶಸ್ತಿಯ ಗರಿ

ರಾಮೋಜಿರಾವ್‌ ಫಿಲ್ಮ್‌ ಸಿಟಿ ಹಿಂದೊಮ್ಮೆ ನೋಡಿದ್ದೆ. ಈಗ ನನ್ನ ಗಮನ ಸೆಳೆದದ್ದು ಗೋಲ್ಕೊಂಡ ಕೋಟೆ. ಏಕೆಂದರೆ ನಾನು ವಿದ್ಯಾರ್ಥಿ ದೆಸೆಯಿಂದಲೂ ಈ ಕೋಟೆಯ ಬಗ್ಗೆ ಓದಿದ್ದೆ. ತುಂಬಾ ಕುತೂಹಲವಿತ್ತು. ಈ ಪ್ರದೇಶದ ಬಳಿ ದೊರಕುತ್ತಿದ್ದ ವಜ್ರಗಳಿಂದಾಗಿ ಇದು ಖ್ಯಾತಿ ಪಡೆದಿದೆ ಎಂದು ಓದಿದ್ದೆ. ಕೊಹಿನೂರ್‌ ವಜ್ರ ಈ ಪ್ರದೇಶದ ಅವಿಸ್ಮರಣಿಯ ಆಸ್ತಿ. ಹೀಗಾಗಿ ಗೋಲ್ಕೊಂಡ ಕೋಟೆ ನೋಡಿಕೊಂಡು ಬರಲು ಹೊರಟೆ. ಇದು ಹೈದರಾಬಾದ್‌ ನಗರದ ಪಶ್ಚಿಮಕ್ಕೆ 11 ಕಿಮೀ ದೂರದಲ್ಲಿದೆ. ಗೋಲ್ಕೊಂಡ ಕೋಟೆಯ ಮುಂದೆ ಬಂದು ನಿಂತಾಗ ಮಧ್ಯಾಹ್ನದ ಸುಡು ಬಿಸಿಲು. ಆದರೆ ಇಲ್ಲಿ ಪ್ರವಾಸಿಗರ ಉತ್ಸಾಹಕ್ಕೇನೂ ಕೊರತೆ ಇಲ್ಲ. ತಂಡೋಪತಂಡವಾಗಿ ಪ್ರವಾಸಿಗರು ಕೋಟೆಯ ವಿಸ್ಮಯ ಕಾಣಲು ಹೊರಟಿದ್ದರು. ನಾನು ಒಂಟಿ ಪ್ರವಾಸಿ. ಪಯಣ ಆರಂಭವಾಯಿತು.

Untitled design (54)

ನಿಜವಾಗಿಯೂ ಈ ಕೋಟೆ ಭೂಮಿಯ ಮೇಲಿನ ರಮ್ಯ ದೃಶ್ಯಕಾವ್ಯ. ನನಗಂತೂ ಇಲ್ಲಿ ಸುತ್ತಿ ಸುಳಿದು ನನ್ನ ಮೊಬೈಲ್‌ನಲ್ಲಿ ಸೆರೆಹಿಡಿದ ಚಿತ್ರಗಳು ಒಂದೊಂದು ದೃಶ್ಯಕಾವ್ಯದಂತೆ ಕಂಡವು. ನೆರಳು ಬೆಳಕಿನಲ್ಲಿ ಸೆರೆಹಿಡಿದ ಈ ಚಿತ್ರಗಳು ಕಲಾವಿದನೊಬ್ಬ ಕ್ಯಾನ್‌ವಾಸ ಮೇಲೆ ಚಿತ್ರ ಬಿಡಿಸಿದಂತಿತ್ತು. ಉರಿಬಿಸಿಲಿನಲ್ಲೂ ತಂಪೆರೆದ ಈ ಕೋಟೆ, ರೋಚಕ ಸಂಗತಿಗಳಿಗೆ ಸಾಕ್ಷಿಯಾಗಿದೆ.

ಕುತುಬ್ ಶಾಹಿ ರಾಜವಂಶಜರು ನಿರ್ಮಿಸಿದ ಈ ಪುರಾತನ ಕೋಟೆ ನಾಲ್ಕುನೂರು ಅಡಿ ಎತ್ತರದ ಗ್ರಾನೆಟ್‌ ಗುಡ್ಡದ ಮೇಲೆ ಏಳು ಕಿಮೀ ಸುತ್ತಳತೆಯಲ್ಲಿ ಹರಡಿಕೊಂಡಿದೆ. ಮೂರು ಸುತ್ತಿನ ಈ ಅಭೇಧ್ಯ ಕೋಟೆ ಎಂಟು ದ್ವಾರಗಳನ್ನು, ಎಂಬತ್ತೇಳು ಕೊತ್ತಲಗಳನ್ನು ಒಳಗೊಂಡ ಅದ್ಭುತ ನಿರ್ಮಾಣವಾಗಿದೆ.

ಒಂದೊಂದೂ ಒಂದೊಂದು ವಿಸ್ಮಯ

ಕೋಟೆ ಒಳಗಡೆ ಸುತ್ತಾಡಿದರೆ ಅಲ್ಲಿ ಒಂದೊಂದು ವಿಸ್ಮಯಗಳನ್ನು ಕಾಣುತ್ತೇವೆ. ಮದ್ದುಗುಂಡಿನ ಸಂಗ್ರಹಾಗಾರ, ರಾಣಿ ನಿವಾಸಗಳು, ಆನೆ, ಕುದುರೆಗಳ ಲಾಯ, ರಾಜಗೃಹ, ಉದ್ಯಾನ, ಸೇವಕರ ವಸತಿಗೃಹಗಳು, ಕೆರೆಕಟ್ಟೆಗಳನ್ನು ಕಾಣುತ್ತೇವೆ. ಈ ವಿಶಾಲ ಪ್ರದೇಶದಲ್ಲಿ ಆಳಿಹೋದ ಮಹಾರಾಜರುಗಳ ಅಮೋಘ ಚರಿತ್ರೆಗೆ ಸಾಕ್ಷಿಯಾಗಿ ಇವೆಲ್ಲಾ ಮುಕ್ಕಾಗಿದ್ದರೂ ಇನ್ನೂ ಉಳಿದಿವೆ.

ವಜ್ರದ ಗಣಿ

ಈ ಕೋಟೆಯನ್ನು ಬ್ರಿಟಿಷ್‌ ಅಧಿಕಾರಿ ಸರ್‌ ಥಾಮಸ್‌ ಮನ್ರೋ ʼವಜ್ರದ ಗಣಿ ,ರತ್ನ ಗರ್ಭʼ ಎಂದು ಕರೆದಿದ್ದಾನೆ. 105.6 ಕ್ಯಾರೆಟ್‌ ತೂಕದ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಪ್ರಸಿದ್ಧ ವಜ್ರಗಳಲ್ಲಿ ಒಂದಾಗಿರುವ ಕೊಹಿನೂರ್‌ ವಜ್ರ, ಮೂಲತಃ ಗೋಲ್ಕೊಂಡದ ವಜ್ರವಾಗಿದೆ. ಇದನ್ನು 14ನೆಯ ಶತಮಾನದಲ್ಲಿ ಕಾಕತೀಯ ರಾಜವಂಶಸ್ಥರು ವಾರಂಗಲ್‌ನಲ್ಲಿ ಹೊಂದಿದ್ದರು. ನಂತರ ಇದು ಖಿಲ್ಜಿ ರಾಜವಂಶ, ಮೊಘಲರು, ಅಫ್ಘನ್‌ ಆಡಳಿತಗಾರರ ಕೈಸೇರಿತ್ತು. ನಂತರ ಪಂಜಾಬಿನ ಮಹಾರಾಜ ರಂಜಿತ್‌ ಸಿಂಗ್‌ ಅದನ್ನು ತನ್ನದಾಗಿಸಿಕೊಂಡಿದ್ದನು. ಮುಂದೆ 1849ರಲ್ಲಿ ಬ್ರಿಟಿಷರು ಪಂಜಾಬನ್ನು ವಶಪಡಿಸಿಕೊಂಡಾಗ 1850ರಲ್ಲಿ ಇದು ಬ್ರಿಟನ್‌ ತಲುಪಿತು ಎನ್ನುವ ಇತಿಹಾಸ ನಮ್ಮ ಕಣ್ಣ ಮುಂದಿದೆ. ಕೊಲ್ಲೂರು ಗಣಿ, ಗೋಲ್ಕೊಂಡವು ಒಂದು ಕಾಲದ ವಜ್ರಗಳ ದೊಡ್ಡ ವ್ಯಾಪಾರಿ ಕೇಂದ್ರವಾಗಿತ್ತು.

Untitled design (52)

ತಂತ್ರಜ್ಞಾನದ ಅಚ್ಚರಿ

ಗೋಲ್ಕೊಂಡ ಕೋಟೆ, ಎಂಟು ದ್ವಾರಗಳಿಂದ ಕೆಳಗಿನಿಂದ ತುತ್ತ ತುದಿಯವರೆಗೆ ಚಾಚಿದೆ. ಈ ದ್ವಾರಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ಇಡಲಾಗಿದೆ. ಕೋಟೆಯ ಗುಪ್ತ ಕಾವಲಿಗೆ ಚಪ್ಪಾಳೆ ತಟ್ಟಿ ಎಚ್ಚರಿಸುವ ವಿಸ್ಮಯದ ತಂತ್ರಜ್ಞಾನ ಇಲ್ಲಿದೆ. ಫತೇಹ, ಬಹಮನಿ, ಮೆಕ್ಕ, ಪಟ್ಟನೆರು, ಬಂಜಾರ, ಜಮಾಲಿ, ನಯಾಕಿಲ್ಲಾ ಮತ್ತು ಮೋತಿ ಈ ಹೆಸರಿನ ಎಂಟು ದ್ವಾರಗಳಿವೆ. ಈ ದ್ವಾರಗಳನ್ನು ಆಯಕಟ್ಟಿನ ಜಾಗಗಳಲ್ಲಿ ಸ್ಥಾಪಿಸಲಾಗಿದ್ದು, ಒಂದು ದ್ವಾರದಲ್ಲಿ ನಿಂತು ಚಪ್ಪಾಳೆ ತಟ್ಟಿದರೆ, ಅದರ ಶಬ್ಧ ಪ್ರತಿಫಲನಗೊಂಡು ಮತ್ತೊಂದು ದ್ವಾರದವರೆಗೆ ತಲುಪುವುದು. ಹೀಗೆ ಸೂಚನೆಗಳನ್ನು ಹೊರದ್ವಾರದಿಂದ ಗುಡ್ಡದ ತುತ್ತ ತುದಿಯವರೆಗೆ ಇತರರಿಗೆ ಕೇಳದ ರೀತಿಯಲ್ಲಿ ವರ್ಗಾಹಿಸುವಂತೆ ಈ ಕೋಟೆಯನ್ನು ನಿರ್ಮಿಸಿರುವುದು ಆ ಕಾಲದ ವಾಸ್ತು ಕೌಶಲ್ಯಕ್ಕೆ ಬಹುದೊಡ್ಡ ಉದಾಹರಣೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ