ಸ್ಟ್ಯಾಚು ಆಫ್ ಇಕ್ವಾಲಿಟಿಗೆ ಸ್ವಾಗತ
ಈ ಮೂರ್ತಿ ಸುಮಾರು 700 ಟನ್ ಪಂಚಲೋಹದಿಂದ ನಿರ್ಮಾಣವಾಗಿದ್ದು, 108 ಅಡಿ ಎತ್ತರವಿದೆ. 54 ಅಡಿ ಎತ್ತರದ ಭದ್ರ ತಳಹದಿಯ ಮೇಲೆ ಕುಳಿತ ಭಂಗಿಯಲ್ಲಿ ಸ್ಥಾಪಿತವಾಗಿದೆ. 36 ಆನೆಗಳ ಕೆತ್ತನೆಯಿಂದ ಅದನ್ನು ಅಲಂಕರಿಸಲಾಗಿದೆ. ಮೇಲ್ಭಾಗದಲ್ಲಿ ಕಮಲಾಕೃತಿಯಲ್ಲಿ 54 ಪಕಳೆಗಳು 18 ಉಪನಿಷತ್ತುಗಳನ್ನು ಪ್ರತಿನಿಧಿಸುತ್ತವೆ. ವಿನ್ಯಾಸವು ಆಧ್ಯಾತ್ಮಿಕತೆ ಮತ್ತು ಶುದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವಿಶ್ವದ ಅತ್ಯಂತ ಎತ್ತರದ ಆಸೀನ ಪ್ರತಿಮೆಗಳಲ್ಲಿ ಇದೂ ಒಂದು…
- ವೆಂಕಟೇಶ್ ಮುದಗಲ್
ಈ ವರ್ಷದ ಜನವರಿ 5ರ ನಸುಕಿನ 6ಕ್ಕೆ ನಮ್ಮನ್ನು ಹೊತ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ನಭಕ್ಕೆ ಚಿಮ್ಮಬೇಕಿತ್ತು. ಆದರೆ, ಆದದ್ದೆ ಬೇರೆ. ಜನವರಿ 4ರ ರಾತ್ರಿ 10ಕ್ಕೆ ಕಲಬುರಗಿಯಿಂದ ಹೈದರಾಬಾದ್ ವಿಮಾನ ನಿಲ್ದಾಣ ತಲಪಿದಾಗ ನಸುಕಿನ 2 ಗಂಟೆ. ನಮ್ಮ ಏಜೆನ್ಸಿಯ ಪ್ರತಿನಿಧಿ ನಮ್ಮ ವೀಸಾ ಹಸ್ತಾಂತರಿಸಿದರು. ಹಾರಬೇಕಿದ್ದ ವಿಮಾನ ಕೊನೆ ಕ್ಷಣದಲ್ಲಿ ತಾಂತ್ರಿಕ ಕಾರಣಗಳಿಂದ ರದ್ದಾಗಿರುವ ಬಗ್ಗೆ ಮಾಹಿತಿ ನೀಡಿದರು. ವಿದೇಶ ಪ್ರಯಾಣ ಖುಷಿ ಬಲೂನುನಿಂದ ತೆಗೆದ ಗಾಳಿಯಂತೆ ಠುಸ್ಸೆಂದು ಇಳಿಯಿತು.
ಇದನ್ನೂ ಓದಿ: ಖಾರ್ದುಂಗ್ ಲಾ : ಸುರಕ್ಷತೆ ಮೊದಲು, ಸಾಹಸ ನಂತರ
ನಮಗಾಗಿ ಸಾರಿಗೆ, ಊಟ, ವಸತಿ ವ್ಯವಸ್ಥೆ ಮಾಡಿದ ಏರ್ ಇಂಡಿಯಾ ಎಕ್ಸಪ್ರೆಸ್, ನಮ್ಮ ಕೆಂಗಣ್ಣು ಮತ್ತು ಬಿರು ನುಡಿಗಳಿಂದ ಬಚಾವಾಗಿತ್ತು. ವಿಧಿ ಇಲ್ಲದೆ ವಿಮಾನಯಾನ ಸಂಸ್ಥೆ ವ್ಯವಸ್ಥೆ ಮಾಡಿದ್ದ ಹತ್ತಿರದ ಹೊಟೇಲ್‌ನಲ್ಲಿ ಉಳಿದುಕೊಂಡೆವು. ಅಷ್ಟೊತ್ತಿಗೆ ಆಗಲೇ ನಸುಕಿನ 5 ಗಂಟೆಯಾಗಿತ್ತು. ಸುಮ್ಮನೆ ಹೊರಳಾಡಿ ಎಳೆ ಬಿಸಿಲಲ್ಲಿ ಒಂದಷ್ಟು ತಿರುಗಾಡಿ ಬಂದು ಕಾಫಿಯನ್ನು ಹೀರಿಯಾಗಿತ್ತು. ಇಡೀ ದಿನವನ್ನು ಕಳೆಯುವ ಸವಾಲು ಎದುರಾಗಿತ್ತು. ಟ್ರಾವೆಲ್ ಏಜೆನ್ಸಿಯ ಪ್ರತಿನಿಧಿ ವಿಮಾನ ನಿಲ್ದಾಣಕ್ಕೆ ಹತ್ತಿರದ ‘Statue of Equality’ ತಾಣಕ್ಕೆ ಭೇಟಿ ನೀಡಿದರೆ ಸಾಕಷ್ಟು ಸಮಯ ಕಳೆಯಬಹುದು, ನಿಮಗೂ ಹೊಸ ತಾಣ ನೋಡಿದ ತೃಪ್ತಿ ಲಭಿಸುತ್ತದೆ ಎಂದು ಸಲಹೆ ನೀಡಿದ್ದರು. ಸಂಜೆಯ 5ರವರೆಗೆ ಟಿವಿ ನೋಡುತ್ತಾ, ನಂತರ ಈ ತಾಣಕ್ಕೆ ಪಾದ ಬೆಳೆಸಿದೆವು.

ಹೈದರಾಬಾದ್ ನಗರದ ಹೊರವಲಯದಲ್ಲಿ ನಿರ್ಮಿತವಾಗಿರುವ ʻStatue of Equalityʼ ರಾಜೀವ ಗಾಂಧಿ ವಿಮಾನ ನಿಲ್ದಾಣದಿಂದ ಸುಮಾರು 19 ಕಿಮೀ ದೂರದಲ್ಲಿದೆ. ಇದು, ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಇದೊಂದು ಭವ್ಯ ಪ್ರತಿಮೆ. ಸಮಾನತೆ, ಭಕ್ತಿ ಮತ್ತು ಮಾನವೀಯತೆಯ ಸಂದೇಶವನ್ನು ಸಾರುವ ಜೀವಂತ ಸಂಕೇತ ಎನ್ನಲಾಗಿದೆ. ಈ ಸ್ಮಾರಕ 11ನೆಯ ಶತಮಾನದ ಮಹಾನ್ ತತ್ವಜ್ಞ ಶ್ರೀ ರಾಮಾನುಜಾಚಾರ್ಯ ಅವರಿಗೆ ಸಮರ್ಪಿತವಾಗಿದೆ. ಕ್ರಿಶ 1017ರಲ್ಲಿ ಜನಿಸಿದ ಇವರು ʻವಿಶಿಷ್ಟಾದ್ವೈತʼ ತತ್ತ್ವದ ಪ್ರತಿಪಾದಕರು. ಭಕ್ತಿ ಚಳವಳಿಗೆ ಹೊಸ ದಿಕ್ಕು ನೀಡಿದವರು. ಸಮಾಜದಲ್ಲಿ ಸಮಾನತೆಯನ್ನು ಸಾರುವ ದೃಷ್ಟಿಯಿಂದ, ಎಲ್ಲರಿಗೂ ನಾರಾಯಣ ಮಂತ್ರವನ್ನು ಭೋದಿಸಿದ ಅವರ ನಡೆ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.
ಪಂಚಲೋಹದ ಪ್ರತಿಮೆ
ನಾವು ಆವರಣ ಪ್ರವೇಶಿಸುತ್ತಿದ್ದಂತೆ ಅಲ್ಲಿನ ದಿವ್ಯತೆಗೆ ಪರವಶರಾದೆವು. ಕ್ಷಣಕಾಲ ಕಂಪನದ ಅರಿವೂ ಆಯಿತು. ಶ್ರೀ ರಾಮಾನುಜಾಚಾರ್ಯ ಅವರ ಪ್ರತಿಮೆಯ ವಿನ್ಯಾಸ ಅದ್ಭುತ ಮತ್ತು ಅರ್ಥಪೂರ್ಣವಾಗಿದೆ. ಈ ಮೂರ್ತಿ ಸುಮಾರು 700 ಟನ್ ಪಂಚಲೋಹದಿಂದ ನಿರ್ಮಾಣವಾಗಿದ್ದು, 108 ಅಡಿ ಎತ್ತರವಿದೆ. 54 ಅಡಿ ಎತ್ತರದ ಭದ್ರ ತಳಹದಿಯ ಮೇಲೆ ಕುಳಿತ ಭಂಗಿಯಲ್ಲಿ ಸ್ಥಾಪಿತವಾಗಿದೆ. 36 ಆನೆಗಳ ಕೆತ್ತನೆಯಿಂದ ಅದನ್ನು ಅಲಂಕರಿಸಲಾಗಿದೆ. ಮೇಲ್ಭಾಗದಲ್ಲಿ ಕಮಲಾಕೃತಿಯಲ್ಲಿ 54 ಪಕಳೆಗಳು 18 ಉಪನಿಷತ್ತುಗಳನ್ನು ಪ್ರತಿನಿಧಿಸುತ್ತವೆ. ವಿನ್ಯಾಸವು ಆಧ್ಯಾತ್ಮಿಕತೆ ಮತ್ತು ಶುದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವಿಶ್ವದ ಅತ್ಯಂತ ಎತ್ತರದ ಆಸೀನ ಪ್ರತಿಮೆಗಳಲ್ಲಿ ಇದೂ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಂಕೀರ್ಣದಲ್ಲಿ 108 ವಿಷ್ಣು ದೇವಾಲಯಗಳು
ಈ ಸಂಕೀರ್ಣವು ಬರೀ ಶ್ರೀ ರಾಮಾನುಜಾಚಾರ್ಯರ ಪ್ರತಿಮೆಗೆ ಸೀಮಿತವಾಗಿಲ್ಲ. ಇಲ್ಲಿ ದೇಶಾದ್ಯಂತ ಇರುವ 108 ವಿಷ್ಣು ದೇವಾಲಯಗಳ ಪ್ರತಿರೂಪಗಳನ್ನು ನಿರ್ಮಿಸಲಾಗಿದೆ. ಇದರಿಂದ ಭಕ್ತರಿಗೆ ವಿವಿಧ ಪವಿತ್ರ ಕ್ಷೇತ್ರಗಳ ಅನುಭವವನ್ನು ಒಂದೆಡೆ ಪಡೆಯುವ ಅವಕಾಶ ದೊರೆಯುತ್ತದೆ. ಗರ್ಭಗುಡಿಯ ಒಳಗೆ ಶ್ರೀ ರಾಮಾನುಜಾಚಾರ್ಯರ 120 ಕೆಜಿ ಬಂಗಾರದ ಮೂರ್ತಿಯು ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ.
ಪುರಾತನ ಜ್ಞಾನ ನೀಡುವ ಆಧುನಿಕ ತಂತ್ರಜ್ಞಾನ
ಇದೇ ಸಂಕೀರ್ಣದಲ್ಲಿ ಆಧುನಿಕ ಓಮ್ನಿ ಮ್ಯಾಕ್ಸ್ ಥಿಯೇಟರ್, ಡಿಜಿಟಲ್ ವೇದ ಗ್ರಂಥಾಲಯ ಮತ್ತು ಶೈಕ್ಷಣಿಕ ಗ್ಯಾಲರಿಗಳು ಇವೆ. ಇವು ಪುರಾತನ ಜ್ಞಾನವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮಿಳಿತಗೊಳಿಸಿ ವಿಶೇಷ ಅನುಭವ ನೀಡುತ್ತವೆ. ಪ್ರತಿದಿನ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿನ ವಿಶೇಷ. ಸಂಜೆ 6 ಗಂಟೆಗೆ 108 ದೇವಾಲಯಗಳ ಪೂಜೆ ನಡೆಯುತ್ತದೆ. ನಂತರ 7:30ಕ್ಕೆ ಸಮತಾ ನೀರಾಜನಂ ಆರತಿ ನಡೆಯುತ್ತದೆ. 7:45ಕ್ಕೆ ನಡೆಯುವ ಲೇಸರ್ ಪ್ರದರ್ಶನವು ರಾಮಾನುಜಾಚಾರ್ಯರ ಜೀವನ ಮತ್ತು ಸಂದೇಶವನ್ನು ದೃಶ್ಯ ರೂಪದಲ್ಲಿ ಪರಿಚಯಿಸಿ, ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ.
ಮಾಹಿತಿ ಪೆಟ್ಟಿಗೆ:
ಸಾಮಾನ್ಯವಾಗಿ ಬೆಳಗ್ಗೆ 10:30ರಿಂದ ರಾತ್ರಿ 8 ಗಂಟೆಯವರೆಗೆ (ವಾರಾಂತ್ಯದಲ್ಲಿ 8:45ರವರೆಗೆ) ಪ್ರವೇಶ ಲಭ್ಯವಿದೆ. ಪ್ರವೇಶ ಶುಲ್ಕವು ವಯಸ್ಕರಿಗೆ 250 ರು. ಮತ್ತು ಮಕ್ಕಳಿಗೆ 150 ರು. ಸಾಂಪ್ರದಾಯಿಕ ಉಡುಪನ್ನು ಪಾಲಿಸುವುದು ಕಡ್ಡಾಯ. ಸುಮಾರು 200 ಮೆಟ್ಟಿಲುಗಳನ್ನು ಏರುವುದು ಅನಿವಾರ್ಯ. ಸೂರ್ಯಾಸ್ತವಾದೊಡನೆ ವೈವಿಧ್ಯಮಯ ಬಣ್ಣಗಳ ದೀಪಗಳು ಪ್ರಜ್ವಲಿಸಿ ವಿಶೇಷ ಕಳೆ ನೀಡುತ್ತವೆ.
45 ಎಕರೆ ಭೂ ಪ್ರದೇಶದಲ್ಲಿ ಸುಮಾರು 1,000 ಕೋಟಿ ವೆಚ್ಚದಲ್ಲಿ ನಿರ್ಮಿತ ಈ ಯೋಜನೆಯ ಉಸ್ತುವಾರಿ ʻChinna Jeeyar Trust under spiritual leadership of Chinna Jeeyar Swamijiʼ. ಅವರ ಮಾರ್ಗದರ್ಶನದಲ್ಲಿ ಈ ಮಹತ್ವದ ಕಾರ್ಯ ನೆರವೇರಿದೆ. ಒಟ್ಟಾರೆ ʻStatue of Equalityʼ ಕೇವಲ ಪ್ರವಾಸಿ ತಾಣವಲ್ಲ; ಇದು ಸಮಾನತೆ ಮತ್ತು ಭಕ್ತಿಯ ತತ್ತ್ವಗಳನ್ನು ಜೀವಂತವಾಗಿ ಅನುಭವಿಸುವ ಸ್ಥಳ. ಇತಿಹಾಸ, ಆಧ್ಯಾತ್ಮಿಕತೆ ಮತ್ತು ಆಧುನಿಕತೆಯ ಸಮನ್ವಯವನ್ನು ಕಾಣಲು ಈ ಸ್ಥಳ ಸಹಕಾರಿ.