Tuesday, September 15, 2026
Tuesday, September 15, 2026

ಗೋವಾ ಎಂದರೆ ಕೇವಲ ಬೀಚ್ ಅಲ್ಲ...

ಗೋವಾ ಹಿಂದೊಮ್ಮೆ ಪೋರ್ಚುಗೀಸರ ಆಳ್ವಿಕೆಗೆ ಒಳಪಟ್ಟಾಗ ಕರಾವಳಿ ಭಾಗದ ಅನೇಕ ದೇವಾಲಯಗಳು ಧ್ವಂಸಗೊಂಡವು. ಆಗ ಅನೇಕ ವಿಗ್ರಹಗಳನ್ನು ಸುರಕ್ಷಿತವಾಗಿ ಪೊಂಡಾ ಭಾಗಕ್ಕೆ ಸ್ಥಳಾಂತರಿಸಲಾಯಿತು. ಅದಕ್ಕಾಗಿಯೇ ಇಂದು ಪೊಂಡಾ ಸುತ್ತಮುತ್ತ ಗೋವಾದ ಪ್ರಮುಖ ಹಿಂದೂ ದೇವಾಲಯಗಳು ಒಂದೇ ಪ್ರದೇಶದಲ್ಲಿ ನೆಲೆಸಿವೆ

  • ಮೇಘನಾ ಕಾನೇಟ್ಕರ್

‘ಗೋವಾ ಗೆ ಹೋಗುತ್ತಿದ್ದೇವೆ’ ಎಂದರೆ ಹೆಚ್ಚಿನವರ ಮನಸಿನಲ್ಲಿ ಮೊದಲು ಮೂಡುವ ಚಿತ್ರವೇ ಸಮುದ್ರದ ಅಲೆಗಳು, ಬೀಚ್‌, ಜಲಕ್ರೀಡೆ, ನೈಟ್ ಲೈಫ್ ಮತ್ತು ಹನಿಮೂನ್. ಆದರೆ, ಇದೇ ಗೋವಾ ತನ್ನ ಮಡಿಲಲ್ಲಿ ಶತಮಾನಗಳ ಇತಿಹಾಸ, ವೈಭವಶಾಲಿ ದೇವಾಲಯಗಳು, ಅಪರೂಪದ ಸಂಪ್ರದಾಯಗಳು ಮತ್ತು ಭಕ್ತಿಯ ಪರಿಮಳವನ್ನೂ ಅಡಗಿಸಿಕೊಂಡಿದೆ ಎಂಬುದು ಅನೇಕರಿಗೆ ತಿಳಿದಿಲ್ಲ.

ಪೊಂಡಾ (Ponda) - ಇದು ಗೋವಾದ ದೇವಾಲಯಗಳ ಹೃದಯ

ಸುತ್ತಮುತ್ತಲಿನ ದೇವಾಲಯಗಳ ಪವಿತ್ರ ವಾತಾವರಣ. ದಟ್ಟ ಹಸಿರಿನ ನಡುವೆ, ಕೆಂಪು ಮಣ್ಣಿನ ರಸ್ತೆಗಳಲ್ಲಿ ಸಾಗುತ್ತಾ, ತೆಂಗಿನ ತೋಟಗಳು ಮತ್ತು ಅಡಿಕೆ ಮರಗಳ ನೆರಳಿನಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ದೇವಾಲಯವೂ ತನ್ನದೇ ಆದ ಇತಿಹಾಸವನ್ನು ಹೇಳುವಂತೆ ಅನಿಸುತ್ತದೆ. ಗೋವಾ ಹಿಂದೊಮ್ಮೆ ಪೋರ್ಚುಗೀಸರ ಆಳ್ವಿಕೆಗೆ ಒಳಪಟ್ಟಾಗ ಕರಾವಳಿ ಭಾಗದ ಅನೇಕ ದೇವಾಲಯಗಳು ಧ್ವಂಸಗೊಂಡವು. ಆಗ ಅನೇಕ ವಿಗ್ರಹಗಳನ್ನು ಸುರಕ್ಷಿತವಾಗಿ ಪೊಂಡಾ ಭಾಗಕ್ಕೆ ಸ್ಥಳಾಂತರಿಸಲಾಯಿತು. ಅದಕ್ಕಾಗಿಯೇ ಇಂದು ಪೊಂಡಾ ಸುತ್ತಮುತ್ತ ಗೋವಾದ ಪ್ರಮುಖ ಹಿಂದೂ ದೇವಾಲಯಗಳು ಒಂದೇ ಪ್ರದೇಶದಲ್ಲಿ ನೆಲೆಸಿವೆ.

ಇದನ್ನೂ ಓದಿ : ಬಿ. ಟಿ. ರಾಮಚಂದ್ರ ಅವರ ತಾಯಿಯ ಕನಸಿಗೆ ಮರುಜೀವ


ಶ್ರೀ ವಿಜಯದುರ್ಗಾ ದೇವಿ

ಪೊಂಡಾದಲ್ಲಿರುವ ಶ್ರೀ ವಿಜಯದುರ್ಗಾ ದೇವಿ ನಮ್ಮ ಕುಟುಂಬದ ಆರಾಧ್ಯ ದೈವ (ಕುಲದೇವತೆ). ವರ್ಷಕ್ಕೊಮ್ಮೆ ಕುಟುಂಬದವರೆಲ್ಲ ಸೇರಿ ದೇವಿಯ ದರ್ಶನಕ್ಕೆ ಹೋಗುವುದು ನಮ್ಮ ಮನೆತನದಲ್ಲಿ ತಲತಲಾಂತರದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಬಾಲ್ಯದಿಂದ ಇಂದಿನವರೆಗೂ ಈ ಯಾತ್ರೆ ಕೇವಲ ಒಂದು ಧಾರ್ಮಿಕ ಪ್ರವಾಸವಾಗಿರಲಿಲ್ಲ, ಅದು ಕುಟುಂಬವನ್ನು ಒಂದಾಗಿಸುವ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮತ್ತು ಮನಸಿಗೆ ನೆಮ್ಮದಿ ನೀಡುವ ಒಂದು ಪವಿತ್ರ ಅನುಭವ.
ಬಹುಶಃ ಇದೇ ಕಾರಣದಿಂದ ನನಗೆ ಗೋವಾ ಎಂದರೆ ಬೀಚ್‌ಗಳಿಗಿಂತ ಮೊದಲು ದೇವಾಲಯಗಳೇ ನೆನಪಾಗುತ್ತವೆ.

Untitled design - 2026-09-15T182710.271

ಶ್ರೀ ಶಾಂತಾದುರ್ಗಾ ದೇವಾಲಯ

ಗೋವಾದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಇದು ಪ್ರಮುಖ. ಪಾರ್ವತಿ ದೇವಿಯ ಶಾಂತ ಸ್ವರೂಪವಾದ ಶಾಂತಾದುರ್ಗೆ ಇಲ್ಲಿ ಆರಾಧಿತಳು. ಶಿವ ಮತ್ತು ವಿಷ್ಣು ನಡುವಿನ ಕಲಹವನ್ನು ಶಮನಗೊಳಿಸಿದ ದೇವಿಯ ಕಥೆ ಸ್ಥಳೀಯರಲ್ಲಿ ಬಹಳ ಪ್ರಸಿದ್ಧ.

ಶ್ರೀ ಮಂಗೇಶಿ ದೇವಾಲಯ :

ಗೋವಾ ಎಂದರೆ ನೆನಪಾಗುವ ದೇವಾಲಯಗಳಲ್ಲಿ ಮೊದಲನೆಯದು ಇದೇ. ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಕುಟುಂಬದ ಮೂಲ ದೇವರೂ ಇದೇ ಶ್ರೀ ಮಂಗೇಶ. ಸುಮಾರು ಏಳು ಅಂತಸ್ತಿನ ಎತ್ತರದ ದೀಪಸ್ತಂಭ ರಾತ್ರಿ ಬೆಳಗುವಾಗ ನೋಡುವುದೇ ಒಂದು ಅದ್ಭುತ ಅನುಭವ. ಬಿಳಿ ಬಣ್ಣದ ಸುಂದರ ಕಟ್ಟಡ, ಪ್ರಶಾಂತ ವಾತಾವರಣ ಮತ್ತು ಭಕ್ತರ ಭಜನೆ ಮನಸ್ಸನ್ನು ಭಕ್ತಿಯಲ್ಲಿ ಮುಳುಗಿಸುತ್ತದೆ.

ಶ್ರೀ ನಾಗೇಶಿ ದೇವಾಲಯ

ಶಿವನಿಗೆ ಸಮರ್ಪಿತ ಈ ದೇವಾಲಯ ಅತ್ಯಂತ ಪುರಾತನವಾದದ್ದು, ದೇವಾಲಯದ ಒಳಗಿರುವ ಮರದ ಕೆತ್ತನೆಗಳು, ಚಿತ್ರಕಲೆ ಹಾಗೂ ಶಾಂತ ವಾತಾವರಣ ವಿಶೇಷ ಅನುಭವ ನೀಡುತ್ತವೆ. ದೇವಸ್ಥಾನದ ಎದುರಿನ ಕೆರೆ ಮತ್ತು ಹಸಿರು ಪರಿಸರ ಛಾಯಾಗ್ರಾಹಕರಿಗೂ ಇಷ್ಟವಾಗುವ ಸ್ಥಳ.

ಶ್ರೀ ಮಹಾಲಸಾ ನಾರಾಯಣಿ ದೇವಾಲಯ
ಗೋವಾದ ಅತ್ಯಂತ ವೈಭವಶಾಲಿ ದೇವಾಲಯಗಳಲ್ಲಿ ಇದೂ ಒಂದು. ಇಲ್ಲಿನ ಎತ್ತರದ ದೀಪಸ್ತಂಭ, ಬೆಳ್ಳಿಯ ಅಲಂಕಾರಗಳು ಮತ್ತು ಅದ್ಭುತ ಮರದ ಕೆತ್ತನೆಗಳು ದೇವಾಲಯದ ಶ್ರೀಮಂತ ಪರಂಪರೆಯನ್ನು ಪರಿಚಯಿಸುತ್ತವೆ.

Untitled design - 2026-09-15T183647.147

ತಾಂಬಡಿ ಸುರ್ಲಾ ಮಹಾದೇವ ದೇವಾಲಯ
ಇದು ಗೋವಾದ ಅತ್ಯಂತ ಅಪರೂಪದ ದೇವಾಲಯಗಳಲ್ಲಿ ಒಂದು. ದಟ್ಟ ಕಾಡಿನ ಮಧ್ಯೆ ನೆಲೆಸಿರುವ ಈ ದೇವಾಲಯ 12ನೆಯ ಶತಮಾನದ ಕದಂಬರ ಕಾಲದ ನಿರ್ಮಾಣ. ಕಪ್ಪು ಬಸಾಲ್ಟ್ ಕಲ್ಲಿನಲ್ಲಿ ನಿರ್ಮಿಸಲಾದ ಈ ದೇವಾಲಯದ ಶಿಲ್ಪಕಲೆ ಅದ್ಭುತ. ಸುತ್ತಮುತ್ತ ಕಾಡು, ಪಕ್ಷಿಗಳ ಕಲರವ, ಮಂಜು ಮುಸುಕಿದ ವಾತಾವರಣ, ಇವೆಲ್ಲ ಸೇರಿ ಇದು ಗೋವಾದಲ್ಲೇ ಇದ್ದೇವೆಯೇ ಎಂಬ ಪ್ರಶ್ನೆ ಮೂಡಿಸುತ್ತದೆ. ಪ್ರಕೃತಿ ಮತ್ತು ಭಕ್ತಿಯ ಅಪರೂಪದ ಸಂಗಮ ಇಲ್ಲಿದೆ.

ಶ್ರೀ ಚಂದ್ರೇಶ್ವರ–ಭೂತನಾಥ ದೇವಾಲಯ
ಚಂದ್ರನ ಬೆಳಕಿನೊಂದಿಗೆ ಸಂಬಂಧ ಹೊಂದಿರುವ ಈ ದೇವಾಲಯ ಗೋವಾದ ವಿಶಿಷ್ಟ ಆಧ್ಯಾತ್ಮಿಕ ತಾಣಗಳಲ್ಲಿ ಒಂದು. ಬೆಟ್ಟದ ಮೇಲಿರುವುದರಿಂದ ಇಲ್ಲಿಂದ ಕಾಣುವ ಸೂರ್ಯಾಸ್ತ ಹಾಗೂ ಹಸಿರು ಕಣಿವೆಗಳ ನೋಟ ಮನಸಿನಲ್ಲಿ ದೀರ್ಘಕಾಲ ಉಳಿಯುತ್ತದೆ.

Untitled design - 2026-09-15T183950.140

ಗೋವಾದ ದೇವಾಲಯಗಳ ವೈಶಿಷ್ಟ್ಯ

ಗೋವಾದ ದೇವಾಲಯಗಳು ಕರ್ನಾಟಕ ಅಥವಾ ತಮಿಳುನಾಡಿನ ಗೋಪುರ ಶೈಲಿಗಿಂತ ಸಂಪೂರ್ಣ ಭಿನ್ನ. ಇಲ್ಲಿ ಬಿಳಿ ಬಣ್ಣದ ಗೋಡೆಗಳು, ಕೆಂಪು ಛಾವಣಿಗಳು, ಗುಮ್ಮಟದಾಕಾರದ ಮೇಲ್ಛಾವಣಿ, ಎತ್ತರದ ದೀಪಸ್ತಂಭ, ವಿಶಾಲ ಮಂಟಪಗಳು ಮತ್ತು ಇಂಡೋ-ಪೋರ್ಚುಗೀಸ್ ಪ್ರಭಾವದ ವಾಸ್ತುಶೈಲಿ ಗಮನ ಸೆಳೆಯುತ್ತದೆ. ದೇವಾಲಯಗಳಲ್ಲಿ ಪೂಜೆ ನಡೆಯುವ ರೀತಿ ಕೂಡ ವಿಭಿನ್ನ. ಭಜನೆ, ನಾದಸ್ವರ, ಗಂಟೆಗಳ ನಾದ ಮತ್ತು ಕೊಂಕಣಿ-ಮರಾಠಿ ಮಿಶ್ರ ಭಾಷೆಯಲ್ಲಿ ನಡೆಯುವ ಆರತಿ ಒಂದು ವಿಶಿಷ್ಟ ಅನುಭವ. ಅಲ್ಲಿನ ಅರ್ಚಕರನ್ನು ಪ್ರೀತಿಯಿಂದ "ಭಟ್ಜಿ (Bhatji)" ಎಂದು ಕರೆಯುತ್ತಾರೆ.

ಉಡುಪು ಮತ್ತು ದೇವಾಲಯದ ಶಿಸ್ತು

ಬಹುತೇಕ ದೇವಾಲಯಗಳಲ್ಲಿ ಸಭ್ಯ ಉಡುಪು ಧರಿಸುವಂತೆ ಸೂಚಿಸಲಾಗುತ್ತದೆ. ಮೊಣಕಾಲಿನ ಮೇಲಿನ ಶಾರ್ಟ್ಸ್, ಅತಿಯಾದ ಬಹಿರಂಗ ಉಡುಪುಗಳನ್ನು ತಪ್ಪಿಸುವುದು ಉತ್ತಮ. ಪುರುಷರು ಪ್ಯಾಂಟ್ ಅಥವಾ ಸಾಂಪ್ರದಾಯಿಕ ಉಡುಪು, ಮಹಿಳೆಯರು ಸೀರೆ, ಸಲ್ವಾರ್ ಅಥವಾ ಶಿಷ್ಟ ಉಡುಪು ಧರಿಸಿದರೆ ದೇವಾಲಯದ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಕೆಲವೆಡೆ ಗರ್ಭಗುಡಿಯಲ್ಲಿ ಛಾಯಾಚಿತ್ರ ತೆಗೆಯಲು ಅನುಮತಿ ಇರುವುದಿಲ್ಲ. ಸ್ಥಳೀಯ ಸಂಪ್ರದಾಯಗಳಿಗೆ ಗೌರವ ನೀಡುವುದು ಪ್ರತಿಯೊಬ್ಬ ಪ್ರವಾಸಿಗನ ಕರ್ತವ್ಯ.

Untitled design - 2026-09-15T183441.364

ಭಾಷೆ ಮತ್ತು ಸಂಸ್ಕೃತಿ

ಗೋವಾದ ಈ ಭಾಗದಲ್ಲಿ ಕೊಂಕಣಿ ಮುಖ್ಯ ಭಾಷೆ. ಜತೆಗೆ ಮರಾಠಿಯ ಪ್ರಭಾವವೂ ಹೆಚ್ಚಾಗಿದೆ. ಸ್ಥಳೀಯರು ಹಿಂದಿಯಲ್ಲೂ ಸುಲಭವಾಗಿ ಮಾತನಾಡುತ್ತಾರೆ. ‘ದೇವ್ ಬರೆಂ ಕರೂಂ’ (ದೇವರು ಒಳ್ಳೆಯದು ಮಾಡಲಿ) ಎಂಬ ಕೊಂಕಣಿ ಶುಭಾಶಯ ಕೇಳಿದಾಗ ಅಲ್ಲಿನ ಆತ್ಮೀಯತೆ ಮನಸಿಗೆ ತಾಕುತ್ತದೆ.

ಪ್ರವಾಸಿಗರಿಗೆ ಕೆಲವು ಸಲಹೆಗಳು

* ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಹಾಗೂ ಸಂಜೆ 4 ನಂತರ ದೇವಾಲಯಗಳಿಗೆ ಭೇಟಿ ನೀಡುವುದು ಉತ್ತಮ.
* ಒಂದೇ ದಿನದಲ್ಲಿ ಮಂಗೇಶಿ, ಶಾಂತಾದುರ್ಗಾ, ನಾಗೇಶಿ ಮತ್ತು ಮಹಾಲಸಾ ದೇವಾಲಯಗಳನ್ನು ನೋಡಬಹುದು.
* ತಾಂಬಡಿ ಸುರ್ಲಾ ಹಾಗೂ ಚಂದ್ರೇಶ್ವರ-ಭೂತನಾಥ ದೇವಾಲಯಗಳಿಗೆ ಪ್ರತ್ಯೇಕ ಸಮಯ ಮೀಸಲಿಟ್ಟರೆ ಉತ್ತಮ.
* ಮಳೆಗಾಲದಲ್ಲಿ ಹಸಿರು ಸೌಂದರ್ಯ ಮನಮೋಹಕವಾಗಿದ್ದರೂ ರಸ್ತೆಗಳಲ್ಲಿ ಎಚ್ಚರಿಕೆ ಅಗತ್ಯ.
* ಸ್ಥಳೀಯ ಸಸ್ಯಾಹಾರಿ ಊಟ, ಕೊಂಕಣಿ ಶೈಲಿಯ ಪ್ರಸಾದ ಹಾಗೂ ಸಾಂಪ್ರದಾಯಿಕ ಸಿಹಿತಿಂಡಿಗಳನ್ನು ಸವಿಯುವುದನ್ನು ಮರೆಯಬೇಡಿ.

ಇದನ್ನೂ ಓದಿ : ತ.ನಾಡು ದೇಗುಲಗಳಲ್ಲಿ ಮೊಬೈಲ್ ಬ್ಯಾನ್ : ಕರ್ನಾಟಕಕ್ಕೂ ಪಾಠವಾಗಲಿ!

ಸಂಸ್ಕೃತಿಯ ಸೊಬಗು – ಉಡುಗೆ, ಆಭರಣ ಮತ್ತು ಆಚರಣೆ

ಪೊಂಡಾದ ದೇವಾಲಯಗಳಲ್ಲಿ ದೇವರ ದರ್ಶನಕ್ಕಿಂತ ಮೊದಲು ಭಕ್ತರನ್ನು ನೋಡುವುದೇ ಒಂದು ಸಾಂಸ್ಕೃತಿಕ ಅನುಭವ. ಗೋವಾದ ಸಾರಸ್ವತ, ಗೌಡ ಸಾರಸ್ವತ ಹಾಗೂ ಇತರ ಕೊಂಕಣಿ ಹಿಂದೂ ಸಮುದಾಯಗಳ ಸಾಂಪ್ರದಾಯಿಕ ವೇಷಭೂಷಣಗಳು ಅಲ್ಲಿನ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪರಿಚಯಿಸುತ್ತವೆ.
ಮಹಿಳೆಯರು ಒಂಭತ್ತು ಗಜದ ಸೀರೆ (ನವ್ವಾರಿ) ಅಥವಾ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯುಟ್ಟು, ತಲೆಗೆ ಹೂ ಮುಡಿದು, ಮಂಗಳಸೂತ್ರ, ಲಕ್ಷ್ಮೀ ಹಾರ, ಪಾಟ್ಲ್ಯಾ, ತೋಡೆ, ಜುಮುಕಿ ಕಿವಿಯೋಲೆ, ಮೂಗುತಿ ಹಾಗೂ ಚಿನ್ನದ ಬಳೆಗಳಿಂದ ಅಲಂಕರಿಸಿಕೊಂಡು ಭಕ್ತಿಭಾವದಿಂದ ದೇವರ ದರ್ಶನಕ್ಕೆ ಬರುತ್ತಾರೆ. ಅವರ ಉಡುಪಿನಲ್ಲಿ ಆಡಂಬರವಿಲ್ಲ, ಸಂಪ್ರದಾಯದ ಸೊಬಗು ಮಾತ್ರ ಕಾಣಿಸುತ್ತದೆ.

ದಾರಿ ಹೇಗೆ?

- ಬೆಂಗಳೂರಿನಿಂದ ಪೊಂಡಾಕ್ಕೆ ರಸ್ತೆ ಮಾರ್ಗವಾಗಿ ಸುಮಾರು 620–650 ಕಿ.ಮೀ. ದೂರವಿದ್ದು, ಪ್ರಯಾಣಕ್ಕೆ 11–12 ಗಂಟೆಗಳು ಬೇಕಾಗುತ್ತದೆ. ರೈಲು ಮತ್ತು ವಿಮಾನ ಸೌಲಭ್ಯವೂ ಇದೆ.

- ಹುಬ್ಬಳ್ಳಿಯಿಂದ ಪೊಂಡಾ ಸುಮಾರು 160–180 ಕಿ.ಮೀ. ದೂರ. ರಸ್ತೆ ಮಾರ್ಗದಲ್ಲಿ 4–5 ಗಂಟೆಗಳಲ್ಲಿ ತಲುಪಬಹುದು. ಉತ್ತರ ಕರ್ನಾಟಕದ ಪ್ರವಾಸಿಗರಿಗೆ ಇದು ವಾರಾಂತ್ಯದ ಉತ್ತಮ ಆಧ್ಯಾತ್ಮಿಕ ಪ್ರವಾಸಿ ತಾಣ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ