Wednesday, November 18, 2026
Wednesday, November 18, 2026

ಮಾಥೇರಾನ್ ಪ್ರವಾಸ

ಮಹಾರಾಷ್ಟ್ರದಲ್ಲೊಂದು ಮಲೆನಾಡಾದ ʼಮಾಥೇರಾನ್ʼ ಎಂಬ ಪದ ಮರಾಠಿಯ ʼಮಾಥಾʼ (ತುದಿ ಅಥವಾ ನೆತ್ತಿ) ಮತ್ತು ʼರಾನ್ʼ (ಕಾಡು) ಎಂಬ ಎರಡು ಪದಗಳಿಂದ ಬಂದಿದೆ. ಅಕ್ಷರಶಃ ಇದರ ಅರ್ಥ ʼಬೆಟ್ಟದ ತುದಿಯ ಮೇಲಿನ ಕಾಡು.ʼ ಈ ಹೆಸರಿನಂತೆ ಇಡೀ ಗಿರಿಧಾಮ ದಟ್ಟ ಕಾಡಿನ ಹೊದಿಕೆಯಲ್ಲಿ ಮಡುಗಟ್ಟಿಕೊಂಡಿದೆ.

  • ಚಂದ್ರಶೇಖರ ಮದಭಾವಿ

ಮುಂಜಾನೆಯ ಮಳೆ ಇನ್ನೂ ಸಂಪೂರ್ಣ ನಿಂತಿರಲಿಲ್ಲ. ಟಾಯ್ ಟ್ರೇನ್‌ನ ಕಿಟಕಿಯಿಂದ ಹೊರಗೆ ನೋಡಿದರೆ ಮಂಜಿನ ಹೊದಿಕೆಯೊಳಗೆ ಮರಗಳು ಒಂದೊಂದಾಗಿ ಕಾಣಿಸಿಕೊಂಡು ಮತ್ತೆ ಕಣ್ಮರೆಯಾಗುತ್ತಿದ್ದವು. ರೈಲು ನಿಧಾನವಾಗಿ ತಿರುವುಗಳನ್ನು ದಾಟುತ್ತ ಸಾಗುತ್ತಿದ್ದಂತೆ ಕೆಳಗೆ ಆಳವಾದ ಕಣಿವೆಗಳು, ದೂರದಲ್ಲಿ ಹಾಲಿನಂತೆ ಹರಿಯುವ ಜಲಪಾತಗಳು ಕಣ್ಣಿಗೆ ಬೀಳುತ್ತಿದ್ದವು. ಪ್ರತಿಯೊಂದು ತಿರುವಿನಲ್ಲೂ ಹೊಸ ದೃಶ್ಯ ಕಾದಿತ್ತು. ರೈಲಿನ ವೇಗ ಗಂಟೆಗೆ ಕೆಲವೇ ಕಿಲೋಮೀಟರ್ ಆದರೂ, ಪ್ರಕೃತಿಯನ್ನು ಆಸ್ವಾದಿಸಲು ಅದಕ್ಕಿಂತ ಸೂಕ್ತ ವೇಗ ಇನ್ನೊಂದಿಲ್ಲ ಎನ್ನಿಸಿತು. ನಗರದ ಓಟದ ಬದುಕಿನಲ್ಲಿ ನಾವು ಕಳೆದುಕೊಂಡಿರುವ ನಿಧಾನತೆಯನ್ನು ಈ ರೈಲು ಮತ್ತೆ ಕಲಿಸುತ್ತಿದೆ ಎಂಬ ಭಾವನೆ ಮನಸಿನಲ್ಲಿ ಮೂಡಿತು.

ಇದನ್ನೂ ಓದಿ: ಸ್ಕಂದಗಿರಿ, ಕೈವಾರದಲ್ಲಿ 6 ತಿಂಗಳ ಬಳಿಕ ಚಾರಣ ಪ್ರಾರಂಭ

ಟಾಯ್ ಟ್ರೇನ್‌ನಿಂದ ಇಳಿದ ಆ ಕ್ಷಣ ಎಲ್ಲವೂ ಸ್ತಬ್ಧವಾಗಿಬಿಟ್ಟಿತು. ಯಾವ ಹಾರ್ನ್‌ ಸದ್ದೂ ಇಲ್ಲ, ವಾಹನಗಳ ಎಂಜಿನ್ ಶಬ್ದವೂ ಇಲ್ಲ- ಇರುವುದೆಲ್ಲಾ ಕೆಂಪು ಮಣ್ಣಿನ ಹಾದಿ, ಒದ್ದೆ ಕಾಡಿನ ವಾಸನೆ, ಮತ್ತು ಆಗೊಮ್ಮೆ ಈಗೊಮ್ಮೆ ಕುದುರೆ ಗೊರಸಿನ ಸದ್ದು. ಏಷ್ಯಾದ ಏಕೈಕ ವಾಹನ ರಹಿತ ಗಿರಿಧಾಮ ಎಂದೇ ಖ್ಯಾತಿ ಪಡೆದಿರುವ ಮಹಾರಾಷ್ಟ್ರದ ಮಾಥೇರಾನ್, ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 800 ಮೀಟರ್ ಎತ್ತರದಲ್ಲಿ ಕುಳಿತಿದೆ. ಬೆಂಗಳೂರಿನಿಂದ ಇಷ್ಟು ದೂರ ಬಂದು, ಈ ಮೌನವನ್ನು ಅನುಭವಿಸಿದ ಮೇಲೆ, ಪ್ರಯಾಣ ಸಾರ್ಥಕವಾಯಿತು ಎನ್ನಿಸಿತು.

ಬೆಂಗಳೂರಿನಿಂದ ಮಾಥೇರಾನ್‌ವರೆಗಿನ ಪಯಣ

ನಾನು ಬೆಂಗಳೂರಿನಿಂದ ವಿಜಯಪುರಕ್ಕೆ ಬಂದು ಗೆಳೆಯರ ಜತೆಗೆ ರೈಲಿನಲ್ಲಿ ಪ್ರಯಾಣ ಮಾಡಿ ಮಾಥೇರಾನ್ ತಲುಪಿದ್ದೆ. ನೀವು ವಿಮಾನ/ರೈಲಿನ ಮೂಲಕ ಮುಂಬಯಿ ಅಥವಾ ಪುಣೆ ತಲುಪಿ, ನಂತರ ನೇರಳ್ (Neral) ರೈಲು ನಿಲ್ದಾಣಕ್ಕೆ, ಬಂದು ಅಲ್ಲಿಂದ ಟಾಯ್ ಟ್ರೇನ್ ಅಥವಾ ಟ್ಯಾಕ್ಸಿ ಹಿಡಿದು ಮಾಥೇರಾನ್ ತಲುಪಬಹುದು. ʼಮಾಥೇರಾನ್ʼ ಎಂಬ ಪದ ಮರಾಠಿಯ ʼಮಾಥಾʼ (ತುದಿ ಅಥವಾ ನೆತ್ತಿ) ಮತ್ತು ʼರಾನ್ʼ (ಕಾಡು) ಎಂಬ ಎರಡು ಪದಗಳಿಂದ ಬಂದಿದೆ. ಅಕ್ಷರಶಃ ಇದರ ಅರ್ಥ ʼಬೆಟ್ಟದ ತುದಿಯ ಮೇಲಿನ ಕಾಡು.ʼ ಈ ಹೆಸರಿನಂತೆ ಇಡೀ ಗಿರಿಧಾಮ ದಟ್ಟ ಕಾಡಿನ ಹೊದಿಕೆಯಲ್ಲಿ ಮಡುಗಟ್ಟಿಕೊಂಡಿದೆ.

Untitled Design (24)

ಟಾಯ್ ಟ್ರೇನ್ ಮ್ಯಾಜಿಕ್ ಮತ್ತು ಕೆಂಪು ಮಣ್ಣಿನ ದಾರಿಗಳು

ಮಾಥೇರಾನ್ ತಲುಪುವ ಅಸಲಿ ಮಜಾ ಇರುವುದೇ ಈ 1907ರಲ್ಲಿ ನಿರ್ಮಿಸಲಾದ ಪುಟ್ಟ ಟಾಯ್ ಟ್ರೇನ್‌ನಲ್ಲಿ. ನೇರಳ್‌ನಿಂದ ಮಾಥೇರಾನ್‌ವರೆಗೆ ಸುಮಾರು 21 ಕಿಮೀ. ದೂರ ಕ್ರಮಿಸುವ ಈ ರೈಲು, ದಟ್ಟ ಕಾಡಿನ ನಡುವೆ, ಸುರಂಗಗಳ ಮೂಲಕ, ತಿರುವುಗಳಲ್ಲಿ ಸಾಗುತ್ತಾ ಒಂದು ಶತಮಾನದ ಇತಿಹಾಸವನ್ನು ಮೆಲುಕು ಹಾಕಿಸುತ್ತದೆ. ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಇದೇ ಹಳಿಗಳ ಮೇಲೆ ನಿಧಾನವಾಗಿ ಸಾಗುತ್ತಿರುವ ಈ ರೈಲು, ಸಾವಿರಾರು ಪ್ರವಾಸಿಗರಿಗೆ ಮಾಥೇರಾನ್‌ನ ಮೊದಲ ನೆನಪಾಗಿ ಉಳಿದಿದೆ. ಕಿಟಕಿಯಾಚೆ ನೋಡಿದರೆ ಹಸಿರಿನಿಂದ ಕಂಗೊಳಿಸುತ್ತಿರುವ ಕಾಡು ಮತ್ತು ಅದರ ಮಧ್ಯೆ ಎಲ್ಲೆಂದರಲ್ಲಿ ಪ್ರಕೃತಿ ನಿರ್ಮಿತ ಮನಮೋಹಕ ಜಲಪಾತಗಳು. ಮಾಥೇರಾನ್ ಪಾರ್ಕಿಂಗ್‌ನಿಂದ ಮುಂದೆ ಯಾವುದೇ ವಾಹನಕ್ಕೆ ಪ್ರವೇಶವಿಲ್ಲ - ಕಾಲ್ನಡಿಗೆ, ಕುದುರೆ ಸವಾರಿ ಅಥವಾ ಕೈಯಿಂದ ಎಳೆಯುವ ರಿಕ್ಷಾ ಬಳಸಿ ನೀವು ಮೇಲೆ ಹೋಗಬಹುದು. ಪ್ರಕೃತಿಯ ಸ್ವಾಭಾವಿಕ ಸೌಂದರ್ಯವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಮಾಥೇರಾನ್‌ನಲ್ಲಿ ವಾಹನಗಳಿಗೆ ಪ್ರವೇಶವಿಲ್ಲ. ಬೆಟ್ಟದ ಮೇಲಿನ ಗಾಳಿ ಇಂದಿಗೂ ಹೊಗೆಯಿಲ್ಲದೆ ಶುದ್ಧವಾಗಿದೆ. ಅದಕ್ಕಾಗಿಯೇ ಇಲ್ಲಿ ಕೇಳಿಸುವುದು ವಾಹನಗಳ ಗದ್ದಲವಲ್ಲ; ಕಾಡಿನ ಹಕ್ಕಿಗಳ ಚಿಲಿಪಿಲಿ, ಕುದುರೆಗಳ ಕಾಲಿನ ಸದ್ದು ಮತ್ತು ಗಾಳಿಯಲ್ಲಿ ಅಲ್ಲಾಡುವ ಮರಗಳ ನಿನಾದ.

Untitled Design (25)

ಮಾಥೇರಾನ್‌ನ ಇತಿಹಾಸ

1850ರಲ್ಲಿ ಬ್ರಿಟಿಷ್ ಆಡಳಿತದ ಥಾಣೆ ಜಿಲ್ಲೆಯ ಕಲೆಕ್ಟರ್ ಹ್ಯೂ ಪಾಯಿಂಟ್ಸ್ ಮ್ಯಾಲೆಟ್ ಸಹ್ಯಾದ್ರಿಯ ಈ ಸುಂದರ ಪ್ರದೇಶವನ್ನು ಕಂಡುಹಿಡಿದ ನಂತರ, ಮುಂಬಯಿನ ಉರಿಬಿಸಿಲಿನಿಂದ ತಪ್ಪಿಸಿಕೊಳ್ಳಲು ಬ್ರಿಟಿಷ್ ಅಧಿಕಾರಿಗಳ ನೆಚ್ಚಿನ m2ಬೇಸಿಗೆ ತಂಗುದಾಣವಾಗಿ ಮಾಥೇರಾನ್ ಬೆಳೆಯಿತು. ನಂತರ ನಿರ್ಮಾಣವಾದ ಬಂಗಲೆಗಳು, ಕಲ್ಲಿನ ಹಾದಿಗಳು ಮತ್ತು 1907ರಲ್ಲಿ ಆರಂಭವಾದ ನೇರಳ್–ಮಾಥೇರಾನ್ ಟಾಯ್ ಟ್ರೇನ್ ಈ ಗಿರಿಧಾಮಕ್ಕೆ ವಿಶಿಷ್ಟ ಗುರುತನ್ನು ನೀಡಿದವು. ಪ್ರಕೃತಿಯ ಮೂಲ ಸೌಂದರ್ಯಕ್ಕೆ ಧಕ್ಕೆಯಾಗದಂತೆ ವಾಹನಗಳ ಪ್ರವೇಶವನ್ನು ನಿಯಂತ್ರಿಸಿದ ಪರಿಣಾಮ, ಇಂದಿಗೂ ಮಾಥೇರಾನ್ ತನ್ನ ಶುದ್ಧ ಗಾಳಿ, ನಿಶ್ಶಬ್ದ ವಾತಾವರಣ ಮತ್ತು ನೈಸರ್ಗಿಕ ಸೊಬಗನ್ನು ಉಳಿಸಿಕೊಂಡಿರುವ ಭಾರತದ ಅಪರೂಪದ ಗಿರಿಧಾಮಗಳಲ್ಲಿ ಒಂದಾಗಿದೆ.

ಮಾಥೇರಾನ್‌ನ ಪ್ರಮುಖ ವೀಕ್ಷಣಾ ತಾಣಗಳು

ಮಾಥೇರಾನ್‌ನಲ್ಲಿ 38ಕ್ಕೂ ಹೆಚ್ಚು ವೀಕ್ಷಣಾ ತಾಣಗಳಿವೆ (ವ್ಯೂ ಪಾಯಿಂಟ್ಸ್) ಎಂದರೆ ನಂಬುತ್ತೀರಾ? ಪ್ರತಿಯೊಂದೂ ತನ್ನದೇ ವಿಶಿಷ್ಟ ನೋಟ ನೀಡುತ್ತದೆ

  • ಎಕೋ ಪಾಯಿಂಟ್ - ಇಲ್ಲಿ ಕೂಗಿದರೆ ನಿಮ್ಮದೇ ಧ್ವನಿ ಪ್ರತಿಧ್ವನಿಸಿ ಮರಳುತ್ತದೆ
  • ಪನೋರಮಾ ಪಾಯಿಂಟ್ - ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಅದ್ಭುತ ದೃಶ್ಯ ನೀಡುವ ತಾಣ
  • ಷಾರ್ಲೊಟ್ ಲೇಕ್ - ಮಳೆನೀರಿನಿಂದ ತುಂಬಿದ ಶಾಂತ ಸರೋವರ, ಸುತ್ತಲೂ ದಟ್ಟ ಕಾಡು

ಬೆಳಗ್ಗೆ ಬೇಗನೆ ಹೋದರೆ ನಿಮಗೆ ಮೋಡಗಳ ಮಧ್ಯೆ ಈ ಬೆಟ್ಟ ಗುಡ್ಡ ಜಲಪಾತಗಳ ಸೌಂದರ್ಯ ಸವಿದು ಸಾಕಷ್ಟು ಫೊಟೋಗಳನ್ನು ತೆಗೆದುಕೊಳ್ಳಬಹುದು. ತಡವಾಗಿ ಹೋದರೆ ಈ ಪಾಯಿಂಟ್‌ಗಳಲ್ಲಿ ಜನ ತುಂಬಿಕೊಂಡಿರುತ್ತಾರೆ.

Untitled Design (26)

ಕಾಲ್ನಡಿಗೆಯಲ್ಲೋ, ಕುದುರೆಯ ಮೇಲೋ

ವಾಹನವಿಲ್ಲದ ಈ ಊರಿನಲ್ಲಿ ಸುತ್ತಾಡುವುದೇ ಒಂದು ವಿಶಿಷ್ಟ ಅನುಭವ. ಕುದುರೆ ಸವಾರಿ ಇದ್ದರೂ ನಾವಂತೂ ನಡೆದುಕೊಂಡೆ ಎಲ್ಲ ಪಾಯಿಂಟ್‌ಗಳಿಗೆ ಭೇಟಿ ನೀಡಿದೆವು. ದಟ್ಟ ಕಾಡಿನ ನಡುವಿನ ಕೆಂಪು ಮಣ್ಣಿನ ಹಾದಿಗಳಲ್ಲಿ ಗೆಳೆಯರ ಜತೆ ಹರಟೆ ಹೊಡೆಯುತ್ತಾ ನಡೆಯುತ್ತಿದ್ದರೆ, ನಗರದ ಗಡಿಬಿಡಿ ಎಲ್ಲೋ ಬಹುದೂರದಲ್ಲಿ ಉಳಿದುಬಿಡುತ್ತದೆ.

ಸ್ಥಳೀಯ ರುಚಿ ಮತ್ತು ಮಾರುಕಟ್ಟೆ

ಮಾಥೇರಾನ್ ವರೆಗೆ ಬಂದು ಮಹಾರಾಷ್ಟ್ರೀಯ ಖಾದ್ಯಗಳನ್ನು ಸವಿಯದಿದ್ದರೆ ಹೇಗೆ? ನೀವು ಮಹಾರಾಷ್ಟ್ರಕ್ಕೆ ಬಂದರೆ ವಡಾ ಪಾವ್, ಮೀಸಳ್ ಪಾವ್, ಭಾಕ್ರಿ, ಠೇಚಾ, ಮಸಾಲಾ ಭಾತ್, ಥಾಲಿಪೀಠ ಇತ್ಯಾದಿಗಳ ರುಚಿ ನೋಡಲು ಮರೆಯದಿರಿ. ಬೆಲೆಗಳು ಕೂಡ ಕೈಗೆಟುಕುವಂತಿರುತ್ತವೆ. ಎಚ್ಚರ - ಇಲ್ಲಿ ಕೋತಿಗಳು ಸಾಕಷ್ಟಿದ್ದು, ಆಹಾರ ಪದಾರ್ಥಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವಾಗ ಎಚ್ಚರಿಕೆ ಅಗತ್ಯ.

ಈ ಪ್ರವಾಸ ನನಗೆ ವಿಶೇಷವಾಗಿತ್ತು ಕಾರಣ ʼಮಳೆಯಲಿ ಗೆಳೆಯರ ಜತೆಯಲಿʼ ಎಂಬಂತೆ ಹಳೆಯ ಗೆಳೆಯರೆಲ್ಲ ಜತೆಗಿದ್ದರು. ಎರಡು ದಿನ ಅವರ ಜತೆಗೆ ಹರಟೆ ಹೊಡೆಯುತ್ತಾ ಚಾರಣ ಮಾಡಿದ್ದರಿಂದ ದೈಹಿಕವಾಗಿ ಆಯಾಸವೆನಿಸಲಿಲ್ಲ. ಬೆಂಗಳೂರಿಗೆ ಮರಳುವ ದಾರಿಯುದ್ದಕ್ಕೂ, ಮಂಜಿನಲ್ಲಿ ಮುಳುಗಿದ ಆ ಬೆಟ್ಟಗಳ ನೆನಪು ಮನಸಿನಿಂದ ಮರೆಯಾಗಲಿಲ್ಲ.

ಇದನ್ನೂ ಓದಿ: ವಿಮಾನ ಪ್ರಯಾಣ: 700% ದರ ಏರಿಕೆ ಅರ್ಜಿಗೆ ಸುಪ್ರೀಂ ಕೋರ್ಟ್‌ ಪ್ರತಿಕ್ರಿಯೆ

ಮಾಹಿತಿ ಪೆಟ್ಟಿಗೆ

  • ತಲುಪುವ ಮಾರ್ಗ: ಮುಂಬಯಿನಿಂದ ನೇರಳ್‌ಗೆ ಲೋಕಲ್ ರೈಲಿನಲ್ಲಿ ಪ್ರಯಾಣಿಸಿ, ಅಲ್ಲಿಂದ ಟಾಯ್ ಟ್ರೇನ್ ಅಥವಾ ಟ್ಯಾಕ್ಸಿ ಮೂಲಕ ದಸ್ತೂರಿ ಪಾರ್ಕಿಂಗ್‌ಗೆ, ನಂತರ ಕಾಲ್ನಡಿಗೆ/ಕುದುರೆ/ರಿಕ್ಷಾ ಮೂಲಕ ಮಾಥೇರಾನ್ ಊರಿಗೆ.
  • ಟಾಯ್ ಟ್ರೇನ್ ಟಿಕೆಟ್: ಆನ್‌ಲೈನ್‌ನಲ್ಲಿ ಸಿಗುವುದಿಲ್ಲ, ನೇರಳ್ ನಿಲ್ದಾಣದಲ್ಲೇ ಖರೀದಿಸಬೇಕು. ರಶ್ ಇರುವ ಕಾಲದಲ್ಲಿ ಬೇಗ ತಲುಪುವುದು ಒಳಿತು.
  • ಸೂಕ್ತ ಸಮಯ: ಮಳೆಗಾಲದಲ್ಲಿ (ಜೂನ್-ಸೆಪ್ಟೆಂಬರ್) ಹಸಿರು, ಜಲಪಾತ ಮತ್ತು ಮಂಜಿನ ದೃಶ್ಯ ಚೆನ್ನಾಗಿರುತ್ತದೆ; ಚಳಿಗಾಲದಲ್ಲಿ ಪ್ರಶಾಂತ, ತಂಪಾದ ವಾತಾವರಣ.
  • ತಂಗುವ ಸ್ಥಳ: ಬೆಟ್ಟದ ಮೇಲೆ ಸಾಕಷ್ಟು ಹೊಟೇಲು ಮತ್ತು ರೆಸಾರ್ಟ್‌ಗಳಿವೆ. ರೂಮುಗಳು ಭರ್ತಿ ಆಗಿರುವುದರಿಂದ, ಮೊದಲೇ ಬುಕ್ ಮಾಡಿಕೊಂಡು ಹೋದರೆ ಒಳಿತು.
  • ಸಲಹೆ: ಯಾವಾಗಲೂ ಮಳೆ ಇರುವುದರಿಂದ ನೀರಲ್ಲಿ ನೆನೆದು ಹೋಗದಂತ ಚಪ್ಪಲಿ ಅಥವಾ ಶೂಗಳನ್ನು ಬಳಸಬೇಡಿ. ಕ್ರೋಕ್ಸ್ ಅಥವಾ ರಬ್ಬರ್ ಚಪ್ಪಲಿ ಒಳ್ಳೆಯದು. ಯಾವಾಗ ಮಳೆ ಸುರಿಯುತ್ತದೆ ಎಂದು ಹವಾಮಾನ ತಜ್ಞರಿಗೂ ಹೇಳಲಾಗುವುದಿಲ್ಲ ಆದ್ದರಿಂದ ರೇನ್ ಕೋಟ್ ಅಥವಾ ಕೊಡೆ ಅಂತೂ ಬೇಕೆ ಬೇಕು. ಅಷ್ಟೇನೂ ಚಳಿ ಇರದಿದ್ದರೂ ಒಂದು ಬೆಚ್ಚಗಿನ ಜಾಕೆಟ್ ಅಥವಾ ಸ್ವೆಟರ ಇದ್ದರೆ ಒಳ್ಳೆಯದು. ಆದಷ್ಟು ಕಡಿಮೆ ಲಗೆಜ್ ತೆಗೆದುಕೊಂಡು ಹೋಗಿ. ಬೆಟ್ಟದ ಮೇಲೆ ನೆಟ್‌ವರ್ಕ್ ಇರುವುದಿಲ್ಲ ಆದ್ದರಿಂದ ಖರ್ಚಿಗೆ ಹಣವನ್ನು ನಗದು ರೂಪದಲ್ಲಿ ಇಟ್ಟುಕೊಳ್ಳಿ. ಜನಸಂದಣಿ ತಪ್ಪಿಸಲು ಬೆಳಗ್ಗೆ ಬೇಗ ಹೊರಡಿ. ಮಳೆಯಿಂದ ನಿಮ್ಮ ಆರೋಗ್ಯ ಏರುಪೇರಾಗಬಹುದು ಅದಕ್ಕೆ ನೆಗಡಿ, ಕೆಮ್ಮು ಮತ್ತು ಜ್ವರದ ಔಷಧಿ ಜತೆಗಿರಲಿ.
Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ