ಅರುಣಾಚಲಪ್ರದೇಶದ ಸೆಲಾ ಸರೋವರದಲ್ಲಿ ಮುಳುಗಿ ಕೇರಳ ಪ್ರವಾಸಿಗರ ಸಾವು
ಅರುಣಾಚಲ ಪ್ರದೇಶದ ಸೆಲಾ ಸರೋವರದಲ್ಲಿ, ಮಂಜುಗಡ್ಡೆಯೊಂದಿಗೆ ಬಿದ್ದಿದ್ದ ತನ್ನ ಸಹಚರನನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದ ಇಬ್ಬರು ಕೇರಳ ಪ್ರವಾಸಿಗರು ಮುಳುಗಿ ಸಾವನ್ನಪ್ಪಿದ್ದಾರೆ. ಒಬ್ಬರ ಮೃತದೇಹ ಪತ್ತೆಯಾಗಿದೆ. ವಿಪರೀತ ಚಳಿಯು ಕಾರ್ಯಾಚರಣೆಗೆ ಅಡ್ಡಿಯಾಗಿರುವುದರಿಂದ ಮತ್ತೊಬ್ಬರ ಮೃತ ದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ.
ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಸೆಲಾ ಸರೋವರಕ್ಕೆ ಭೇಟಿ ನೀಡಿದ್ದ ಕೇರಳ ಪ್ರವಾಸಿಗರು ಶುಕ್ರವಾರ(ಜ.21) ಸರೋವರದಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ದಿನು (26) ಮತ್ತು ಮಹಾದೇವ್ (24) ಎಂದು ಗುರುತಿಸಲಾಗಿದೆ. ಅವರು ಗುವಾಹಟಿ ಮೂಲಕ ತವಾಂಗ್ ತಲುಪಿದ್ದ ಏಳು ಸದಸ್ಯರ ಪ್ರವಾಸಿ ಗುಂಪಿನ ಭಾಗವಾಗಿದ್ದರು. ಸುದೀರ್ಘ ಕಾರ್ಯಾಚರಣೆಯಲ್ಲಿ ಒಬ್ಬರ ಮೃತದೇಹವಷ್ಟೇ ಪತ್ತೆಯಾಗಿದ್ದು, ಮತ್ತೋರ್ವ ಪ್ರವಾಸಿಗನ ಮೃತ ದೇಹಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೆಸಿನೋಗಳಿಗೆ ನಮ್ಮ ಪ್ರವಾಸೋದ್ಯಮ ನೀತಿಯಲ್ಲಿ ಪ್ರೋತ್ಸಾಹವಿಲ್ಲ - ಹೆಚ್ ಕೆ ಪಾಟೀಲ್
ಪೊಲೀಸರ ಪ್ರಕಾರ, ಮಧ್ಯಾಹ್ನದ ವೇಳೆಗೆ ಈ ಘಟನೆ ಸಂಭವಿಸಿದ್ದು, ಗುಂಪಿನ ಒಬ್ಬ ಸದಸ್ಯ ಆಕಸ್ಮಿಕವಾಗಿ ಸರೋವರಕ್ಕೆ ಆಯತಪ್ಪಿ ಬಿದ್ದು ಮುಳುಗಿದ್ದಾನೆ. ʼಮಧ್ಯಾಹ್ನದ ವೇಳೆ ಈ ಘಟನೆ ನಡೆದಿದ್ದು, ಗುಂಪಿನ ಒಬ್ಬ ಸದಸ್ಯ ಸರೋವರದಲ್ಲಿ ಜಾರಿಬಿದ್ದು ಮುಳುಗಿದ್ದಾನೆ. ಅವನನ್ನು ಕಾಪಾಡಲು ಹೋಗಿ ಮತ್ತೊಬ್ಬನೂ ಮುಳುಗಿ ಹೋಗಿದ್ದಾನೆ. ಸಹಚರರಾದ ದಿನು ಮತ್ತು ಮಹಾದೇವ್ ಅವರನ್ನು ರಕ್ಷಿಸುವ ಸಲುವಾಗಿ ಮೂರನೆಯ ವ್ಯಕ್ತಿ ಸರೋವರಕ್ಕೆ ಜಿಗಿದರೂ ಪ್ರಯೋಜನವಾಗಿಲ್ಲ. ಮೂರನೆಯ ಪ್ರವಾಸಿ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರೂ, ಈಗಾಗಲೇ ಮುಳುಗಿ ಹೋಗಿದ್ದ ಇಬ್ಬರೂ ಹಿಮಾವೃತವಾಗಿದ್ದ ನೀರಿನ ಅಡಿಯಲ್ಲಿ ಕೊಚ್ಚಿಹೋದರುʼ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಿಡಬ್ಲ್ಯೂ ಥೋಂಗನ್ ಮಾಧ್ಯಮದವರಿಗೆ ತಿಳಿಸಿದ್ದಾರೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಜಿಲ್ಲಾಡಳಿತಕ್ಕೆ ದುರಂತದ ಬಗ್ಗೆ ಮಾಹಿತಿ ಸಿಕ್ಕಿದ್ದು, ತಕ್ಷಣವೇ ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.