• ಡಾ.ಪ್ರಕಾಶ ಗ.ಖಾಡೆ

ಕಾಶ್ಮೀರ ಪ್ರವಾಸ ಮಾಡಿದ್ದು ನನ್ನ ಜೀವಮಾನದ ಒಂದು ಸಾರ್ಥಕವಾದ ಘಳಿಗೆಯಾಗಿ ಉಳಿದಿದೆ. ಹಿಮಾಚ್ಛಾದಿತ ಪರ್ವತಗಳು, ಸಾಹಸಕ್ಕೆ ಸವಾಲೊಡ್ಡುವ ಬೆಟ್ಟ- ಗುಡ್ಡಗಳು, ಮೈಕೊರೆಯುವ ಚಳಿಯಲ್ಲೂ ಮನಸಿಗೆ ಉಲ್ಲಾಸ ನೀಡುವ ಸರೋವರಗಳು, ಸ್ವರ್ಗಕ್ಕೆ ಕಿಚ್ಚು ಹಚ್ಚುವ ಪ್ರಕೃತಿಯ ಮಡಿಲಲ್ಲಿ ಅರಳಿದ ಬಗೆ ಬಗೆಯ ಬಣ್ಣದ ಹೂವುಗಳು ಇರುವ ಕಾಶ್ಮೀರ ಧರೆಯ ಸ್ವರ್ಗವೆನಿಸಿತು. ಇಲ್ಲಿ ಕಾವಲಾಗಿರುವ ನಮ್ಮ ಸೇನಾನಿಗಳು ನಮಗೆ ಈ ಪ್ರವಾಸದಲ್ಲಿ ಕಂಡಿದ್ದು, ಸಂಪೂರ್ಣ ಪ್ರವಾಸ ನಮ್ಮದಾಗಿತ್ತು.

ನಮ್ಮ ಕಾಶ್ಮೀರ ಪ್ರವಾಸದಲ್ಲಿ ಗುಲ್ಮಾರ್ಗ್‌ನಲ್ಲಿ ಸಂಭ್ರಮಿಸುವುದು ಸೇರಿತ್ತು. ಇಲ್ಲಿ ನೀವು ಕೆಬಲ್ ಕಾರಿನಲ್ಲಿ ಪಯಣಿಸಬೇಕಾದರೆ ಮೊದಲೇ ಟಿಕೆಟ್ ಬುಕ್ ಮಾಡಿರಬೇಕು. ಹೆಜ್ಜೆ ಹೆಜ್ಜೆಗೂ ಇಲ್ಲಿ ತಪಾಸಣೆ ನಡೆಯುತ್ತದೆ. ಹಿಮಚ್ಛಾದಿತ ಪರ್ವತದ ತುತ್ತ ತುದಿಗೆ ಕರೆದುಕೊಂಡು ಹೋಗುವ ಕೆಬಲ್ ಕಾರುಗಳು ಅಲ್ಲಿನ ಪ್ರಕೃತಿಯ ವಿಸ್ಮಯವನ್ನು ನಮ್ಮೆದುರಿಗೆ ಅಪೂರ್ವವಾಗಿ ಅನಾವರಣಗೊಳಿಸುತ್ತವೆ.

ಇದನ್ನೂ ಓದಿ: ಕೇರಳ ಪ್ರವಾಸವೆಂದರೆ ಭಕ್ತಿ ಮತ್ತು ಪ್ರಕೃತಿ ಸೌಂದರ್ಯಗಳ ಸಂಗಮ

ಗೊಂಡೊಲಾ ಕೆಬಲ್ ಕಾರು ಸವಾರಿಗೆ ಗುಲ್ಮಾರ್ಗ್ ಪ್ರಸಿದ್ಧವಾಗಿದೆ. ಇದು ವಿಶ್ವದ ಎರಡನೆಯ ಅತಿ ಎತ್ತರದ ಮತ್ತು ಎರಡನೆಯ ಅತಿ ಉದ್ದದ ಕೇಬಲ್ ಕಾರು ಸವಾರಿ ಎಂದು ಗುರುತಿಸಿಕೊಂಡಿದೆ. ವಿಶೇಷವೆಂದರೆ ವರ್ಷವಿಡೀ ಸಾವಿರಾರು ಪ್ರವಾಸಿಗರು ಮತ್ತು ಸಾಹಸಿಗರು ಈ ಸವಾರಿ ಅನುಭವಿಸಲೆಂದೆ ಬರುತ್ತಾರೆ. ಇದು ಮೂರು ಹಂತದ ಗೊಂಡೊಲಾ ಲಿಫ್ಟ್ ಆಗಿದ್ದು, ಗಂಟೆಗೆ ಸುಮಾರು 600 ಜನರನ್ನು ಕಾಂಗ್ಡೂರಿ ಪರ್ವತಕ್ಕೆ ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ. ಈ ಅದ್ಭುತ ರೋಪ್‌ ವೇ ಯೋಜನೆಯು ಜಮ್ಮು ಮತ್ತು ಕಾಶ್ಮೀರ ಸರಕಾರ ಮತ್ತು ಪೊಮಗಲ್ಸ್ಕಿ ಎಂಬ ಫ್ರೆಂಚ್ ಕಂಪೆನಿಯ ಜಂಟಿ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಗುಲ್ಮಾರ್ಗ್ ಗೊಂಡೊಲಾ ರೋಪ್‌ ವೇ ಮೊದಲ ಹಂತವು 1998ರಲ್ಲಿ ಪೂರ್ಣಗೊಂಡಿತು. ಎರಡನೆಯ ಹಂತವು ಎರಡು ವರ್ಷಗಳ ನಂತರ ಅಂದರೆ 2005ರಲ್ಲಿ ಪೂರ್ಣಗೊಂಡಿತು. ಸ್ಕೀಯಿಂಗ್ ಉತ್ಸಾಹಿಗಳಿಗಾಗಿ 2011ರಲ್ಲಿ ಗುಲ್ಮಾರ್ಗ್ ಗೊಂಡೊಲಾಕ್ಕೆ ಹೆಚ್ಚುವರಿ ಮೂರನೆಯ ಹಂತವನ್ನು ಸೇರಿಸಲಾಯಿತು. ಇದು 90 ಚೇರ್‌ಲಿಫ್ಟ್‌ಗಳನ್ನು ಒಳಗೊಂಡಿದೆ.

Untitled design - 2026-04-27T121752.610

ಗುಲ್ಮಾರ್ಗ್ನ ಗೊಂಡೊಲಾ ಸವಾರಿ ಒಂದು ಮನರಂಜನಾ ಚಟುವಟಿಕೆಯಾಗಿದ್ದು, ಗುಲ್ಮಾರ್ಗ್ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ನಾವು ಗುಲ್ಮಾರ್ಗ್‌ನಿಂದ ಕೊಂಗ್ಡೂರಿ ನಿಲ್ದಾಣಕ್ಕೆ ನಂತರ ಕೊಂಗ್ಡೂರಿ ಪರ್ವತದ ಅಫರ್ವತ್ ಶಿಖರಕ್ಕೆ ಕೇಬಲ್ ಕಾರಿನಲ್ಲಿ ಸವಾರಿ ಮಾಡಿದ್ದು ರೋಮಾಂಚನಕಾರಿ ಅನುಭವ ನೀಡಿತು. ಮೇಲೆ ಹತ್ತುವಾಗ ಮತ್ತು ಕೆಳಗೆ ಇಳಿಯುವಾಗ ಕೆಬಲ್ ಕಾರಿನಲ್ಲಿ ನಾವು ಹಿಮದಿಂದ ಆವೃತವಾದ ಪರ್ವತಗಳು ಮತ್ತು ಎತ್ತರದ ಪೈನ್ ಮರಗಳನ್ನು ಕಣ್ತುಂಬಿಕೊಂಡೆವು. ಗಡಿ ಕಾಯುವ ಯೋಧರೂ ಕೆಬಲ್ ಕಾರಿನಲ್ಲಿ ನಮ್ಮ ಜತೆಯಾಗಿದ್ದರು. ಇದು ನಮಗೆ ಖುಷಿ ನೀಡಿದ ಸಂಗತಿ. ಭಾರತದ ಭೂಶಿಖರದ ಆ ಅಪೂರ್ವ ದರ್ಶನ ಈ ಒಂದು ಪ್ರವಾಸದಿಂದ ಸಾಧ್ಯವಾಯಿತು. ನಮ್ಮ ಕುಟುಂಬ ಇಲ್ಲಿ ಕೈಗೊಂಡ ಪ್ರವಾಸವು ಸ್ಮರಣೀಯವಾಗಿದೆ.

ಸೂರ್ಯಾಸ್ತದ ಹೊತ್ತಿಗೆ ಪರ್ವತ ಶಿಖರಗಳಿಂದ ಇಳಿದು ಬರಬೇಕು. ಏಕೆಂದರೆ ಅಲ್ಲಿ ಆ ಸಮಯದಲ್ಲಿ ವಾತಾವರಣದ ತಾಪಮಾನ ಗಣನೀಯವಾಗಿ ಕುಸಿಯುತ್ತದೆ. ಉಸಿರಾಟಕ್ಕೆ ತೊಂದರೆಗಳೂ ಆಗಬಹುದು. ಆ ಹೊತ್ತಿಗೆ ಪ್ರವಾಸಿಗರು ಕೆಬಲ್ ಕಾರುಗಳಿಗಾಗಿ ಉದ್ದನೆಯ ಸಾಲುಗಳಲ್ಲಿ ಕಾಯಬೇಕಾಗುತ್ತದೆ.