- ಮೋಹನ ಭಟ್ಟ ಅಗಸೂರು

ಸೋಮನಾಥ ದೇವಾಲಯ, ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಮೊದಲು ಸ್ಥಾಪನೆಗೊಂಡ ಜ್ಯೋತಿರ್ಲಿಂಗ ಎಂದು ನಂಬಲಾಗಿದ್ದು, ದಾಖಲೆಗಳು ದೊರೆತಾಗಿನಿಂದ ಇದಕ್ಕೀಗ ಒಂದು ಸಾವಿರಗಳು ತುಂಬಿವೆ.

ಗುಜರಾತಿನ‌ ಸೋಮನಾಥ ದೇವಾಲಯ ಯಾವಾಗ ಸ್ಥಾಪನೆಗೊಂಡಿತು? ಎಂಬುದಕ್ಕೆ ವೈವಿಧ್ಯಮಯ ಅಭಿಪ್ರಾಯಗಳಿವೆ. ವರ್ಷವಿಡೀ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ದೇವಾಲಯ ವಿಶಾಲ ಸಾಗರದ ತಟದಲ್ಲಿದೆ. ಕಪಿಲಾ, ಸರಸ್ವತಿ, ಹಿರಾನ ನದಿಗಳ ಸಂಗಮದ ತಾಣ ಅಂದರೆ ತ್ರಿವೇಣಿ ಸಂಗಮದ ಸಮೀಪದಲ್ಲೇ ಈ ದೇವಾಲಯವಿದೆ. ಹಾಗಾಗಿ ಇಲ್ಲಿನ ವಾತಾವರಣ ರಮಣೀಯವಾಗಿದೆ. ವಿಶೇಷವೆಂದರೆ ಇದು ದ್ವಾದಶ ಜ್ಯೋತಿರ್ಲಿಂಗಗಳಲ್ಲೇ ಬಹುದೊಡ್ಡ ಜ್ಯೋತಿರ್ಲಿಂಗ.

New Project (62)

ಪುರಾಣದಲ್ಲಿ ಸೋಮ (ಚಂದ್ರ ರಾಜ) ಎಂಬಾತ ಇದನ್ನು ಸ್ಥಾಪಿಸಿ, ಚಿನ್ನದ ದೇವಾಲಯನ್ನು ನಿರ್ಮಿಸಿದ ಬಗ್ಗೆ ಉಲ್ಲೇಖವಿದೆ. ನಂತರ ಶಿವಭಕ್ತ ರಾವಣನು ಬೆಳ್ಳಿಯಿಂದ, ಕೃಷ್ಣ ಪರಮಾತ್ಮನು ಕಟ್ಟಿಗೆಯಿಂದ, ಭೀಮದೇವನು ಕಲ್ಲಿನಿಂದ ನಂತರ ಯಾದವ ವಂಶದ ರಾಜರಿಂದ ಈ ದೇವಾಲಯ ಪುನರ್ ನಿರ್ಮಾಣವಾಯಿತು ಎನ್ನಲಾಗಿದೆ. ದಾಳಿಗಳಿಂದ ಹಾಳಾಗಿದ್ದ ದೇವಾಲಯವನ್ನು ನಂತರ ಸೋಳಂಕಿ ಅರಸರು ಮತ್ತೆ ನಿರ್ಮಿಸಿದರು. ಶಿವಭಕ್ತೆ ಅಹಲ್ಯಾಭಾಯಿ ಹೋಳಕರ್ ಅವರೂ ಈ ದೇವಸ್ಥಾನದ ಪುನರ್ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಮಹಮದ್ ಘಜನಿಯಿಂದಲೂ 1026ರಲ್ಲಿ ಈ ದೇವಾಲಯಕ್ಕೆ ದಾಳಿಯಾಗಿದೆ.

ದೇವಾಲಯದ ಮೇಲೆ ದಾಳಿಯಿಂದಾಗಿ ಶಿಥಿಲಗೊಂಡರೂ ಅನೇಕ ಬಾರಿ ಪುನರ್ ನಿರ್ಮಾಣಗಳಾದರೂ ಸೋಮನಾಥ ಮಾತ್ರ ಅಲ್ಲಾಡಲಿಲ್ಲ. ಆತ ಭಕ್ತರ ಅಪೂರ್ವ ಭಕ್ತಿಯಿಂದ ದೂರವಾಗಲಿಲ್ಲ. 1947ರಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರು ಸೋಮನಾಥ ದೇವಾಲಯಕ್ಕೆ ಭೇಟಿನೀಡಿ ಕೂಲಂಕುಷವಾಗಿ ಪರಿಶೀಲಿಸಿದರು. ಸ್ಥಳೀಯರೊಂದಿಗೆ ಚರ್ಚಿಸಿದರು. ಅಂದಿನಿಂದ ದೇವಾಲಯದ ಹಲವು ಅಭಿವೃದ್ಧಿ ಚಟುವಟಿಕೆಗಳಿಗೆ ನಾಂದಿಯಾಯಿತು. 1951ರಲ್ಲಿ ಪ್ರಥಮ ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದ್ ಅವರು ದೇವಾಲಯಕ್ಕೆ ಭೇಟಿನೀಡಿ ಪ್ರಾರ್ಥನೆಯನ್ನು ಸಲ್ಲಿಸಿದರು.

New Project (60)

ಸಾವಿರಾರು ವರ್ಷಗಳ ಇತಿಹಾಸ ಇರುವ ಸೋಮನಾಥನ ದರ್ಶನ ದೂರಿಂದಲೇ! ಆದರೆ, ಶಿವನ ದರ್ಶನ ಮಾಡಿ ಭಕ್ತರು ಧನ್ಯರಾಗುತ್ತಾರೆ. ಪ್ರಸಿದ್ಧ ಯಾತ್ರಾ ಸ್ಥಳವಾಗಿ ಬೆಳೆದಿರುವ ಸೋಮನಾಥಕ್ಕೆ ಇನ್ನೆಲ್ಲಿಯೂ ಇಲ್ಲದ ಮಹತ್ವವಿದೆ. ದೇವಳದ ಇತಿಹಾಸವನ್ನು ಸಾರುವ ಇಲ್ಲಿನ ಧ್ವನಿ-ಬೆಳಕು ಕಾರ್ಯಕ್ರಮ ಜನಪ್ರಿಯವಾಗಿದೆ. ಅಹಮದಾಬಾದ್ನ ಸಾಬರಾಮತಿ ಜಂಕ್ಷನ್‌ನಿಂದ ಸೋಮನಾಥ ಸನಿಹದ ವಿರಾವಲ್‌ವರೆಗೆ ವಂದೇ ಭಾರತ್ ರೈಲು ಸಂಪರ್ಕವಿದೆ. ನೋಡಿಕೊಂಡು ಬರಬಹುದು.