• ಶರಣು ಬಸರಕೊಡ

ಪ್ರತಿವರ್ಷ ಹೋಳಿ ಹುಣ್ಣಿಮೆ ಸಮಯಕ್ಕೆ ಶ್ರೀಶೈಲದ ಮಲ್ಲಿಕಾರ್ಜುನನ ಯುಗಾದಿ ರಥೋತ್ಸವ ನಡೆಯುತ್ತದೆ. ಈ ಸಮಯದಲ್ಲಿ ಅಲ್ಲಿಗೆ ಪಾದಯಾತ್ರೆ ಹೋಗುವವರ ಸಂಖ್ಯೆ ಅಧಿಕವಾಗಿರುತ್ತದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಮಲ್ಲಯ್ಯನ ಭಕ್ತರ ಗುಂಪು ಕೃಷ್ಣಾ– ಘಟಪ್ರಭಾ ನದಿಗಳ ತಟದ ಊರುಗಳಿಂದ ಸಾಗುತ್ತ ನಮ್ಮೂರು ಕರಡಿಯ ಮೂಲಕ ಮಲ್ಲಯ್ಯನ ಭಜನೆ ಮಾಡುತ್ತ ಹೋಗುತ್ತಾರೆ. ಈ ಪಾದಯಾತ್ರಿಗಳ ಉತ್ಸಾಹ, ದೈವಿಕ ಭಾವನೆಗಳನ್ನು ನೋಡುತ್ತ ಬೆಳೆದ ನನಗೆ ಈ ವರ್ಷ ಮೊದಲ ಬಾರಿ ಶ್ರೀಶೈಲಕ್ಕೆ ಪಾದಯಾತ್ರೆ ಹೋಗುವ ಅವಕಾಶ ದೊರೆತಿತ್ತು.

ಶೋಲಾ ಕಾಡಿನ ನಡುವೆ

ಮೈಸೂರಿನಿಂದ ಗೆಳೆಯ ಧರಿಯಪ್ಪ ಶ್ರೀಶೈಲಕ್ಕೆ ಎರಡು ದಿನಗಳ ಪಾದಯಾತ್ರೆಗೆ ಪ್ರೀತಿಯ ಆಹ್ವಾನ ನೀಡಿದ್ದ. ಹಾಗಾಗಿ ನಾವು ಐದು ಜನ ಮಿತ್ರರು ಯಾತ್ರೆಗೆ ಸಿದ್ಧರಾದೆವು. ರಾತ್ರಿ 8 ಗಂಟೆಗೆ ಬೆಂಗಳೂರಿನಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೊರಟು ಬೆಳಗ್ಗೆ 5 ಗಂಟೆಗೆ ಆಂಧ್ರಪ್ರದೇಶದ ನಲ್ಲಮಲ ಅರಣ್ಯದ ಹೆಬ್ಬಾಗಿಲು ಆತ್ಮಕೂರು ತಲುಪಿದೆವು. ಅಲ್ಲಿಂದ ನಮ್ಮ ಪಾದಯಾತ್ರೆ ಪ್ರಾರಂಭವಾಯಿತು. ಮುಖ್ಯ ದೇವಸ್ಥಾನ ತಲುಪುವ ಹೊತ್ತಿಗೆ ರಾತ್ರಿ 12 ಗಂಟೆ ಆಗಿತ್ತು. ದಟ್ಟ ಕಾಡಿನ ನಡುವೆ ಸಾಕಷ್ಟು ಬೆಟ್ಟಗುಡ್ಡಗಳ ಏರಿಳಿತಗಳ ನಡುವೆ ನಮ್ಮ ಯಾತ್ರೆ ಸಾಗಿತ್ತು. ಬೇಸಗೆಯ ಬಿಸಿ ಮತ್ತು ರಾತ್ರಿಯ ಕಾಡಿನ ತಂಪು ಹವೆಯ ವಾತಾವರಣದಲ್ಲಿ ನಿರಂತರ 17 ಗಂಟೆಗಳ ಈ ಪಾದಯಾತ್ರೆ ಒಂದು ದೊಡ್ಡ ಸವಾಲು ಎಂದರೆ ಖಂಡಿತ ತಪ್ಪಾಗದು. ಈ ಪಾದಯಾತ್ರೆ ದೇಹ ಮತ್ತು ನಮ್ಮ ಮನಸಿನ ಪರಿಸ್ಥಿತಿಯನ್ನು ಗಟ್ಟಿಯಾಗಿಸುವುದಂತೂ ಸತ್ಯ.

New Project (63)

ಪಾದಯಾತ್ರೆಯುದ್ದಕ್ಕೂ ಮುಖ್ಯವಾಗಿ ಕಾಣಲು ಸಿಗುವುದು ಜನರ ಭಕ್ತಿಯ ಪರಾಕಾಷ್ಟೆ‌. ಯುಗಾದಿ ಸಮೀಪಿಸುತ್ತಿದ್ದಂತೆ ನಲ್ಲಮಲ ಅರಣ್ಯದಲ್ಲಿ ಒಂದು ತಿಂಗಳು ನಿರಂತರ ಜನಸ್ತೋಮ ಇರುತ್ತದೆ. ಶಿವನ ಘೋಷಣೆಗಳೊಂದಿಗೆ ಮಲ್ಲಯ್ಯನ ಭಜನೆ ಮಾಡುತ್ತಾ ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಬಹುತೇಕ ಬರಿಗಾಲಿನಲ್ಲಿ, ಹಗಲು-ರಾತ್ರಿ ಪಾದಯಾತ್ರೆ ಮಾಡುವುದನ್ನು ಕಂಡರೆ ರೋಮಾಂಚನವಾಗುತ್ತದೆ.

ಕಾಡಿನ ನಡುವೆ ಮಧ್ಯರಾತ್ರಿಯ ಸಮಯದಲ್ಲಿ ಸಾವಿರಾರು ಸಂಖ್ಯೆಯ ಜನರು ಬಯಲು ಪ್ರದೇಶದಲ್ಲೇ ಉದ್ದಕ್ಕೂ ಮಲಗಿದ್ದರು. ಆ ದೃಶ್ಯವಂತೂ ಮರೆಯಲು ಸಾಧ್ಯವಿಲ್ಲ. ಕುಂಭಮೇಳದ ನಂತರ ಬಹುಶಃ ಇದೇ ಅತಿಹೆಚ್ಚು ಜನ ಪಾಲ್ಗೊಳ್ಳುವ ಉತ್ಸವ ಇರಬೇಕು.

New Project (66)

ನಲ್ಲಮಲ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಓಡಾಟ ಹೆಚ್ಚು. ಸಣ್ಣ ಗುಡಿಗಳ ಹೊರತಾಗಿ ಈ ಮಾರ್ಗದಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಸಂಪೂರ್ಣ ದಟ್ಟ ಅರಣ್ಯವೇ ಆವರಿಸಿದೆ. ಮಧ್ಯಾಹ್ನ ಚಿರತೆಗಳ ಸಂಚಾರ ಜಾಸ್ತಿಯಾಗಿರುತ್ತದೆ. ಆದರೆ, ಯುಗಾದಿ ಸಮೀಪಿಸುತ್ತಿದ್ದಂತೆ ಭಕ್ತರ ಪಾದಯಾತ್ರೆಯಿಂದಾಗಿ ನಲ್ಲಮಲ ಕಾಡು ಜನ ಸಾಗರವಾಗಿ ಮಾರ್ಪಟ್ಟಿರುತ್ತದೆ. ತಲೆಯ ಮೇಲೆ ಭಾರ, ಕಾಲಿಗೆ ಚಪ್ಪಲಿಗಳಿಲ್ಲದೆ, ಭುಜಕ್ಕೆ ಚೀಲಗಳನ್ನು ಹೊತ್ತ ಲಕ್ಷಾಂತರ ಯಾತ್ರಿಗಳು ಶಿವನಾಮ ಸ್ಮರಣೆಯೊಂದಿಗೆ ನಲ್ಲಮಲ ಕಾಡಿನಲ್ಲಿನ ವೆಂಕಟಾಪುರಂ ಗ್ರಾಮದಿಂದ ಕಾಡುದಾರಿಯಲ್ಲಿ ಸಾಗುತ್ತಾರೆ. ಅರಣ್ಯ ಮಾರ್ಗದಲ್ಲಿ ಗೋಸಾಯಿಕಟ್ಟೆ ವೀರಾಂಜನೇಯಸ್ವಾಮಿ, ನಾಗಲೊಟ ವೀರಭದ್ರಸ್ವಾಮಿ, ಪೆದ್ದ ಚೆರುವು, ಮಂಠಂ ಭಾವಿ, ಭೀಮನ ಕೊಳ್ಳ ಮೂಲಕ ಕೈಲಾಸ ಪರ್ವತ ದಾಟಿ ಭ್ರಮರಾಂಬ ಸಮೇತ ಮಲ್ಲಿಕಾರ್ಜುನನ ಸನ್ನಿಧಿಗೆ ತಲುಪುವುದು ಸಾಹಸದ ಸಂಗತಿಯೇ ಸರಿ.

ಸುದೇಹಾಳ ಭಕ್ತಿಗೆ ಒಲಿದ ಶಿವ

ನಾವು ಆತ್ಮಾಕೂರಿನಿಂದ 9 ಕಿಮೀ ಕಾಡು ದಾರಿಯಲ್ಲಿ ನಡೆದ ಬಳಿಕ ವೀರಭದ್ರಸ್ವಾಮಿ ದೇವಾಲಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದೆವು. ಅಲ್ಲಿ ಇಚಲಕಾರಂಜಿ ಅವರು ಮಾಡಿಸಿದ್ದ ಪ್ರಸಾದ ಸೇವಿಸಿದೆವು. ಮತ್ತೆ ಬೆಟ್ಟ ಏರಿ ಇಳಿಯುವ ಸಾಹ ಶುರುವಾಯಿತು. ಈ ಪ್ರದೇಶ ಸ್ವಲ್ಪ ಕಷ್ಟವಾದರೂ, ನಮ್ಮ ಸಂಕಲ್ಪದ ಮುಂದೆ ದೊಡ್ಡ ವಿಷಯವೇನಲ್ಲ. ಕಲ್ಲು ಗುಡ್ಡಗಳನ್ನು ಏರುತ್ತ ಪುರಾತನ ಮೂರು ಮಹಾದ್ವಾರಗಳ ಮೂಲಕ ಹಾದು ಪೆದ್ದ ಚೆರುವಿನಲ್ಲಿ ಮತ್ತೊಮ್ಮೆ ಸ್ವಲ್ಪ ವಿಶ್ರಾಂತಿ ಪಡೆದೆವು. ನಂತರ ಸುಮಾರು 7 ಕಿಮೀ ಪ್ರಯಾಣದಲ್ಲಿ ಎರಡು ಬೆಟ್ಟಗಳನ್ನು ಏರಿ ಇಳಿದ ಬಳಿಕ ಮಠಂ ಬಾವಿಗೆ ತಲುಪಿದೆವು.

New Project (67)

ಮಠಂ ಬಾವಿಯಿಂದ ಕಾಡಿನ ನಡುವೆ ಗಿರಿಜನರ ಚಪ್ಪರಗಳನ್ನು ನೋಡುತ್ತಾ ಬೆಟ್ಟಗಳಲ್ಲಿನ ಕಲ್ಲು ಬಂಡೆಗಳ ಹಾದಿಯನ್ನು ದಾಟುತ್ತ ಭೀಮನ ಕೊಳ್ಳಕ್ಕೆ ಬರುವಷ್ಟರಲ್ಲಿ ಸಾಹಸ ಕಾರ್ಯವನ್ನು ಮಾಡಿದ ಖುಷಿ ಮನಸಲ್ಲಿ ಮೂಡಿತ್ತು. ಭೀಮನ ಕೊಳ್ಳಕ್ಕೆ ಇಳಿದು ಕಡಿದಾದ ಕಣಿವೆ ಹತ್ತಿದ ನಂತರ ಕೈಲಾಸ ದ್ವಾರದವನ್ನು ಕಂಡಾಗ ಕೈಲಾಸವನ್ನೇ ತಲುಪಿದಂತೆ ಭಾಸವಾಗುತ್ತಿತ್ತು. ಅಲ್ಲಿಂದ ಹಟಕೇಶ್ವರನ ದರ್ಶನ ಮಾಡಿ, ಸಾಕ್ಷಿ ಗಣಪನಿಗೆ ಶ್ರೀಶೈಲಕ್ಕೆ ಬಂದಿರುವುದನ್ನು ಸಾಕ್ಷಿಕರಿಸಿ, ನಂತರ ರಸ್ತೆಯ ಮೂಲಕ ಒಂದೆರಡು ಮೈಲಿಗಳನ್ನು ನಡೆದಾಗ ಶ್ರೀಶೈಲದ ಭ್ರಮರಾಂಬ ಸಮೇತ ಮಲ್ಲಿಕಾರ್ಜುನ ಸನ್ನಿಧಿಗೆ ಆಗಮಿಸಿದ್ದೆವು. ಮೈಕೈ ಮುಗ್ಗಾದರೂ ಮನ ಮೆಚ್ಚಿದ ದೇವರನ್ನು ನೋಡಿದಾಗ ಅವರ ರೂಪ, ಧನ್ಯತೆಯ ಭಾವ ಬಿಟ್ಟು ಉಳಿದೆಲ್ಲವೂ ಗೌಣವಾಗಿದ್ದವು.

ಮಾಹಿತಿ ಪೆಟ್ಟಿಗೆ

ಶ್ರೀಶೈಲ, ಜಗತ್ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಲ್ಲಿಕಾರ್ಜುನನ ಸನ್ನಿಧಿಯಿಂದ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಯುಗಾದಿ ಸಮಯದಲ್ಲಿ ರಥೋತ್ಸವ ಜರುಗುತ್ತದೆ. ಬೆಂಗಳೂರಿನಿಂದ ಶ್ರೀಶೈಲಕ್ಕೆ ನೇರ ಬಸ್‌ ಸಾರಿಗೆ ಸೌಲಭ್ಯ ಉತ್ತಮವಾಗಿದೆ.