ದ್ವಾರಕಾನಾಥನ ದರ್ಶನ ಭಾಗ್ಯ
ದ್ವಾರಕಾಧೀಶನ ದೇವಾಲಯಕ್ಕೆ 2 ದಾರಿಗಳಿವೆ. ಒಂದು ಮೋಕ್ಷದ್ವಾರ ಇನ್ನೊಂದು ಸ್ವರ್ಗದ್ವಾರ. ಸ್ವರ್ಗದ್ವಾರದಿಂದ ದೇವಾಲಯದೊಳಗೆ ಪ್ರವೇಶಿಸಿ ಶ್ರೀಕೃಷ್ಣನ ಸುಂದರ ಅಲಂಕೃತ ಮೂರ್ತಿಯನ್ನು ಕಣ್ತುಂಬಿಕೊಂಡ ನಂತರ ಮೋಕ್ಷ ದ್ವಾರದಲ್ಲಿ 56 ಮೆಟ್ಟಿಲು ಇಳಿದರೆ ಗೋಮತಿ ನದಿತೀರಕ್ಕೆ ಸೇರುತ್ತೇವೆ. ಅಲ್ಲಿ ಗೋಮತಿ ಹಾಗೂ ಅರಬ್ಬೀ ಸಮುದ್ರದ ಸಂಗಮ ತಾಣವಿದ್ದು, ಅಲ್ಲಿ ತೀರ್ಥಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ.
- ವೀಣಾ ಪುರುಷೋತ್ತಮ
ಗುಜರಾತ್‌ನ ದ್ವಾರಕಾದಲ್ಲಿರುವ ಶ್ರೀ ಕೃಷ್ಣನ ದೇವಾಲಯ ಚಾರ್‌ಧಾಮ್ ಯಾತ್ರಾದಲ್ಲಿ ಮೊದಲನೆಯ ಸ್ಥಾನ ಪಡೆದಿದೆ. ದ್ವಾರಕಾಧೀಶ, ರಾಮೇಶ್ವರ, ಬದರಿನಾಥ ಮತ್ತು ಪುರಿ ಜಗನ್ನಾಥ ಚಾರ್‌ಧಾಮ್‌ಗಳಿಗೆ ಭಕ್ತರ ದಂಡು ತಂಡೋಪತಂಡವಾಗಿ ಭಕ್ತಿ, ಶೃದ್ಧೆಯಿಂದ ಯಾತ್ರೆ ಮಾಡಿಬಂದಿದ್ದಾರೆ.
ಮಹಾಭಾರತ ಕಾಲದ ದ್ವಾರಕಾ ಗೋಮತಿ ನದಿತೀರದಲ್ಲಿ ವಿರಾಜಮಾನವಾಗಿದೆ. ಇದು ಶ್ರೀ ಕೃಷ್ಣ ಪರಮಾತ್ಮನ ರಾಜಧಾನಿ. ದ್ವಾಪರ ಯುಗದ ಅಂತ್ಯಕಾಲ ಸಮೀಪಿಸಿದಾಗ ಯಾದವರು ಅವರೊಳಗೇ ಕಲಹ ಪ್ರಾರಂಭಿಸಿ ತಮ್ಮ ಅಂತ್ಯ ಕಂಡುಕೊಂಡರು. ದ್ವಾರಕಾದಲ್ಲಿದ್ದ ಬಂಗಾರದ ಅರಮನೆ ಸಮುದ್ರದಲ್ಲಿ ಲೀನವಾಯಿತು. ಶ್ರೀಕೃಷ್ಣ ಬೇಡನ ಬಾಣದೇಟಿಗೆ ತನ್ನ ನರಜನ್ಮಕ್ಕೆ ವಿದಾಯ ಹೇಳಿ ವೈಕುಂಠಕ್ಕೆ ತೆರಳಿದ. ಇದರೊಂದಿಗೆ ರಾಜಧಾನಿ ದ್ವಾರಕಾದ ಅಂತ್ಯವಾಯಿತು.
ಇದನ್ನೂ ಓದಿ: ಮರಳಿದೆ.. ಮರಳಿದೆ.. ಗಡಿಯಲಿ ಮೆಟ್ಟಿದ ಮರಳಿದೆ!
ಶ್ರೀಕೃಷ್ಣನ ಮೊಮ್ಮಗನ ಮಗ ವಜ್ರನಾಭ. ಆತ ಶ್ರೀಕೃಷ್ಣ ಓಡಾಡಿದ ದ್ವಾರಕಾದಲ್ಲಿ ದ್ವಾರಕಾಧೀಶ ದೇವಾಲಯದ ನಿರ್ಮಾಣ ಮಾಡಲು ತೀರ್ಮಾನಿಸಿದ. ಬೃಹಸ್ಪತಿಯ ಸಹಾಯದಿಂದ ಅದ್ಭುತ ದೇವಾಲಯ ನಿರ್ಮಿಸಿದ. ಆದರೆ, 1472ರಲ್ಲಿ ದಾಳಿಕೋರರಿಂದಾಗಿ ದೇವಾಲಯ ನಾಶವಾಯಿತು.

ಈಗ ನಮ್ಮೆಲ್ಲರ ಆಸ್ಥಾ ಕೇಂದ್ರವಾದ ದ್ವಾರಕಾವನ್ನು 15ನೆಯ ಶತಮಾನದಲ್ಲಿ ಚಾಲುಕ್ಯರು ನಿರ್ಮಿಸಿದರು. ಆದಿಶಂಕರಾಚಾರ್ಯರು ದ್ವಾರಕಾಪೀಠವನ್ನು ಸ್ಥಾಪಿಸಿದರು. ಈ ದೇವಾಲಯ ದಿವ್ಯ ಮತ್ತು ಭವ್ಯವಾಗಿದೆ. ಸಾಕಷ್ಟು ಜನರ ಭಕ್ತಿ ಕೇಂದ್ರವಾಗಿ ರಾರಾಜಿಸುತ್ತಿದೆ. ದೇವಾಲಯದ ಶಿಖರದಲ್ಲಿ ಹಾರಾಡುತ್ತಿರುವ ಧ್ವಜದಲ್ಲಿ ಸೂರ್ಯ-ಚಂದ್ರರ ಚಿತ್ರವಿದೆ. ಸೂರ್ಯ-ಚಂದ್ರರಿರುವರೆಗೂ ಶ್ರೀಕೃಷ್ಣನ ಲೀಲೆಗಳು ಅಜರಾಮರವಾಗಿರುತ್ತವೆ ಎಂಬುದು ಇದರ ಅರ್ಥ. ಈ ಧ್ವಜವನ್ನು ದಿನಕ್ಕೆ 5 ಬಾರಿ ಬದಲಾಯಿಸುತ್ತಾರೆ. ಯಾದವರ ವಂಶದವರಿಗೆ ಮಾತ್ರ ಈ ಧ್ವಜ ಏರಿಸುವ ಹಕ್ಕು ಇಂದಿಗೂ ಮುಂದುವರೆದಿದೆ. 52 ಮೀಟರ್‌ನ ಶಿಖರಕ್ಕೇರಿ ಧ್ವಜ ಬದಲಾಯಿಸಲಾಗುತ್ತದೆ. ಈ ಧ್ವಜ ಹಾರಾಡುವುದನ್ನು ನೋಡುವುದರಲ್ಲೂ ಸಂತೋಷವಿದೆ.
ಮೋಕ್ಷ – ಸ್ವರ್ಗ ದ್ವಾರಗಳು ಇಲ್ಲಿವೆ
ದ್ವಾರಕಾಧೀಶನ ದೇವಾಲಯಕ್ಕೆ 2 ದಾರಿಗಳಿವೆ. ಒಂದು ಮೋಕ್ಷದ್ವಾರ ಇನ್ನೊಂದು ಸ್ವರ್ಗದ್ವಾರ. ಸ್ವರ್ಗ ದ್ವಾರದಿಂದ ದೇವಾಲಯದೊಳಗೆ ಪ್ರವೇಶಿಸಿ ಶ್ರೀಕೃಷ್ಣನ ಸುಂದರ ಅಲಂಕೃತ ಮೂರ್ತಿಯನ್ನು ಕಣ್ತುಂಬಿಕೊಂಡ ನಂತರ ಮೋಕ್ಷ ದ್ವಾರದಲ್ಲಿ 56 ಮೆಟ್ಟಿಲು ಇಳಿದರೆ ಗೋಮತಿ ನದಿತೀರಕ್ಕೆ ಸೇರುತ್ತೇವೆ. ಅಲ್ಲಿ ಗೋಮತಿ ಹಾಗೂ ಅರಬ್ಬೀ ಸಮುದ್ರದ ಸಂಗಮ ತಾಣವಿದ್ದು, ಅಲ್ಲಿ ತೀರ್ಥಸ್ನಾನ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ.
ಬೇಟ್ ದ್ವಾರಕಾ
ಬೇಟ್ ದ್ವಾರಕಾ, ದ್ವಾರಕಾದಿಂದ 35 ಕಿಮೀ ದೂರದಲ್ಲಿದೆ. ಇದು ಪುರಾತನ ದ್ವೀಪ. ರಾಜಧಾನಿ ದ್ವಾರಕಾದಲ್ಲಿ ಬಂಗಾರದ ಅರಮನೆ ಇದ್ದರೂ ಶ್ರೀಕೃಷ್ಣ ಬೇಟ್ ದ್ವಾರಕಾದಲ್ಲಿದ್ದ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಈ ದ್ವೀಪಕ್ಕೆ ಬೋಟ್‌ನಲ್ಲಿ ಪ್ರಯಾಣ ಮಾಡುವುದು ಸುಂದರ ಅನುಭವ ನೀಡುತ್ತದೆ. ಮಕರಧ್ವಜ ಹನುಮಂತನ ದೇವಾಲಯ, ದ್ವಾರಕಾಧೀಶ ದೇವಾಲಯ, ರಾಧಿಕಾರಾಣಿ ದೇವಾಲಯ, ಬಲರಾಮ ಮಂದಿರ, ಸಾಕ್ಷಿ ಗೋಪಾಲ ಮಂದಿರ, ಇನ್ನೂ ಹಲವಾರು ಮಂದಿರಗಳು ಮತ್ತು ದೇವಾಲಯಗಳ ಸಮುಚ್ಛಯಗಳು ಇರುವುದೇ ಬೇಟ್ ದ್ವಾರಕಾದ ವಿಶೇಷತೆ. ದ್ವಾರಕಾದಲ್ಲಿ ಶ್ರೀಕೃಷ್ಣನ ದರ್ಶನ ಮಾಡಿ ಬೇಟ್ ದ್ವಾರಕಾದಲ್ಲಿ ಸಾಕ್ಷಿ ಗೋಪಾಲನ ದರ್ಶನ ಮಾಡುವುದು ಪರಿಪಾಟವಾಗಿದೆ.

ದ್ವಾರಕಾದ ಸುತ್ತಮುತ್ತಲೂ ಗೋಪಿಕಾ ಸ್ತ್ರೀಯರು ಸ್ನಾನ ಮಾಡುತ್ತಿದ್ದ ‘ಗೋಪಿ ತಲಾಬ್’ ಈಗಲೂ ನಿತ್ಯನೂತನವಾಗಿ ಕಂಗೊಳಿಸುತ್ತದೆ. ಸಾಂದೀಪನಿ ಆಶ್ರಮ, ರುಕ್ಮಿಣಿ ದೇವಾಲಯ ಹೀಗೇ ಹತ್ತು ಹಲವು ಸಣ್ಣಪುಟ್ಟ ಸುಂದರ ದೇವಾಲಯಗಳು ಮನಸಿಗೆ ತಂಪೆರೆಯುತ್ತವೆ.
ಶ್ರೀ ಬಾಲ್ಕಾ ತೀರ್ಥ
ದ್ವಾಪಾರಯುಗದ ಅಂತ್ಯವಾಗುತ್ತಿದ್ದಂತೆ ಯಾದವರು ಅಂತಃಕಲಹಗಳಿಂದ ಅಂತ್ಯ ಕಂಡರು. ಶ್ರೀಕೃಷ್ಣನಿಗೆ ಬೇಡನೊಬ್ಬ ಬಾಣ ಬಿಟ್ಟ ಸ್ಥಳ ಬಾಲ್ಕಾ ತೀರ್ಥ ಎಂದು ಪ್ರಸಿದ್ಧಿ ಪಡೆದಿದೆ. ಶ್ರೀಕೃಷ್ಣ ಅಂದು ಕುಳಿತಿದ್ದ ಮರದ ಕುರುಹು ಇಂದಿಗೂ ಜೀವಂತವಾಗಿದೆ. ಬೇಡನ ಬಾಣದಿಂದ ಶ್ರೀಕೃಷ್ಣ ನರಜನ್ಮಕ್ಕೆ ವಿದಾಯ ಹೇಳಿದ್ದರಿಂದ ಈ ಪ್ರದೇಶಕ್ಕೆ ಬಾಲ್ಕಾ(ಬಾಣ) ತೀರ್ಥ ಎಂದು ಹೆಸರು ಬಂದಿದೆ.
ಒಟ್ಟಾರೆ ದ್ವಾರಕಾಧಿಪತಿ ಆಳಿದ ತಾಣಕ್ಕೆ ಹೊಗಿಬಂದ ನಾವು ಧನ್ಯತಾ ಭಾವದಲ್ಲಿದ್ದೇವೆ.
ದಾರಿ ಹೇಗೆ?
ದ್ವಾರಕವು ಗುಜರಾತ್‌ನ ಜಾಮ್‌ನಗರ ಜಿಲ್ಲೆಯಲ್ಲಿದೆ. ದ್ವಾರಕಾ ರೈಲು ನಿಲ್ದಾಣ ಹತ್ತಿರದ ರೈಲು ನಿಲ್ದಾಣ. ಹತ್ತಿರದ ವಿಮಾನ ನಿಲ್ದಾಣ ಜಾಮ್‌ನಗರದಲ್ಲಿದೆ.