Thursday, March 26, 2026
Thursday, March 26, 2026

ಸುದೇಹಾಳ ಭಕ್ತಿಗೆ ಒಲಿದ ಶಿವ

ಘುಷ್ಮಾ ಪ್ರತಿದಿನ 101 ಮಣ್ಣಿನ ಶಿವಲಿಂಗಗಳನ್ನು ತಯಾರಿಸಿ, ಶಿವನಿಗೆ ಪೂಜೆ ಸಲ್ಲಿಸಿ ನಂತರ ಅವುಗಳನ್ನು ಹತ್ತಿರದ ಸರೋವರದಲ್ಲಿ ವಿಸರ್ಜಿಸುತ್ತಿದ್ದಳು. ಅವಳ ಅಚಲ ಭಕ್ತಿಯಿಂದ ಸಂತೋಷಗೊಂಡ ಶಿವನು ಅವಳಿಗೆ ಒಬ್ಬ ಪುತ್ರನನ್ನು ಕರುಣಿಸಿದನು. ಆದರೆ ಇದರಿಂದ ಸುದೇಹಾಳಲ್ಲಿ ಅಸೂಯೆ ಮೂಡಿತು. ಕೋಪದ ಕ್ಷಣದಲ್ಲಿ ಅವಳು ಆ ಮಗುವನ್ನು ಕೊಂದು, ಘುಷ್ಮಾ ಲಿಂಗಗಳನ್ನು ವಿಸರ್ಜಿಸುತ್ತಿದ್ದ ಅದೇ ಸರೋವರದಲ್ಲಿ ಹಾಕಿಬಿಟ್ಟಳು.

- ಅರುಣ ಷಡಕ್ಷರಿ

ಒಂದು ಆಶ್ಚರ್ಯಕರ ಸಂಗತಿಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಅದೇನೆಂದರೆ ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಗೃಷ್ಣೇಶ್ವರ ಜ್ಯೋತಿರ್ಲಿಂಗ ಅತ್ಯಂತ ಚಿಕ್ಕದು. ಕೇವಲ ಒಂದು ಎಕರೆಯಷ್ಟು ಜಾಗದಲ್ಲಿ ನಿರ್ಮಾಣಗೊಂಡಿರುವ ದೇವಾಲಯವಿದು. ಆದರೆ ಇಲ್ಲಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಸಿರಿ-ಸಂಪದಗಳನ್ನು ಕರುಣಿಸುವ ದೇವಾಲಯ ಇದು ಎಂಬ ನಂಬಿಕೆ ಭಕ್ತರಲ್ಲಿದೆ. ಜಗದ್ವಿಖ್ಯಾತ ಎಲ್ಲೋರಾ ಗುಹಾಂತರ ದೇವಾಲಯಗಳ ಸಮೀಪ ಇರುವ ಈ ದೇವಾಲಯ ಶಿರಡಿ ಸಾಯಿಬಾಬಾ ಮಂದಿರಕ್ಕೆ ಹೋಗುವ ದಾರಿಯಲ್ಲಿದೆ. ಹಾಗಾಗಿ ಔರಂಗಾಬಾದ್ ಮತ್ತು ಶಿರಡಿ, ಶನಿಸಿಂಗ್ನಾಪುರಾ, ನಾಸಿಕ್ ಮುಂತಾದ ಪುಣ್ಯಕ್ಷೇತ್ರಗಳಿಗೆ ಹೋಗುವ ಭಕ್ತರಿಗೆ ಇದು ಬಹಳ ಅನುಕೂಲಕರವಾದ ಮಾರ್ಗದಲ್ಲಿದೆ.

ಇದನ್ನೂ ಓದಿ: ನಾಗೇಶಂ ದಾರುಕಾವನೇ

ನಾವು ಬೆಂಗಳೂರಿನಿಂದ ಔರಂಗಾಬಾದಿಗೆ (ಈಗ ಛತ್ರಪತಿ ಸಂಬಾಜಿನಗರ ಎಂದು ಪುನರ್ ನಾಮಕರಣ ಪಡೆದಿದೆ.) ವಿಮಾನದಲ್ಲಿ ಹೋಗಿ ಅಲ್ಲಿಂದ ಎಲ್ಲೋರಾ ಗುಹಾಂತರ ದೇವಾಲಯಗಳ ಬಳಿ ಇರುವ ಈ ದೇವಾಲಯಕ್ಕೆ ತಲುಪಿದೆವು. ಅಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಲ್ಲಿಗೆ ಬಂದಿದ್ದರು. ಆದರೆ ಶಿಸ್ತುಬದ್ಧವಾಗಿ ಸರತಿ ಸಾಲಿನಲ್ಲಿ ನಿಂತು ದೇವಸ್ಥಾನವನ್ನು ಪ್ರವೇಶಿಸುತ್ತಿದ್ದರು. ನಾವು ಸಾಲಿನಲ್ಲೇ ನಿಂತು ದರ್ಶನ ಪಡೆದೆವು. ಸುಮಾರು ಒಂದು ಗಂಟೆಗಿಂತ ಕಡಿಮೆ ಸಮಯದಲ್ಲಿ ದರ್ಶನವಾಯಿತು. ಈ ದೇವಾಲಯವು ಕಪ್ಪು ಮತ್ತು ಕೆಂಪು ಕಲ್ಲಿನಿಂದ ನಿರ್ಮಿತವಾಗಿದೆ. ಅದರ ಅದ್ಭುತ ವಾಸ್ತುಶಿಲ್ಪ ಮನಮೋಹಕವಾಗಿದೆ. ಈ ದೇವಾಲಯಕ್ಕೆ ಸುಮಾರು 2000 ವರ್ಷಗಳಷ್ಟು ಇತಿಹಾಸವೂ ಇದೆ. ಪೌರಾಣಿಕ ಸಂಬಂಧವೂ ಅಂಟಿಕೊಂಡಿದೆ.

New Project (59)

ಪುರಾಣ ಕಥೆಯಲ್ಲಿ ಗೃಷ್ಣೇಶ್ವರ

ಈ ಜ್ಯೋತಿರ್ಲಿಂಗಕ್ಕೆ ಗೃಷ್ಣೇಶ್ವರ, ಗೃಷ್ಮೇಶ್ವರ ಮುಂತಾದ ಹೆಸರುಗಳಿವೆ. ಆ ಹೆಸರು ಬರಲಿಕ್ಕೆ ಕಾರಣವಾದ ಒಂದು ಪುಟ್ಟ ಪೌರಾಣಿಕ ಕತೆಯಿದೆ. ಶಿವ ಪುರಾಣ ಪ್ರಕಾರ, ಗೃಷ್ಣೇಶ್ವರ ದೇವಸ್ಥಾನದ ಉಗಮವು ಘುಷ್ಮಾ ಎಂಬ ಭಕ್ತೆಯ ಕಥೆಯೊಂದಿಗೆ ಸಂಬಂಧಿಸಿದೆ. ಪ್ರಾಚೀನ ಕಾಲದಲ್ಲಿ ದೇವಗಿರಿ (ಇಂದಿನ ದೌಲತಾಬಾದ್) ಎಂಬ ಸ್ಥಳದಲ್ಲಿ ಸುಧರ್ಮ ಎಂಬ ಬ್ರಾಹ್ಮಣನು ತನ್ನ ಪತ್ನಿ ಸುದೇಹಾ ಜತೆ ವಾಸಿಸುತ್ತಿದ್ದನು. ಅವರಿಗೆ ಮಕ್ಕಳಿರಲಿಲ್ಲ; ಇದರಿಂದ ಸುದೇಹಾ ತುಂಬಾ ದುಃಖದಲ್ಲಿದ್ದಳು. ಕುಟುಂಬದ ಸಂತೋಷಕ್ಕಾಗಿ ಅವಳು ತನ್ನ ಗಂಡನಿಗೆ ತನ್ನ ತಂಗಿ ಘುಷ್ಮಾಳನ್ನು ಮದುವೆಯಾಗುವಂತೆ ಸೂಚಿಸಿದಳು. ಘುಷ್ಮಾ ಶಿವಭಕ್ತಿಯಲ್ಲಿ ತಲ್ಲೀನಳಾಗಿದ್ದಳು. ಘುಷ್ಮಾ ಪ್ರತಿದಿನ 101 ಮಣ್ಣಿನ ಶಿವಲಿಂಗಗಳನ್ನು ತಯಾರಿಸಿ, ಶಿವನಿಗೆ ಪೂಜೆ ಸಲ್ಲಿಸಿ ನಂತರ ಅವುಗಳನ್ನು ಹತ್ತಿರದ ಸರೋವರದಲ್ಲಿ ವಿಸರ್ಜಿಸುತ್ತಿದ್ದಳು. ಅವಳ ಅಚಲ ಭಕ್ತಿಯಿಂದ ಸಂತೋಷಗೊಂಡ ಶಿವನು ಅವಳಿಗೆ ಒಬ್ಬ ಪುತ್ರನನ್ನು ಕರುಣಿಸಿದನು. ಆದರೆ ಇದರಿಂದ ಸುದೇಹಾಳಲ್ಲಿ ಅಸೂಯೆ ಮೂಡಿತು. ಕೋಪದ ಕ್ಷಣದಲ್ಲಿ ಅವಳು ಆ ಮಗುವನ್ನು ಕೊಂದು, ಘುಷ್ಮಾ ಲಿಂಗಗಳನ್ನು ವಿಸರ್ಜಿಸುತ್ತಿದ್ದ ಅದೇ ಸರೋವರದಲ್ಲಿ ಹಾಕಿಬಿಟ್ಟಳು. ಆದರೂ ಘುಷ್ಮಾ ತನ್ನ ಭಕ್ತಿಯನ್ನು ಬಿಡದೆ ಶಾಂತವಾಗಿ ಶಿವನ ಆರಾಧನೆಯನ್ನು ಮುಂದುವರಿಸಿದಳು. ಮುಂದಿನ ದಿನ ಅವಳು ಪೂಜೆಯ ನಂತರ ಸರೋವರದ ಬಳಿ ಹೋದಾಗ, ಅವಳ ಮಗ ಜೀವಂತವಾಗಿ ಅಲ್ಲಿಯೇ ಆಟವಾಡುತ್ತಿರುವುದನ್ನು ಕಂಡಳು. ಅವಳ ಭಕ್ತಿ ಮತ್ತು ಕ್ಷಮಾಶೀಲತೆಯಿಂದ ಸಂತೋಷಗೊಂಡ ಶಿವನು ಅವಳ ಮುಂದೆ ಪ್ರತ್ಯಕ್ಷನಾದನು. ಶಿವನು ವರವನ್ನು ಕೇಳುವಂತೆ ಹೇಳಿದಾಗ, ಘುಷ್ಮಾ ತನಗಾಗಿ ಏನನ್ನೂ ಬೇಡದೆ, ಶಿವನು ಆ ಸ್ಥಳದಲ್ಲೇ ಸದಾ ನೆಲೆಸಿರಲಿ ಎಂದು ಪ್ರಾರ್ಥಿಸಿದಳು, ತಾಕಿ ಭಕ್ತರೆಲ್ಲರೂ ಅವನ ಕೃಪೆ ಪಡೆಯಲಿ. ಅವಳ ನಿಸ್ವಾರ್ಥ ಮನೋಭಾವದಿಂದ ಸಂತೋಷಗೊಂಡ ಶಿವನು ಅಲ್ಲಿಯೇ ಗೃಷ್ಣೇಶ್ವರ ಜ್ಯೋತಿರ್ಲಿಂಗವಾಗಿ ಪ್ರತ್ಯಕ್ಷನಾದನು.

ಐತಿಹಾಸಿಕ ನಂಟು

New Project (57)

ಈ ಜ್ಯೋತಿರ್ಲಿಂಗ ಮಂದಿರಕ್ಕೆ ಮತ್ತೊಂದು ಐತಿಹಾಸಿಕ ಕತೆಯೂ ಇದೆ. ವರೋಲದ ಪಾಳೇಗಾರ (ಪಟೇಲ) ಭೋಸಲೆ ಶಿವ ಭಕ್ತ. ಅವನು ಶಿವನ-ಗೃಷ್ಣೇಶ್ವರನ ಕೃಪೆಯಿಂದ ಒಂದು ಹುತ್ತದಲ್ಲಿದ್ದ ನಿಧಿಯನ್ನು ಕಂಡನು. ಆ ನಿಧಿಯಿಂದ ಈ ಶಿವ ಮಂದಿರವನ್ನು ಜೀರ್ಣೋದ್ದಾರ ಮಾಡಿದನು. ಅಲ್ಲದೆ ನಂತರ ಶಿಖರಸಿಂಗನಾಪುರದಲ್ಲಿ ಒಂದು ಕೆರೆಯನ್ನೂ ಕಟ್ಟಿಸಿದನು. ಮುಂದೆ ಇಂದೋರಿನ ರಾಣಿ ಅಹಲ್ಯಾಬಾಯಿ ಹೋಲ್ಕರ್ ಮತ್ತು ಗೌತಮೀಬಾಯಿಯವರು ಈ ಗೃಷ್ಣೇಶ್ವರ ದೇವಾಲಯವನ್ನು ಉತ್ತಮ ಪಡಿಸಿದರು. 240 ಅಡಿ x 185 ಅಡಿಯ ವಿಸ್ತೀರ್ಣದ ಮೇಲೆ ಕಟ್ಟಿದ ಐದು ಅಂತಸ್ತಿನ ಗೋಪುರದ ಕಟ್ಟಡ ಈಗಲೂ ಗಟ್ಟಿಮುಟ್ಟಾಗಿದೆ. ಕೆಂಪು ಕಲ್ಲಿನಲ್ಲಿ ಕೆತ್ತಿದ ದಶಾವತಾರದ ಮೂರ್ತಿಗಳಿವೆ. ಸುಂದರ ಕೆತ್ತನೆಗಳಿಂದ ಕೂಡಿದ 24 ಕಂಬಗಳ ವಿಶಾಲ ಪ್ರಾಂಗಣವಿದೆ. ಅದರಲ್ಲಿ ಅಂದವಾದ ತೈಲ ಚಿತ್ರಗಳೂ ನಾನಾ ವಿಧದ ಮೂರ್ತಿಗಳೂ ಇವೆ. ಗರ್ಭಗುಡಿಯು 17x17 ಅಡಿ ಇದ್ದು ಪೂರ್ವಾಭಿಮುಖವಾಗಿದೆ. ದೊಡ್ಡ ವಿಶಾಲ ಪ್ರಾಂಗಣದಲ್ಲಿ ಭವ್ಯವಾದ ನಂದಿಕೇಶ್ವರ ಇದೆ. ಮಹಾರಾಷ್ಟ್ರದಲ್ಲಿರುವ ಈ ದೇವಾಲಯ ಬಹಳ ಪವಿತ್ರವಾದುದೆಂದು ಪ್ರಸಿದ್ಧವಾಗಿದೆ.

ಇದನ್ನೂ ಓದಿ: ಶಿವ ಪಾರ್ವತಿಯರು ಪಗಡೆ ಆಡುವ ಸ್ಥಳ ಯಾವುದು ಗೊತ್ತೇ?

ಮಾಹಿತಿ ಪೆಟ್ಟಿಗೆ

ಈ ದೇವಾಲಯಕ್ಕೆ ಅರ್ಧ ಕಿ.ಮೀ. ದೂರದಲ್ಲಿ ಎಲ್ಲೋರದ ಗುಹೆಗಳಿಗೆ ಮತ್ತು ಏಕಶಿಲೆಯಲ್ಲಿ ಮೇಲಿನಿಂದ ಕೆಳಗೆ ಕೆತ್ತಲ್ಪಟ್ಟ ಕೈಲಾಸ ದೇವಾಲಯವಿದೆ. ಅಲ್ಲಿಂದ 11 ಕಿಮೀ. ದೂರವಿರುವ ದೌಲತಾಬಾದನ್ನೂ ನೋಡಬಹುದು. 30 ಕಿಮೀ ದೂರದಲ್ಲಿರುವ ಔರಂಗಾಬಾದಿನಲ್ಲಿ ಮೊಗಲ್ ಬಾದಷಹ ಔರಂಗಜೇಬನು ಕಟ್ಟಿಸಿದ ಮಹಲ್ ಇದೆ. ಏಪ್ರಿಲ್ ನಂತರ ಸೆಪ್ಟಂಬರ್ ವರೆಗೆ ಇಲ್ಲಿ ತೀವ್ರವಾದ ಬಿಸಿಲಿರುತ್ತದೆ. ಹಾಗಾಗಿ ಸೆಪ್ಟೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಈ ದೇವಾಲಯಕ್ಕೆ ಹೋಗಲು ಒಳ್ಳೆಯ ಸಮಯ. ಸಿರಿಸಂಪದಗಳನ್ನು ಮನಶ್ಶಾಂತಿಯನ್ನು ಬಯಸುವ ಭಕ್ತರಿಗೆ ಎಲ್ಲ ಸಮಯವೂ ಸುಸಮಯವೇ ಅಲ್ಲವೇ?

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ