ಫೆಬ್ರವರಿ 2 ಮತ್ತು 3ಕ್ಕೆ ತಮಿಳುನಾಡು ಜಾಗತಿಕ ಪ್ರವಾಸೋದ್ಯಮ ಶೃಂಗಸಭೆ ನಡೆಯಲಿದೆ. ತಮಿಳುನಾಡಿನ ಮಾಮಲ್ಲಪುರಂನಲ್ಲಿ ಈ ಶೃಂಗಸಭೆ ನಡೆಯಲಿದ್ದು, ಹಲವು ಅವಕಾಶಗಳನ್ನು ತಮಿಳುನಾಡು ಪ್ರವಾಸೋದ್ಯಮಕ್ಕೆ ಈ ಮೂಲಕ ದೊರೆಯಲಿವೆ. ತಮಿಳುನಾಡು ಕೈಗಾರಿಕಾ ಸಚಿವ ಟಿ ಆರ್‌ ಬಿ ರಾಜ ಮಂಗಳವಾರ ಕಾರ್ಯಕ್ರಮದ ಲೋಗೋವನ್ನು ಬಿಡುಗಡೆ ಮಾಡಿದರು.

ಪ್ರವಾಸೋದ್ಯಮದ ಅಭಿವೃದ್ಧಿಗೆ ತಮಿಳುನಾಡಿನಲ್ಲಿ ಸಂಸ್ಕೃತಿ, ಪರಂಪರೆ ಜತೆಗೆ ಸಾಕಷ್ಟು ವಿಷಯಗಳಿವೆ. ಅವುಗಳನ್ನು ನಾವು ಬಳಸಿಕೊಳ್ಳಬೇಕು. ದೊಡ್ಡ ಕರಾವಳಿ ಪ್ರದೇಶವನ್ನು ಹೊಂದಿದ್ದರೂ ಕರಾವಳಿ ಪ್ರವಾಸೋದ್ಯಮವನ್ನು ನಾವು ನಮ್ಮ ರಾಜ್ಯದಲ್ಲಿ ಈವರೆಗೂ ಆರಂಭಿಸಿಲ್ಲ. ಇದರಿಂದ ಸುತ್ತಲೂ ಹೋಮ್‌ಸ್ಟೇಗಳು ನಿರ್ಮಾಣ ಆಗುತ್ತವೆ. ಸರ್ಫಿಂಗ್‌ ಸೇರಿ ವಿವಿಧ ಸಾಹಸಮಯ ಜಲಕ್ರೀಡೆಗಳನ್ನು ಆರಂಭಿಸಬಹುದು. ಪ್ರವಾಸಿಗರಿಗೂ ಇವುಗಳಿಂದ ಸ್ಥಳೀಯತೆಯ ಅನುಭವಗಳು ಸಿಗುತ್ತವೆ. ಕರಾವಳಿ ಭಾಗದ ಜನರಿಗೂ ಉದ್ಯಮ ಆರಂಭಿಸಲು ಸಹಾಯವಾಗುತ್ತದೆ ಎಂದು ಸಚಿವ ರಾಜ ಹೇಳಿದರು.

ಶೃಂಗಸಭೆ ಆಯೋಜನೆಯಿಂದ ದೇಶ-ವಿದೇಶಗಳಿಂದ ಹೂಡಿಕೆದಾರರು ಬರುತ್ತಾರೆ. ರಾಜ್ಯ ಪ್ರವಾಸೋದ್ಯಮಕ್ಕೆ ಇದು ಸಹಾಯಕವಾಗಲಿದೆ. ಪ್ರವಾಸೋದ್ಯಮದಲ್ಲೂ ನವೋದ್ಯಮಗಳು ಹುಟ್ಟಿಕೊಳ್ಳಲಿವೆ. 2030ರ ವೇಳೆಗೆ ತಮಿಳುನಾಡು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ತಲುಪಲು ಈ ಶೃಂಗಸಭೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಈ ವೇಳೆ ತಮಿಳುನಾಡು ರಾಜ್ಯ ಪ್ರವಾಸೋದ್ಯಮ ಸಚಿವ ರಾಜೇಂದ್ರನ್‌ ಉಪಸ್ಥಿತರಿದ್ದರು.