• ಡಾ.ಬಿ.ಆರ್.ಸುಹಾಸ್

ಭಾರತದಲ್ಲಿ ನಾವು ಯಾವುದೇ ಸ್ಥಳಕ್ಕೆ ಪ್ರವಾಸ ಹೋದರೂ ಅಲ್ಲಿ ಅಚ್ಚರಿಗಳು ಕಾದಿರುತ್ತವೆ! ಕೋಟೆ-ಕೊತ್ತಲಗಳು, ಅರಮನೆಗಳು, ದೇವಾಲಯಗಳು ಸೇರಿ ಹಲವಾರು ಕಟ್ಟಡಗಳಲ್ಲಿ ನಾವು ಸೌಂದರ್ಯವನ್ನು, ಭವ್ಯತೆಯನ್ನು ಕಾಣಬಹುದು. ಆದರೆ, ಒಂದು ಬಾವಿಯಲ್ಲಿ ಅಂಥ ಸೌಂದರ್ಯ ಕಂಡರೆ ಏನೆನ್ನೋಣ? ಹೌದು, ನಮ್ಮ ದೇಶದಲ್ಲಿ ಸುಂದರವಾದ ಅಲಂಕೃತ ಮೆಟ್ಟಿಲು ಬಾವಿಗಳೂ ಇವೆ. ಗುಜರಾತ್ ಮತ್ತು ರಾಜಸ್ಥಾನ ಇಂಥ ಬಾವಿಗಳಿಗೆ ಪ್ರಸಿದ್ಧವಾಗಿವೆ. ಗುಜರಾತ್‌ನಲ್ಲಿ ಈ ಮೆಟ್ಟಿಲು ಬಾವಿಗಳನ್ನು ವಾವ್ ಹಾಗೂ ವಾವ್ಡಿಗಳೆಂದು ಕರೆದರೆ, ರಾಜಸ್ಥಾನದಲ್ಲಿ ಹಾಗೂ ದೆಹಲಿಯಲ್ಲಿ ಬವೋಲಿ ಹಾಗೂ ಬಾವ್ಡಿಗಳೆಂದು ಕರೆಯುತ್ತಾರೆ. ಕನ್ನಡದಲ್ಲಿ ಇವಕ್ಕೆ ಬಾವಿ ಎನ್ನುವುದು ತಿಳಿದಿರುವ ವಿಷಯ ಅಲ್ವಾ? ಇವೆಲ್ಲವೂ ಸಂಸ್ಕೃತದ ವಾಪೀ ಶಬ್ದದಿಂದ ಬಂದಿವೆ.

ಇದನ್ನೂ ಓದಿ: ಸಮುದ್ರದ ನಡುವೆ ನಿಂತ ವಿವೇಕಾನಂದ ದೀಪ

ಗುಜರಾತ್‌ನಲ್ಲಿ ರಾಣಿ ಕೀ ವಾವ್, ಅಡಾಲಜ್ ನಿ ವಾವ್, ದಾದಾ ಹರಿ ನಿ ವಾವ್ ಮೊದಲಾದ ಸುಂದರ ಮೆಟ್ಟಿಲುಗಳ ಬಾವಿಗಳಿವೆ.‌ ಇವುಗಳಲ್ಲಿ ನಾನು ಗುಜರಾತ್‌ನ ಅಹಮದಾಬಾದ್ ಪ್ರವಾಸದಲ್ಲಿ ಅಡಾಲಜ್ ನಿ ವಾವ್ ಅನ್ನು ಸಂದರ್ಶಿಸಿದೆ. ಇಲ್ಲಿ ನಿ ಎಂದರೆ 'ಅದರ' ಅಥವಾ 'ಅದಕ್ಕೆ ಸಂಬಂಧಿಸಿದ' ಎಂದರ್ಥ. ಅಡಾಲಜ್ ಹಳ್ಳಿಯ ವಾವ್ ಆದ್ದರಿಂದ ಇದಕ್ಕೆ ಅಡಾಲಜ್ ನಿ ವಾವ್ ಎನ್ನುತ್ತಾರೆ.

Untitled design - 2026-05-13T173401.824

ಅಡಾಲಜ್‌ ನಿ ವಾವ್‌

ಅಹಮದಾಬಾದ್ ನಗರದಿಂದ 13 ಕಿಮೀ ದೂರದಲ್ಲಿನ ಅಡಾಲಜ್ ಗ್ರಾಮದಲ್ಲಿ ಈ ಮೆಟ್ಟಿಲು ಬಾವಿಯಿದ್ದು, ಒಂದು ವಿಶಾಲ ಮೈದಾನದಲ್ಲಿನ ದುರ್ಗಾ ದೇವಿಯ ಮಂದಿರದ ಸನಿಹದಲ್ಲಿದೆ. ಒಳಗೆ ಪ್ರವೇಶಿಸಿ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದಂತೆ, ವಿಸ್ಮಯ ಅನುಭವವಾಗುತ್ತದೆ. ಹಲವು ವಿನ್ಯಾಸಗಳ ಕುಸುರಿ ಕೆತ್ತನೆಗಳು ಗೋಡೆ ಹಾಗೂ ಕಂಬಗಳ ಮೇಲೆ ರಾರಾಜಿಸುತ್ತಿವೆ. ಇವುಗಳೊಂದಿಗೆ ಅಲ್ಲಲ್ಲಿ ಹೂವು, ಆನೆ, ಕುದುರೆ, ಕುದುರೆ ಸವಾರ, ಸೈನಿಕರು, ಶರಭ ಮೊದಲಾದ ಕಾಲ್ಪನಿಕ ಪ್ರಾಣಿಗಳ ಪುಟ್ಟ ಪುಟ್ಟ ಕೆತ್ತನೆಗಳು ಕಾಣುತ್ತವೆ.‌ ಕೆಳಗಿಳಿದಂತೆ, ಜಾಲಂದ್ರ ಮುಚ್ಚಿರುವ ಒಂದು ಬಾವಿ ಕಾಣುತ್ತದೆ. ಮೇಲೆ ನೋಡಿದರೆ, ಅಷ್ಟಕೋನಾಕೃತಿಯ ಮಹಡಿಗಳು. ಈ ಕಟ್ಟಡದಲ್ಲಿ ಒಟ್ಟು ಐದು ಮಹಡಿಗಳಿವೆ. ಎಲ್ಲೆಲ್ಲೂ ಸುಂದರ ಕೆತ್ತನೆಗಳನ್ನು ಕಾಣಬಹುದು. ಫೊಟೋಗ್ರಾಫರ್‌ಗಳ ಸ್ವರ್ಗ ಎಂದರೆ ತಪ್ಪಾಗದು. ಬಾವಿಯಿಂದ ಮೇಲಕ್ಕೆ ಮೆಟ್ಟಿಲುಗಳನ್ನು ಹತ್ತುತ್ತಾ ಹೋದರೆ, ಬಾವಿಯ ಹೊರಗಿನ ಮೈದಾನಕ್ಕೆ ಬರುತ್ತೇವೆ. ಇಲ್ಲಿ ಐದು ಸಮಾಧಿಗಳಿವೆ. ಇವು, ಈ ಬಾವಿಯನ್ನು ನಿರ್ಮಿಸಿದ ಕುಶಲಕರ್ಮಿಗಳ ಸಮಾಧಿಗಳು ಎನ್ನುವುದು ಸ್ಥಳೀಯರ ಮಾತು.

ಬಾವಿಯ ಹಿಂದೆ ದುರಂತದ ಕತೆ

ಇಷ್ಟು ಸುಂದರವಾದ ಈ ಮೆಟ್ಟಿಲು ಬಾವಿಯ‌ ಹಿಂದೆ ಒಂದು ದುರಂತದ ಕಥೆಯಿದೆ! ಅದರಂತೆ, ವಾಘೇಲಾ ವಂಶದ ರಾಜ ವೀರಸಿಂಹನು ತನ್ನ ಪತ್ನಿ ರುಡಾಬಾಯಿಯ ಕೋರಿಕೆಯ ಮೇರೆಗೆ ಈ ಮೆಟ್ಟಿಲು ಬಾವಿಯ‌ ನಿರ್ಮಾಣವನ್ನು ಆರಂಭಿಸಿದ.‌ ಪ್ರಯಾಣಿಕರು ದಾರಿಯಲ್ಲಿ ನೀರು ಕುಡಿದು ವಿಶ್ರಮಿಸಿಕೊಳ್ಳಲೆಂದು ಅವಳು ತನ್ನ ಪತಿಯಿಂದ ಇದನ್ನು ನಿರ್ಮಿಸಿದಳು. ಆದರೆ ಇದು ಮುಗಿಯುವಷ್ಟರಲ್ಲಿ, ಸುಲ್ತಾನ್ ಮುಹಮ್ಮದ್ ಬೇಗಡ ಎಂಬ ಮಹಮ್ಮದೀಯ ರಾಜನು ವೀರಸಿಂಹನ ಮೇಲೆ ದಾಳಿಮಾಡಿ ಅವನನ್ನು ಕೊಂದನು! ಅನಂತರ, ರುಡಾಬಾಯಿಯ ಸೌಂದರ್ಯದಿಂದ ಆಕರ್ಷಿತನಾದ ಮುಹಮ್ಮದ್‌ ತನ್ನನ್ನು ವಿವಾಹವಾಗಲು ಕೇಳಿದನು. ಅದಕ್ಕೆ ರುಡಾಬಾಯಿ ತನ್ನ ಗಂಡ ಆರಂಭಿಸಿದ ಕಾರ್ಯವನ್ನು ಮುಗಿಸಿದರೆ ನಂತರ ಅವನನ್ನು ಮದುವೆಯಾಗುವುದಾಗಿ ಕರಾರು ಹಾಕಿದಳು. ಅದಕ್ಕೆ ಒಪ್ಪಿದ ಸುಲ್ತಾನ್ ಮುಹಮ್ಮದ್ ಬೇಗಡ, ಈ ಮೆಟ್ಟಿಲು ಬಾವಿಯ‌ ನಿರ್ಮಾಣವನ್ನು ಪೂರ್ಣಗೊಳಿಸಿ, ರುಡಾಬಾಯಿಯನ್ನು ಕರೆದೊಯ್ದು ತೋರಿಸಿದನು. ಅದನ್ನು ನೋಡುತ್ತಾ ಅವಳು ಮೇಲಿನಿಂದ ಬಾವಿಯಲ್ಲಿ ಬಿದ್ದು ಪ್ರಾಣ ತೆತ್ತಳು! ಈ ಘಟನೆಯಾದ ನಂತರ ಸುಲ್ತಾನ್ ಬೇಗಡ, ಈ ಕಟ್ಟಡದ ಸೌಂದರ್ಯಕ್ಕೆ ಮಾರುಹೋದ. ಇಂಥ ಕಟ್ಟಡವನ್ನು ಪುನಃ ನಿರ್ಮಿಸಲು ಸಾಧ್ಯವೇ ಎಂದು ಅದನ್ನು ನಿರ್ಮಿಸಿದ ಕುಶಲಕರ್ಮಿಗಳನ್ನು ಕೇಳಿದ. ಅವರು ಸಾಧ್ಯವೆಂದು ಹೇಳಿದರು. ಅವರು ಪುನಃ ಇಂಥ ಕಟ್ಟಡವನ್ನು ನಿರ್ಮಿಸಬಾರದೆಂದು ಅವರೆಲ್ಲರನ್ನೂ ಕೊಲ್ಲಿಸಿಬಿಟ್ಟನು! ಅವರಲ್ಲಿನ ಕೆಲವರ ಸಮಾಧಿಗಳನ್ನು ನಾವು ಬಾವಿಯ ಮೇಲಿನ ಮೈದಾನದಲ್ಲಿ ಕಾಣಬಹುದು.‌

Untitled design - 2026-05-13T173353.577

ರುಡಾಬಾಯಿಯ ತ್ಯಾಗ, ಸುಲ್ತಾನ್ ಮುಹಮ್ಮದ್ ಬೇಗಡನ ಕ್ರೌರ್ಯ, ಕುಶಲಕರ್ಮಿಗಳ ಕೊಲೆ ಇವುಗಳ ಹಿನ್ನೆಲೆಯ ಈ ಐತಿಹಾಸಿಕ ಕಟ್ಟಡ ಅಡಾಲಜ್ ನಿ ವಾವ್. ಅಹಮದಾಬಾದ್‌ನ ಒಂದು ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಅಹಮದಾಬಾದ್‌ಗೆ ಬಂದಾಗ ಈ ಅಡಾಲಜ್ ವಾವ್ ಅನ್ನು ನೋಡಿ ವಾವ್ ಎಂದು ಉದ್ಗರಿಸದೇ ಹೋಗಬಾರದು.

ದಾರಿ ಹೇಗೆ?

ಅಡಾಲಜ್‌ ನಿ ವಾವ್‌ ಅಹಮದಾಬಾದ್‌ನ ಗಾಂಧಿನಗರ ಜಿಲ್ಲೆಯಲ್ಲಿದೆ. ಗಾಂಧಿನಗರ ರಾಜಧಾನಿ ರೈಲು ನಿಲ್ದಾಣ ಮತ್ತು ಅಹಮದಾಬಾದ್‌ ರೈಲು ನಿಲ್ದಾಣಗಳು ಹತ್ತಿರದ ರೈಲು ನಿಲ್ದಾಣಗಳು. ಇಲ್ಲಿಂದ ಟ್ಯಾಕ್ಸಿ ಮೂಲಕ ಅಡಾಲಜ್‌ ನಿ ವಾವ್‌ ತಲುಪಬಹುದು.