Friday, June 5, 2026
Friday, June 5, 2026

ಚಿಲ್ಕಾ ಸರೋವರದಲ್ಲಿ ಒಂದು ಮುತ್ತಿನ ಕಥೆ

ಯಾರಾದರೂ ನಿಮಗೆ ಡಾಲ್ಫಿನ್ ತೋರಿಸುತ್ತೇವೆ ಎಂದು ಹಣ ಪಡೆದರೆ ಅದೊಂದು ಸ್ಕ್ಯಾಮ್ ಅಷ್ಟೇ. ತೀರಾ ಅದೃಷ್ಟವಂತರಿಗೆ ಎಲ್ಲೋ ಒಂದು ಕಡೆ ಡಾಲ್ಫಿನ್‌ನ ಬೆನ್ನೋ., ಈಜುರೆಕ್ಕೆಯೋ ಕಂಡರೂ ಕಾಣಬಹುದು.

  • ಸುಧೀರ್ ಶಾನುಭೋಗ್

ಒಡಿಶಾಗೆ ಹೋದ ಮೇಲೆ ಚಿಲ್ಕಾ ಸರೋವರದಲ್ಲಿ ದೋಣಿ ವಿಹಾರ ಮಾಡದಿದ್ದರೆ ಆ ಪ್ರವಾಸವೇ ಅಪೂರ್ಣ. ಸುಮಾರು ಸಾವಿರ ಚದರ ಕಿಲೋಮೀಟರ್‌ಗಳಷ್ಟು ವಿಸ್ತೀರ್ಣವಿರುವ ಈ ಸರೋವರ, ಭಾರತದ ಅತಿದೊಡ್ಡ ಮತ್ತು ವಿಶ್ವದ ಎರಡನೆಯ ಅತಿದೊಡ್ಡ ಉಪ್ಪುನೀರಿನ ಸರೋವರವಾಗಿದೆ. ಚಳಿಗಾಲದಲ್ಲಿ ಸೈಬೀರಿಯಾ ಮತ್ತು ಕ್ಯಾಸ್ಪಿಯನ್ ಸಮುದ್ರದಂಥ ದೂರದ ಪ್ರದೇಶಗಳಿಂದ ಸಾವಿರಾರು ಕಿಮೀ ಕ್ರಮಿಸಿ ಬರುವ ಲಕ್ಷಾಂತರ ವಲಸೆ ಹಕ್ಕಿಗಳಿಗೆ ಇದು ಪ್ರಮುಖ ಆಶ್ರಯತಾಣ. ಅಷ್ಟೇ ಅಲ್ಲದೆ, ಅಪರೂಪದ ಇರವಾಡಿ ಡಾಲ್ಫಿನ್‌ಗಳು ಕಂಡುಬರುವ ಏಕೈಕ ಸ್ಥಳವೂ ಹೌದು.

ಡಾಲ್ಫಿನ್‌ ಸ್ಕ್ಯಾಮ್‌

ಈ ಸರೋವರದಲ್ಲಿ ದೋಣಿ ವಿಹಾರ ಒಂದು ಸುಂದರ ಅನುಭವವೇ ಸರಿ. ಆದರೆ, ಡಾಲ್ಫಿನ್‌ಗಳು ಮೇಲಕ್ಕೆ ಜಿಗಿಯುವುದನ್ನು ಕಣ್ತುಂಬಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ಮಾತ್ರ ಇರಬಾರದು. ಏಕೆಂದರೆ, ಈ ಇರವಾಡಿ ಡಾಲ್ಫಿನ್‌ಗಳು ತುಂಬಾ ನಾಚಿಕೆ ಸ್ವಭಾವದವು. ಇವು ನೀರಿಂದ ಮೇಲೆ ನೆಗೆಯುವ 'ಬಾಟಲ್ ನೋಸ್' ತಳಿಯ ಡಾಲ್ಫಿನ್‌ಗಳಲ್ಲ. ಇವುಗಳ ಬೆನ್ನಿನ ಭಾಗ ಮತ್ತು ಈಜುರೆಕ್ಕೆ ಮಾತ್ರ ನೀರಿನ ಮೇಲೆ ಕಾಣಿಸುತ್ತವೆ. ಅದೂ ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಮಾತ್ರ. ಜತೆಗೆ ದೋಣಿಗಳ ಸದ್ದು ಕೇಳಿದರಂತೂ ಇವು ನೀರಿನ ಆಳಕ್ಕೆ ಓಡಿಹೋಗುತ್ತವೆ.

ಇದನ್ನೂ ಓದಿ: ಮುನ್ನಾರ್ ಎಂಬ ಮಾಯಾಲೋಕ

ಆದ್ದರಿಂದ ʼಡಾಲ್ಫಿನ್ ಸ್ಪಾಟಿಂಗ್ʼ ಹೆಸರಿನಲ್ಲಿ ಎರಡು ಗಂಟೆಗಳ ವಿಹಾರಕ್ಕೆ ಸುಮಾರು ಆರು ಸಾವಿರ ರುಪಾಯಿಗಳಷ್ಟು ತೆತ್ತು ಬೋಟ್ ಹತ್ತುವುದು ನೂರಕ್ಕೆ ನೂರು ವ್ಯರ್ಥ. ಯಾರಾದರೂ ನಿಮಗೆ ಡಾಲ್ಫಿನ್ ತೋರಿಸುತ್ತೇವೆ ಎಂದು ಹಣ ಪಡೆದರೆ ಅದೊಂದು ಸ್ಕ್ಯಾಮ್ ಅಷ್ಟೇ. ತೀರಾ ಅದೃಷ್ಟವಂತರಿಗೆ ಎಲ್ಲೋ ಒಂದು ಕಡೆ ಡಾಲ್ಫಿನ್‌ನ ಬೆನ್ನೋ., ಈಜುರೆಕ್ಕೆಯೋ ಕಂಡರೂ ಕಾಣಬಹುದು.

ದೋಣಿ ಸಾಗಿತು

ಇತ್ತೀಚೆಗಷ್ಟೇ ಒಡಿಶಾ ರಾಜ್ಯದ ಪ್ರವಾಸಕ್ಕೆಂದು ಸಂಸಾರ ಸಮೇತ ನಾವೂ ಚಿಲ್ಕಾ ಸರೋವರಕ್ಕೆ ಭೇಟಿ ನೀಡಿದ್ದೆವು. ಅಲ್ಲಿ ನೋಡಿದರೆ ಒಡಿಶಾ ಪ್ರವಾಸೋದ್ಯಮ ನಿಗಮದ ವೆಬ್‌ಸೈಟ್‌ನಲ್ಲಿರುವ ದರಕ್ಕೂ, ಅಲ್ಲಿ ಕೇಳುವ ಮೊತ್ತಕ್ಕೂ ಸುಮಾರು ಎರಡರಷ್ಟು ವ್ಯತ್ಯಾಸವಿತ್ತು. ಇದೊಂದು ಸರಕಾರಿ ಪ್ರಾಯೋಜಿತ ವಂಚನೆಯೋ ಎಂಬಂತಿತ್ತು. ಪ್ರವಾಸದ ಖುಷಿಯ ಮೂಡ್ ಹಾಳು ಮಾಡಿಕೊಳ್ಳಬಾರದೆಂಬ ಉದ್ದೇಶದಿಂದ ಕೇಳಿದಷ್ಟು ಹಣ ನೀಡಿ, ಜತೆಗೆ ಲೈಫ್ ಜಾಕೆಟ್‌ಗಳಿಗೂ ಪ್ರತ್ಯೇಕ ಹಣ ಪಾವತಿಸಿ ದೋಣಿ ಹತ್ತಿಯಾಯಿತು.

Untitled design - 2026-06-05T211828.345

ದೋಣಿ ಯಾನದ ಪ್ಯಾಕೇಜ್‌ನಲ್ಲಿ 'ರೆಡ್‌ ಕ್ರಾಬ್‌' ದ್ವೀಪಕ್ಕೆ ಭೇಟಿ ನೀಡುವುದೂ ಒಂದಾಗಿತ್ತು. ಸುಮಾರು 8-10 ನಿಮಿಷಗಳ ಜಲಯಾನ ನಮ್ಮನ್ನು ಆ ದ್ವೀಪಕ್ಕೆ ತಲುಪಿಸಿತು. ನಾವು ಕೆಂಪು ಏಡಿಗಳನ್ನು ನೋಡಲು ದೋಣಿಯಿಂದ ಇಳಿಯುವ ಮೊದಲೇ, ಕೆಂಪು ಏಡಿಗಳೇ ನಮ್ಮ ದೋಣಿಯನ್ನು ಹತ್ತಿದವು!

ಹೌದು, ಒಬ್ಬ ಒಂದು ಬುಟ್ಟಿಯಲ್ಲಿ ಒಂದಷ್ಟು ಜೀವಂತ ಕೆಂಪು ಏಡಿಗಳನ್ನು ತುಂಬಿಕೊಂಡು ಬಂದ. ‘ಈ ಹೊತ್ತಲ್ಲಿ ಕೆಂಪು ಏಡಿಗಳು ಬಿಲ ಸೇರಿಕೊಂಡಿರುತ್ತವೆ. ಆದರೆ ಪ್ರವಾಸಿಗರು ನಿರಾಶರಾಗಬಾರದು ಎಂಬ ಉದ್ದೇಶದಿಂದ ಇವುಗಳ ದರ್ಶನ ಮಾಡಿಸಲು ಒಡಿಶಾ ಸರಕಾರವೇ ಮಾಡಿದ ವ್ಯವಸ್ಥೆ ಇದು’ ಎಂಬಂತೆ ಮಾತು ಶುರುಮಾಡಿದ.

ಅಸಲಿ ಸಿನಿಮಾ

ಕೆಂಪು ಏಡಿಗಳ ಬುಟ್ಟಿಯನ್ನು ಬದಿಗಿಟ್ಟು ಆತ ಇನ್ನೊಂದು ಬುಟ್ಟಿಯನ್ನು ಕೈಗೆತ್ತಿಕೊಂಡ. ಅದರ ತುಂಬಾ ಏಡಿಗಳ ಬದಲಿಗೆ ಚಿಪ್ಪುಗಳಿದ್ದವು. ಆ ಚಿಪ್ಪುಗಳನ್ನು ತೋರಿಸುತ್ತಾ, ʼಇದೇನು ಗೊತ್ತಾ? ಇವು ಸಿಕ್ಕಾಪಟ್ಟೆ ಕಾಸ್ಟ್ಲಿ!ʼ ಎಂದು ಪೀಠಿಕೆ ಹಾಕಿದ. ಆಗ ನನ್ನ ಮಗಳು, ʼಎಂತಾ ಕಾಸ್ಟ್ಲಿ? ನಮ್ಮ ಕಡೆ ಮೀನು ಮಾರುಕಟ್ಟೆಯಲ್ಲಿ ನೂರು ರುಪಾಯಿಗೆಲ್ಲ ಸಿಗುತ್ತವೆ!ʼ ಎಂದಳು. ಮಗನಂತೂ ‘ಮರವಾಯಿ ಸುಕ್ಕ’ವನ್ನು ನೆನೆಸಿಕೊಂಡು ಮನಸಿನಲ್ಲೇ ಜೊಲ್ಲು ಸುರಿಸಿದ.

ಆಗ ಆ ಚಿಪ್ಪು ತಂದವನು, ʼಓಯ್.. ಇದು ಆ ಸಾಮಾನ್ಯ ಚಿಪ್ಪಲ್ಲ, ಇದು ಮುತ್ತಿನ ಚಿಪ್ಪು! ಬಹಳ ಬೆಲೆಬಾಳುವಂಥದ್ದು. ಹಾಗಂತ ನಾನು ತಂದಿರುವ ಎಲ್ಲಾ ಚಿಪ್ಪುಗಳಲ್ಲೂ ಮುತ್ತು ಇರಲ್ಲ. ಸ್ವಾತಿ ಮಳೆಹನಿಯನ್ನು ನುಂಗಿದ ಯಾವುದೋ ಒಂದು ಅಪರೂಪದ ಚಿಪ್ಪಿನಲ್ಲಿ ಮಾತ್ರ ಮುತ್ತಿರಬಹುದುʼ ಎಂದು ಹೇಳುತ್ತಾ, ಮುತ್ತು ರೂಪುಗೊಳ್ಳುವ ವೈಜ್ಞಾನಿಕ ಪ್ರಕ್ರಿಯೆ ಹಾಗೂ ಜಾನಪದ ಕತೆಗಳನ್ನು ಹದವಾಗಿ ಬೆರೆಸಿ ವಿವರಿಸತೊಡಗಿದ.

ಚಿಪ್ಪಿನೊಳಗಡೆ ಮುತ್ತು

ಒಂದೊಂದೇ ಚಿಪ್ಪನ್ನು ಒಡೆಯತೊಡಗಿದ. ಸುಮಾರು ಹತ್ತಕ್ಕೂ ಹೆಚ್ಚು ಚಿಪ್ಪುಗಳು ಒಡೆದವು. ʼನೋಡಿ..ಹೀಗೆ ಎಲ್ಲವೂ ಖಾಲಿ.. ಯಾವುದಕ್ಕೂ ಅದೃಷ್ಟ ಬೇಕುʼ ಎನ್ನುತ್ತಾ ಒಮ್ಮೆ ಆಕಾಶದತ್ತ ದಿಟ್ಟಿಸಿ, ಕಣ್ಣುಮುಚ್ಚಿ ʼಜೈ ಜಗನ್ನಾಥ್!ʼ ಎನ್ನುತ್ತಾ ಒಂದು ಚಿಪ್ಪನ್ನು ಒಡೆದ.

ಆಹಾ! ಹಿಂದಿನ ದಿನ ಜಗನ್ನಾಥನ ದರ್ಶನ ಮಾಡಿದ್ದು ಸಾರ್ಥಕವೆಂಬಂತೆ ಅದರೊಳಗೆ ಮುತ್ತು ಸಿಕ್ಕೇಬಿಟ್ಟಿತು!ʼ ನೋಡಿ.. ಇದು ಒರಿಜಿನಲ್ ಮುತ್ತು. ಬೇಕಿದ್ದರೆ ನೀವು ತಗೋಬಹುದು. ಏಳು ನೂರ ಐವತ್ತು ರುಪಾಯಿ ಮಾತ್ರʼ ಎಂದ. ಅದು ಅಸಲಿ ಮುತ್ತು ಎಂದು ಸಾಬೀತುಪಡಿಸಲು ಅದರ ಮೇಲೆ ಬಡಿಗೆಯಿಂದ ಬಡಿದು ತೋರಿಸಿದ. ಮುತ್ತು ಒಡೆಯಲೇ ಇಲ್ಲ!

Untitled design - 2026-06-05T211842.749

ವ್ಯಾಪಾರದ ಕರಾಮತ್ತು

ಹತ್ತು ರುಪಾಯಿಗೆ ಮೂರು ನಿಂಬೆಹಣ್ಣು ಎಂದರೆ, ಆರು ಕೊಡಿ ಎಂದು ಚೌಕಾಸಿ ಮಾಡಿ ಕೊನೆಗೆ ಐದಕ್ಕೆ ವ್ಯಾಪಾರ ಮುಗಿಸುವ ನನ್ನಾಕೆ, ಒಂದು ರುಪಾಯಿ ಕೂಡ ಕಡಿಮೆ ಮಾಡದೆ ಅದನ್ನು ಖರೀದಿಸಿದಳು!

ಆತ ಇನ್ನೂ ಚಿಪ್ಪುಗಳನ್ನು ಒಡೆಯಲೇ ಎಂದು ಕೇಳುತ್ತಾ, 'ನೀವು ಕೊಳ್ಳಲೇಬೇಕು ಎಂಬ ಒತ್ತಾಯವೇನಿಲ್ಲ' ಎಂಬ ಷರಾವನ್ನು ತುಂಬಾ ಚಂದವಾಗಿ ಸೇರಿಸಿದ. ಅಷ್ಟರಲ್ಲಾಗಲೇ ಎಲ್ಲರಿಗೂ ಮುತ್ತಿನ 'ಮತ್ತು' ಏರಿತ್ತು. ನಮ್ಮಮ್ಮ, ʼಸರಿ.. ಒಡಿ..ʼ ಎಂದು ಆಜ್ಞೆ ಹೊರಡಿಸಿದರು. ಮತ್ತೆ ಚಿಪ್ಪು ಒಡೆಯುವ ಕ್ರಿಯೆ ಶುರುವಾಯ್ತು. ಹತ್ತು, ಹನ್ನೊಂದು, ಹನ್ನೆರಡು.. ಊಹೂಂ.. ಮುತ್ತಿನ ಪತ್ತೆಯೇ ಇಲ್ಲ. ಈ ಬಾರಿ ಅಮ್ಮನೇ ʼಜೈ ಜಗನ್ನಾಥ!ʼ ಎಂದರು. ಜಗನ್ನಾಥನ ನಾಮದ ಬಲವೋ ಏನೋ, ಆತ ಒಡೆಯುತ್ತಿದ್ದ ಚಿಪ್ಪಿನಲ್ಲಿ ಬೆಳ್ಳನೆಯ ಮುತ್ತು ಪ್ರತ್ಯಕ್ಷವಾಯಿತು! ಈ ಬಾರಿ ಅದರ ಗಾತ್ರ ಮೊದಲಿನದಕ್ಕಿಂತ ಸ್ವಲ್ಪ ದೊಡ್ಡದಿತ್ತು. ಅದರದ್ದೂ ವ್ಯಾಪಾರವಾಯ್ತು.

ಕಪ್ಪು ಮುತ್ತು

ತೀರಾ ಅಪರೂಪಕ್ಕೆ ಕಪ್ಪು ಮುತ್ತು ಸಿಗುತ್ತದೆ. ಅದು ಮಹಾ ಅದೃಷ್ಟವಂತರಿಗೆ ಮಾತ್ರ ಸಿಗುತ್ತದೆ. ಕಪ್ಪು ಮುತ್ತನ್ನು ಗಾಜಿನ ಲೋಟದ ನೀರಿನಲ್ಲಿ ನೆನೆಸಿ, ಒಂದು ವಾರದ ಕಾಲ ಆ ನೀರನ್ನು ಸೇವಿಸಿದರೆ ಮಂಡಿನೋವು, ಸಕ್ಕರೆ ಕಾಯಿಲೆ ಕಡಿಮೆಯಾಗುತ್ತದೆ ಎಂದ. ಅಪ್ಪ, ಆ ಮಾತು ಕೇಳುತ್ತಿದ್ದಂತೆಯೇ ಮೆಲ್ಲನೆ ತನ್ನ ಮಂಡಿಯನ್ನು ನೀವಿಕೊಂಡರು! ಸರಿ, ಈಗ ಮತ್ತೆ ಮುತ್ತು ಒಡೆಯುವ ಕಾರ್ಯ ಪ್ರಾರಂಭವಾಯಿತು. ಪುನಃ ಒಂದಷ್ಟು ಚಿಪ್ಪುಗಳನ್ನು ಒಡೆದದ್ದಾಯಿತು. ಅಚ್ಚರಿಯೆಂಬಂತೆ ಮುತ್ತು ಸಿಕ್ಕೇ ಬಿಟ್ಟಿತು. ಅದೂ ಅಪರೂಪದ ʼಬ್ಲಾಕ್‌ ಪರ್ಲ್ʼ! ಕೊನೆಗೆ ಆ ಕಪ್ಪು ಮುತ್ತಿಗೆ ಮೂರೂವರೆ ಸಾವಿರ ರೂಪಾಯಿ ದರ ನಿಗದಿಯಾಯಿತು.

ಸ್ಪ್ಯಾಮ್‌ ಅಲರ್ಟ್‌

ಅದೇ ಹೊತ್ತಿಗೆ ಕಿಸೆಯಲ್ಲಿದ್ದ ನನ್ನ ಫೋನ್ ರಿಂಗಣಿಸಲು ಶುರುವಾಯಿತು. ಟ್ರೂ-ಕಾಲರ್ ಪರದೆಯ ಮೇಲೆ ಕೆಂಬಣ್ಣದಲ್ಲಿ ʼಸ್ಪ್ಯಾಮ್ʼ ಎಂದು ಸೂಚಿಸಿದ್ದನ್ನು ನೋಡಿ, ʼಥತ್!ʼ ಎಂದು ಕರೆ ಕಟ್ ಮಾಡಿ ಫೋನನ್ನು ಮತ್ತೆ ಕಿಸೆಯಲ್ಲಿಟ್ಟೆ. ಕಿಸೆಯಲ್ಲಿ ಫೋನಿಟ್ಟ ಕ್ಷಣವೇ ಮನಸಿನ ಮೂಲೆಯಲ್ಲಿ ಎಂದೋ ಓದಿದ್ದ ಮಾತು ನೆನಪಾಯಿತು; ʼಕೇವಲ ನಮ್ಮ ಫೋನ್ ಸ್ಮಾರ್ಟ್ ಆಗಿದ್ದರೆ ಸಾಲದು, ನಾವೂ ಸ್ಮಾರ್ಟ್ ಆಗಿರಬೇಕು!ʼ ತಕ್ಷಣ ʼಚಿಲ್ಕಾ ಪರ್ಲ್ʼ ಎಂದು ಗೂಗಲ್ ಮಾಡಿದೆ. ಮುತ್ತಿನ ಮೋಸದ ಜಾಲದ ಸಾವಿರಾರು ಸುದ್ದಿಗಳು ಮತ್ತು ವಿಡಿಯೋಗಳು ಕಣ್ಣಿಗೆ ಬಿದ್ದವು. ಇದನ್ನು ಜೋರಾಗಿ ಹೇಳಲು ಒಂಚೂರು ಭಯವಾಯಿತು. ಸಾವಿರ ಚದರ ಕಿಲೋಮೀಟರ್ ಸರೋವರದ ಮಧ್ಯೆ ದೋಣಿಯಲ್ಲಿದ್ದೇವಲ್ಲ, ಯಾಕೆ ರಿಸ್ಕ್ ಎಂದು ಮೊಬೈಲನ್ನು ಮೆಲ್ಲನೆ ಮಗಳಿಗೆ ದಾಟಿಸಿದೆ. ಆಕೆ ಅದನ್ನು ತನ್ನ ಅಮ್ಮನಿಗೆ, ಆಕೆ ನನ್ನ ಅಮ್ಮನಿಗೆ ದಾಟಿಸಿದಳು.

ಈಗಾಗಲೇ ಒಂದುವರೆ ಸಾವಿರ ರೂಪಾಯಿ ಕೊಟ್ಟು ‘ಮಂಗ’ ಆಗಿದ್ದೇವೆ, ಇನ್ನು ಮೂರೂವರೆ ಸಾವಿರ ಕೊಟ್ಟು ಮತ್ತೆ ಮೋಸ ಹೋಗುವುದು ಬೇಡ ಎಂದು ಒಕ್ಕೊರಳಿನಿಂದ... ಅಲ್ಲಲ್ಲ, ಮೌನವಾಗಿ ಒಮ್ಮನಸಿನಿಂದ ನಿರ್ಧರಿಸಿ, ʼನಮ್ಮ ಹತ್ತಿರ ಅಷ್ಟು ಹಣವಿಲ್ಲʼ ಎಂಬ ಸಬೂಬು ಹೇಳಿ ದೋಣಿ ಹೊರಡಿಸಲು ಹೇಳಿದೆವು. ಆದರೆ ಆ ಚಿಪ್ಪಿನವನು, ʼಕೈಗೆ ಬಂದ ಅದೃಷ್ಟವನ್ನು ಯಾಕೆ ಬಿಡುತ್ತೀರಿ? ನಿಮ್ಮ ಹತ್ತಿರ ಎಷ್ಟಿದೆಯೋ ಅಷ್ಟನ್ನೇ ಕೊಡಿʼ ಎಂದು ಪೀಡಿಸತೊಡಗಿದ. ಅದಾಗಲೇ ನಾವು ನಮ್ಮ ಬುದ್ಧಿವಂತಿಕೆಗೆ ಪೆಟ್ಟು ತಿಂದಿದ್ದರಿಂದ, ಒಂದು ಕ್ಷಣವೂ ಅಲ್ಲಿ ನಿಲ್ಲಲಾಗದೆ ದೋಣಿಯನ್ನು ಆದಷ್ಟು ಬೇಗ ಹೊರಡಿಸಿ ಸರೋವರದ ಇನ್ನೊಂದು ಬದಿಯಲ್ಲಿರುವ ‘ಸೀ ಮೌತ್’ ಕಡೆಗೆ ಹೊರಟೆವು.

ರೆಡ್ ಕ್ರಾಬ್ ದ್ವೀಪದ ಆಸುಪಾಸಿನಲ್ಲಿದ್ದ ಇನ್ನೂ ಹತ್ತಾರು ಬೋಟುಗಳಲ್ಲಿ ಈ ʼಮುತ್ತಿನ ಕಥೆʼ ನಡೆಯುತ್ತಲೇ ಇತ್ತು. ಅದೆಷ್ಟು ಜನ ಪ್ರವಾಸಿಗರು ಅಲ್ಲಿ ಮಂಗಗಳಾಗುತ್ತಿದ್ದಾರೋ ಆ ಜಗನ್ನಾಥನೇ ಬಲ್ಲ! ಚಿಲ್ಕಾ ಸರೋವರಕ್ಕೆ ಭೇಟಿ ನೀಡಲಿರುವ ಎಲ್ಲಾ ಪ್ರವಾಸಿಗರಲ್ಲಿ ನನ್ನದೊಂದೇ ವಿನಂತಿ; ʼದಯವಿಟ್ಟು ನಮ್ಮಂತೆ ಮಂಗ ಆಗಬೇಡಿ.. ಮುತ್ತಿನ ಕಥೆಗೆ ಮರುಳಾಗಬೇಡಿ!ʼ ನಾವು ಏಳುನೂರ ಐವತ್ತು ರುಪಾಯಿ ಕೊಟ್ಟು ಖರೀದಿಸಿದ ಮುತ್ತಿನ ಅಸಲಿ ಬೆಲೆ, ಒಂದು ಜೋಡಿಗೆ ಐವತ್ತು ರುಪಾಯಿ ಕೂಡ ಇಲ್ಲ.

ಮಾಹಿತಿ ಪೆಟ್ಟಿಗೆ

  • ಪ್ರವಾಸದಲ್ಲಿ ಆಸೆ ತೋರಿಸಿ ಸ್ಕ್ಯಾಮ್‌ ಮಾಡುವವರಿರುತ್ತಾರೆ.
  • ಯಾವುದೇ ಜಾಗಕ್ಕೆ ಹೋಗುವ ಮುನ್ನ ಸ್ವಲ್ಪ ತಿಳಿದುಕೊಂಡು ಹೋಗುವುದು ಉತ್ತಮ
  • ಮುತ್ತು ಮಾರಾಟಕ್ಕಿದ್ದರೆ ಖರೀದಿಸಬೇಡಿ

ಲೇಖಕರು: ಹವ್ಯಾಸಿ ಬರಹಗಾರರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ