• ಕಾರ್ತಿಕೇಯ

ಭಾರತದ ಈಶಾನ್ಯ ಭಾಗದಲ್ಲಿರುವ ರಾಜ್ಯಗಳನ್ನು ಏಳು ತಂಗಿಯರ ರಾಜ್ಯಗಳೆಂದು ಕರೆಯಲಾಗುತ್ತದೆ. ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಹಾಗು ತ್ರಿಪುರಾ. ಅಲ್ಲಿನ ಪ್ರಾಕೃತಿಕ ಸೌಂದರ್ಯ ಕಣ್ಮನ ತಣಿಸುತ್ತದೆ. ಸಕುಟುಂಬ ಸಮೇತರಾಗಿ ಅಸ್ಸಾಂ ಹಾಗೂ ಮೇಘಾಲಯ ಪ್ರವಾಸ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಪಾವಗಡ ಟ್ರಾವೆಲ್ಸ್ ಮೂಲಕ ಕೈಗೊಂಡೆವು. ಈಶಾನ್ಯ ಭಾರತದಲ್ಲಿ ಮುಂಜಾನೆ 5 ಗಂಟೆಗೆ ಸೂರ್ಯೋದಯ ಹಾಗು ಸಂಜೆ 4 ಗಂಟೆ ಒಳಗೆ ಸೂರ್ಯಾಸ್ತವಾಗಿಬಿಡುತ್ತಿತ್ತು. ಹಾಗಾಗಿ ನಾವು ನೋಡುವ ಸ್ಥಳಗಳನ್ನು ಸಮಯಕ್ಕೆ ಸರಿಯಾಗಿ ಹೊಂದಿಸಿಕೊಳ್ಳುತ್ತಿದ್ದೆವು.

ಇದನ್ನೂ ಓದಿ: ಸ್ಕಾಚ್ ಬಾಟಲಿಗಳ ಮೆರುಗು: ಪ್ರವಾಸೋದ್ಯಮದ ಗೆಲುವಿನ ನಗು!

ಪ್ರಾಣಿಗಳ ಲೋಕದಲ್ಲಿ

ಅಸ್ಸಾಂನಲ್ಲಿ ಕಾಮಾಕ್ಯ ಶಕ್ತಿಪೀಠ, ಕಾಜೀರಂಗ ಖಡ್ಗಮೃಗ ರಾಷ್ಟ್ರೀಯ ಉದ್ಯಾನವನ ಪ್ರೇಕ್ಷಣೀಯ ಸ್ಥಳಗಳು. ಕಾಮಾಕ್ಯ ಶಕ್ತಿಪೀಠ ಬೇರೆ ಶಕ್ತಿಪೀಠಗಳಿಗಿಂತ ವಿಭಿನ್ನವಾದದ್ದು. ಅಲ್ಲಿಯ ಗರ್ಭಗುಡಿಯಲ್ಲಿರುವ ಬೃಹತ್ ದೀಪಗಳ ಬೆಳಕಿನಿಂದಲೇ ಶೀಲರೂಪ ಶಕ್ತಿಯ ದರ್ಶನವಾಗಬೇಕು. ಅಲ್ಲಿ ಮೂರ್ತಿಗಳಿಲ್ಲ, ಪ್ರತಿನಿತ್ಯವೂ ಪ್ರಾಣಿ ಬಲಿ ನಡೆಯುತ್ತಿರುತ್ತದೆ. ನಾವು ಹೋಗಿದ ದಿವಸ ಅಮಾವಾಸ್ಯೆ, ಅಂದು ಅತಿ ಹೆಚ್ಚು ಪ್ರಾಣಿ ಬಲಿಗಳು ನಡೆಯುವುದರಿಂದ ನಮಗೆ ದರ್ಶನ ತಡವಾಯಿತು. ಅಲ್ಲಿನ ವಾತಾವರಣವೇ ಚುಂಬಕ ಶಕ್ತಿಯಂತೆ ಎಳೆಯುತ್ತದೆ.

Untitled design - 2026-05-12T162842.982

ಇನ್ನು ಕಾಜೀರಂಗ ಒಂಟಿ ಕೊಂಬುಗಳಿರುವ ಖಡ್ಗಮೃಗಗಳಿಗೇ ಪ್ರಸಿದ್ಧವಾಗಿದೆ. ಮುಖ್ಯವಾಗಿ ಅಲ್ಲಿನ ಬೆಳಗಿನ ಜಾವದ ಆನೆಯ ಸಫಾರಿ ಒಳ್ಳೆಯ ಅನುಭವ ನೀಡುತ್ತದೆ, ಅದೃಷ್ಟವಿದ್ದರೆ ಹಲವು ಪ್ರಾಣಿಗಳನ್ನು ಅವುಗಳ ಮೂಲಸ್ಥಳಗಳಲ್ಲೇ ಹತ್ತಿರದಿಂದ ನೋಡಬಹುದು. ನಮಗೆ ಖಡ್ಗಮೃಗ, ಜಿಂಕೆ, ಕಾಡುಕೋಣ, ಕಾಡುಹಂದಿ, ನವಿಲುಗಳು ಕಂಡುಬಂದವು. ನಮ್ಮನ್ನು ಹೊತ್ತ ಆನೆ ಅದರ ಹೆಸರು ರಾಧಾ ಅದಕ್ಕೆ ನಾವು ಚಿರಋಣಿ, ಪಾಪದ ಪ್ರಾಣಿ ಆನೆಯ ಮೇಲೆ ಕೂರಲು ಮನಸಿರಲಿಲ್ಲ, ಆದರೂ ಅದರ ಬಳಿ ಕ್ಷಮೆ ಕೇಳಿ ಅದರ ಮೇಲೆ ಕೂತು ಸಫಾರಿಯ ಒಳ್ಳೆಯ ಅನುಭವವನ್ನು ಪಡೆದವು. ವಾಪಸ್ಸು ಬಂದ ನಂತರ ಆನೆಗೆ ತಿನ್ನಲು ಕಬ್ಬು, ಪೈನಾಪಲ್ ಕೊಟ್ಟಾಗ ಮನಸಿಗೆ ಸಮಾಧಾನವಾಯಿತು.

Untitled design - 2026-05-12T162829.164

ಮೇಘಗಳ ನಾಡಿನಲ್ಲಿ

ಮೇಘಗಳನ್ನು ಚುಂಬಿಸುವ ನಗರ ಮೇಘಾಲಯ. ಪ್ರಾಕೃತಿಕ ಸೌಂದರ್ಯದ ಗಣಿ ಈ ರಾಜ್ಯ. ಮೇಘಾಲಯದಲ್ಲಿ ಸಾಕಷ್ಟು ಜಲಪಾತಗಳು, ಗುಹೆಗಳನ್ನು ಕಾಣಬಹುದು. ಇಲ್ಲಿ ತುಂಬಾ ಆಕರ್ಷಕವಾದದ್ದು ಜೀವಂತ ಬೇರುಗಳ ಸೇತುವೆ. ಮರದ ಬೇರುಗಳನ್ನು ಸೇತುವೆಯ ಹಾಗೆ ಹಣೆಯಲಾಗಿದೆ. ಏಷ್ಯಾ ಖಂಡದಲ್ಲೇ ಸ್ವಚ್ಛ ಗ್ರಾಮವಾದ ಮೌಲಿನ್ನಾಂಗ್ ವೀಕ್ಷಿಸಿದೆವು. ಪ್ರತಿ ಮನೆಯ ಮುಂದೆ ಪುಟ್ಟ ಸುಂದರ ಹೂದೋಟ, ನಡುವೆ ಬೆತ್ತದ ಆರಾಮ ಕುರ್ಚಿಗಳು, ನೋಡಲು ಆಹ್ಲಾದಕರವಾಗಿರುತ್ತದೆ. ಇಲ್ಲಿನ ವಿಶೇಷವೆಂದರೆ ವ್ಯಾಪಾರದಲ್ಲಿ ಖಾಸಿ ಬುಡಕಟ್ಟು ಮಹಿಳೆಯರದೇ ಮೇಲುಗೈ. ಬಿದಿರಿನಿಂದಲೇ ಮಾಡಿದ ಉತ್ಪನ್ನಗಳನ್ನು ಇಲ್ಲಿ ಖರೀದಿ ಮಾಡಬಹುದು.

ಡಾವ್ಕಿ ಸರೋವರ ಸ್ವಚ್ಛ ಸುಂದರ ಪಾರದರ್ಶಕವಾಗಿದೆ. ಈ ಸರೋವರದಲ್ಲಿ ದೋಣಿ ವಿಹಾರ ಬಹಳ ಮುದ ನೀಡುತ್ತದೆ. ಎತ್ತರ ಕಲ್ಲು ಬಂಡೆಗಳ ನಡುವೆ ಶಾಂತವಾಗಿ ಹರಿಯುವ ನೀರಿನಲ್ಲಿ, ನದಿಯ ತಳ ನೋಡುವುದು ರಮ್ಯವಾದ ಅನುಭವ. ಅರ್ವಾ ಮತ್ತು ಮೌಸಮಿ ಗುಹೆಗಳು ನೈಸರ್ಗಿಕವಾಗಿ ಬೆಣಚು ಕಲ್ಲುಗಳಿಂದ ನಿರ್ಮಿತವಾಗಿದೆ. ಗುಹೆ ಒಳಗೆ ಹೋಗಿ ಬರುವುದೊಂದು ಲಘು ಸಾಹಸ.

Untitled design - 2026-05-12T162823.812

ಸ್ಥಳೀಯ ವಿಶೇಷತೆ

ಶಿಲಾಂಗ್‌ನಲ್ಲಿರುವ ಡಾನ್ ಬಾಸ್ಕೋ ವಸ್ತು ಸಂಗ್ರಹಾಲಯದಲ್ಲಿ ಈಶಾನ್ಯ ರಾಜ್ಯದ ಬುಡಕಟ್ಟು ಜನಾಂಗದವರ ಆಚರಣೆಗಳು, ಕೃಷಿ ಸಂಪ್ರದಾಯ, ಆಯುಧಗಳು, ಆಹಾರ ಪದ್ಧತಿ, ವಸ್ತ್ರಾಲಂಕಾರಗಳು, ಧಾರ್ಮಿಕತೆ ಹಬ್ಬ ಮುಂತಾದವುಗಳ ಬಗ್ಗೆ ಮಾದರಿ ಮೂಲಕ ಹೆಚ್ಚಿನ ಮಾಹಿತಿ ತಿಳಿಸಿದ್ದಾರೆ. ನಮ್ಮಲ್ಲಿರುವಂತೆ ಮೇಘಾಲಯದಲ್ಲಿ ಅಡಿಕೆ ಕೃಷಿ ನೋಡಿ ಆಶ್ಚರ್ಯವಾಯಿತು. ಅಲ್ಲಿನ ಪೈನಾಪಲ್‌ಗೆ ವಿಶೇಷ ರುಚಿ ಇದೆ, ಆ ರುಚಿಯನ್ನು ಮರೆಯಲು ಸಾಧ್ಯವಾಗುವುದಿಲ್ಲ. ಥ್ರೀ ಸಿಸ್ಟರ್ಸ್ ಬಳಿಯಿರುವ ಪೈನ್ ಮರಗಳು ಮುಗಿಲೆತ್ತರ ಇವೆ. ನಾವು ಇಲ್ಲಿ ಸಾಂಪ್ರದಾಯಿಕ ಖಾಸಿ ವಸ್ತ್ರಾಭರಣಗಳನ್ನು ಧರಿಸಿ ಖುಷಿಪಟ್ಟೆವು. ಇನ್ನು ಪ್ರವಾಸದ ಕೊನೆಯ ದಿನ ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ಭಸ್ಮಾಚಲ ಎಂಬ ಪುಟ್ಟ ದ್ವೀಪದಲ್ಲಿ ಇರುವ ಉಮಾನಂದ ದೇವಾಲಯನ್ನು ನೋಡಲು ಲಾಂಜ್ ಮೂಲಕ ಹೋಗಿದ್ದು ಅದ್ಭುತವಾದ ಅನುಭವ. ಪ್ರವಾಸದ ಗುರುತಿಗೆ ಅಸ್ಸಾಂ ಹಾಗು ಮೇಘಾಲಯ ರಾಜ್ಯಗಳಿಂದ ಖಾಸಿ ಶಾಲುಗಳು, ಬಿದಿರಿನ ಬ್ಯಾಗ್, ಅಸ್ಸಾಂನ ವಿಶಿಷ್ಟ ಬೆತ್ತದ ಜಾಪಿ ಟೋಪಿಯನ್ನು, ಗಮ್ಚಶಾಲು ಮತ್ತು ಅಲ್ಲಿನ ವಿಶೇಷ ಸೀರೆಗಳನ್ನು ಖರೀದಿಸಿ, ಈ ಎಲ್ಲಾ ಪ್ರವಾಸದ ಮಧುರ ನೆನಪುಳನ್ನು ಹೊತ್ತು ನಮ್ಮ 7 ದಿನದ ಪ್ರವಾಸವನ್ನು ಮುಗಿಸಿ ಬೆಂಗಳೂರಿಗೆ ತಲುಪಿದೆವು.

ಮಾಹಿತಿ ಪೆಟ್ಟಿಗೆ:

*ಅಸ್ಸಾಂನ ಕಾಮಾಕ್ಯ ಶಕ್ತಿಪೀಠದಲ್ಲಿ ಪ್ರಾಣಿಬಲಿ ನಡೆಯುತ್ತದೆ.

*ವ್ಯಾಪಾರದಲ್ಲಿ ಖಾಸಿ ಬುಡಕಟ್ಟು ಮಹಿಳೆಯರದ್ದೇ ಮೇಲುಗೈ

*ಇಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ಎರಡೂ ಬೇಗ