ದೇಶದ ಏಳು ಐಷಾರಾಮಿ ವಿಶೇಷ ರೈಲುಗಳಿವು!
ತನ್ನ ಪ್ರಯಾಣಿಕರಿಗೆ ಮಹಾರಾಜರ ಅನುಭವವನ್ನು ನೀಡಲೆಂದೇ ಇರುವ ಮಹಾರಾಜ ಎಕ್ಸ್ ಪ್ರೆಸ್, ಭಾರತದಲ್ಲಿ ಅತ್ಯಂತ ದುಬಾರಿ ಐಷಾರಾಮಿ ರೈಲು. ಮಹಾರಾಜ ಎಕ್ಸ್ ಪ್ರೆಸ್ ರೈಲು ವಿಶ್ವದ ಅತ್ಯುತ್ತಮ ರೈಲು ಪ್ರಯಾಣಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಟಿಕೆಟ್ ದರ ಎಷ್ಟೆಂದು ಮಾತ್ರ ಕೇಳಬೇಡಿ!
- ದೇವಪ್ರಿಯಾ
ನಮ್ಮ ದೇಶದಲ್ಲಿ ರೈಲು ಪ್ರಯಾಣ ಕಡಿಮೆ ಖರ್ಚಿನ ಸಾರಿಗೆ ಮಾಧ್ಯಮ. ಅಷ್ಟೇ ಅಲ್ಲ ರೈಲು ಪ್ರಯಾಣ ಅಂದ್ರೆ ಅದು ಆರಾಮದಾಯಕ. ಹತ್ತಾರು ಗಂಟೆಗಳ ಪ್ರಯಾಣವಿದ್ದಲ್ಲಿ ಪ್ರಯಾಣಿಕರು ರೈಲನ್ನೇ ನೆಚ್ಚಿಕೊಳ್ಳುತ್ತಾರೆ. ಹೊಸ ಹೊಸ ಮಾರ್ಗಗಳ ಮೂಲಕ ತಾಜಾ ಅನುಭವ ನೀಡುತ್ತದೆ ರೈಲಿನ ಪ್ರಯಾಣ. ಸುಂದರ ಪರಿಸರದಲ್ಲಿ ಸಾಗುವ ಈ ಖುಷಿಯೇ ಅನನ್ಯ. ಸುಂದರ ಪ್ರಕೃತಿಯ ನಡುವೆ ಸಾಗುವಾಗ ಕಾಣಸಿಗುವ ನೋಟಗಳು ಒಂದೊಂದು ಸಲ ದೃಶ್ಯ ಕಾವ್ಯದಂತೆ ಕಣ್ಣಿಗೆ ಗೋಚರವಾಗುತ್ತವೆ. ರೈಲು ಪ್ರಯಾಣದ ಅನುಭವ ಒಂದು ಥರದ್ದಾದರೆ, ನಾವು ಪ್ರಯಾಣಿಸುವ ರೈಲೇ ವಿಶಿಷ್ಟವಾಗಿದ್ದರೆ ಹೇಗಿರುತ್ತದೆ? ನೀವು ಭಾರತದಲ್ಲಿರೋ ಈ 7 ಅದ್ಭುತ ರೈಲಿನ ಬಗ್ಗೆ ತಿಳಿದುಕೊಂಡರೆ ಖಂಡಿತ ಆಶ್ಚರ್ಯಚಕಿತರಾಗ್ತೀರಿ.. ಆದರೆ ಈ ರೈಲುಗಳ ಪ್ರಯಾಣದ ದರ ಕೇಳಿದ್ರೆ ಮಾತ್ರ ಕೊಂಚ ಗಾಬರಿಯಾಗಬಹುದು. ಯಾಕಂದ್ರೆ ಇದು ಯಾವ ಐಷಾರಾಮಿ ವಿಮಾನಕ್ಕೂ ಕಮ್ಮಿಯಿಲ್ಲ..
1 ಗೋಲ್ಡನ್ ಚಾರಿಯೋಟ್
ದಕ್ಷಿಣ ಭಾರತದ ಏಕೈಕ ಐಷಾರಾಮಿ ರೈಲು ದಿ ಗೋಲ್ಡನ್ ಚಾರಿಯೋಟ್ ರೈಲು. ಗೋಲ್ಡನ್ ಚಾರಿಯೋಟ್ ರೈಲು 44 ಸುಸಜ್ಜಿತ ಕ್ಯಾಬಿನ್‍ಗ ಳು, ಎನ್‌ಸೂಟ್ ಸ್ನಾನಗೃಹ ಹಾಗೂ ವೈಫೈ ಸೌಲಭ್ಯ ಒಳಗೊಂಡಿದೆ. ರುಚಿ ಮತ್ತು ನಳಪಾಕ ಹೆಸರಿನ ಎರಡು ಹೊಟೇಲ್ ಗಳು ಭಾರತೀಯ ಮತ್ತು ವಿದೇಶಿ ಸ್ಟೈಲ್ನ ಊಟದ ಸೇವೆ ನೀಡುತ್ತದೆ. ಲಾಂಜ್ ಬಾರ್, ಫಿಟ್ ನೆಸ್ ಸೆಂಟರ್ ಇತರೆ ಸೌಕರ್ಯಗಳು ಇದರಲ್ಲಿವೆ. ಈ ವಿಶೇಷ ರೈಲು ಪ್ರವಾಸವನ್ನು ಜಾಗತಿಕ ಮಟ್ಟದಲ್ಲಿ ವಿಶ್ವದ ಏಳು ಅತ್ಯುತ್ತಮ ಐಷಾರಾಮಿ ರೈಲು ಪ್ರಯಾಣಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಮಾತ್ರವಲ್ಲ ಹಲವಾರು ಪ್ರಶಸ್ತಿ ಪಡೆದುಕೊಂಡಿದೆ.

ಪ್ರಯಾಣಿಸಲು ತಗಲುವ ದರ:
ಬೆಂಗಳೂರಿನಿಂದ ಆರಂಭಗೊಂಡು ಮೈಸೂರು, ಕಾಂಚೀಪುರಂ, ಮಹಾಬಲಿಪುರಂ, ತಂಜಾವೂರು, ಕೊಚ್ಚಿನ್, ಮರಾರಿಕುಲಂಗೆ ತೆರಳಿ ನಂತರ ಬೆಂಗಳೂರಿಗೆ ಹಿಂದಿರುಗುತ್ತದೆ. ಇದು ಐದು ದಿನಗಳ ಪ್ರವಾಸವಾಗಿದ್ದು, ಇದಕ್ಕೆ ತಗಲುವ ವೆಚ್ಚ ಒಬ್ಬರಿಗೆ 4,07,700 ರು.
2 ಮಹಾರಾಜ ಎಕ್ಸ್ ಪ್ರೆಸ್ ರೈಲು
ಭಾರತದ ಹಿಂದಿನ ಹಲವು ಮಹಾರಾಜರ ಖಾಸಗಿ ಕೊಠಡಿಯಿಂದ ಪ್ರೇರೇಪಿತಗೊಂಡು ಆರಂಭಗೊಂಡದ್ದು ಈ ಮಹಾರಾಜ ಎಕ್ಸ್ ಪ್ರೆಸ್ ರೈಲು. ತನ್ನ ಪ್ರಯಾಣಿಕರಿಗೆ ಮಹಾರಾಜರ ಅನುಭವವನ್ನು ನೀಡಲೆಂದೇ ಇರುವ ಮಹಾರಾಜ ಎಕ್ಸ್ ಪ್ರೆಸ್, ಭಾರತದಲ್ಲಿ ಅತ್ಯಂತ ದುಬಾರಿ ಐಷಾರಾಮಿ ರೈಲು. ಮಹಾರಾಜ ಎಕ್ಸ್ ಪ್ರೆಸ್ ರೈಲು ವಿಶ್ವದ ಅತ್ಯುತ್ತಮ ರೈಲು ಪ್ರಯಾಣಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಈ ರೈಲಿನಲ್ಲಿ ಊಟ, ಪಾನೀಯ, ಬಟ್ಲರ್ ಸೇವೆಗಳು, ವೈದ್ಯಕೀಯ ಸೇವೆಗಳು ಮತ್ತು ಇತರ ಹಲವಾರು ಸೌಲಭ್ಯಗಳು ಲಭ್ಯವಿವೆ.

ಪ್ರಯಾಣಿಸಲು ತಗಲುವ ದರ:
ಮೊದಲೇ ಹೇಳಿದಂತೆ ಮಹಾರಾಜ ಎಕ್ಸ್ ಪ್ರೆಸ್ ರೈಲು ಐಷಾರಾಮಿ ರೈಲು. ಇದರಲ್ಲಿ ಪ್ರಯಾಣಿಸಬೇಕಂದ್ರೆ 3-4 ದಿನಗಳಿಗೆ 3,90,600 ರು. ತಗಲುತ್ತದೆ. 6-7 ದಿನಗಳ ಪ್ರಯಾಣಕ್ಕೆ ಬರೋಬ್ಬರಿ 20,90,760 ರು.
3 ಡೆಕ್ಕನ್ ಒಡಿಸ್ಸಿ
ಡೆಕ್ಕನ್ ಒಡಿಸ್ಸಿ ರೈಲು ನೋಡಿದರೆ ಅಕ್ಷರಶಃ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ. ರೈಲಿನ ಒಳಭಾಗದಲ್ಲಿ ಸುಂದರವಾದ ಕ್ಯಾಬಿನ್ ಗಳು, ಸೊಗಸಾದ ಒಳಾಂಗಣ ಮತ್ತು ಆಧುನಿಕ ಸೌಕರ್ಯ ಕಣ್ಮನ ಸೆಳೆಯುತ್ತದೆ. ಮನೆಯಂತೆಯೇ ಭಾಸವಾಗುವಂಥ ಮಾಸ್ಟರ್ ಬೆಡ್ ರೂಮ್ ಗಳು ಆರಾಮದಾಯಕ ನಿದ್ದೆಗೆ ಸಹಾಯ ಮಾಡುತ್ತದೆ. ಅತಿಥಿಗಳ ಅನುಕೂಲಕ್ಕಾಗಿ ಸುಸಜ್ಜಿತವಾದ ಬೆಡ್‌ರೂಂ ಹಾಗು ನವೀನ ಶೈಲಿಯ ಬಾತ್ ರೂಮ್ ಗಳು ಈ ರೈಲಿನಲ್ಲಿವೆ. ಅಚ್ಚರಿ ಅಂದ್ರೆ ಡೆಕ್ಕನ್ ಒಡಿಸ್ಸಿ ರೈಲಿನಲ್ಲಿ ಜಿಮ್ ಮತ್ತು ಬಾರ್ ಕೂಡ ಇದೆ.

ಪ್ರಯಾಣಿಸಲು ತಗಲುವ ದರ:
ಪ್ಯಾಕೇಜ್ ಲೆಕ್ಕದಲ್ಲಿ ನೀವು 6 ರಿಂದ 8 ರಾತ್ರಿಗಳ ಪ್ರವಾಸ ಮಾಡಬಹುದು. ಒಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಪ್ರತಿ ಕ್ಯಾಬಿನ್ ಗೆ ಸುಮಾರು 4,2700 ರು. ತಗಲುತ್ತದೆ. ಇಬ್ಬರಿಗೆ 6,12,500 ರು. ತಗಲುತ್ತದೆ.
4 ಪ್ಯಾಲೇಸ್ ಆನ್ ವೀಲ್ಸ್
ರಾಜ ಮಹಾರಾಜರಂತೆ ಅನುಭವ ನೀಡುವ ಪ್ಯಾಲೇಸ್ ಆನ್ ವೀಲ್ಸ್ ಎಂಬ ವಿಶೇಷ ರೈಲು ಸೇವೆಯೂ ಸಹ ಭಾರತೀಯ ರೈಲ್ವೆಯಲ್ಲಿ ಲಭ್ಯವಿದೆ. ವಿಶ್ವದ ಅತ್ಯಂತ ಪ್ರಸಿದ್ಧ ಪಾರಂಪರಿಕ ರೈಲುಗಳಲ್ಲಿ ಇದು ಒಂದಾಗಿದೆ. ಹೆಸರೇ ಸೂಚಿಸುವಂತೆ ಇದು ರಾಯಲ್ ಟ್ರೇನ್ ಆಗಿದ್ದು, ಭಾರತೀಯ ರೈಲ್ವೆ ಮತ್ತು ರಾಜಸ್ಥಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಈ ರೈಲನ್ನು ನಿರ್ವಹಿಸುತ್ತದೆ.
ಏಳು ದಿನಗಳ ಪ್ರಯಾಣ:
ಪ್ಯಾಲೇಸ್ ಆನ್ ವೀಲ್ಸ್ ರೈಲಿನಲ್ಲಿ ಪ್ರವಾಸಿಗಳು 7 ದಿನಗಳ ಪ್ರಯಾಣದ ಆನಂದವನ್ನು ಸವಿಯಬಹುದು. ಇದರಲ್ಲಿ ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಎಂಟು ನಗರಗಳಿಗೆ (ಜೈಪುರ, ಸವಾಯಿ ಮಾಧೋಪುರ್, ಚಿತ್ತೋರ್‌ಗಢ, ಉದಯಪುರ, ಜೈಸಲ್ಮೇರ್, ಜೋಧಪುರ, ಭರತ ಪುರ ಮತ್ತು ಆಗ್ರಾ) ಭೇಟಿ ನೀಡಲು ಅವಕಾಶವಿರುತ್ತದೆ.

ಪ್ರಯಾಣಿಸಲು ತಗಲುವ ದರ:
ಏಳು ದಿನಗಳ ಐಷಾರಾಮಿ ಪ್ರಯಾಣದ ಆನಂದವನ್ನು ಒದಗಿಸುವ ಪ್ಯಾಲೇಸ್ ಆನ್ ವೀಲ್ಸ್ ರೈಲಿನಲ್ಲಿ ಪ್ರಯಾಣಿಸಲು ಒಂದು ಕೊಠಡಿಯ ಟಿಕೆಟ್ ಕಡಿಮೆ ಅಂದ್ರೂ ಬರೋಬ್ಬರಿ 12 ಲಕ್ಷ ರುಪಾಯಿ ಮತ್ತು ಅತ್ಯಂತ ದುಬಾರಿ ಟಿಕೆಟ್ 39 ಲಕ್ಷ ರುಪಾಯಿ.
5 ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಸುಂದರ ತಾಣಗಳಲ್ಲಿ ಒಂದು. ಡಾರ್ಜಿಲಿಂಗ್ ಭಾರತದ ಪ್ರಮುಖ ಪ್ರವಾಸಿ ತಾಣ ಕೂಡಾ ಹೌದು. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಚಹಾ ತೋಟಗಳಿಗೆ ಡಾರ್ಜಿಲಿಂಗ್ ಸಖತ್ ಫೇಮಸ್. ಇನ್ನು ಇಲ್ಲಿನ ರೈಲು ಪ್ರಯಾಣ ಕೂಡಾ ಅಷ್ಟೇ ಖುಷಿ ನೀಡುತ್ತದೆ. ಈ ರೈಲಿನಲ್ಲಿ ಪ್ರಯಾಣ ಮಾಡುವಾಗ, ನೀವು ಹಿಮಾಲಯದ ಸುಂದರ ಪರ್ವತಗಳು, ನೈಸರ್ಗಿಕ ದೃಶ್ಯಗಳನ್ನು ನೋಡುತ್ತಾ, ಹಳೆಯ ಕಾಲದ ರೈಲು ಪ್ರಯಾಣದ ಮನೋಹರ ಅನುಭವವನ್ನು ಪಡೆಯಬಹುದು. ಇದು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಮತ್ತು ಡಾರ್ಜಿಲಿಂಗ್ ನಡುವೆ ಚಲಿಸುವ 2 ಅಡಿ ಗೇಜ್ ರೈಲ್ವೆಯಾಗಿದೆ. ಈ ರೈಲನ್ನು 1879 ಮತ್ತು 1881 ರ ನಡುವೆ ನಿರ್ಮಿಸಲಾಗಿದೆ. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ ಸುಮಾರು 88 ಕಿಮೀ ಉದ್ದವಿದೆ.

ಪ್ರಯಾಣಿಸಲು ತಗಲುವ ದರ:
ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆಯಲ್ಲಿ ಪ್ರಯಾಣಿಸಲು ಒಬ್ಬ ವ್ಯಕ್ತಿಗೆ ₹1,000 ತಗಲುತ್ತದೆ. ಸ್ಟೀಮ್ ಇಂಜಿನ್ ರೈಲಿನಲ್ಲಿ ಪ್ರಯಾಣಿಸಲು ರೂ. 1,500 ತಗಲುತ್ತದೆ. ಫಸ್ಟ್ ಕ್ಲಾಸ್ ಸೀಟ್ಗೆ ರು.1,600 ತಗಲುತ್ತದೆ.
6 ಕಲ್ಕಾ-ಶಿಮ್ಲಾ ರೈಲ್ವೆ
ಈ ರೈಲ್ವೇ ಮಾರ್ಗವನ್ನು ಭಾರತದಲ್ಲಿ ಬ್ರಿಟಿಷ್ ವಸಾಹತುಗಳ ಕಾಲದಲ್ಲಿ ನಿರ್ಮಿಸಲಾಗಿದ್ದು, ಇದನ್ನು 1903 ರಲ್ಲಿ ಸಾರ್ವಜನಿಕರಿಗಾಗಿ ತೆರೆಯಲಾಯಿತು. ಇದನ್ನು ಆರಂಭದಲ್ಲಿ ಬ್ರಿಟಿಷ್ ಇಂಡಿಯಾದ ಬೇಸಿಗೆ ರಾಜಧಾನಿ ಶಿಮ್ಲಾವನ್ನು ಬಯಲು ಪ್ರದೇಶದೊಂದಿಗೆ ಸಂಪರ್ಕಿಸಲು ನಿರ್ಮಿಸಲಾಯಿತು. ರೈಲ್ವೇ ಮಾರ್ಗವು ಮಂತ್ರ ಮುಗ್ಧಗೊಳಿಸುವಂಥ ಹಲವಾರು ದೃಶ್ಯ ಸೌಂದರ್ಯ, ಇಂಜಿನಿಯರಿಂಗ್ ಅದ್ಭುತ ಮತ್ತು ಮಾಂತ್ರಿಕ ಮೋಡಿಯನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಪ್ರಯಾಣಿಸಲು ತಗಲುವ ದರ:
ಕಲ್ಕಾ-ಶಿಮ್ಲಾ ರೈಲಿನಲ್ಲಿ ಪ್ರಯಾಣಿಸಲು ಮಕ್ಕಳಿಗೆ 160 ರುಪಾಯಿ ತಗುಲಿದ್ರೆ, ವಯಸ್ಕರಿಗೆ 320 ರುಪಾಯಿ ತಗಲುತ್ತದೆ. ಹಿಮಾಲಯನ್ ಕ್ವೀನ್ ನಲ್ಲಿ ಸಂಚರಿಸಲು ವಯಸ್ಕರಿಗೆ 470 ರು ಇದ್ದರೆ, ಮಕ್ಕಳಿಗೆ 235ರು ಇದೆ.

7 ಮುಂಬೈ ಗೋವಾ ರಮಣೀಯ ಮಾರ್ಗ: (ಮಾಂಡೋವಿ/ವಿಸ್ತಾಡೋಮ್)
ಭಾರತದ ಅತ್ಯಂತ ಸುಂದರ ರೈಲುಯಾತ್ರೆಗಳಲ್ಲಿ ಒಂದಾದ ಕೊಂಕಣ ತೀರದ ಈ ಪ್ರಯಾಣ, ಸುರಂಗಗಳು, ಎತ್ತರದ ಬಂಡೆಗಳು ಮತ್ತು ನದಿಗಳಿಂದ ಕೂಡಿದೆ. ಈ ಮಾರ್ಗವು ಪ್ರಕೃತಿಯ ಮಧ್ಯೆ ಹಾದು ಹೋಗುತ್ತದೆ. ವಿಸ್ತಾಡೋಮ್ ರೈಲುಗಳಲ್ಲಿ ತುಂಬಾ ದೊಡ್ಡ ಗಾಜಿನ ಕಿಟಕಿಗಳಿದ್ದು, ಹೊರಗಿನ ನೋಟಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತದೆ. ಅದ್ರಲ್ಲೂ ಮುಂಬೈ-ರೈಲು ಮಾರ್ಗದಲ್ಲಿ ನೀವು ಕಣ್ತುಂಬಿಕೊಳ್ಳಬಹುದಾದ ಮತ್ತಷ್ಟು ಪ್ರಕೃತಿ ರಮಣೀಯ ದೃಶ್ಯಗಳಿವೆ.
ಪ್ರಯಾಣಿಸಲು ತಗಲುವ ದರ:
ಮುಂಬೈ-ಗೋವಾ ವಿಸ್ತಾಡೋಮ್ ರೈಲುಗಳಲ್ಲಿ ಪ್ರಯಾಣಿಸಲು ನಿಮಗೆ 2,235 ರಿಂದ 2,495 ರು. ತಗಲುತ್ತದೆ.