Saturday, July 26, 2025
Saturday, July 26, 2025

ಹಿಂದೂ-ಜೈನ ಧರ್ಮಗಳ ಸಮಾಗಮಕ್ಕೆ ಸಾಕ್ಷಿ

ಜೈನ ದೇವಾಲಯಗಳನ್ನು ದಾಟಿ ಇನ್ನೂ ಸಾವಿರ ಮೆಟ್ಟಿಲುಗಳನ್ನು ಹತ್ತಿದರೆ ಶಿಖರದ ಮೇಲೆ ಅಂಬಾ ಮಾತಾ ದೇವಾಲಯವಿದೆ. ಇದು 51 ಶಕ್ತಿ ಪೀಠಗಳಲ್ಲಿ ಒಂದು. ಅಲ್ಲಿ ನವವಿವಾಹಿತರು ಸುಖೀ ದಾಂಪತ್ಯಕ್ಕಾಗಿ ಪೂಜಿಸುತ್ತಾರೆ. ಇಲ್ಲಿಂದ ಆಚೆಗೆ ಇತರ ಶಿಖರಗಳು ಮತ್ತು ಮುಂದಿನ ದೇವಾಲಯಗಳನ್ನು ತಲುಪಲು ಸಾಕಷ್ಟು ಆರೋಹಣ ಅವರೋಹಣ ಮಾಡಬೇಕಾಗುತ್ತದೆ

-ವೀಣಾ ಅನಂತ್ ಭಟ್

ಗಿರ್ನಾರ್ ಬೆಟ್ಟ ಗುಜರಾತಿನ ಜುನಾಗಢದಲ್ಲಿರುವ ಒಂದು ಪ್ರಮುಖ ಪರ್ವತವಾಗಿದ್ದು, ಶತಮಾನಗಳಿಂದ ಹಿಂದೂಗಳು ಮತ್ತು ಜೈನರಿಗೆ ಪವಿತ್ರ ಸ್ಥಳವಾಗಿದೆ. ಇದು ಹಿಮಾಲಯಕ್ಕಿಂತಲೂ ಹಳೆಯದು ಎಂದು ನಂಬಲಾಗಿದೆ. ಇಲ್ಲಿ ಮುಖ್ಯವಾಗಿ ಐದು ಶಿಖರಗಳಿದ್ದು ಇವೆಲ್ಲವೂ ಒಂದೇ ಬೆಟ್ಟದ ಭಾಗಗಳಾಗಿವೆ. ಪ್ರತಿಯೊಂದು ಶಿಖರಾಗ್ರದಲ್ಲಿ ಬೇರೆ ಬೇರೆ ದೇವರುಗಳ ದೇವಾಲಯಗಳಿವೆ. ಮೊದಲ ನಾಲ್ಕು ಸಾವಿರ ಮೆಟ್ಟಿಲುಗಳನ್ನು ಹತ್ತಿದರೆ ಶ್ವೇತಾಂಬರ ಜೈನ ದೇವಾಲಯಗಳ ಗುಂಪು ಸಿಗುತ್ತದೆ. ಇವು 13ನೇ ಶತಮಾನದಲ್ಲಿ ನಿರ್ಮಿಸಲಾದ ಜೈನ ದೇವಾಲಯಗಳು. ಇಲ್ಲಿ 22ನೇ ತೀರ್ಥಂಕರರಾದ ಭಗವಾನ್ ನೇಮಿನಾಥರು ನಿರ್ವಾಣವನ್ನು ಪಡೆದರು ಎಂದು ಹೇಳಲಾಗುತ್ತದೆ. ಜತೆಗೆ ಇತರ ಐನೂರ ಮೂವತ್ತಮೂರು ಜೈನ ಮುನಿಗಳು ಜ್ಞಾನೋದಯ ಪಡೆದದ್ದೂ ಇದೇ ಜಾಗದಲ್ಲಿ. ಆದ್ದರಿಂದ, ಈ ಬೆಟ್ಟವು ಜೈನ ಧರ್ಮದ ಎರಡು ಪಂಗಡಗಳಾದ ಶ್ವೇತಾಂಬರ ಮತ್ತು ದಿಗಂಬರರಿಗೆ ಪವಿತ್ರವಾಗಿದೆ. ಇಲ್ಲಿ ಅದ್ಭುತವಾಗಿ ಕೆತ್ತಿದ ಹದಿನಾರು ದೇವಾಲಯಗಳಿವೆ. ಕ್ರಿ.ಶ. 1128 ರಲ್ಲಿ ನಿರ್ಮಿಸಲಾದ ಭಗವಾನ್ ನೇಮಿನಾಥನಿಗೆ ಅರ್ಪಿತವಾದ ಕಪ್ಪು ಗ್ರಾನೈಟ್ ದೇವಾಲಯವೂ ಇಲ್ಲಿದೆ. ದೇವಾಲಯವು ಅದರ ಕಂಬಗಳ ಮೇಲೆ ಸಂಕೀರ್ಣವಾದ ಕೆತ್ತನೆಗಳನ್ನು ಹೊಂದಿದೆ ಮತ್ತು ವಿಶಿಷ್ಟವಾದ ಬಣ್ಣದ ಮೊಸಾಯಿಕ್‌ಗಳಿಂದ ಅಲಂಕರಿಸಲ್ಪಟ್ಟಿದೆ. 7ನೇ ಶತಮಾನದಲ್ಲಿ, ಚೀನೀ ಪ್ರವಾಸಿ ಹ್ಸುಯೆನ್-ತ್ಸಾಂಗನು ಗಿರ್ನಾರ್ ಅನ್ನು ಅಲೌಕಿಕ ಋಷಿಗಳ ಸ್ಥಳವೆಂದು ಉಲ್ಲೇಖಿಸಿದ್ದಾನೆ.

girnar batta

ಹಿಂದೂ ದೇವಾಲಯಗಳು

ಜೈನ ದೇವಾಲಯಗಳನ್ನು ದಾಟಿ ಇನ್ನೂ ಸಾವಿರ ಮೆಟ್ಟಿಲುಗಳನ್ನು ಹತ್ತಿದರೆ ಶಿಖರದ ಮೇಲೆ ಅಂಬಾ ಮಾತಾ ದೇವಾಲಯವಿದೆ. ಇದು 51 ಶಕ್ತಿ ಪೀಠಗಳಲ್ಲಿ ಒಂದು. ಅಲ್ಲಿ ನವವಿವಾಹಿತರು ಸುಖೀ ದಾಂಪತ್ಯಕ್ಕಾಗಿ ಪೂಜಿಸುತ್ತಾರೆ. ಇಲ್ಲಿಂದ ಆಚೆಗೆ ಇತರ ಶಿಖರಗಳು ಮತ್ತು ಮುಂದಿನ ದೇವಾಲಯಗಳನ್ನು ತಲುಪಲು ಸಾಕಷ್ಟು ಆರೋಹಣ ಅವರೋಹಣ ಮಾಡಬೇಕಾಗುತ್ತದೆ. ಅಂಬಾ ಮಾತಾ ದೇವಾಲಯದಿಂದ ಗೋರಖನಾಥ ದೇವಾಲಯಕ್ಕೆ ಸುಮಾರು ಮೂರೂವರೆ ಸಾವಿರ ಮೆಟ್ಟಿಲುಗಳಿವೆ. ಗೋರಖನಾಥ ದೇವಾಲಯ ಇರುವ ಈ ಶಿಖರ ಗುಜರಾತ್‌ನ ಅತ್ಯುನ್ನತ ಶಿಖರವಾಗಿದೆ. ಮೂರನೇ ಶಿಖರವನ್ನು ಓಘಡ್ ಅನುಸೂಯ ಶಿಖರ ಎಂದು ಕರೆಯಲಾಗುತ್ತದೆ. ಮುಂದೆ ಕಡಿದಾದ ಸಾವಿರ ಮೆಟ್ಟಿಲುಗಳನ್ನು ದಾಟಿದರೆ ದತ್ತಾತ್ರೇಯ ಸ್ವಾಮಿ ಶಿಖರದ ಮೇಲಿರುತ್ತೀರಿ. ಇಲ್ಲಿರುವ ವಿಷ್ಣುವಿನ ಮೂರು ಮುಖದ ಅವತಾರದ ಮೂರ್ತಿ ತುಂಬ ಸುಂದರವಾಗಿದೆ. ಇಲ್ಲಿಂದ ಕೆಳಗೆ ಇಳಿಯುವ ದಾರಿಯಲ್ಲಿ ಕಮಂಡಲ ಕುಂಡವಿದೆ. ಇಲ್ಲಿ ಪ್ರಸಾದ ಮತ್ತು ಊಟದ ವ್ಯವಸ್ಥೆಯೂ ಇದೆ. ಐದನೆಯ ಕಾಳಿಕಾ ದೇವಿ ಶಿಖರದಲ್ಲಿ ಪೂಜೆ ನಡೆಯುವುದಿಲ್ಲ, ಇಲ್ಲಿಗೆ ಹೋಗುವ ಸೌಲಭ್ಯವೂ ಇಲ್ಲ.

girnar

ಗಿರ್ನಾರ್ ರೋಪ್‌ವೇ

ಗಿರ್ನಾರ್ ರೋಪ್‌ವೇ ಏಷ್ಯಾದ ಅತಿ ಉದ್ದದ ರೋಪ್‌ವೇ ಆಗಿದೆ. ಈ ಯೋಜನೆಯನ್ನು ಅಕ್ಟೋಬರ್ 24,2020 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ರೋಪ್‌ವೇ 2,320 ಮೀಟರ್ ಉದ್ದವಿದ್ದು, ಬೆಟ್ಟದ ಮೇಲಿರುವ ಅಂಬಾ ಮಾತೆ ದೇವಾಲಯಕ್ಕೆ ಪ್ರಯಾಣಿಕರನ್ನು 10 ನಿಮಿಷಗಳಲ್ಲಿ ಕರೆದೊಯ್ಯುತ್ತದೆ. ಇದರಲ್ಲಿ ಪಯಣಿಸುವ ಒಂಬತ್ತು ನಿಮಿಷಗಳಲ್ಲಿ ಶಿಖರದ ಸೌಂದರ್ಯವನ್ನು ಆಸ್ವಾದಿಸಬಹುದು. ಇದು ಸುಮಾರು ಐದು ಸಾವಿರ ಮೆಟ್ಟಿಲುಗಳನ್ನು ಹತ್ತುವ ಶ್ರಮ ಮತ್ತು ಸಮಯ ಉಳಿಸುತ್ತದೆ. ಇತರ ಶಿಖರಾಗ್ರಗಳಿಗೆ ಇಲ್ಲಿಂದ ನಡೆದೇ ಹೋಗಬೇಕು.

girnar ropeway 2

ನವೆಂಬರ್ ಮತ್ತು ಫೆಬ್ರವರಿ ನಡುವೆ ಭೇಟಿ ನೀಡಲು ಉತ್ತಮ ಸಮಯ. ಮಳೆಗಾಲದಲ್ಲಿ ಮಂಜು ಮುಸುಕಿದ ಬೆಟ್ಟಗಳ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಬಿಸಿಲುಕಾಲದ ಬಿಸಿಲು ತುಂಬ ಜೋರಾಗಿರುವುದರಿಂದ ಬೆಟ್ಟ ಹತ್ತುವುದು ತ್ರಾಸಕರ. ಆದರೂ ಸಹ ಇಲ್ಲಿ ಯಾತ್ರಿಗಳು ಯಾವಾಗಲೂ ತುಂಬಿರುತ್ತಾರೆ, ದೂರ ದೂರದಿಂದಲೂ ಬರುವ ಯಾತ್ರಿಕರು ಶಿಖರಕ್ಕೆ ಹತ್ತು ಸಾವಿರ ಕಲ್ಲಿನ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗುತ್ತಾರೆ. ಕೆಳಗಿರುವ ಭಾವನಾಥ ಮಹಾದೇವ ದೇವಾಲಯಯಕ್ಕೆ ಮುಂಜಾನೆ ಭೇಟಿ ನೀಡಿ ಮೇಲೇರಲು ಆರಂಭಿಸುತ್ತಾರೆ. ಬೆಳಗಿನ ನಸುಬೆಳಕಿನಲ್ಲಿ ಏರುವುದು ಒಂದು ರೋಚಕ ಅನುಭವವಾಗಿದೆ. ವಯಸ್ಸಾದವರು, ಹತ್ತಲು ಕಷ್ಟವೆನಿಸುವವರಿಗೆ ಪೋರ್ಟರ್‌ ಗಳ ಸಹಾಯ ಸಿಗುತ್ತದೆ. ಹಬ್ಬಗಳ ಸಮಯದಲ್ಲಿ, ಈ ದೇವಾಲಯಕ್ಕೆ ಹಲವಾರು ಸನ್ಯಾಸಿಗಳು ಮತ್ತು ಅಧ್ಯಾತ್ಮಿಕ ಮುಖಂಡರು ಭೇಟಿ ನೀಡುತ್ತಾರೆ. ಜೈನರು ಮಹಾವೀರ ಜಯಂತಿ, ಪರ್ಯುಷಣ, ಮತ್ತು ಭಗವಾನ್ ನೇಮಿನಾಥನ ಜನನ ಮತ್ತು ನಿರ್ವಾಣ ಕಲ್ಯಾಣಕರ್ಮಗಳಂಥ ಜೈನ ಹಬ್ಬಗಳನ್ನು ಆಚರಿಸುತ್ತಾರೆ. ಹಿಂದೂಗಳಿಗೆ ಮುಖ್ಯವಾದ ಕಾರ್ಯಕ್ರಮವೆಂದರೆ ಪ್ರತಿ ವರ್ಷ ಮಾಘಮಾಸದ 14 ನೇ ದಿನದಂದು ನಡೆಯುವ ಮಹಾ ಶಿವರಾತ್ರಿ ಜಾತ್ರೆ. ಇದಲ್ಲದೆ ಗಿರ್ನಾರ್ ಪರಿಕ್ರಮ ಉತ್ಸವವನ್ನು ನವೆಂಬರ್‌ನಲ್ಲಿ ನಡೆಸಲಾಗುತ್ತದೆ. ದೀಪಾವಳಿಯ ಪವಿತ್ರ ದಿನಗಳಲ್ಲಿ ಇಲ್ಲಿ ಪರಿಕ್ರಮ ಮಾಡುತ್ತಾರೆ. ಸುಮಾರು 36 ಕಿ.ಮೀ. ದೂರದ ಪರಿಕ್ರಮ ಮೂರು ನಾಲ್ಕು ದಿನ ಹಿಡಿಯುತ್ತದೆ. ಈ ಸಮಯದಲ್ಲಿ ಸಾವಿರಾರು ದೇವತೆಗಳು ಈ ಬೆಟ್ಟದ ಮೇಲೆ ಬಂದು ನೆಲೆಸುತ್ತಾರೆ ಅನ್ನೋ ನಂಬಿಕೆ. ಗಿರ್ನಾರ್ ಬೆಟ್ಟದ ಪೂಜೆ ಮತ್ತು ಪರಿಕ್ರಮದಲ್ಲಿ ಭಾಗವಹಿಸಲು ಕನಿಷ್ಠ ಒಂದು ದಶಲಕ್ಷ ಯಾತ್ರಿಕರು ಭೇಟಿ ನೀಡುತ್ತಾರೆ. ಮೆರವಣಿಗೆಯು ಭಾವನಾಥ ಮಹಾದೇವ ದೇವಸ್ಥಾನದಲ್ಲಿ ಪ್ರಾರಂಭವಾಗುತ್ತದೆ. ನಂತರ ಅದು ಪ್ರಾಚೀನ ಕಾಲದಿಂದಲೂ ಗಿರ್ನಾರ್ ಬೆಟ್ಟದಲ್ಲಿರುವ ವಿವಿಧ ಪಂಗಡಗಳ ಸಾಧುಗಳ ವಿವಿಧ ಅಖಾರಾಗಳಿಗೆ ಮುಂದುವರಿಯುತ್ತದೆ. ಈ ಜಾತ್ರೆಯು ಜುನಾಗಢದ ಆರ್ಥಿಕತೆಯ ಬೆನ್ನೆಲುಬಾಗಿದೆ. ಇದನ್ನು ಜುನಾಗಢ ಮುನಿಸಿಪಲ್ ಕಾರ್ಪೊರೇಷನ್ ನಿರ್ವಹಿಸುತ್ತದೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!