ಮೇಘಗಳ ನಾಡಲ್ಲಿ ಮಾವ್ಲಿನಾಂಗ್
ಮಾವ್ಲಿನಾಂಗ್ ಹಳ್ಳಿಯ ಜನರಿಗೆ ಯಾರ ಮುಂದೆಯೂ ಕೈಚಾಚುವ ಅಭ್ಯಾಸವಿಲ್ಲ. ಅಲ್ಲಿ ಶೇ. 100ರಷ್ಟು ಸಾಕ್ಷರತೆ ಇದೆ. ಪ್ರತಿಯೊಬ್ಬರಿಗೂ ಇಂಗ್ಲಿಷ್ ಗೊತ್ತು. ಆದರೆ ಅವರ ಮಣ್ಣಿನ ಸಂಸ್ಕೃತಿಯನ್ನು ಅವರು ಮರೆತಿಲ್ಲ. ಅವರ ಮನೆಗಳು ಬಿದಿರಿನಿಂದ ಮಾಡಲ್ಪಟ್ಟಿವೆ. ಆಹಾರಕ್ಕಾಗಿ ಅವರದ್ದೇ ಹೊಲವವನ್ನು ಅವಲಂಭಿಸಿದ್ದಾರೆ. ಅಲ್ಲಿನ ʻಸ್ಕೈ ವ್ಯೂʼ ಎಂಬ 80 ಅಡಿ ಎತ್ತರದ ಬಿದಿರಿನ ಗೋಪುರದ ಮೇಲೆ ನಿಂತು ನೋಡಿದರೆ, ಪ್ರಕೃತಿಯ ವಿಶಾಲತೆ ಅರಿವಾಗುತ್ತದೆ.
- ಅಶ್ವಥ್ ಹೆಗ್ಡೆ ಬಳಂಜ
ಒಮ್ಮೆ ನಮ್ಮ ಸುತ್ತಲಿನ ಧೂಳು, ಹಾರ್ನ್‌ಗಳ ಕರ್ಕಶ ಸದ್ದು, ಚರಂಡಿಯ ಕೊಳಚೆ, ಪೈಪ್ ಲೈನ್ ಅಥವಾ ಕೇಬಲ್ ಅಳವಡಿಸಲು ಅಗೆದ ರಸ್ತೆಗಳು ಮತ್ತು ಎಲ್ಲೆಂದರಲ್ಲಿ ಎಸೆದ ಪ್ಲಾಸ್ಟಿಕ್, ಗುಟ್ಕಾ ಗಲೀಜು ಎಲ್ಲವನ್ನೂ ಮರೆತುಬಿಡಿ. ಈ ಕ್ಷಣ ನಿಮ್ಮನ್ನು ನಾನು ಮೇಘಾಲಯದ ಆ ದಟ್ಟ ಹಸಿರು ಕಾಡುಗಳ ನಡುವೆ ಇರುವ ಒಂದು ಪುಟ್ಟ ಸ್ವರ್ಗಕ್ಕೆ ಕರೆದೊಯ್ಯುತ್ತಿದ್ದೇನೆ. ಆ ಹಳ್ಳಿಯ ಹೆಸರು ಮಾವ್ಲಿನಾಂಗ್. ಜಗತ್ತು ಇದನ್ನು ʻಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮʼ ಎಂದು ಕರೆಯುತ್ತದೆ. ಆದರೆ ಇದು ಕೇವಲ ಸ್ವಚ್ಛ ಹಳ್ಳಿಯಲ್ಲ; ಮನುಷ್ಯ ಮನಸು ಮಾಡಿದರೆ ಏನಾಗಬಲ್ಲ ಎನ್ನುವುದಕ್ಕೆ ಸಾಕ್ಷಿ! ನಮ್ಮ ಗ್ರಾಮ, ನಮ್ಮ ಊರು, ನಮ್ಮ ಪರಿಸರ ಎನ್ನುವ ಉತ್ಕಟವಾದ ಪ್ರೀತಿ ಇದ್ದಲ್ಲಿ ಏನೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ ಜೀವಂತ ಉದಾಹರಣೆ ಈ ಮಾವ್ಲಿನಾಂಗ್.
ಇದನ್ನೂ ಓದಿ: ಸ್ಟ್ಯಾಚು ಆಫ್ ಇಕ್ವಾಲಿಟಿಗೆ ಸ್ವಾಗತ
ಕಸವಿಲ್ಲದ ಹಾದಿ, ವಿಷವಿಲ್ಲದ ಗಾಳಿ ಅಲ್ಲಿದೆ. ಆಲೋಚಿಸಿ, ನಮ್ಮ ಊರುಗಳಲ್ಲಿ ಹೇಗಿದೆ? ಮನೆಯ ಕಸವನ್ನು ರಸ್ತೆಗೆ ಎಸೆಯುತ್ತೇವೆ. ರಸ್ತೆಯ ಕಸಕ್ಕೆ ಮುನ್ಸಿಪಾಲಿಟಿಯವರನ್ನು ಬೈಯುತ್ತೇವೆ. ಆದರೆ ಮಾವ್ಲಿನಾಂಗ್‌ನಲ್ಲಿ ಹಾಗಿಲ್ಲ. ಅಲ್ಲಿನ ದಾರಿಯಲ್ಲಿ ಅಪ್ಪಿತಪ್ಪಿಯೂ ಒಂದು ಚಾಕೊಲೆಟ್ ಪೇಪರ್ ಅಥವಾ ಪ್ಲಾಸ್ಟಿಕ್ ತುಣುಕೂ ನೋಡಲು ಸಿಗದು. ಯಾಕೆ ಗೊತ್ತಾ? ಅಲ್ಲಿನ ಜನರಿಗೆ ಸ್ವಚ್ಛತೆ ಎನ್ನುವುದು ಸರಕಾರ ಹೇಳಿಕೊಟ್ಟ ಪಾಠವಲ್ಲ. ಅದು ಅವರ ರಕ್ತದಲ್ಲೇ ಇದೆ. ಅಲ್ಲಿನ ರಸ್ತೆ ಬದಿಯಲ್ಲಿ ಬಿದಿರಿನಿಂದ ಮಾಡಿದ ಸುಂದರವಾದ ಬುಟ್ಟಿಗಳಿವೆ. ಪ್ರತಿಯೊಂದು ಮನೆಯ ಕಸವೂ ಅಲ್ಲಿಗೆ ಹೋಗುತ್ತದೆ. ಆ ಕಸವನ್ನು ಅವರು ಸುಡುವುದಿಲ್ಲ, ಬದಲಿಗೆ ಗುಂಡಿಗಳಲ್ಲಿ ಹಾಕಿ ಅದ್ಭುತವಾದ ಸಾವಯವ ಗೊಬ್ಬರ ಮಾಡುತ್ತಾರೆ. ಆ ಗೊಬ್ಬರದಿಂದಲೇ ಅವರ ಹಿತ್ತಲಿನಲ್ಲಿ ಹೂವುಗಳು ನಗುತ್ತವೆ. ಇದೆಲ್ಲವೂ ಒಂದು ದೃಢ ನಿಶ್ಚಯದ ಪರಿಣಾಮ, ನಿರಂತರ ಪರಿಶ್ರಮ ಮತ್ತು ಅಪರಿಮಿತ ಸ್ವಾಭಿಮಾನದ ಫಲಿತಾಂಶ.

ಪ್ರಕೃತಿಯೇ ಅಲ್ಲಿನ ದೇವರು ಅಲ್ಲಿನ ʻಲಿವಿಂಗ್ ರೂಟ್ ಬ್ರಿಡ್ಜ್ʼ ಬಗ್ಗೆ ಕೇಳಿರಬಹುದು. ಮಾವ್ಲಿನಾಂಗ್‌ನ ಜನರು ಮರಗಳ ಬೇರುಗಳನ್ನೇ ಸೇತುವೆಯನ್ನಾಗಿ ಬೆಳೆಸಿದ್ದಾರೆ. ನೂರು ವರ್ಷಗಳ ಹಿಂದೆ ಅವರ ಪೂರ್ವಜರು ಬೆಳೆಸಿದ ಆ ಬೇರುಗಳು, ಇಂದು ನೂರಾರು ಜನರ ಭಾರ ಹೊರುತ್ತಿವೆ. ಇದಕ್ಕಿಂತ ದೊಡ್ಡ ಎಂಜಿನಿಯರಿಂಗ್ ಚಮತ್ಕಾರ ಜಗತ್ತಿನಲ್ಲಿ ಬೇರೆ ಯಾವುದಿದೆ ಹೇಳಿ? ಇದು ಪ್ರಕೃತಿ ಮತ್ತು ಮನುಷ್ಯನ ನಡುವಿನ ಪ್ರೇಮದ ಸಂಕೇತ.
ಮಾವ್ಲಿನಾಂಗ್ ಹಳ್ಳಿಯ ಜನರಿಗೆ ಯಾರ ಮುಂದೆಯೂ ಕೈಚಾಚುವ ಅಭ್ಯಾಸವಿಲ್ಲ. ಅಲ್ಲಿ ಶೇ. 100ರಷ್ಟು ಸಾಕ್ಷರತೆ ಇದೆ. ಪ್ರತಿಯೊಬ್ಬರಿಗೂ ಇಂಗ್ಲಿಷ್ ಗೊತ್ತು. ಆದರೆ ಅವರ ಮಣ್ಣಿನ ಸಂಸ್ಕೃತಿಯನ್ನು ಅವರು ಮರೆತಿಲ್ಲ. ಅವರ ಮನೆಗಳು ಬಿದಿರಿನಿಂದ ಮಾಡಲ್ಪಟ್ಟಿವೆ. ಆಹಾರಕ್ಕಾಗಿ ಅವರದ್ದೇ ಹೊಲವವನ್ನು ಅವಲಂಭಿಸಿದ್ದಾರೆ. ಅಲ್ಲಿನ ʻಸ್ಕೈ ವ್ಯೂʼ ಎಂಬ 80 ಅಡಿ ಎತ್ತರದ ಬಿದಿರಿನ ಗೋಪುರದ ಮೇಲೆ ನಿಂತು ನೋಡಿದರೆ, ಪ್ರಕೃತಿಯ ವಿಶಾಲತೆ ಅರಿವಾಗುತ್ತದೆ. ಪಕ್ಕದ ಬಾಂಗ್ಲಾದೇಶದ ವಿಶಾಲ ಬಯಲು ಸೀಮೆಯು ನಿರ್ದಿಗಂತದಂತೆ ಕಾಣುತ್ತದೆ. ಆದರೆ ನನಗೆ ಆ ಎತ್ತರಕ್ಕಿಂತ ದೊಡ್ಡದಾಗಿ ಕಾಣುವುದು ಆ ಜನರ ಆತ್ಮವಿಶ್ವಾಸ.
ಮಾವ್ಲಿನಾಂಗ್‌ನಿಂದ ನಾವು ಕಲಿಯಬೇಕಾದ ಪಾಠಗಳು
ನಮ್ಮೂರ ಉತ್ಪನ್ನಗಳಿಗೆ ಮೌಲ್ಯ : ಹಳ್ಳಿಯ ರೈತ ಬೆಳೆದ ದವಸ ಧಾನ್ಯಗಳಿಗೆ ಬ್ರ್ಯಾಂಡಿಂಗ್ ಸಿಗಬೇಕು. 'ನಮ್ಮೂರಿನ ಅಕ್ಕಿ', 'ನಮ್ಮ ತೋಟದ ತೆಂಗು' ಎಂಬ ಹೆಮ್ಮೆ ನಮ್ಮಲ್ಲಿ ಬರಬೇಕು. ಪ್ರತಿ ವಾರ ಅಥವಾ ತಿಂಗಳಿಗೊಮ್ಮೆ ಹಳ್ಳಿಯಲ್ಲೇ ಒಂದು ಸಂತೆ ನಡೆಯಬೇಕು. ಅಲ್ಲಿ ಕೇವಲ ವ್ಯಾಪಾರವಲ್ಲ, ಕಲೆ ಮತ್ತು ಸಂಸ್ಕೃತಿಯ ವಿನಿಮಯವಾಗಬೇಕು. ಈ ಆಲೋಚನೆಯನ್ನು ಪ್ರಾಯೋಗಿಕವಾಗಿ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಬಳಂಜದಲ್ಲಿ ಉಮಾಮಹೇಶ್ವರ ಯುವಕ ಮಂಡಲದ ಯುವಕರು ಯಶಸ್ವಿಯಾಗಿ ನಡೆಸಿದ್ದಾರೆ. ಆ ಹಳ್ಳಿಯಲ್ಲಿ ಬೆಳೆದ ತರಕಾರಿಗಳಿಗೆ , ಉತ್ಪನ್ನಗಳಿಗೆ ಅಲ್ಲೇ ಮಾರುಕಟ್ಟೆ ವ್ಯವಸ್ಥೆ ಮಾಡಿ ಸೈ ಅನಿಸಿಕೊಂಡರು.

ಪರಿಸರ ಸ್ನೇಹಿ ಬದುಕು: ನಮ್ಮ ಹಳ್ಳಿ ಪ್ಲಾಸ್ಟಿಕ್ ಮುಕ್ತ ಹಳ್ಳಿಯಾಗಬೇಕು. ಪ್ರಕೃತಿಯನ್ನು ನಾಶಪಡಿಸದೆ ಪ್ರಗತಿ ಸಾಧಿಸುವುದು ಹೇಗೆಂದು ಈಶಾನ್ಯದ ಹಳ್ಳಿಗಳಿಂದ ಕಲಿಯಬೇಕು. ಬಿದಿರಿನ ಕಸದ ತೊಟ್ಟಿಯಿಡಬೇಕು. ಅದರಲ್ಲಿ ಸಂಗ್ರಹವಾಗುವ ಕಸದಿಂದ ಸಾವಯವ ಗೊಬ್ಬರ ತಯಾರಿಸಬೇಕು. ನಮ್ಮ ಊರಿನ ರಸ್ತೆ, ಸಾರ್ವಜನಿಕ ಸ್ಥಳಗಳನ್ನು ತಿಂಗಳಿಗೆ ಒಮ್ಮೆಯಾದರೂ ನಾವೇ ಸೇರಿ ಸ್ವಚ್ಛಗೊಳಿಸುವ ಪರಿಪಾಠವನ್ನು ಆರಂಭಿಸಿದರೆ, ಇದೇ ಅಭ್ಯಾಸವಾಗಿ ಬದಲಾಗುತ್ತದೆ. ನಮ್ಮ ಜೀವನ ಶೈಲಿಯ ಭಾಗವೇ ಆಗಿಬಿಡುತ್ತದೆ.
ಮಾವ್ಲಿನಾಂಗ್ ಜನರಿಗೆ ಸಿಕ್ಕಿದ್ದು ಅದೇ ಮಳೆ, ಅದೇ ಗಾಳಿ. ಆದರೆ ಅವರು ಅದನ್ನು ಬಳಸಿಕೊಂಡ ರೀತಿ ಮಾತ್ರ ಅನನ್ಯ. ನಾವೂ ನಮ್ಮ ಹಳ್ಳಿಯನ್ನು ಅಂಥದ್ದೊಂದು ಸುಂದರ ಕನಸನ್ನಾಗಿ ಮಾಡೋಣ. ನಮ್ಮ ಮುಂದಿನ ಪೀಳಿಗೆಗೆ ವಿಷಮುಕ್ತ ವಾತಾವರಣ ಬಿಟ್ಟು ಹೋಗಲು ಇದು ಅನಿವಾರ್ಯ.
ದಾರಿ ಹೇಗೆ?
ಗುವಾಹಟಿ ಹತ್ತಿರದ ರೈಲು ನಿಲ್ದಾಣ. ಗುವಾಹಟಿಯಿಂದ ಸುಮಾರು 170 ಕಿಮೀ ದೂರದಲ್ಲಿ ಮಾವ್ಲಿನಾಂಗ್ ಇದೆ. ಭಾರಾಪಾನಿ ಮಾರ್ಗವಾಗಿ ತಲುಪಬಹುದು. ಶಿಲ್ಲಾಂಗ್ ಹತ್ತಿರದ ವಿಮಾನ ನಿಲ್ದಾಣ.