ʼವ್ಯಾಲಿ ಆಫ್ ಫ್ಲವರ್ಸ್ʼ ಎಂಬ ಅದ್ಭುತ ಲೋಕ...
2005ರಲ್ಲಿಯೇ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿಕೊಂಡಿರುವ ʼವ್ಯಾಲಿ ಆಫ್ ಫ್ಲವರ್ಸ್ʼ ಜೂನ್1ರಿಂದ ಪ್ರವಾಸಿಗರಿಗೆ ಮುಕ್ತವಾಗಿದ್ದು, ಪರಿಸರ ಪ್ರೇಮಿಗಳು ಹಾಗೂ ಚಾರಣ ಪ್ರಿಯರು ಭೇಟಿ ನೀಡಲು ಇದು ಸುಸಮಯ.
ಮುಂಗಾರು ಪ್ರಾರಂಭವಾಗುತ್ತಿದ್ದಂತೆಯೇ ಒಂದಷ್ಟು ಪ್ರವಾಸಿ ತಾಣಗಳು ಸದ್ದಿಲ್ಲದೆ ಉಳಿದುಬಿಟ್ಟರೆ, ಮತ್ತೆ ಕೆಲವು ಮುಂಗಾರು ಪ್ರಾರಂಭವಾದನಂತರವೇ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ. ಮಳೆಯ ನಡುವೆ ಹಚ್ಚಹಸಿರಾಗಿರುವ ಪರಿಸರದ ರಮಣೀಯ ದೃಶ್ಯಗಳು ಮನಸ್ಸಿಗೆ ಮುದ ನೀಡುತ್ತವೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಿಕೊಂಡಿರುವ ʼವ್ಯಾಲಿ ಆಫ್ ಫ್ಲವರ್ಸ್ʼ ಜೂನ್1ರಿಂದ ಪರಿಸರ ಪ್ರೇಮಿಗಳು ಹಾಗೂ ಚಾರಣ ಪ್ರಿಯರಿಗೆ ಮುಕ್ತವಾಗಿದೆ.
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ʼವ್ಯಾಲಿ ಆಫ್ ಫ್ಲವರ್ಸ್ʼ (ValleyOf Flowers) ನ್ಯಾಷನಲ್ ಪಾರ್ಕ್, ಹೆಸರೇ ಹೇಳುವಂತೆ ವಿಭಿನ್ನ ಬಗೆಯ ಹೂವುಗಳಿಂದು ತುಂಬಿಕೊಂಡಿರುವ ಕಣಿವೆ ಪ್ರದೇಶವಾಗಿದೆ. ಈ ಹೂವಿನ ಕಣಿವೆಯಲ್ಲಿ 300ಕ್ಕೂ ಹೆಚ್ಚು ಬಗೆಯ ಹೂಗಳನ್ನು ಬೆಳೆಸಲಾಗುತ್ತಿದ್ದು, ಇವು ಉತ್ತರಾಖಂಡದ ಈ ಅರಣ್ಯ ಪ್ರದೇಶದ ಹಸಿರಿಗೆ ಮತ್ತಷ್ಟು ಮೆರಗು ನೀಡಿವೆ. ಅದ್ರಲ್ಲೂ ಜೂನ್‌ನಿಂದ ಅಕ್ಟೋಬರ್ ತಿಂಗಳ ನಡುವೆ ಇಲ್ಲಿ ಹೂವುಗಳು ಅರಳಿ ನಿಲ್ಲುತ್ತವೆ.. ಈ ಸಮಯದಲ್ಲಿ ಚಾರಣದ ಅನುಭವವೇ ರೋಮಾಂಚಕವಾಗಿರುತ್ತದೆ. ಟ್ರಕ್ಕಿಂಗ್ ಗೂ ಹೇಳಿಮಾಡಿಸಿದಂತಿರುವ ಈ ಪ್ರದೇಶ ಸಮುದ್ರ ಮಟ್ಟದಿಂದ 3,352 ಮೀಟರ್ ಎತ್ತರದಲ್ಲಿದೆ.

ಜೀವವೈವಿಧ್ಯತೆ ಬೀಡು:
ವಿಭಿನ್ನ ಬಗೆಯ ಹೂಗಳ ಕಣಿವೆಯಷ್ಟೇ ಅಲ್ಲದೆ ಅರಣ್ಯ ಪ್ರದೇಶದಲ್ಲಿನ ಜೀವ ವೈವಿಧ್ಯತೆಯನ್ನೂ ಇಲ್ಲಿ ಕಣ್ತುಂಬಿಕೊಳ್ಳಬಹುದು. ಮೋನಾಲ್ ಫೆಸೆಂಟ್ ಬರ್ಡ್ಸ್ ಸೇರಿದಂತೆ ಹಲವು ಎತ್ತರದ ಪಕ್ಷಿಗಳ ತವರೂರಾಗಿರುವ ಈ ಸುಂದರ ಪ್ರವಾಸಿ ತಾಣ, ಏಷ್ಯಾದ ಕರಡಿ, ಹಿಮ ಚಿರತೆ, ಹಿಮ ಮೇಕೆಯಂತಹ ಪ್ರಾಣಿಗಳಿಗೂ ನೆಲೆ ನೀಡಿದೆ.
ಇಲ್ಲಿವೆ ಅನೇಕ ಆಧ್ಯಾತ್ಮಿಕ ತಾಣಗಳು
ಹೂವುಗಳ ಕಣಿವೆ, ಜೀವ ವೈವಿಧ್ಗಳ ಜೊತೆ ಅನೇಕ ಆಧ್ಯಾತ್ಮಿಕ ಮತ್ತು ಧಾರ್ಮಿಕ ತಾಣಗಳು ಪ್ರವಾಸಿಗರನ್ನು ಮೋಡಿ ಮಾಡುತ್ತವೆ. ಹೇಮಕುಂಡ್ ಸಾಹೇಬ್ ಗುರುಧ್ವಾರ ಪ್ರದೇಶವೂ ಈ ಕಣಿವೆ ವ್ಯಾಪ್ತಿಯಲ್ಲಿದೆ. ಪ್ರತಿ ವರ್ಷ ಸಾವಿರಾರು ಭಕ್ತರು ಈ ಹೇಮಕುಂಡ್ ಸಾಹೇಬ್‌ಗೆ ಭೇಟಿ ನೀಡುತ್ತಾರೆ. ಆಧ್ಯಾತ್ಮಿಕ ಪ್ರವಾಸದ ದೃಷ್ಟಿಯಿಂದ ಸಾವಿರಾರು ಜನರನ್ನ ಈ ಪ್ರದೇಶವೂ ತನ್ನತ್ತ ಸೆಳೆಯುತ್ತದೆ.
ಗೋವಿಂದಘಾಟ್ ನಂಥ ಚಾರಣ ಪ್ರದೇಶಗಳಂತೂ ಸುಮಾರು 17 ಕಿಮೀ ಕಿರಿದಾದ ಹಾದಿಯ ಈ ಅದ್ಭುತ ಹಾಗೂ ಸಾಹಸಮಯ ಹಾದಿಯನ್ನು ಚಾರಣಪ್ರಿಯನ ಮುಂದೆ ತೆರೆದಿರಿಸುತ್ತದೆ.
ಭೇಟಿಗೆ ಸಮಯ..ಟಿಕೆಟ್ ವೆಚ್ಚ..
ಜೂನ್‌ನಿಂದ ಅಕ್ಟೋಬರ್‌ವರೆಗೆ ಮಾತ್ರ ಸಂದರ್ಶಕರಿಗೆ ಮುಕ್ತವಾಗುವ ಈ ತಾಣ ವರ್ಷದ ಉಳಿದ ಎಲ್ಲ ತಿಂಗಳುಗಳಲ್ಲೂ ಭಾರೀ ಹಿಮದಿಂದ ಆವರಿಸಿಕೊಂಡಿರುತ್ತದೆ.
ಇಲ್ಲಿಗೆ ತೆರಳಬೇಕಾದರೆ 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ತಲಾ 25 ರು. ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತಲಾ 35 ರು. ಪ್ರವೇಶ ಶುಲ್ಕವಿರುತ್ತದೆ. ಮಂಗಳವಾರದಿಂದ ಭಾನುವಾರದವರೆಗೆ ಬೆಳಗ್ಗೆ 6ರಿಂದ ಮಧ್ಯಾಹ್ನ12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 9ಗಂಟೆಯವರೆಗೆ ತೆರೆದಿರುತ್ತದೆ. ಸೋಮವಾರ ಉದ್ಯಾನವನ ಮುಚ್ಚಿರುತ್ತದೆ.

ತಲುಪುವುದು ಹೇಗೆ?
ರಸ್ತೆಯ ಮೂಲಕ: ಡೆಹ್ರಾಡೂನ್‌ನಿಂದ ಗೋವಿಂದಘಾಟ್‌ಗೆ ರಸ್ತೆಯ ಮೂಲಕ 300 ಕಿ.ಮೀ ಪ್ರಯಾಣ ಅಗತ್ಯ. ಡೆಹ್ರಾಡೂನ್‌ನಿಂದ ರಿಷಿಕೇಶವನ್ನು ತಲುಪಲು, ನೀವು ಖಾಸಗಿ ಅಥವಾ ಸಾರ್ವಜನಿಕ ಬಸ್ಸುಗಳನ್ನು ಬಳಸಬಹುದು. ರಿಷಿಕೇಶದಿಂದ ಗೋವಿಂದಘಾಟ್ ತಲುಪಲು ಕ್ಯಾಬ್ ಅನ್ನು ಬಾಡಿಗೆಗೆ ಪಡೆಯುವ ಆಯ್ಕೆಯಿರುತ್ತದೆ. ರಿಷಿಕೇಶ್‌ನಿಂದ ಕೈಗೆಟಕುವ ದರದಲ್ಲಿ ಜೀಪ್‌ಗಳು ಲಭ್ಯವಿವೆ.
ವಿಮಾನದ ಮೂಲಕ: ಜಾಲಿ ಗ್ರಾಂಟ್ ವಿಮಾನ ನಿಲ್ದಾಣ ಡೆಹ್ರಾಡೂನ್‌ಗೆ ಹತ್ತಿರದ ವಿಮಾನ ನಿಲ್ದಾಣ. ಡೆಹ್ರಾಡೂನ್‌ನಿಂದ ರೈಲುಗಳು, ಬಸ್ಸುಗಳು ಅಥವಾ ಕ್ಯಾಬ್ ಬಾಡಿಗೆ ಸೇರಿದಂತೆ ವಿವಿಧ ಸಾರಿಗೆ ಆಯ್ಕೆ ಮಾಡಬಹುದು. ಸುಮಾರು 270 ಕಿಮೀ ದೂರ ಕ್ರಮಿಸಿದ ಬಳಿಕ ನೀವು ಗೋವಿಂದ ಘಾಟ್‌ಗೆ ತಲುಪಬಹುದು. ಗೋವಿಂದ ಘಾಟ್‌ನಿಂದ ಚಾರಣ ಆರಂಭಗೊಳ್ಳುತ್ತದೆ. ಒಟ್ಟಿನಲ್ಲಿ ಮುಂಗಾರಿನಲ್ಲಿ ʼವ್ಯಾಲಿ ಆಫ್ ಫ್ಲವರ್ಸ್ʼ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಮರೆಯಬೇಡಿ.