Saturday, July 26, 2025
Saturday, July 26, 2025

ದೇಶದ ಪ್ರಥಮ ಇವಿ ಸಫಾರಿ ಬಸ್‌ಗೆ ಸಚಿವ ಈಶ್ವರ್‌ ಖಂಡ್ರೆ ಚಾಲನೆ

ಬನ್ನೇರುಘಟ್ಟ ಉದ್ಯಾನದ ಆಕರ್ಷಣೆ ಹೆಚ್ಚಿಸಿ, ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ನಿಟ್ಟಿನಲ್ಲಿ ಮುಂದಿನ ದಿನಗಳ 10 ವಿದೇಶಿ ವನ್ಯ ಜೀವಿಗಳನ್ನು ಸೇರ್ಪಡೆಗೊಳಿಸಲಾಗುದು. ಅಲ್ಲದೆ, ದೇಶದ ಪ್ರಥಮ ವಿದ್ಯುತ್ ಚಾಲಿತ ಸಫಾರಿ ಬಸ್‌ನ ಪ್ರಾಯೋಗಿಕ ಸಂಚಾರಕ್ಕೆ ಸಿದ್ದವಾಗಿದ್ದು, ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ, ಬೃಹತ್ ಮತ್ಸಾಗಾರ ನಿರ್ಮಿಸಲು ಉದ್ದೇಶವಿರುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಬೆಂಗಳೂರು: ಬಹು ವಿಶೇಷತೆಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸದ್ಯದಲ್ಲೇ ವಿದೇಶಿ ಮೂಲದ ವಿಶಿಷ್ಟ ಜಾತಿಯ ವನ್ಯಜೀವಿಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ದೇಶದ ಪ್ರಥಮ ವಿದ್ಯುತ್ ಚಾಲಿತ ಸಫಾರಿ ಬಸ್‌ನ ಪ್ರಾಯೋಗಿಕ ಸಂಚಾರಕ್ಕೆ ವಿಕಾಸಸೌಧದಿಂದ ವರ್ಚುವಲ್ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬನ್ನೇರುಘಟ್ಟ ಉದ್ಯಾನಕ್ಕೆ ಮುಂದಿನ 4-5 ತಿಂಗಳಲ್ಲಿ ಹಂಟಿಂಗ್ ಚೀತಾ, ಕ್ಯಾಪಚಿನ್ ಕೋತಿಯನ್ನು ದಕ್ಷಿಣ ಅಮೆರಿಕಾದಿಂದ ವಿನಿಮಯ ಮಾಡಿಕೊಳ್ಳಲಾಗುವುದು. ಮುಂದಿನ ವರ್ಷ ಚಿಂಪಾಂಜಿ, ಜಾಗ್ವಾರ್, ಪೂಮಾ ಸೇರಿದಂತೆ ಒಟ್ಟು 10 ವಿದೇಶಿ ವನ್ಯ ಜೀವಿಗಳು ಆಗಮಿಸಲಿವೆ ಎಂದು ತಿಳಿಸಿದರು.

ಬನ್ನೇರುಘಟ್ಟದಲ್ಲಿ ಸೀಮಿತ ಆವರಣ ಪ್ರದೇಶದೊಳಗೆ ರೂಪಿಸಿರುವ ವನ್ಯಜೀವಿ ಸಫಾರಿಯಲ್ಲಿ ಹುಲಿ, ಚಿರತೆ, ಸಿಂಹ, ಕರಡಿಗಳ ದರ್ಶನ ಪ್ರವಾಸಿಗರಿಗೆ ನಿಶ್ಚಿತವಾಗಿ ಆಗುತ್ತದೆ. ಈ ಸಫಾರಿಗಳಿಗೆ ಪ್ರಸ್ತುತ ಡೀಸೆಲ್ ವಾಹನ ಬಳಸಲಾಗುತ್ತಿದ್ದು, ಈ ವಾಹನಗಳಿಂದ ಹೊರಹೊಮ್ಮುವ ಇಂಗಾಲದ ಪ್ರಮಾಣ ತಗ್ಗಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಪ್ರಾಯೋಗಿಕವಾಗಿ ದೇಶದಲ್ಲೇ ಪ್ರಾಯೋಗಿಕವಾಗಿ ವಿದ್ಯುತ್ ಚಾಲಿತ ವಾಹನ ಪರಿಚಯಿಸಲಾಗುತ್ತಿದೆ. ಸದ್ಯ ಚಾಲನೆ ನೀಡಿರುವ ವಿದ್ಯುತ್ ಚಾಲಿತ ಬಸ್ 22 ಆಸನಗಳನ್ನು ಹೊಂದಿದ್ದು, 100 ಕೆವಿ ಬ್ಯಾಟರಿ ಸಾಮರ್ಥ್ಯದ್ದಾಗಿದೆ. 2 ಗಂಟೆ ಚಾರ್ಜ್ ಮಾಡಿದರೆ 160 ಕಿಮೀ, ಅಂದರೆ 8 ಟ್ರಿಪ್ ಸಂಚರಿಸಲಿದೆ. ಹಾಲಿ ಒಂದು ಬಸ್ ಮಾತ್ರವೇ ಕಾರ್ಯಾರಂಭ ಮಾಡಲಿದ್ದು, 2027ರ ಒಳಗೆ ಬನ್ನೇರುಘಟ್ಟ ಉದ್ಯಾನವನ್ನು ಪಳೆಯುಳಿಕೆ ಇಂಧನ ರಹಿತ ವಾಹನ ವಲಯವಾಗಿ ಪರಿವರ್ತಿಸಲಾಗುವುದು ಎಂದರು.

bannerghatta

ಜೀಬ್ರಾ ಸಾವಿನ ತನಿಖೆ

ಇತ್ತೀಚೆಗೆ ಬನ್ನೇರುಘಟ್ಟ ಉದ್ಯಾನದಲ್ಲಿ ಜೀಬ್ರಾ ಮತ್ತು ನೀಲಗಾಯ್ ಸಾವಿಗೀಡಾಗಿದೆ. ಈ ಬಗ್ಗೆ ತನಿಖೆ ಮಾಡಿ ವರದಿ ನೀಡಲು ಸಿಸಿಎಫ್ ಅವರಿಗೆ ತಿಳಿಸಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಮೃಗಾಲಯದಲ್ಲಿ ಮತ್ತು ಜೈವಿಕ ವನದಲ್ಲಿ ಯಾವುದೇ ವನ್ಯಜೀವಿ ಅಸಹಜವಾಗಿ ಸಾವನ್ನಪ್ಪದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಖಂಡ್ರೆ ಹೇಳಿದರು.

ಇತರ ಯೋಜನೆಗಳು

ಬನ್ನೇರುಘಟ್ಟ ಮೃಗಾಲಯ ಮತ್ತು ಸಫಾರಿ ವೀಕ್ಷಣೆಗೆ ವಾರಾಂತ್ಯದಲ್ಲಿ ಮತ್ತು ಸರಕಾರಿ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವನ್ಯಜೀವಿ ಪ್ರಿಯರು ಮತ್ತು ಪ್ರವಾಸಿಗರು ಆಗಮಿಸುವ ಕಾರಣ, ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ.

ರಾಷ್ಟ್ರೀಯ ಉದ್ಯಾನಕ್ಕೆ ಮತ್ತೊಂದು ಆಕರ್ಷಣೆಯಾಗಿ ಬೃಹತ್ ಮತ್ಸಾಗಾರ ನಿರ್ಮಿಸಲು ಉದ್ದೇಶಿಸಲಾಗಿದ್ದು, ವಿಸ್ತ್ರತ ಯೋಜನಾ ವರದಿ ಸಿದ್ದಪಡಿಸಿ ಟೆಂಡ‌ರ್ ಕರೆಯಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ನೂತನವಾಗಿ ಮೃಗಾಲಯ ನಿರ್ಮಿಸಲಾಗುತ್ತಿದ್ದು, ಬರುವ ಡಿಸೆಂಬ‌ರ್ ಹೊತ್ತಿಗೆ ಸಿದ್ದವಾಗಲಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..

Read Next

ಮಕ್ಕಳ ಜೊತೆ ಬೆಂಗಳೂರಿನ ಈ ಸ್ಥಳಗಳಿಗೊಮ್ಮೆ ಭೇಟಿ ಕೊಟ್ಟು ನೋಡಿ, ನೀವೂ ಮಕ್ಕಳೇ ಆಗಿಬಿಡುತ್ತೀರಿ..