ದೇಶೀಯ ಪ್ರವಾಸ ನಿರ್ವಾಹಕರ ಒಕ್ಕೂಟ (Association of Domestic Tour Operators of India – ADTOI) ಕರ್ನಾಟಕ ಚಾಪ್ಟರ್‌ನ ಉದ್ಘಾಟನಾ ಸಮಾರಂಭವನ್ನು ಬೆಂಗಳೂರಿನ ಹೊಟೇಲ್ ಮೌರ್ಯದಲ್ಲಿ ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾದ ವಿಶ್ವವಾಣಿ-ಪ್ರವಾಸಿ ಪ್ರಪಂಚ ಪತ್ರಿಕೆಯ ಮುಖ್ಯ ಸಂಪಾದಕರಾದ ವಿಶ್ವೇಶ್ವರ ಭಟ್ಟ ಅವರು ಮಾತನಾಡಿ, ಕರ್ನಾಟಕದಲ್ಲಿ ಪ್ರವಾಸೋದ್ಯಮದ ಸ್ಪರ್ಶವೇ ಆಗದ ಹಾಗೂ ಇನ್ನೂ ಸಮರ್ಪಕವಾಗಿ ಪ್ರಚಾರ ಪಡೆಯದ ಅನೇಕ ಸುಂದರ ತಾಣಗಳಿವೆ. ಈಗಾಗಲೇ ಪ್ರಸಿದ್ಧವಾಗಿರುವ ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳು, ವನ್ಯಜೀವಿ ಪ್ರದೇಶಗಳು, ಅರಣ್ಯಗಳು, ಜಲಪಾತಗಳು, ಕಡಲತೀರಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಸಾಂಸ್ಕೃತಿಕ ತಾಣಗಳ ಜತೆಗೆ ರಾಜ್ಯದ ಮೂಲೆಮೂಲೆಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಬಹುದಾದ ಅಪಾರ ಪ್ರವಾಸೋದ್ಯಮ ಸಂಪತ್ತು ಅಡಗಿದೆ ಅದನ್ನು ದೇಶಿಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರ ಬಳಿ ಮುಟ್ಟಿಸುವ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರವಾಸೋದ್ಯಮದ ಅಧ್ಯಕ್ಷರಾದ ಶ್ರೀನಿವಾಸ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಜನಾರ್ಧನ್, ವಿಶ್ವವಾಣಿ ಹಾಗೂ ಪ್ರವಾಸಿ ಪ್ರಪಂಚ ಸಮೂಹ ಸಂಸ್ಥೆಗಳ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ಅಧ್ಯಕ್ಷರಾದ ಶ್ಯಾಮ ರಾಜು, ಕರ್ನಾಟಕ ಪ್ರವಾಸೋದ್ಯಮ ಸೊಸೈಟಿಯ ಮನು ಮಹಾಲಿಂಗಯ್ಯ, ಕರ್ನಾಟಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಾದ ಮನೋಜ್ ಕುಮಾರ್ ರವರು ಸೇರಿದಂತೆ ವಿವಿಧ ಪ್ರವಾಸೋದ್ಯಮ ಸಂಘಟನೆಗಳ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಉದ್ಯಮದ ಪ್ರತಿನಿಧಿಗಳು ಭಾಗವಹಿಸಿ ನೂತನ ADTOI ಕರ್ನಾಟಕ ಚಾಪ್ಟರ್‌ಗೆ ಶುಭ ಹಾರೈಸಿದರು.