ದೆಹಲಿಯಲ್ಲಿ ಸುರಿದ ಭಾರಿ ಮಳೆ, ಗುಡುಗು-ಸಿಡಿಲು ಮತ್ತು ಬಲವಾದ ಗಾಳಿಯಿಂದ ವಿಮಾನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (IGIA) ಆಗಮಿಸಬೇಕಿದ್ದ ಕನಿಷ್ಠ 15 ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಗ ಬದಲಾಯಿಸಿದ 15 ವಿಮಾನಗಳ ಪೈಕಿ 12 ವಿಮಾನಗಳನ್ನು ಜೈಪುರಕ್ಕೆ, ಎರಡು ವಿಮಾನಗಳನ್ನು ಚಂಡೀಗಢಕ್ಕೆ ಹಾಗೂ ಒಂದು ವಿಮಾನವನ್ನು ಲಖನೌಗೆ ಕಳುಹಿಸಲಾಯಿತು. ಇದೇ ವೇಳೆ ಹವಾಮಾನ ವೈಪರೀತ್ಯದಿಂದಾಗಿ ಹಲವು ವಿಮಾನಗಳು ವಿಳಂಬಗೊಂಡಿದ್ದು, ಕೆಲವು ಸೇವೆಗಳನ್ನು ರದ್ದುಗೊಳಿಸಲಾಯಿತು. ಫ್ಲೈಟ್‌ ಟ್ರ್ಯಾಕಿಂಗ್‌ ಮಾಹಿತಿಯ ಪ್ರಕಾರ 280ಕ್ಕೂ ಹೆಚ್ಚು ವಿಮಾನಗಳು ವಿಳಂಬಗೊಂಡಿದ್ದರೆ, 20ಕ್ಕೂ ಅಧಿಕ ವಿಮಾನಗಳ ಸೇವೆ ರದ್ದಾಗಿತ್ತು.

ಭಾರಿ ಮಳೆಯೊಂದಿಗೆ ದೆಹಲಿಯ ಹಲವು ಭಾಗಗಳಲ್ಲಿ ಗುಡುಗು, ಸಿಡಿಲು ಮತ್ತು ಗಂಟೆಗೆ 30ರಿಂದ 40 ಕಿಮೀ. ವೇಗದ ಗಾಳಿ ಬೀಸುವ ಸಾಧ್ಯತೆ ಇತ್ತು. ಇದರಿಂದ ವಿಮಾನ ನಿಲ್ದಾಣದ ಕಾರ್ಯಾಚರಣೆಗಳ ಮೇಲೂ ಪರಿಣಾಮ ಬೀರಿತು.

ಪ್ರತಿಕೂಲ ಹವಾಮಾನದಿಂದ ವಿಮಾನ ವೇಳಾಪಟ್ಟಿಗೆ ತೊಂದರೆಯಾಗಿರುವುದಾಗಿ ಇಂಡಿಗೋ, ಏರ್ ಇಂಡಿಯಾ ಸೇರಿದಂತೆ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿವೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ತಮ್ಮ ವಿಮಾನದ ಇತ್ತೀಚಿನ ಸ್ಥಿತಿಯನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ. ದೆಹಲಿ ವಿಮಾನ ನಿಲ್ದಾಣವು ಪ್ರತಿದಿನ 1,300ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ನಿರ್ವಹಿಸುವುದರಿಂದ ಇಂಥ ಹವಾಮಾನ ವೈಪರೀತ್ಯವು ವ್ಯಾಪಕ ಪರಿಣಾಮ ಬೀರುವ ಸಾಧ್ಯತೆಯಿದೆ.