ಸೌದಿ ಅರೇಬಿಯಾದ ದಮ್ಮಾಮ್‌ನಿಂದ ನವದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಸಂದೇಶ ಪತ್ತೆಯಾದ ಹಿನ್ನೆಲೆಯಲ್ಲಿ, ವಿಮಾನವನ್ನು ತುರ್ತಾಗಿ ಅಹ್ಮದಾಬಾದ್‌ಗೆ ತಿರುಗಿಸಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಲಾಗಿದೆ. ವಿಮಾನದ ಸಿಬ್ಬಂದಿ ಸದಸ್ಯರೊಬ್ಬರು ಟಿಶ್ಯು ಪೇಪರ್‌ನಲ್ಲಿ ಬರೆಯಲಾಗಿದ್ದ ʼಬಾಂಬ್ʼ ಎಂಬ ಎಚ್ಚರಿಕೆಯ ಸಂದೇಶವನ್ನು ಪತ್ತೆ ಹಚ್ಚಿದ ನಂತರ ಈ ತುರ್ತು ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಏರ್‌ ಇಂಡಿಯಾ ಸಿಬ್ಬಂದಿಯಿಂದ 'ಬ್ರೋ-ಜೋನ್' ಆದ ಭಾರತೀಯ-ಅಮೆರಿಕನ್ ಬರಹಗಾರ

ವಿಮಾನವು ಅಹ್ಮದಾಬಾದ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆದ ತಕ್ಷಣ, ಭದ್ರತಾ ಏಜೆನ್ಸಿಗಳು ವಿಮಾನದ ಸಂಪೂರ್ಣ ತಪಾಸಣೆ ನಡೆಸಿದವು. ಆದರೆ ಯಾವುದೇ ರೀತಿಯ ಸಂಶಯಾಸ್ಪದ ವಸ್ತುಗಳು ಅಥವಾ ಅಂಶಗಳು ಪತ್ತೆಯಾಗಿಲ್ಲ ಎಂದು ಜಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವಿ.ಎನ್. ಯಾದವ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅಲ್ಲದೆ, ಈ ಘಟನೆಯ ಕುರಿತು ಅಧಿಕೃತ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಮಾನದಲ್ಲಿ ಒಟ್ಟು 32 ಪ್ರಯಾಣಿಕರಿದ್ದು, ಅವರೆಲ್ಲರನ್ನೂ ಅಹ್ಮದಾಬಾದ್ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ವ್ಯವಸ್ಥಿತವಾಗಿ ಕೂರಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್, ಸರಕಾರದಿಂದ ನೇಮಕಗೊಂಡ ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿಗೆ ತಕ್ಷಣವೇ ಮಾಹಿತಿ ನೀಡಲಾಗಿದ್ದು, ಎಲ್ಲ ಭದ್ರತಾ ಕಾರ್ಯವಿಧಾನಗಳನ್ನು ತ್ವರಿತವಾಗಿ ಆರಂಭಿಸಲಾಗಿದೆ ಎಂದು ತಿಳಿಸಿದೆ. ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿ ಕೆಳಕ್ಕಿಳಿದಿದ್ದಾರೆ. ಅಗತ್ಯವಿರುವ ಎಲ್ಲಾ ಭದ್ರತಾ ತಪಾಸಣೆಗಳು ಪೂರ್ಣಗೊಂಡ ನಂತರ ವಿಮಾನವನ್ನು ಮರಳಿ ಕಾರ್ಯಾಚರಣೆಗೆ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.