ಲಂಡನ್‌ನಲ್ಲಿ ‘ಡಿಡಿಎಲ್‌ಜೆʼಯ ರಾಜ್ ಮತ್ತು ಸಿಮ್ರನ್ ಕಂಚಿನ ಪ್ರತಿಮೆ ಅನಾವರಣ
ಶಾರುಖ್ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, “ಬಡೇ ಬಡೇ ದೇಶೋಂ ಮೇಂ ಐಸಿ ಛೋಟಿ ಛೋಟಿ ಬಾತೇಂ ಹೊತಿ ರೆಹತಿ ಹೈಂ, ಸೇನೋರಿಟಾ!” ಎಂಬ ಚಿತ್ರದಲ್ಲಿನ ಪ್ರಸಿದ್ಧ ಸಂಭಾಷಣೆಯನ್ನು ಉಲ್ಲೇಖಿಸಿದ್ದು, ಲಂಡನ್‌ನಲ್ಲಿ ಈ ಪ್ರತಿಮೆಯನ್ನು ಅನಾವರಣಗೊಳಿಸಿರುವುದು ಅತ್ಯಂತ ಸಂತಸದ ವಿಷಯ ಎಂದು ತಿಳಿಸಿದ್ದಾರೆ.
ಬಾಲಿವುಡ್‌ನ ಐಕಾನ್ ಶಾರುಖ್ ಖಾನ್ ಅವರು ತಮ್ಮ ಅಪ್ರತಿಮ ಪ್ರೇಮಕಥಾ ಆಧರಿತ ಚಲನಚಿತ್ರ ʼದಿಲ್‌ವಾಲೆ ದುಲ್ಹನಿಯಾ ಲೇ ಜಾಯೆಂಗೇʼ ಬಿಡುಗಡೆಗೆ 30 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ, ಚಿತ್ರದ ಪ್ರಮುಖ ಪಾತ್ರಗಳಾದ ‘ರಾಜ್ ಮತ್ತು ಸಿಮ್ರನ್’ ಕಂಚಿನ ಪ್ರತಿಮೆಯನ್ನು ಲಂಡನ್‌ನ ಲೇಸ್ಟರ್ ಸ್ಕ್ವೇರ್‌ನಲ್ಲಿ ಅನಾವರಣಗೊಳಿಸಿದ್ದಾರೆ. ಈಗ ಈ ಪ್ರತಿಮೆ ಪ್ರಸಿದ್ಧ ʼಸೀನ್ಸ್ ಇನ್ ದ ಸ್ಕ್ವೇರ್ʼ ಟ್ರೇಲ್‌ನ ಭಾಗವಾಗಿದ್ದು, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಚಲನಚಿತ್ರ ʼಡಿಡಿಎಲ್‌ಜೆʼ ಎಂಬುದು ವಿಶೇಷ.

ಶಾರುಖ್ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, “ಬಡೇ ಬಡೇ ದೇಶೋಂ ಮೇಂ ಐಸಿ ಛೋಟಿ ಛೋಟಿ ಬಾತೇಂ ಹೊತಿ ರೆಹತಿ ಹೈ, ಸೇನೋರಿಟಾ!” ಎಂಬ ಚಿತ್ರದಲ್ಲಿನ ಪ್ರಸಿದ್ಧ ಸಂಭಾಷಣೆಯನ್ನು ಉಲ್ಲೇಖಿಸಿದ್ದು, ಲಂಡನ್‌ನಲ್ಲಿ ಈ ಪ್ರತಿಮೆಯನ್ನು ಅನಾವರಣಗೊಳಿಸಿರುವುದು ಅತ್ಯಂತ ಸಂತಸದ ವಿಷಯ ಎಂದು ತಿಳಿಸಿದ್ದಾರೆ. ಸಿನಿಮಾ ತಂಡಕ್ಕೆ ಹಾಗೂ ಯುಕೆಯ ಜನತೆಗೆ ಕೃತಜ್ಞತೆ ಸಲ್ಲಿಸಿರುವ ಅವರು, ಲಂಡನ್‌ಗೆ ಭೇಟಿ ನೀಡುವ ಪ್ರವಾಸಿಗರು ರಾಜ್-ಸಿಮ್ರನ್ ಪ್ರತಿಮೆಯನ್ನು ತಪ್ಪದೇ ವೀಕ್ಷಿಸಲು ಕೋರಿಕೊಂಡಿದ್ದಾರೆ.
1995ರಲ್ಲಿ ಬಿಡುಗಡೆಯಾದ ಡಿಡಿಎಲ್‌ಜೆ ಚಲನಚಿತ್ರವು, ಭಾರತೀಯ ಸಿನಿಮಾದಲ್ಲಿಯೇ ಅತ್ಯಂತ ದೀರ್ಘಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡ ಚಲನಚಿತ್ರವಾಗಿದೆ. ಲಂಡನ್‌ನ ಹೃದಯಭಾಗದಲ್ಲಿರುವ ಲೆಸ್ಟರ್ ಸ್ಕ್ವೇರ್‌ನಲ್ಲಿ ಈ ಚಲನಚಿತ್ರ ಪಾತ್ರಧಾರಿಗಳ ಮೂರ್ತಿ ಸ್ಥಾಪನೆಯಾಗಿರುವುದು, ಭಾರತದ ಸಿನೆಮಾ ಮತ್ತು ಯುಕೆಯ ಪ್ರವಾಸೋದ್ಯಮದ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ಬಲಪಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.