ಪ್ರವಾಸೋದ್ಯಮದ ಆಕರ್ಷಣೆಗೆ ದೆಹಲಿ ತೆರೆದುಕೊಳ್ಳುತ್ತಿದೆ. ಇದರ ಭಾಗವಾಗಿ ಕ್ಯಾಪಿಟಲ್ಸ್‌ ಬಾರ್ಡರ್‌ ರಿವರ್ ಫ್ರಂಟ್ ರಿಕ್ರಿಯೇಷನ್‌ ಅಂಡ್‌ ಟೂರಿಸಂ ಡೆವಲಪ್‌ಮೆಂಟ್‌ ಪ್ಲಾನ್‌ ಅಡಿಯಲ್ಲಿ, ಯಮುನಾ ನದಿಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಐಷಾರಾಮಿ ಕ್ರೂಸ್ ಅನ್ನು ಪ್ರಾರಂಭಿಸಲು ಸಿದ್ಧತೆ ನಡೆಸಿದೆ.

ಈ ಕುರಿತು ದೆಹಲಿ ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ ಮುಂಬೈನಲ್ಲಿ ಬಹುತೇಕ ಪೂರ್ಣಗೊಂಡ ಕ್ರೂಸ್‌ ಅನ್ನು ಪರಿಶೀಲಿಸುವ ವೇಳೆ ಮಾಹಿತಿ ನೀಡಿದ್ದು, ನಿರ್ಮಾಣ ಹಂತದಲ್ಲಿರುವ 40 ಆಸನಗಳ ಈ ಕ್ರೂಸ್ ಅನ್ನು ಜನವರಿ 20ರಂದು ದೆಹಲಿಗೆ ಸಾಗಿಸಲು ನಿರ್ಧರಿಸಲಾಗಿದೆ. ದೆಹಲಿಗೆ ತಲುಪಿದ ನಂತರ ಇಂಜಿನ್ ಅಳವಡಿಕೆ ಮತ್ತು ಉಳಿದ ತಾಂತ್ರಿಕ ಕಾರ್ಯಗಳು ಪೂರ್ಣಗೊಳ್ಳಲಿವೆ. ಎಲ್ಲವೂ ಪೂರ್ಣಗೊಂಡ ನಂತರ ಕ್ರೂಸ್‌ನ ಕಾರ್ಯಾಚರಣೆಯು ಫೆಬ್ರವರಿಯಿಂದ ಆರಂಭವಾಗುವ ನಿರೀಕ್ಷೆಯಿದೆ. ಈ ಸೇವೆಯನ್ನು ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ ಎಂದಿದ್ದಾರೆ.

yamuna (1)

ಈ ಕ್ರೂಸ್‌ನ ಪ್ರತಿ ಟ್ರಿಪ್ ಸುಮಾರು ಒಂದು ಗಂಟೆ ಇರಲಿದ್ದು, ಏಕಕಾಲದಲ್ಲಿ 40 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ. ಈಶಾನ್ಯ ದೆಹಲಿಯ ಸೋನಿಯಾ ವಿಹಾರ್ ಮತ್ತು ಜಗತ್‌ಪುರ ನಡುವಿನ 6–7 ಕಿಮೀ ರೌಂಡ್-ಟ್ರಿಪ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತದೆ.

ನಗರವನ್ನು ಬಿಟ್ಟು ಹೋಗದೆ, ಗೋವಾದಂಥ ಜನಪ್ರಿಯ ಕರಾವಳಿ ಪ್ರವಾಸಿ ತಾಣಗಳಂತೆಯೇ ಅನುಭವಗಳನ್ನು ನೀಡುವ ಗುರಿಯೊಂದಿಗೆ, ಈ ಕ್ರೂಸ್‌ನ ಪ್ರಯಾಣವು ಸಂಗೀತ, ಆಹಾರ ಸೇವೆಗಳು ಮತ್ತು ಮನರಂಜನೆಯನ್ನು ಒಳಗೊಂಡಿರಲಿದೆ.

ಕ್ರೂಸ್‌ನ ಹೊರತಾಗಿ, ದೆಹಲಿ ಸರಕಾರವು ಟರ್ಮಿನಲ್‌ನಲ್ಲಿ ವಾಟರ್‌ ಸ್ಪೋರ್ಟ್ಸ್‌ ಮತ್ತು ಮನರಂಜನಾ ಚಟುವಟಿಕೆಗಳನ್ನೂ ರೂಪಿಸಲು ಚಿಂತನೆ ನಡೆಸಿದೆ. ಯಾವುದಕ್ಕೂ ಟಿಕೆಟ್ ಬೆಲೆಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಪ್ರವಾಸೋದ್ಯಮ ಸಚಿವರು ಮತ್ತು ಮುಖ್ಯಮಂತ್ರಿಗಳಿಂದ ಔಪಚಾರಿಕ ಅನುಮೋದನೆಗಳ ನಂತರ ಈ ಮಾಹಿತಿ ಹೊರಬೀಳಲಿದೆ.