ಈಜಿಪ್ಟ್ ಪ್ರವಾಸೋದ್ಯಮ ಸಚಿವಾಲಯವು ಹೊಸ ‘ಹಾಲಿಡೇ ಹೋಮ್’ ಪರವಾನಗೆ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ದೇಶಕ್ಕೆ ಆಗಮಿಸುವ ಪ್ರವಾಸಿಗರಿಗೆ ವಿಭಿನ್ನ ಹಾಗೂ ಹೋಮ್ಲಿ ಫೀಲಿಂಗ್‌ ನೀಡುವ ವಸತಿ ಆಯ್ಕೆಗಳನ್ನು ಒದಗಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಈ ಹೊಸ ನಿಯಮದಡಿ, ಮನೆ, ಸ್ಯೂಟ್, ಅಪಾರ್ಟ್‌ಮೆಂಟ್ ಅಥವಾ ವಿಲ್ಲಾ– ಇವುಗಳನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡಲು ಈಗ ಅಧಿಕೃತ ಪರವಾನಗೆ ಅವಶ್ಯಕವಾಗಿದೆ. ಈ ವಸತಿ ಘಟಕಗಳು ಸರ್ಕಾರ ಗುರುತಿಸಿದ ಪ್ರವಾಸಿ ಪ್ರದೇಶಗಳಲ್ಲಿ ಅಥವಾ ಉತ್ತಮ ಗುಣಮಟ್ಟದ ನಿವಾಸಿ ವಲಯಗಳಲ್ಲಿ ಇರಬೇಕೆಂಬ ನಿಯಮ ಜಾರಿಗೊಳಿಸಲಾಗಿದೆ.

Holiday Homes in Egypt

ನೂತನ ವ್ಯವಸ್ಥೆಯ ಪ್ರಮುಖ ಅಂಶಗಳು:-

  • ವಸತಿ ಘಟಕಗಳು ಗುಣಮಟ್ಟ, ಭದ್ರತೆ ಮತ್ತು ಸ್ವಚ್ಛತೆಯ ಮಾನದಂಡಗಳನ್ನು ಪಾಲಿಸಬೇಕು.
  • ಮಾಲೀಕರು “ಟೂರಿಸ್ಟಿಕ್ ಸೂಟೇಬಿಲಿಟಿ ಸರ್ಟಿಫಿಕೇಟ್” ಅನ್ನು ಪಡೆಯುವುದು ಕಡ್ಡಾಯ.
  • ಆನ್‌ಲೈನ್ ಮೂಲಕ ಸರಳ ವಿಧಾನದಲ್ಲಿ ಪರವಾನಿಗೆ ಅರ್ಜಿ ಸಲ್ಲಿಸಬಹುದು.
  • ಸ್ಥಳೀಯರು ತಮ್ಮ ಖಾಸಗಿ ಮನೆಗಳನ್ನು ಕಾನೂನುಬದ್ಧವಾಗಿ ಪ್ರವಾಸಿ ವಸತಿಗೆ ಪರಿವರ್ತಿಸಿಕೊಳ್ಳಲು ಅವಕಾಶ.
Egypt tourism

ಈ ಕ್ರಮದಿಂದ ಈಜಿಪ್ಟ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಹೊಟೇಲ್‌ಗಳಷ್ಟೇ ಅಲ್ಲದೆ ಮನೆಯಂಥ ಆರಾಮದಾಯಕ ವಸತಿ ಆಯ್ಕೆಗಳೂ ದೊರೆಯಲಿವೆ. ಕುಟುಂಬ ಸಮೇತ ಬರುವ ಪ್ರವಾಸಿಗರಿಗೆ, ಗುಂಪಿನಲ್ಲಿ ಬರುವ ಪ್ರವಾಸಿಗರಿಗೆ ಮತ್ತು ದೀರ್ಘಾವಧಿಯವರೆಗೆ ದೇಶದಲ್ಲೇ ಉಳಿಯಬಯಸುವ ಪ್ರವಾಸಿಗರಿಗೆ ಈ ಯೋಜನೆ ಹೆಚ್ಚು ಲಾಭದಾಯಕ ಮತ್ತು ತೃಪ್ತಿದಾಯಕವಾಗಿದೆ.

ಈಜಿಪ್ಟ್‌ ಸರಕಾರದ ಪ್ರಕಾರ, ಹಾಲಿಡೇ ಹೋಮ್‌ಗಳ ಸುವ್ಯವಸ್ಥೆಯು ಪ್ರವಾಸಿಗರಿಗೆ ಸುರಕ್ಷತೆ ಮತ್ತು ತೃಪ್ತಿಯನ್ನು ನೀಡುವುದರ ಜತೆಗೆ ಈಜಿಪ್ಟ್‌ನ ಪ್ರವಾಸೋದ್ಯಮ ವಲಯಕ್ಕೆ ಆರ್ಥಿಕ ಬಲ ನೀಡಲಿದೆ.