Tuesday, September 8, 2026
Tuesday, September 8, 2026

ಪ್ಯಾರಿಸ್‌ನ ಐಫೆಲ್ ಗೋಪುರ ರೀ-ಓಪನ್‌

ಸಿಬ್ಬಂದಿ ನಡೆಸಿದ ಪ್ರತಿಭಟನೆ ಹಾಗೂ ಮಾತುಕತೆಯ ಬಳಿಕ ಐಫೆಲ್ ಗೋಪುರವು ಮಂಗಳವಾರದಿಂದ ಎಂದಿನಂತೆ ಸಾರ್ವಜನಿಕ ಪ್ರವೇಶಕ್ಕಾಗಿ ಮರುಪ್ರಾರಂಭಗೊಂಡಿದೆ.

ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿರುವ ಜಗತ್ಪ್ರಸಿದ್ಧ ಐಫೆಲ್ ಗೋಪುರದಲ್ಲಿ (Eiffel Tower) ಹಿಂದೂ ಆಧ್ಯಾತ್ಮಿಕ ನಿಯೋಗದ ಭೇಟಿಯ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿಯನ್ನು ಅವರ ಕೆಲಸದ ಸ್ಥಳದಿಂದ ತಾತ್ಕಾಲಿಕವಾಗಿ ಬದಲಾಯಿಸಲಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಉದ್ಭವಿಸಿದ್ದ ವಿವಾದವು ಅಂತ್ಯಗೊಂಡಿದೆ. ಸಿಬ್ಬಂದಿ ನಡೆಸಿದ ಪ್ರತಿಭಟನೆ ಹಾಗೂ ಮಾತುಕತೆಯ ಬಳಿಕ ಐಫೆಲ್ ಗೋಪುರವು ಮಂಗಳವಾರದಿಂದ ಎಂದಿನಂತೆ ಸಾರ್ವಜನಿಕ ಪ್ರವೇಶಕ್ಕಾಗಿ ಮರುಪ್ರಾರಂಭಗೊಂಡಿದೆ.

ಇದನ್ನೂ ಓದಿ: ಶಾಂತಿಗಾಗಿ ನಲವತ್ತು ಸಾವಿರ ಹೃದಯಗಳ ಲಬ್‌ಡಬ್‌ ಲಬ್‌ಡಬ್‌!

ಕಳೆದ ವಾರಾಂತ್ಯದಲ್ಲಿ ಬೋಚಾಸನವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿರಾಮ ಸಂಸ್ಥೆ (BAPS) ಹಿಂದೂ ಆಧ್ಯಾತ್ಮಿಕ ಚಳುವಳಿಯ ಸುಮಾರು 100 ಜನರ ನಿಯೋಗವು ಐಫೆಲ್ ಗೋಪುರಕ್ಕೆ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ನಿಯೋಗದ ವಿನಂತಿಯ ಮೇರೆಗೆ ಮಹಿಳಾ ಉದ್ಯೋಗಿಗಳನ್ನು ಆ ಪ್ರದೇಶದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು ಮತ್ತು ಕೆಲವು ಕಡೆಗಳಲ್ಲಿ ಅವರ ಬದಲಿಗೆ ಪುರುಷ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ಕಾರ್ಮಿಕ ಸಂಘಟನೆಗಳು ಹಾಗೂ ಸಿಬ್ಬಂದಿ ಆರೋಪಿಸಿದ್ದರು. ಮಹಿಳಾ ನೌಕರರನ್ನು ದೂರವಿಡುವ ಈ ಕ್ರಮವು ಸಿಬ್ಬಂದಿಗೆ ತೀವ್ರ ಅವಮಾನವನ್ನುಂಟು ಮಾಡಿದೆ ಎಂದು ಯೂನಿಯನ್ ಆಕ್ರೋಶ ವ್ಯಕ್ತಪಡಿಸಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಐಫೆಲ್ ಗೋಪುರವನ್ನು ನಿರ್ವಹಿಸುವ 'ಎಸ್‌ಇಟಿಇ' (SETE) ಕಂಪನಿಯು, ಹಿಂದೂ ನಿಯೋಗವು ಭೇಟಿಯ ವೇಳೆ ಮಹಿಳೆಯರೊಂದಿಗೆ ಪರಸ್ಪರ ಸಂವಹನವನ್ನು ಸೀಮಿತಗೊಳಿಸುವಂತೆ ಮನವಿ ಮಾಡಿಕೊಂಡಿತ್ತು ಎಂಬುದನ್ನು ಒಪ್ಪಿಕೊಂಡಿದೆ. ಆದರೆ, ಇಂತಹ ಷರತ್ತುಗಳನ್ನು ಒಪ್ಪಿಕೊಳ್ಳಬಾರದಿತ್ತು ಮತ್ತು ಇದು ಗಂಡು-ಹೆಣ್ಣಿನ ಸಮಾನತೆಯ ತತ್ವಕ್ಕೆ ಹಾಗೂ ಗಣರಾಜ್ಯದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ. ಗೋಪುರದ ಅಧ್ಯಕ್ಷ ಅರಿಯೆಲ್ ವೀಲ್ ಸೇರಿದಂತೆ ಫ್ರಾನ್ಸ್‌ನ ಹಲವು ರಾಜಕೀಯ ನಾಯಕರು ಈ ಘಟನೆಯನ್ನು ಖಂಡಿಸಿದ್ದು, ಉನ್ನತ ಮಟ್ಟದ ತನಿಖೆಗೂ ಆದೇಶಿಸಲಾಗಿದೆ.

ವಿವಾದ ಹೆಚ್ಚಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಪ್ಯಾರಿಸ್‌ನ ಬಿಎಪಿಎಸ್ ಹಿಂದೂ ದೇವಾಲಯದ ಸಮಿತಿಯು, ತಮ್ಮ ನಿಯೋಗದ ಭೇಟಿಯನ್ನು ಐಫೆಲ್ ಗೋಪುರದ ತಂಡದೊಂದಿಗೆ ಮುಂಚಿತವಾಗಿ ಸಮನ್ವಯಗೊಳಿಸಲಾಗಿತ್ತು ಎಂದು ತಿಳಿಸಿದೆ. ಯಾರಿಗೂ ಪ್ರವೇಶವನ್ನು ನಿರಾಕರಿಸುವ ಉದ್ದೇಶ ನಮ್ಮದಲ್ಲದಿದ್ದರೂ, ಈ ಪರಿಸ್ಥಿತಿಯಿಂದ ಯಾರಿಗಾದರೂ ನೋವಾಗಿದ್ದರೆ ಅಥವಾ ಅನಾನುಕೂಲವಾಗಿದ್ದರೆ ನಾವು ಪ್ರಾಮಾಣಿಕ ಕ್ಷಮೆಯಾಚಿಸುತ್ತೇವೆ ಎಂದು ಸಂಘಟನೆ ತಿಳಿಸಿದೆ. ಸಿಬ್ಬಂದಿ ಮತ್ತು ನಿರ್ವಹಣಾ ಮಂಡಳಿಯ ನಡುವಿನ ಸಭೆಯ ನಂತರ ವಿವಾದ ಬಗೆಹರಿದಿದ್ದು, ಪ್ರವಾಸಿಗರಿಗೆ ಗೋಪುರಕ್ಕೆ ಮತ್ತೆ ಪ್ರವೇಶ ಕಲ್ಪಿಸಲಾಗಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ