ಪ್ರವಾಸೋದ್ಯಮದಲ್ಲಿ ಮಹಿಳಾ ಸಬಲೀಕರಣದತ್ತ ಕೇರಳದ ಚಿತ್ತ!
ಕೇರಳ ರಾಜ್ಯ ಸರ್ಕಾರವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹಿಳಾ ನೇತೃತ್ವದ ಉದ್ಯಮಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ಆರಂಭಿಸಲು ಸಜ್ಜಾಗಿದೆ. ಸಾರ್ವಜನಿಕ ನಿರ್ಮಾಣ ಮತ್ತು ಪ್ರವಾಸೋದ್ಯಮ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಈ ಯೋಜನೆಯನ್ನು ಘೋಷಿಸಿದ್ದು, ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಇದನ್ನು ಜಾರಿಗೆ ತರಲಾಗುತ್ತಿದೆ.
ಕೇರಳ ರಾಜ್ಯ ಸರ್ಕಾರವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹಿಳಾ ನೇತೃತ್ವದ ಉದ್ಯಮಗಳಿಗೆ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಒದಗಿಸುವ ಯೋಜನೆಯನ್ನು ಆರಂಭಿಸಲು ಸಜ್ಜಾಗಿದೆ. ಸಾರ್ವಜನಿಕ ನಿರ್ಮಾಣ ಮತ್ತು ಪ್ರವಾಸೋದ್ಯಮ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಈ ಯೋಜನೆಯನ್ನು ಘೋಷಿಸಿದ್ದು, ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಇದನ್ನು ಜಾರಿಗೆ ತರಲಾಗುತ್ತಿದೆ.
ಈ ಕ್ರಮವು ರಾಜ್ಯದ ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದಲ್ಲಿ ಮಹಿಳಾ ಉದ್ಯಮಿಗಳ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುತ್ತದೆ. ಸಚಿವರು ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿ, ಈ ಯೋಜನೆಯ ರೂಪುರೇಷೆ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗಿನ ಚರ್ಚೆಗಳು ಅಂತಿಮ ಹಂತದಲ್ಲಿದ್ದು, ತಿಂಗಳ ಅಂತ್ಯದೊಳಗೆ ಯೋಜನೆಗೆ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಈ ಯೋಜನೆಯ ಮೂಲಕ ನಿವಾಸ, ಸಾರಿಗೆ, ಮಾರ್ಗದರ್ಶನ ಪ್ರವಾಸ (Guided Tours) ಮುಂತಾದ ಪ್ರವಾಸೋದ್ಯಮ ಸಂಬಂಧಿತ ವ್ಯವಹಾರಗಳಲ್ಲಿ ಹೆಚ್ಚಿನ ಮಹಿಳೆಯರನ್ನು ಆಕರ್ಷಿಸಲಾಗುವುದು. ಆರ್ಥಿಕ ನೆರವು ಹಾಗೂ ಸ್ವಾವಲಂಬನೆಗೆ ಉತ್ತೇಜನ ನೀಡುವ ಮೂಲಕ, ಈ ಯೋಜನೆ ಕೇರಳವನ್ನು ಮಹಿಳಾ ಸ್ನೇಹಿ ಪ್ರವಾಸ ತಾಣವನ್ನಾಗಿಸಲು ಸಹಕಾರಿಯಾಗಲಿದೆ.
ಮಹಿಳೆಯರಲ್ಲಿ ಉದ್ಯಮಶೀಲತೆ, ಸಂವಹನ ಹಾಗೂ ಆತಿಥ್ಯ ಕ್ಷೇತ್ರದ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಸರ್ಕಾರ ತರಬೇತಿ ಶಿಬಿರಗಳನ್ನು ಪ್ರಾರಂಭಿಸಲಿದೆ. ಈ ಮೂಲಕ ಕೇರಳ ರಾಜ್ಯವು ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆಯನ್ನಿರಿಸಿದೆ. ಸಚಿವ ರಿಯಾಸ್ ಮಾತನಾಡಿ, “ಅತಿಥಿ ದೇವೋ ಭವ ಎಂಬ ಸಂಸ್ಕೃತಿಗೆ ಹೆಸರಾದ ಕೇರಳ ಈಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಹಿಳೆಯರನ್ನು ನಾಯಕರನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ" ಎಂದು ಹೇಳಿದರು.