ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಐಟಿಸಿ ಹೊಟೇಲ್ಸ್ (ITC Hotels) ಮೈಸೂರಿನಲ್ಲಿ 99 ಕೊಠಡಿಗಳ ‘ವೆಲ್‌ಕಂ ಹೋಟೆಲ್ ಬೈ ಐಟಿಸಿ ಹೊಟೇಲ್ಸ್’ ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ದಕ್ಷಿಣ ಭಾರತದಲ್ಲಿ ವೆಲ್‌ಕಂ ಹೊಟೇಲ್ ಬ್ರ್ಯಾಂಡ್ ವಿಸ್ತರಣೆಯತ್ತ ಇದು ಮಹತ್ವದ ಹೆಜ್ಜೆಯಾಗಿದೆ.

ಮೈಸೂರು ನಗರದ ಸಾಂಸ್ಕೃತಿಕ ವೈಭವ ಮತ್ತು ಹೆಚ್ಚುತ್ತಿರುವ ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗುತ್ತಿರುವ ಈ ಹೊಟೇಲ್, ವ್ಯಾಪಾರ ಹಾಗೂ ವಿರಾಮ ಪ್ರವಾಸಿಗರ ಅಗತ್ಯಗಳನ್ನು ಪೂರೈಸುವಂತೆ ವಿನ್ಯಾಸಗೊಳ್ಳಲಿದೆ. ಇಲ್ಲಿ 99 ಆಧುನಿಕ ಅತಿಥಿ ಕೊಠಡಿಗಳು ಮತ್ತು ಸೂಟ್‌ಗಳು, ದಿನಪೂರ್ತಿ ಕಾರ್ಯನಿರ್ವಹಿಸುವ ರೆಸ್ಟೋರೆಂಟ್, ಲಾಬಿ ಕಫೆ ಹಾಗೂ ಸ್ಥಳೀಯ ಆಹಾರ ಸಂಸ್ಕೃತಿಗೆ ಆದ್ಯತೆ ನೀಡುವ ವಿಶೇಷ ಭೋಜನ ವ್ಯವಸ್ಥೆ ಇರಲಿದೆ.

ಹೊಟೇಲ್‌ನಲ್ಲಿ ಮದುವೆ ಸಮಾರಂಭಗಳು, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಕಾರ್ಪೊರೇಟ್ ಸಭೆಗಳಿಗಾಗಿ ಸುಮಾರು 5,500 ಚದರ ಅಡಿ ವಿಸ್ತೀರ್ಣದ ಒಳಾಂಗಣ ಬ್ಯಾಂಕ್ವೆಟ್ ಹಾಗೂ ಕಾರ್ಯಕ್ರಮ ಸ್ಥಳ ನಿರ್ಮಿಸಲಾಗುತ್ತಿದ್ದು, ಜತೆಗೆ ಈಜುಕೊಳ ಮತ್ತು ಫಿಟ್‌ನೆಸ್ ಸೆಂಟರ್ ಸೇರಿದಂತೆ ಮನೋರಂಜನಾ ಸೌಲಭ್ಯಗಳೂ ಲಭ್ಯವಾಗಲಿವೆ.