ಜಾಗತಿಕ ಮಟ್ಟದ ಸ್ಪರ್ಧಾತ್ಮ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮೈಸೂರು ಸೇರ್ಪಡೆ?
ಮೈಸೂರಿನಲ್ಲಿರುವ ಉತ್ತಮ ರಸ್ತೆ, ರೈಲು ಮತ್ತು ವಿಮಾನ ಸಂಪರ್ಕ ವ್ಯವಸ್ಥೆಯು ಜಾಗತಿಕ ಪ್ರವಾಸಿ ತಾಣವನ್ನಾಗಿ ರೂಪಿಸಲು ಅತ್ಯುತ್ತಮ ಅಡಿಪಾಯವಾಗಿದೆ. ಪ್ರತಿ ವರ್ಷ ಲಕ್ಷಾಂತರ ದೇಶೀಯ ಹಾಗೂ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿರುವುದರಿಂದ, ಇದು ಭಾರತದ ಪ್ರಮುಖ ಪಾರಂಪರಿಕ ನಗರಗಳಲ್ಲಿ ಒಂದಾಗಿದೆ. ಈ ರಾಷ್ಟ್ರೀಯ ಮಿಷನ್‌ಗೆ ಸೇರಿಸುವುದರಿಂದ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳು, ಪರಂಪರೆ ತಾಣಗಳ ಸಂರಕ್ಷಣೆ, ಸುಸ್ಥಿರ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಗಳನ್ನು ಆಕರ್ಷಿಸಲು ಹೆಚ್ಚಿನ ಅವಕಾಶಗಳು ದೊರೆಯಲಿವೆ
ಭಾರತದ 50 ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಮೈಸೂರನ್ನು ಸೇರಿಸುವಂತೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೇಂದ್ರ ಸರಕಾರವನ್ನು ಕೋರಿದ್ದಾರೆ. ಈ ಬಗ್ಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೆಖಾವತ್ ಅವರೊಂದಿಗೆ ನವದೆಹಲಿಯಲ್ಲಿ ಚರ್ಚೆ ನಡೆಸಿದ್ದಾರೆ. 'ಕೇಂದ್ರ ಬಜೆಟ್ 2025-26ರಲ್ಲಿ ಘೋಷಿಸಲಾದ 'ಭಾರತದ 50 ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಮಿಷನ್' ಅಡಿಯಲ್ಲಿ ಮೈಸೂರನ್ನು ಸೇರಿಸಬೇಕು. ವಿಶ್ವದ ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯಲು ಅಗತ್ಯವಿರುವ ಎಲ್ಲಾ ಅರ್ಹತೆಗಳು ಮತ್ತು ಸಾಮರ್ಥ್ಯಗಳನ್ನೂ ಮೈಸೂರು ಹೊಂದಿದೆ' ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, 'ಈ ಪ್ರಸ್ತಾವಿತ ಯೋಜನೆಯಡಿ ಆಯ್ಕೆಯಾಗುವ ಪ್ರತಿ ಪ್ರವಾಸಿ ತಾಣಕ್ಕೂ ಶೇ.100ರಷ್ಟು ಕೇಂದ್ರದ ನೆರವಿನೊಂದಿಗೆ ಗರಿಷ್ಠ 500 ಕೋಟಿ ರು. ಅನುದಾನದ ಅವಕಾಶವಿದೆ. ಇದು ಮೈಸೂರಿಗೆ ದೊರೆತರ ಮತ್ತಷ್ಟು ಅಭಿವೃದ್ಧಿ ಸಾಧ್ಯವಾಗಲಿದೆ' ಎಂದು ತಿಳಿಸಿದ್ದಾರೆ.
'ಮೈಸೂರಿನಲ್ಲಿರುವ ಉತ್ತಮ ರಸ್ತೆ, ರೈಲು ಮತ್ತು ವಿಮಾನ ಸಂಪರ್ಕ ವ್ಯವಸ್ಥೆಯು ಜಾಗತಿಕ ಪ್ರವಾಸಿ ತಾಣವನ್ನಾಗಿ ರೂಪಿಸಲು ಅತ್ಯುತ್ತಮ ಅಡಿಪಾಯವಾಗಿದೆ. ಪ್ರತಿ ವರ್ಷ ಲಕ್ಷಾಂತರ ದೇಶೀಯ ಹಾಗೂ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿರುವುದರಿಂದ, ಇದು ಭಾರತದ ಪ್ರಮುಖ ಪಾರಂಪರಿಕ ನಗರಗಳಲ್ಲಿ ಒಂದಾಗಿದೆ. ಈ ರಾಷ್ಟ್ರೀಯ ಮಿಷನ್‌ಗೆ ಸೇರಿಸುವುದರಿಂದ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ, ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳು, ಪರಂಪರೆ ತಾಣಗಳ ಸಂರಕ್ಷಣೆ, ಸುಸ್ಥಿರ ಪ್ರವಾಸೋದ್ಯಮಕ್ಕೆ ಉತ್ತೇಜನ ಹಾಗೂ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಗಳನ್ನು ಅಕರ್ಷಿಸಲು ಹೆಚ್ಚಿನ ಅವಕಾಶಗಳು ದೊರೆಯಲಿವೆ' ಎಂದು ಆಶಯ ವ್ಯಕ್ತಪಡಿಸಿದ್ದಾರೆ.
'ರಾಜ್ಯ ಪ್ರವಾಸೋದ್ಯಮ ಇಲಾಖೆಯು ಮೈಸೂರಿನ ಸಾಮರ್ಥ್ಯ, ವಿಶೇಷತೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯ ಸಾಧ್ಯತೆಗಳನ್ನು ಒಳಗೊಂಡ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಬೇಕು' ಎಂದು ಕೋರಿದ್ದಾರೆ. 'ಎರಡೂ ಸರಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಸ್ಥಾನ ದೊರೆಯುತ್ತದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.