Thursday, September 10, 2026
Thursday, September 10, 2026

ಉಡುಪಿಯಲ್ಲಿ 'ಮಿತ್ರ ಸಮಾಜ' ಕಂಡಿರಾ

, ಇಲ್ಲಿನ ಜನರು ತಿಂಡಿಯ ಜತೆಜತೆಗೆ ಚಹಾ ಸವಿಯುತ್ತಾರೆ. ಎಷ್ಟೆಂದರೆ ʻಒಂಜಿ ಪ್ಲೇಟ್‌ ಅಂಬಡೆʼ ʻಒಂಜಿ ಪ್ಲೇಟ್‌ ಇಡ್ಲಿʼ ಎಂದು ಸ್ಥಳೀಯ ಆರ್ಡರ್‌ ಮಾಡಿದರೆ, ಅವನು ಹೇಳದೆಯೂ ಬಿಸಿಬಿಸಿ ಚಹಾ ಆ ಆರ್ಡರ್‌ ಜತೆಗೆ ಬರುವಷ್ಟು. ಬಳ್ಳಾರಿಯಂಥ ಜಿಲ್ಲೆಗೆ ಹೋಲಿಸಿದರೆ ಇಲ್ಲಿ ಚಹಾ ಸಪ್ಪೆ. ಈ ಹೊಟೇಲ್‌ನಲ್ಲಿ ಸಾಂಪ್ರದಾಯಿಕ ಫಿಲ್ಟರ್ ಕಾಫಿ ಸಕತ್ ಫೇಮಸ್‌

  • ಜಡೇಶ ಎಮ್ಮಿಗನೂರು

ಈ ಹೊಟೇಲ್‌ ಇರುವುದು ಉಡುಪಿಯ ಶ್ರೀ ಕೃಷ್ಣ ಮಠದ ಐತಿಹಾಸಿಕ ರಥಬೀದಿಯಲ್ಲಿ. ಹಾಗಾಗಿ ಯಾತ್ರಿಗಳು ಕೃಷ್ಣನ ದರ್ಶನ ಪಡೆದು, ಬೇಕನಿಸಿದಾಗ ಬೈ ವಾಕ್‌ ಈ ಐತಿಹಾಸಿಕ ಹೊಟೇಲ್‌ ತಲುಪಿ, ಆಹಾರ ಸವಿಯಬಹುದು.

Untitled design (98)

ಉಡುಪಿ, ಇದು ಕೃಷ್ಣನೂರು. ಮೋಕ್ಷ ನಗರಿ. ಈ ಊರಿನಲ್ಲಿ ಅಡ್ಡಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನಲಾಗಿದೆ. ಈ ಮಾತಿನ ಸಬೂಬುಗಳೇನೋ ನನಗೆ ತಿಳಿಯದು. ಆದರೆ ಕಣ್ಣಿಗೆ ಕಂಡ ಪ್ರಕೃತಿ ಸೌಂದರ್ಯಗಳನ್ನು ಕಂಡಾಗ ಒಪ್ಪಿಕೊಳ್ಳದೆ ಬೇರೆ ಮಾರ್ಗ ಕಾಣಲಿಲ್ಲ. ಒಂದೆಡೆ ನಡಿಗೆ ದೂರದಲ್ಲಿ ಮಲ್ಪೆ ಬೀಚ್‌, ಅದರಾಚೆ ಸಾಂತಾ ಮೇರಿ ದ್ವೀಪ, ಕರಾವಳಿಯ ಸೌಂದರ್ಯ, ಕಡಲ ಅಲೆಗಳು. ಇನ್ನೊಂದೆಡೆ ಕೃಷ್ಣನ ಸನ್ನಿದಿ, ಪೌರಾಣಿಕ ಹಿನ್ನೆಲೆಯ ಹಲವು ದೇವಾಲಯಗಳು, ಅಧ್ಯಾತ್ಮದ ಅಲೆಗಳು. ವಾಹ್‌ ಇಷ್ಟಿದ್ದಮೇಲೆ ಇದಕ್ಕೆ ಮೋಕ್ಷ ನಗರಿ ಎಂದರೆ ತಪ್ಪಿಲ್ಲ ಅನಿಸಿತು.

'ಮಿತ್ರ ಸಮಾಜ'- 1949

ತಿರುಗಾಡಿ ನೋಡಿದರೆ ಉಡುಪಿಯ ಪ್ರವಾಸ ಮುಗಿಯುವುದಿಲ್ಲ. ಹೊಟ್ಟೆಗೂ ಒಂದಿಷ್ಟು ಸರಕು ತುಂಬಿಸಿಕೊಳ್ಳಬೇಕು. ಹಾಗಾಗಿ ದಿ ಓಲ್ಡೆಸ್ಟ್‌ ಹೊಟೇಲ್‌ ಬಗ್ಗೆ ಮಾಹಿತಿಗಾಗಿ ಗೂಗಲ್‌ ಮೊರೆಹೊಕ್ಕೆ. ಇದು ಐತಿಹಾಸಿಕ ಹೊಟೇಲ್‌. ಹೆಸರು 'ಮಿತ್ರ ಸಮಾಜ'. ಇಂದು ನೆನ್ನೆ ಹುಟ್ಟಿಕೊಂಡಿದ್ದಲ್ಲ; ಆರಂಭವಾಗಿ ಮುಕ್ಕಾಲು ಶತಮಾನ ದಾಟಿದೆ. 1949ರಲ್ಲಿ ಆರಂಭವಾಯಿತು! ವಿಚಿತ್ರ ಅಂದರೆ ಇದೇ ಹೆಸರಿನ ಮತ್ತೊಂದು ಹೊಟೇಲ್‌ ಇಲ್ಲೇ ಇತ್ತು. ಆದರೆ ನಿಜವಾದ 'ಮಿತ್ರ ಸಮಾಜ' ಹೊಟೇಲ್‌ ಬೋರ್ಡ್‌ನಲ್ಲಿ ಭಾರತದ ಇನ್ನೆಲ್ಲೂ ಈ ಹೊಟೇಲ್‌ನ ಬ್ರಾಂಚ್‌ಗಳಿಲ್ಲ ಎಂದು ಬರೆದಿದ್ದರು. ಜತೆಗೆ ಉಡುಪಿಯ ಮಿತ್ರ ಆಸ್ಪತ್ರೆಯ ಬಳಿ ಇರುವ 'ಮಿತ್ರ ಸಮಾಜ ಕೆಫೆ'ಗೂ (ಸ್ಥಾಪನೆ 2019) ಈ ಮೂಲ ಸಂಸ್ಥೆಗೂ ಯಾವುದೇ ವ್ಯಾಪಾರಿಕ ನಂಟು ಸಹ ಇಲ್ಲ ಎಂದು ಖುಲ್ಲಂಖುಲ್ಲಾ ಬರೆಯಲಾಗಿತ್ತು. ಇದು ಆ ಹೊಟೇಲ್‌ ಕಾಯ್ದುಕೊಳ್ಳುತ್ತಿರುವ ಅಥೆಂಟಿಸಿಟಿಗೆ ಸಾಕ್ಷಿ. ಹಾಗಾಗಿ ಈ ಹೊಟೇಲ್‌ ಒಳ ಹೊಕ್ಕೆ.

ಇದನ್ನೂ ಓದಿ:ಜನಪ್ರಿಯವಾಗುತ್ತಿರುವ ವೈನ್, ಈನೋ ಟೂರಿಸಂ

ರಥಬೀದಿಯಲ್ಲಿ

ಈ ಹೊಟೇಲ್‌ ಇರುವುದು ಉಡುಪಿಯ ಶ್ರೀ ಕೃಷ್ಣ ಮಠದ ಐತಿಹಾಸಿಕ ರಥಬೀದಿಯಲ್ಲಿ. ಹಾಗಾಗಿ ಯಾತ್ರಿಗಳು ಕೃಷ್ಣನ ದರ್ಶನ ಪಡೆದು, ಬೇಕನಿಸಿದಾಗ ಬೈ ವಾಕ್‌ ಈ ಐತಿಹಾಸಿಕ ಹೊಟೇಲ್‌ ತಲುಪಿ, ಆಹಾರ ಸವಿಯಬಹುದು. ಈ ಹೊಟೇಲ್‌ 1949ರಲ್ಲಿ ಹೋಳಿ ವೆಂಕಟರಮಣ ಆಚಾರ್ಯ ಅವರಿಂದ ಅಧಿಕೃತವಾಗಿ ಪ್ರಾರಂಭವಾಯಿತು. ಅಂದಿನಿಂದ ಉಡುಪಿಯ ನೈಜ ಶೈಲಿಯ ಆಹಾರಗಳನ್ನು ಜನರಿಗೆ ಉಣಬಡಿಸುತ್ತಿದೆ.

ಬೆಳ್ಳುಳ್ಳಿ- ಈರುಳ್ಳಿ ಇಲ್ಲಿಲ್ಲ

ಕೃಷ್ಣ ಮಠದ ರಥಬೀದಿಯಲ್ಲೇ ಈ ಹೊಟೇಲ್‌ ನೆಲೆಸಿರುವುದರಿಂದ ಅತ್ಯಂತ ಕಟ್ಟುನಿಟ್ಟಾದ ಸಾತ್ವಿಕ ನಿಯಮಗಳನ್ನು ಪಾಲಿಸಲಾಗುತ್ತದೆ. ಹಾಗಾಗಿ ಇಲ್ಲಿನ ಯಾವುದೇ ಆಹಾರ ತಯಾರಿಕೆಯಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಬಳಸಲಾಗುತ್ತಿಲ್ಲ. ಗ್ರಾಹಕರೂ ಹೊರಗಿನ ತಿಂಡಿಗಳನ್ನು ತರುವಂತಿಲ್ಲ. ಇದೂ ಈ ಹೊಟೇಲ್‌ನ ಒಂದು ಐಕಾನಿಕ್‌ ಪಾಯಿಂಟ್‌. ಈ ಮಡಿ ಮತ್ತು ಶುದ್ಧತೆಯೇ ಅತಿಥಿಗಳಿಗೆ ಇಷ್ಟವಾಗುವುದು.

ತಿನ್ನೋಕೆ ಏನೇನಿದೆ

'ಮಿತ್ರ ಸಮಾಜ' ಹೊಟೇಲ್‌ನಲ್ಲಿ ಉಡುಪಿ ಬನ್ಸ್, ಗುಳಿ ಅಪ್ಪ ಫುಲ್‌ ಫೇಮಸ್‌. ಇಡ್ಲಿ, ದೋಸೆ, ಗಟ್ಟಿ ತೆಂಗಿನಕಾಯಿ ಚಟ್ನಿ ಸವಿಯಲು ನಿತ್ಯವೂ ನೂರಾರು ಗ್ರಾಹಕರು ಸಾಲುಗಟ್ಟಿ ನಿಲ್ಲುತ್ತಾರೆ. ಮಂಗಳೂರು ಗೋಳಿಬಜೆ, ಅಂಬಡೆಯಂಥ ಕರಾವಳಿಯ ವಿಶಿಷ್ಟ ತಿಂಡಿಗಳನ್ನು ವಿದೇಶಿ ಪ್ರವಾಸಿಗರಿಗೂ ಪರಿಚಯಿಸಿ, ಜನಪ್ರಿಯಗೊಳಿಸಿದ ಕೀರ್ತಿ ಈ ಹೊಟೇಲ್‌ಗೆ ಸಲ್ಲುತ್ತದೆ.

Untitled design (99)

ನಾನು ಈ ಪ್ರವಾಸದಲ್ಲಿ ಗಮನಿಸಿದ ಒಂದು ವಿಚಿತ್ರ ಎಂದರೆ, ಇಲ್ಲಿನ ಜನರು ತಿಂಡಿಯ ಜತೆಜತೆಗೆ ಚಹಾ ಸವಿಯುತ್ತಾರೆ. ಎಷ್ಟೆಂದರೆ ʻಒಂಜಿ ಪ್ಲೇಟ್‌ ಅಂಬಡೆʼ ʻಒಂಜಿ ಪ್ಲೇಟ್‌ ಇಡ್ಲಿʼ ಎಂದು ಸ್ಥಳೀಯ ಆರ್ಡರ್‌ ಮಾಡಿದರೆ, ಅವನು ಹೇಳದೆಯೂ ಬಿಸಿಬಿಸಿ ಚಹಾ ಆ ಆರ್ಡರ್‌ ಜತೆಗೆ ಬರುವಷ್ಟು. ಬಳ್ಳಾರಿಯಂಥ ಜಿಲ್ಲೆಗೆ ಹೋಲಿಸಿದರೆ ಇಲ್ಲಿ ಚಹಾ ಸಪ್ಪೆ. ಈ ಹೊಟೇಲ್‌ನಲ್ಲಿ ಸಾಂಪ್ರದಾಯಿಕ ಫಿಲ್ಟರ್ ಕಾಫಿ ಸಕತ್ ಫೇಮಸ್‌. ತಲೆಮಾರುಗಳು ಬದಲಾದರೂ ಇಲ್ಲಿನ ಆಹಾರದ ಗುಣಮಟ್ಟ ಬದಲಾಗಿಲ್ಲ ಎಂಬುದು ಸ್ಥಳೀಯರ ಮಾತು. ಮಠದ ಯತಿಗಳು, ರಾಜಕಾರಣಿಗಳು ಮತ್ತು ಸಾಹಿತಿಗಳು ಉಡುಪಿಗೆ ಭೇಟಿನೀಡಿದಾಗ ಈ ಹೊಟೇಲ್‌ಗೆ ಭೇಟಿ ನೀಡುವುದು ಸಾಮಾನ್ಯವಂತೆ.

ಹೊಟೇಲ್‌ ಹೀಗಿದೆ

ಕಾಲಕ್ಕೆ ತಕ್ಕಂತೆ ಈ ಹೊಟೇಲ್‌ ವಿನ್ಯಾಸ ಬದಲಾಗಿದೆ. ಆದರೆ ಐಷಾರಾಮಿ ಆಗಿಲ್ಲ. ಮೊದಲಿದ್ದ ಹೆಂಚಿನ ಮಾಡಿನ ಬದಲಿಗೆ ಆರ್‌ಸಿಸಿ ಬಂದಿದೆ. ಒಳಗಡೆ ಕುಳಿತುಕೊಳ್ಳಲು ಕಡಪ ಕಲ್ಲುಗಳ ಆಸನ ವ್ಯವಸ್ಥೆ ಇದೆ. ಒಂದೇ ಹಾಲ್‌. ಆದರೆ ಅತಿಥಿಗಳ ಸಂಖ್ಯೆ ಜಾಸ್ತಿ. ಹಬ್ಬ- ಹರಿದಿನಗಳಲ್ಲಿ ಅತಿಥಿಗಳ ಸಂಖ್ಯೆ ಇನ್ನೂ ಜಾಸ್ತಿ. ಹೆಚ್ಚೂಕಮ್ಮಿ ಆರ್ಡರ್‌ ಕೊಟ್ಟು ಅರ್ಧ ಗಂಟೆ ಕಾಯಬೇಕಾಗುತ್ತದೆಯಂತೆ.

ಚಾರ್ಜ್ ವಿಧಿಸಲು ಕೋರಿ ಬೃಹತ್ ಬೆಂಗಳೂರು ಹೊಟೇಲ್ ಸಂಘಕ್ಕೆ ಪತ್ರ!

ಇಂದಿಗೆ ಮಾರ್ಕೆಟಿಂಗ್‌ಗಾಗಿ ಆಡಂಬರದ ಮಹಲು, ಒಳಾಂಗಣ ವಿನ್ಯಾಸ ಮತ್ತೊಂದು ಮಗದೊಂದು ತಂತ್ರಗಳನ್ನು ಮಾಡಿಕೊಳ್ಳುವ ಹಲವು ಹೊಟೇಲ್‌ಗಳಿವೆ. ಅವುಗಳ ನಡುವೆ ಈ ಹೊಟೇಲ್‌ ನಿರಾಡಂಬರ ಸುಂದರಿ. ಇತಿಹಾಸ, ಸಾಂಪ್ರದಾಯಿಕ ಮತ್ತು ಸ್ಥಳೀಯ ಆಹಾರದ ರುಚಿ ಮತ್ತು ಸಾಂಸ್ಕೃತಿಕ ಮೌಲ್ಯಗಳ ಬಲದಿಂದಲೇ ಕಾರ್ಯ ನಿರ್ವಹಿಸುತ್ತಿದೆ. ಕರಾವಳಿಯ ಆಹಾರ ಪದ್ಧತಿಯನ್ನು ಇಷ್ಟಪಡುವ ಪ್ರತಿಯೊಬ್ಬ ಇತಿಹಾಸ ಪ್ರೇಮಿಗೂ ʻಮಿತ್ರ ಸಮಾಜʼ ದಿ ಬೆಸ್ಟ್‌ ಆಯ್ಕೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..