ಅಂಡಮಾನ್ ದ್ವೀಪಕ್ಕೆ ಹೆಚ್ಚಿದ ಪ್ರವಾಸಿಗರು
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ತನ್ನ ನೈಸರ್ಗಿಕ ಪರಂಪರೆಯನ್ನು ಕಾಪಾಡಿಕೊಳ್ಳುವ ಮೂಲಕ ಆಧುನಿಕ ಪ್ರವಾಸಿಗರ ಅಗತ್ಯತೆಗಳನ್ನು ಪೂರೈಸುತ್ತಿವೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಪ್ರಸ್ತುತ ಪ್ರವಾಸೋದ್ಯಮದಲ್ಲಿ ಭಾರಿ ಬೆಳವಣಿಗೆಯನ್ನು ಕಾಣುತ್ತಿವೆ. ನಕ್ಷತ್ರ ವೀಕ್ಷಣೆ ಮತ್ತು ಜ್ವಾಲಾಮುಖಿ ಕ್ರೂಸ್‌ಗಳಂಥ ವಿಶಿಷ್ಟ ಅನುಭವಗಳನ್ನು ನೀಡುತ್ತ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಹ್ಯಾವ್ಲಾಕ್ ಮತ್ತು ನೀಲ್ ದ್ವೀಪಗಳಲ್ಲಿ ತಲೆ ಎತ್ತಿರುವ ಹೊಸ ರೆಸಾರ್ಟ್‌ಗಳು ಅತಿಥಿಗಳಿಗೆ ಉನ್ನತ ಮಟ್ಟದ ಸೌಕರ್ಯಗಳನ್ನು ನೀಡುತ್ತಿವೆ. ಇಲ್ಲಿ ಪರಿಸರ ಮಾಲಿನ್ಯದ ಪ್ರಮಾಣ ಕಡಿಮೆ ಇರುವುದರಿಂದ ಆಕಾಶ ಸ್ಪಷ್ಟವಾಗಿ ಕಾಣಿಸುತ್ತದೆ. ಹೀಗಾಗಿ ರಾತ್ರಿ ಹೊತ್ತು ನಕ್ಷತ್ರ ವೀಕ್ಷಣೆಗೆ ಅತ್ಯುತ್ತಮ ಸ್ಥಳ ಎಂದು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಈ ನಿಟ್ಟಿನಲ್ಲಿ ಆಸ್ಟ್ರೋ-ಟೂರಿಸಂ ಅನ್ನು ಉತ್ತೇಜಿಸಲು ಹೂಡಿಕೆ ಮಾಡುತ್ತಿವೆ.
ಇದನ್ನೂ ಓದಿ: ಬಾರ್ಡರ್‌ನಲ್ಲಿ ಭಾರತೀಯ ಸೇನೆ ಕೆಫೆ
ದಕ್ಷಿಣ ಏಷ್ಯಾದ ಏಕೈಕ ಸಕ್ರಿಯ ಜ್ವಾಲಾಮುಖಿ 'ಬ್ಯಾರೆನ್ ಐಲ್ಯಾಂಡ್' ಈಗ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆ. ಈ ಜ್ವಾಲಾಮುಖಿಯನ್ನು ಹತ್ತಿರದಿಂದ ನೋಡಲು ವಿಶೇಷ ಕ್ರೂಸ್ ಹಡಗುಗಳ ವ್ಯವಸ್ಥೆ ಮಾಡಲಾಗಿದೆ.
ಭಾರತ ಸರಕಾರವು ಈ ಭಾಗದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಿದೆ. ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆಯ ನಂತರ, ಹೆಚ್ಚಿನ ವಿಮಾನಗಳ ಸಂಚಾರಕ್ಕೆ ಅವಕಾಶ ಸಿಕ್ಕಿದೆ. ಅಲ್ಲದೆ, ದ್ವೀಪಗಳ ನಡುವಿನ ಸಂಪರ್ಕವನ್ನು ಸುಧಾರಿಸಲು ಉತ್ತಮ ಹಡಗು ಸೇವೆಗಳು ಮತ್ತು ಹೆಲಿಕಾಪ್ಟರ್ ಸೇವೆಗಳನ್ನು ವಿಸ್ತರಿಸಲಾಗಿದೆ.