ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ತನ್ನ ಮುಖ್ಯ ಹಣಕಾಸು ಅಧಿಕಾರಿ (Chief Financial Officer - CFO) ಹುದ್ದೆಗೆ ಸಂಸ್ಥೆಯೊಳಗಿನ ಹಿರಿಯ ಅಧಿಕಾರಿಯಾಗಿರುವ ಕಿರಣ್ ತಾಡಿಮರ್ರಿ ಅವರನ್ನು ನೇಮಕ ಮಾಡಿದೆ. ಅವರು ಇಂದಿನಿಂದ ಅಧಿಕಾರ ವಹಿಸಿಕೊಳ್ಳಲಿದ್ದು, 2022ರಿಂದ ಸಿಎಫ್‌ಒ ಆಗಿ ಕಾರ್ಯನಿರ್ವಹಿಸಿದ್ದ ಗೌರವ್ ನೇಗಿ ಅವರು ಇನ್ನು ಮುಂದೆ ಸಂಸ್ಥೆಯ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ.

Untitled design - 2026-07-28T173127.076

ಕಿರಣ್ ತಾಡಿಮರ್ರಿ ಅವರು ಪ್ರಸ್ತುತ ಇಂಡಿಗೋದಲ್ಲಿ ಉಪ ಮುಖ್ಯ ಹಣಕಾಸು ಅಧಿಕಾರಿಯಾಗಿ (Deputy CFO) ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಹಣಕಾಸು ನಿರ್ವಹಣೆಯಲ್ಲಿ 24 ವರ್ಷಕ್ಕೂ ಹೆಚ್ಚು ಅನುಭವವಿದ್ದು, ಭಾರತೀಯ ಇ-ಕಾಮರ್ಸ್ ಸಂಸ್ಥೆ ಉದಾನ್, ಜನರಲ್ ಎಲೆಕ್ಟ್ರಿಕ್ (GE), ಇಂಟರ್‌ಗ್ಲೋಬ್ ಎಂಟರ್‌ಪ್ರೈಸಸ್ ಹಾಗೂ ಜೆನ್‌ವರ್ಕ್ಸ್ ಹೆಲ್ತ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ನಾಯಕತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ನಿಯಂತ್ರಣ, ಹಣಕಾಸು ಯೋಜನೆ, ಖಜಾನೆ ನಿರ್ವಹಣೆ, ಬಂಡವಾಳ ಸಂಗ್ರಹ, ತೆರಿಗೆ, ಲೆಕ್ಕಪರಿಶೋಧನೆ ಹಾಗೂ ಹೂಡಿಕೆದಾರರ ಸಂಬಂಧಗಳ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದಾರೆ.

ಇದನ್ನೂ ಓದಿ: ಪ್ರವಾಸಿಗನೇ ಪ್ರವಾಸೋದ್ಯಮಕ್ಕೆ ಶತ್ರು!

ಈ ನಾಯಕತ್ವ ಬದಲಾವಣೆ ಇಂಡಿಗೋಗೆ ಸವಾಲಿನ ಸಂದರ್ಭದಲ್ಲಿ ನಡೆದಿದೆ. ಇತ್ತೀಚೆಗೆ ಕಂಪನಿ ಸತತ ಎರಡನೇ ತ್ರೈಮಾಸಿಕ ನಷ್ಟವನ್ನು ದಾಖಲಿಸಿದ್ದು, ಪ್ರಸ್ತುತ ತ್ರೈಮಾಸಿಕದಲ್ಲಿ ಸಾಮರ್ಥ್ಯ ವೃದ್ಧಿ ಬಹುತೇಕ ಸ್ಥಿರವಾಗಿರಲಿದೆ ಎಂದು ಅಂದಾಜಿಸಿದೆ. ಇರಾನ್ ಸಂಘರ್ಷದ ನಂತರ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯ ಪರಿಣಾಮ ವಿಮಾನ ಇಂಧನ ವೆಚ್ಚ ಹೆಚ್ಚಿದ್ದು, ಇಂಧನ ಬೆಲೆಗೆ ಹೆಡ್ಜಿಂಗ್ ಮಾಡದ ಇಂಡಿಗೋದ ಲಾಭಾಂಶದ ಮೇಲೆ ಒತ್ತಡ ಉಂಟಾಗಿದೆ. ಈ ಹಿನ್ನೆಲೆ ಹೊಸ ಸಿಎಫ್‌ಒ ಸಂಸ್ಥೆಯ ಹಣಕಾಸು ನಿರ್ವಹಣೆ ಮತ್ತು ವೆಚ್ಚ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ.