ಕರಾವಳಿ ಪ್ರವಾಸೋದ್ಯಮ ಯೋಜನೆಯ ಚಾಲನೆಗೆ ಕ್ಷಣಗಣನೆ
ಕರ್ನಾಟಕದ ಮುನ್ನೂರಾ ಇಪ್ಪತ್ತು ಕಿಲೋಮೀಟರ್ ಉದ್ದದ ಕರಾವಳಿ ಶೀಘ್ರದಲ್ಲೇ ವಿಶ್ವಮಟ್ಟದ ಪ್ರವಾಸಿ ತಾಣವಾಗಿ ರೂಪಾಂತರಗೊಳ್ಳಲಿದೆ. ಆಧುನಿಕ ರೆಸಾರ್ಟ್‌ಗಳು, ಐಷಾರಾಮಿ ಹೋಟೆಲ್ಗಳು ಹಾಗೂ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಯ ಮೂಲಕ ರಾಜ್ಯವು ತನ್ನ ಕರಾವಳಿ ಪ್ರದೇಶವನ್ನು ವಿಶ್ವ ಪ್ರವಾಸಿಗರ ಆಕರ್ಷಣೆಯ ಕೇಂದ್ರವನ್ನಾಗಿ ಪರಿವರ್ತಿಸಲು ತೀರ್ಮಾನಿಸಿದೆ.
ಕರ್ನಾಟಕದ 320 ಕಿಮೀ ಉದ್ದದ ಕರಾವಳಿ ಶೀಘ್ರದಲ್ಲೇ ವಿಶ್ವಮಟ್ಟದ ಪ್ರವಾಸಿ ತಾಣವಾಗಿ ರೂಪಾಂತರಗೊಳ್ಳಲಿದೆ. ಆಧುನಿಕ ರೆಸಾರ್ಟ್‌ಗಳು, ಐಷಾರಾಮಿ ಹೊಟೆಲ್‌ಗಳು ಹಾಗೂ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಯ ಮೂಲಕ ರಾಜ್ಯವು ತನ್ನ ಕರಾವಳಿ ಪ್ರದೇಶವನ್ನು ವಿಶ್ವ ಪ್ರವಾಸಿಗರ ಆಕರ್ಷಣೆಯ ಕೇಂದ್ರವನ್ನಾಗಿ ಪರಿವರ್ತಿಸಲು ತೀರ್ಮಾನಿಸಿದೆ. ಪರಿಸರ ಸ್ನೇಹಿ, ಉನ್ನತ ಮಟ್ಟದ ಇಕೋ-ಟೂರಿಸಂ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಕರ್ನಾಟಕವು ಸ್ಥಳೀಯ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಕರಾವಳಿ ಪ್ರವಾಸೋದ್ಯಮ ಯೋಜನೆಯ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ.

ಕರ್ನಾಟಕ ತನ್ನ ಸಾಂಸ್ಕೃತಿಕ ಪರಂಪರೆ ಮತ್ತು ಸಸ್ಯಸಮೃದ್ಧ ನೈಸರ್ಗಿಕ ಸೌಂದರ್ಯಕ್ಕಾಗಿ ಪ್ರಸಿದ್ಧ. ಈಗ ರಾಜ್ಯ ಸರ್ಕಾರವು ಕಡೆಗಣನೆಗೆ ಒಳಗಾಗಿದ್ದ ಕರಾವಳಿ ತೀರದ ಅಮೂಲ್ಯ ಸಂಪತ್ತನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಪ್ರವಾಸೋದ್ಯಮದ ಸಮಗ್ರ ಅಭಿವೃಧ್ಧಿಯತ್ತ ದಾಪುಗಾಲನ್ನಿಟ್ಟಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಾದ್ಯಂತ ಹರಡಿಕೊಂಡಿರುವ ಕರಾವಳಿ ತೀರವನ್ನು ಅಭಿವೃಧ್ಧಿ ಪಡಿಸುವ ನಿಮಿತ್ತ ಕರ್ನಾಟಕ ಸರ್ಕಾರ ಎರಡು ವರ್ಷಗಳ ಹಿಂದೆ ʼಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿʼಯನ್ನು ರಚಿಸಲು ನಿರ್ಧರಿಸಿತ್ತು. ಇತ್ತೀಚಿನ ಬೆಳವಣಿಗೆಗಳು ಈ ಯೋಜನೆಯ ಅನುಷ್ಠಾನ ವೇಗ ಪಡೆದುಕೊಳ್ಳುತ್ತಿರುವುದನ್ನು ಸೂಚಿಸುತ್ತವೆ. ನೂತನ ಪ್ರವಾಸೋದ್ಯಮ ನೀತಿ ಹಾಗೂ ಮಂಡಳಿಯ ಅಧಿಕೃತ ಸ್ಥಾಪನೆಯೊಂದಿಗೆ, ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರವು ಹೊಸ ಅಧ್ಯಾಯದತ್ತ ಹೆಜ್ಜೆಯನ್ನಿಡುತ್ತಿದೆ.
ಪರಿಸರ ಮತ್ತು ಆರ್ಥಿಕತೆಯ ಸಮತೋಲನದ ದೃಷ್ಟಿಯಲ್ಲಿ ವಿನ್ಯಾಸಗೊಂಡ ಯೋಜನೆ
ಕರ್ನಾಟಕ ಸರ್ಕಾರದ ಕರಾವಳಿ ಪ್ರವಾಸೋದ್ಯಮದ ಯೋಜನೆಯು ಪರಿಸರ ಸಂರಕ್ಷಣೆ ಮತ್ತು ಆರ್ಥಿಕ ಅಭಿವೃದ್ಧಿಯ ನಡುವೆ ಸಮತೋಲನ ಸಾಧಿಸುವ ಸುಸ್ಥಿರ ಮಾದರಿಯ ಮೇಲೆ ಆಧಾರಿತವಾಗಿದೆ. ಈ ಯೋಜನಯ ಸಮರ್ಪಕ ಅನುಷ್ಠಾನಕ್ಕಾಗಿ ಪ್ರೋಗ್ರಾಮ್ ಮ್ಯಾನೇಜ್‌ಮಂಟ್ ಯುನಿಟ್‌ಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಯುನಿಟ್‌ಗಳು ಯೋಜನೆಗೆ ಉತ್ತಮ ಮಾರ್ಗದರ್ಶನ ಕೊಡುವುದರೊಂದಿಗೆ ಸಮೀಕ್ಷೆ ಕೈಗೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ಅಭಿವೃದ್ಧಿ
ಸರ್ಕಾರವು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಅಭಿವೃದ್ಧಿಗೆ ಐದು ಪ್ರಮುಖ ತಾಣಗಳನ್ನು ಗುರುತಿಸಿದೆ. ಉಡುಪಿ ಜಿಲ್ಲೆಯ ತ್ರಾಸಿ-ಮರವಂತೆ ಕಡಲತೀರ, ಕೋಡಿ ಕುಂದಾಪುರ ಕಡಲತೀರ ಮತ್ತು ಬರ್ಕೂರು ಕೋಟೆ ಸೇರಿದಂತೆ, ದಕ್ಷಿಣ ಕನ್ನಡದ ತಣ್ಣೀರಭಾವಿ ಬ್ಲೂ ಫ್ಲ್ಯಾಗ್ ಕಡಲತೀರ ಮತ್ತು ಕೊಡಿಕಲ್ ಪ್ರದೇಶಗಳು ಈ ಯೋಜನೆಯ ಭಾಗವಾಗಿವೆ. ಪ್ರತಿ ಸ್ಥಳದಲ್ಲೂ ಐಷಾರಾಮಿ ರೆಸಾರ್ಟ್‌ಗಳು, ಹೊಟೇಲ್‌ಗಳು ಹಾಗೂ ಬಹು-ಉತ್ಪನ್ನ ಪ್ರವಾಸೋದ್ಯಮ ವಲಯಗಳು ಸ್ಥಾಪನೆಯಾಗಲಿವೆ.
ಮಂಗಳೂರು ಸಮೀಪದ ಸೋಮೇಶ್ವರ ಹಾಗೂ ಪಣಂಬೂರು ಕಡಲತೀರಗಳ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಸರ್ಕಾರವು ತಜ್ಞ ಸಂಸ್ಥೆಗಳೊಂದಿಗೆ ಚರ್ಚೆ ನಡೆಸುತ್ತಿದೆ. ಅಂತಾರಾಷ್ಟ್ರೀಯ ಮಾನದಂಡದ ಮೂಲಸೌಕರ್ಯ ಹಾಗೂ ಸೇವೆಗಳನ್ನು ಒದಗಿಸುವತ್ತ ಗಮನಹರಿಸಲಾಗುತ್ತಿದೆ. ಅದರ ಜತೆಗೆ, ಕರಾವಳಿಯ ನೈಸರ್ಗಿಕ ಸೌಂದರ್ಯವನ್ನು ಕಾಪಾಡುವುದು ಕೂಡ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.