ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನಿರ್ವಾಹಕಿಯರಿಗೆ (ಕಂಡಕ್ಟರ್‌ಗಳಿಗೆ) ವೇತನ ಸಹಿತ ಋತುಚಕ್ರ ರಜೆ ನೀಡುವ ಕುರಿತು ಮೂರು ತಿಂಗಳೊಳಗೆ ತೀರ್ಮಾನ ಕೈಗೊಳ್ಳುವಂತೆ ಕೇರಳ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. ಮೂವರು ಮಹಿಳಾ ನಿರ್ವಾಹಕಿಯರು ಹಾಗೂ ನೌಕರರ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುವ ಸಂಘಟನೆಯೊಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಜು ಅಬ್ರಹಾಂ ಆದೇಶ ನೀಡಿದ್ದಾರೆ.

Untitled design - 2026-07-29T144138.325

ಅರ್ಜಿದಾರರು ಮಹಿಳಾ ನಿರ್ವಾಹಕಿಯರಿಗೆ ಪ್ರತಿ ತಿಂಗಳು ಎರಡು ದಿನಗಳ ವೇತನ ಸಹಿತ ಋತುಚಕ್ರ ರಜೆ ನೀಡುವಂತೆ ಮನವಿ ಮಾಡಿದ್ದಾರೆ. ದೀರ್ಘಕಾಲ ನಿಂತುಕೊಂಡೇ ಕೆಲಸ ಮಾಡುವುದು, ಶೌಚಾಲಯ ಮತ್ತು ವಿಶ್ರಾಂತಿ ಸೌಲಭ್ಯಗಳ ಕೊರತೆ, ಅನಿಯಮಿತ ಕರ್ತವ್ಯ ಸಮಯ ಇವುಗಳ ಕಾರಣದಿಂದ ಋತುಚಕ್ರದ ಅವಧಿಯಲ್ಲಿ ಮಹಿಳೆಯರು ತೀವ್ರ ದೈಹಿಕ ಹಾಗೂ ಮಾನಸಿಕ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಋತುಚಕ್ರ ರಜೆ ಮಹಿಳೆಯರ ಆರೋಗ್ಯ, ಘನತೆ ಹಾಗೂ ಮಾನವೀಯ ಕೆಲಸದ ಪರಿಸ್ಥಿತಿಯನ್ನು ಉತ್ತೇಜಿಸುವ ಕಲ್ಯಾಣಕಾರಿ ಕ್ರಮವಾಗಿದ್ದು, ಸಂವಿಧಾನದ ಕಲಂ 21, 15(3) ಮತ್ತು 42ರ ಆಶಯಗಳಿಗೆ ಹೊಂದಿಕೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಅರ್ಜಿಯನ್ನು ಪರಿಶೀಲಿಸಿ ಮೂರು ತಿಂಗಳೊಳಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಹೈಕೋರ್ಟ್ ಸೂಚಿಸಿದೆ.